ರಾವ್ ಬಹದ್ದೂರ್

Home/Birthday/ರಾವ್ ಬಹದ್ದೂರ್
Loading Events

೨೪-೯-೧೯೧೦ ೩೧-೧೨-೧೯೮೪ ಗ್ರಾಮೀಣ ಬದುಕಿನ ಸಮಗ್ರ ಚಿತ್ರಣ ಕೊಟ್ಟ ಕಾದಂಬರಿ ಗ್ರಾಮಾಯಣದ ಮೂಲಕ ಪ್ರಸಿದ್ಧಿಗೆ ಬಂದ ರಾಮಚಂದ್ರರಾವ್, ಭೀಮರಾವ್ ಕುಲಕರ್ಣಿ ಯಾನೆ ರಾವಬಹದ್ದೂರ್ ಹುಟ್ಟಿದ್ದು ವಿಜಾಪುರ ಜಿಲ್ಲೆಯ ಕೃಷ್ಣಾ ನದಿತೀರದ ಗ್ರಾಮವಾದ ಹಿರೇಪಡಸಲಗಿಯಲ್ಲಿ. ತಂದೆ ಭೀಮರಾಯರು, ತಾಯಿ ಸುಭದ್ರಾಬಾಯಿ. ಬಾಲ್ಯದಲ್ಲಿಯೇ ತಾಯಿಯ ಪ್ರೀತಿಯಿಂದ ವಂಚಿತರಾಗಿ ಅಕ್ಕನ ಆರೈಕೆಯಲ್ಲಿ ಬೆಳೆದದ್ದು. ಪ್ರಾಥಮಿಕ ಶಿಕ್ಷಣ ಹುಟ್ಟಿದೂರಿನಲ್ಲಿ, ಮಾಧ್ಯಮಿಕ ವಿವಿದೆಡೆ. ಮ್ಯಾಟ್ರಿಕ್ ಪರೀಕ್ಷೆಯ ನಂತರ ಕಾಲೇಜು ವಿದ್ಯಾಭ್ಯಾಸ ಧಾರವಾಡದಲ್ಲಿ. ಬೇಂದ್ರೆ, ಶ್ರೀರಂಗ, ಶಂಬಾರವರ ಸಂಪರ್ಕ. ೧೯೩೪ರಲ್ಲಿ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರದಲ್ಲಿ ಬಿ.ಎ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಬೆಟಗೇರಿ ಕೃಷ್ಣಶರ್ಮರ ‘ಜಯಂತಿ’ ಪತ್ರಿಕೆಯಲ್ಲಿ. ಸತ್ಯಾಗ್ರಹ, ಸಂಗ್ರಾಮ, ಗ್ರಾಮ ಸೇವೆಗಳಿಗೆ ಮನಸೋತು ಕೆಲವರ್ಷ ಕಾಲ ಚರಕಾ ಸಂಘದಲ್ಲಿ ಕಾರ‍್ಯ ಸಾಧನೆ. ಸಂಯುಕ್ತ ಕರ್ನಾಟಕದ ಸಂಪಾದಕೀಯ ಬಳಗಕ್ಕೆ ಸೇರ‍್ಪಡೆ. ಆರ್.ಆರ್. ದಿವಾಕರ್ ಹಾಗೂ ಮೊಹರೆ ಹನುಮಂತರಾಯರೊಡನೆ ಕೆಲಕಾಲ ಉದ್ಯೋಗ. ನಂತರ ತಾವೇ ಸ್ವತಂತ್ರವಾಗಿ ಆರಂಭಿಸಿದ್ದು ‘ಕಲ್ಯಾಣ’ ಎಂಬ ಮಾಸಪತ್ರಿಕೆ. ರೈತ ಕುಟುಂಬದಿಂದ ಬಂದಿದ್ದರಿಂದ ಒಕ್ಕಲುತನ ವೃತ್ತಿ, ವ್ಯವಸಾಯವೇ ಮುಖ್ಯ ಕಸುಬು. ಬರವಣಿಗೆ ಹವ್ಯಾಸ. ೧೯೩೮ರಲ್ಲಿ ಚಂದ್ರಗ್ರಹಣ ಎಂಬ ಕಥೆಯೊಂದಿಗೆ ಬರವಣಿಗೆ ಆರಂಭ. ಆದರೆ ಪ್ರಸಿದ್ಧಿ ತಂದುಕೊಟ್ಟದ್ದು