೨೪.೦೨.೧೯೩೫ ಕಲೆ ಮತ್ತು ಸಂಸ್ಕೃತಿಗಳ ಹಿನ್ನೆಲೆಯ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ರಾವ್ ವಿ.ಟಿ.ಎಸ್. ರವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಾಮಗೊಂಡ್ಲು. ತಂದೆ ತಿಮ್ಮರಸು, ತಾಯಿ ಗೌರಮ್ಮ. ಓದಿದ್ದು ಮೈಸೂರು, ಚಿತ್ರಕಲೆಯಲ್ಲಿ ಬೆಳೆದ ಆಸಕ್ತಿ. ಶಾಲಾ ದಿನಾಚರಣೆಯ ಸಂದರ್ಭದಲ್ಲಿ ರಚಿಸಿದ ವೀಣಾಪಾಣಿ ಚಿತ್ರಕ್ಕೆ ಅಮೆರಿಕದ ರೆಡ್ಕ್ರಾಸ್ ಸೊಸೈಟಿಯ ರಾಲ್ಫ್ಬುಂಜೆ ಯವರಿಂದ ಪಡೆದ ಬಹುಮಾನ. ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸ ವಿಭಾಗದಲ್ಲಿ ಪಡೆದ ಸ್ನಾತಕೋತ್ತರ ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಅಂಚೆ ಇಲಾಖೆಯಲ್ಲಿ. ಮೈಸೂರು ಶೈಲಿಯ ಮಹಾನ್ ಚಿತ್ರಕಾರರಾದ ಎನ್.ಜಿ. ಪಾವಂಜೆಯವರ ಬಳಿ ಕಲಾಭ್ಯಾಸ. ಚಿತ್ರಕಲೆಯ ಜೊತೆಗೆ ಬೆಳೆದು ಬಂದ ಮತ್ತೊಂದು ಹವ್ಯಾಸ ತೊಗಲುಬೊಂಬೆಯಾಟ. ಖ್ಯಾತ ಕಲಾವಿದ ರೋರಿಚ್ ಮತ್ತು ದೇವಿಕಾರಾಣಿ ಸಮ್ಮುಖದಲ್ಲಿ ಪ್ರದರ್ಶಿಸಿದ ತೊಗಲುಬೊಂಬೆ ಪ್ರದರ್ಶನದ ಸಂಯೋಜನೆ. ದೃಶ್ಯ ಚಿತ್ರಗಳ ಪ್ರದರ್ಶನ ಕಲೆ, ತೊಗಲುಬೊಂಬೆಯಾಟಕ್ಕೆ ನೀಡಿದ ಪುನರ್ಜನ್ಮ. ಡೆನ್ಮಾರ್ಕ್ ವಿಶ್ವವಿದ್ಯಾಲಯದ ಕಲಾ ಪ್ರಾಧ್ಯಾಪಕ ಸೊರೆನ್ಸನ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ದೃಶ್ಯ ಕಲಾ ಮಾಧ್ಯಮದ ಪ್ರಾಧ್ಯಾಪಕ ಮಾಲ್ವಿಯನ್ ಬಿ. ಹೆಲೆಸ್ಟಿನ್ ಮುಖಾಂತರ ವಿದೇಶಕ್ಕೂ ಪರಿಚಯಿಸಿದ ತೊಗಲುಬೊಂಬೆಯಾಟ. ಫ್ರಾನ್ಸ್ ದೇಶದ ರ್ಯಾನ್ಸೆ ಪಟ್ಟಣದಲ್ಲಿ ನಡೆದ ಅಂತಾರಾಷ್ಟ್ರೀಯ ತೊಗಲುಬೊಂಬೆ ಪ್ರದರ್ಶನದಲ್ಲಿ ನೀಡಿದ ೨೦ ರಾಷ್ಟ್ರಗಳಲ್ಲಿ, ಭಾರತವನ್ನು ಪ್ರತಿನಿಧಿಸುವಂತೆ ಬೊಂಬೆಯಾಟಗಾರರ ತಂಡದ ಸಂಘಟನೆಯ ಮಹತ್ಕಾರ್ಯ. ಚಿತ್ರಕಲೆಗಾಗಿ ಗಳಿಸಿದ ಪ್ರಶಸ್ತಿಗಳು ಹಲವಾರು. ದೇವಾಲಯ ಚಿತ್ರಕ್ಕೆ ಮೈಸೂರು ದಸರಾ ಚಿತ್ರಕಲಾ ಪ್ರದರ್ಶನದಲ್ಲಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ವರ್ಣ ಮಹೋತ್ಸವ ಸಂದರ್ಭದಲ್ಲಿ ಚಿತ್ರಕಲೆಗಾಗಿ ಪ್ರಶಸ್ತಿ, ಇಂಡೋ-ಸೋವಿಯತ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂದ ಗೌರವ. ಆರ್.ಟಿ. ನಗರದಲ್ಲಿ ಮಕ್ಕಳಿಗಾಗಿ ಉಚಿತ ಚಿತ್ರಕಲಾ ಶಿಕ್ಷಣ. ಸ್ಥಳದಲ್ಲೆ ಚಿತ್ರ ಬರೆಯುವ ಸ್ಪರ್ಧೆಗಳ ಆಯೋಜನೆ. ತಾಳೆಗರಿ ಗ್ರಂಥಗಳಲ್ಲಿನ ಚಿತ್ರ ವಿನ್ಯಾಸಗಳ ಬಗೆಗೆ ನಡೆಸಿದ ಸಂಶೋಧನೆ ಪ್ರಮುಖ ಕಾರ್ಯಗಳು.
* * *