ಗ್ರಾಮಾಯಣ ಕಾದಂಬರಿ. ಗ್ರಾಮಾಯಣ ಒಂದು ಹಳ್ಳಿಯ ಕಥೆ ಎನಿಸದೆ ಭಾರತದ ಹಳ್ಳಿಗಳ ಕಥೆ. ಉತ್ತರ ಕರ್ನಾಟಕದ ಬದುಕು, ಜನಜೀವನ, ಪ್ರಾದೇಶಿಕ ಭಾಷೆಯ ಸೊಗಡಿನ ಕೃತಿ. ಭಾರತೀಯ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ. ಯಾವುದೇ ಲೇಖಕರ ಚೊಚ್ಚಲ ಕೃತಿ ಈ ಪರಿ ಗೌರವ ಪಡೆದದ್ದು ಅಪರೂಪ. ಬರೆದ ಕಾದಂಬರಿಗಳು-ವೃಂದಾವನ, ಕನಸು-ನನಸು, ದೇವದಾಸಿ, ಸೂಜಿಗಲ್ಲು, ಕಾಂಚನ ಮೃಗ, ತಬ್ಬಲಿಗಳು, ಮುತ್ತು ಕಟ್ಟಿದಳು, ಬಾಳು ಬಂಗಾರ, ಬಿತ್ತಿ ಬೆಳೆದವರು, ಧೂಮಕೇತು, ಗೌಡರ ಕೋಣ. ಕಥಾಸಂಕಲನ-ಮನ ಸುಟ್ಟ ಕಿಡಿ, ಮನ ಬೆಳಗಿತು, ಇತಿಹಾಸಭೂತ ಇತರ ಕಥೆಗಳು, ನೆರೆಹೊರೆ. ಹರಟೆ-ಮರೆಯದ ನೆನಹು. ಪ್ರವಾಸ ಕಥನ-ನಾನು ಕಂಡ ಬಾಂಗ್ಲಾ. ನಾಟಕ-ಪಾಂಚಜನ್ಯ. ಇತರ ಕೃತಿಗಳು-ಸಾಮ್ಯವಾದ, ಕರ್ಮಯೋಗಿ ಹನುಮಂತರಾಯರು. ದೇ.ಭ. ಹೆಸರಿನಿಂದ ಎಲ್ಲ ಪತ್ರಿಕೆಗಳಿಗೂ ಬರೆದ ಹರಟೆಗಳು. ಹುಟ್ಟೂರಿನ ಭಾಷೆಯ ಎಲ್ಲ ಸೊಗಡನ್ನೂ ಬೆರೆಸಿ ಆಡುವ ಮಾತು ಭಾಷಣ ಕೇಳುಗರಿಗೆ ಆಪ್ಯಾಯಮಾನ. ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಪುರಸ್ಕೃತರಾದ ಕೃತಿ ‘ವೃಂದಾವನ’ ಕಾದಂಬರಿ. ಸುಧಾ ವಾರಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಾದಂಬರಿ ‘ಧೂಮಕೇತು.’ ಪುಟ್ಟಣ ಕಣಗಾಲರ ಪಡುವಾರಹಳ್ಳಿ ಪಾಂಡವರು ಚಲನಚಿತ್ರಕ್ಕೆ ಬರೆದ ಚಿತ್ರಕಥೆ. ಮೈಸೂರಿನ ಧ್ವನ್ಯಾಲೋಕದಲ್ಲಿ ರೆಸಿಡೆಂಟ್ ಫೆಲೋ ಆಗಿ ಕಾರ‍್ಯಗೈದ ಹೆಗ್ಗಳಿಕೆ.   ಇದೇ ದಿನ ಹುಟ್ಟಿದ ಸಾಹಿತಿ : ನಾಗರತ್ನ ಎಂ. ಶಿವರ – ೧೯೫೧

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top