೧೫.೦೩.೧೯೩೧ ಸಂಗೀತ ಶಾಸ್ತ್ರಜ್ಞರು, ವೀಣಾವಾದಕರು, ಗಾಯಕರು, ಅತ್ಯುತ್ತಮ ವಾಗ್ಮಿಗಳೂ ಆದ ವಿಶ್ವೇಶ್ವರನ್ ರವರು ಹುಟ್ಟಿದ್ದು ಹೆಸರಾಂತ ಸಂಗೀತ ಕುಟುಂಬದಲ್ಲಿ. ತಂದೆ ರಾಮಯ್ಯ, ತಾಯಿ ವರಲಕ್ಷ್ಮೀ. ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. (ಇಂಡಾಲಜಿ) ಪದವಿ. ಸಂಗೀತ ಗಾಯನ ಶಿಕ್ಷಣ ತಮ್ಮ ಸೋದರ ರಾ. ಸೀತಾರಾಂರವರಲ್ಲಿ. ಸ್ವಸಾಧನೆಯಿಂದ ಗಳಿಸಿದ್ದು. ವೀಣಾವಾದನ, ಗೋಟು ವಾದ್ಯದಲ್ಲಿ ಪರಿಣತಿ. ಅಧ್ಯಯನಶೀಲತೆಯಿಂದ ಗಳಿಸಿದ್ದು ಅಪಾರ. ಮೈಸೂರು ವಿ.ವಿ.ದ ಲಲಿತಕಲಾ ಕಾಲೇಜಿನಲ್ಲಿ ಹಲವಾರು ವರ್ಷಗಳ ಕಾಲ ಸಂಗೀತಶಾಸ್ತ್ರ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸಲ್ಲಿಸಿದ ಸೇವೆ. ಸ್ವದೇಶ, ವಿದೇಶಗಳಲ್ಲೂ ನಡೆಸಿಕೊಟ್ಟ ಅಸಂಖ್ಯಾತ ವೀಣಾವಾದನ ಕಚೇರಿಗಳು, ವಿಶಿಷ್ಟ ರೀತಿಯ ವೀಣಾ ವಾದಕರೆಂದೇ ಪ್ರಸಿದ್ಧರಾಗಿದ್ದು, ಪ್ರತಿಷ್ಠಿತ ಸಭೆ, ಸಂಗೀತೋತ್ಸವ, ಸಮಾರಂಭಗಳಲ್ಲಿ, ಸರಕಾರದ ಅಕಾಡಮಿಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು. ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್ತು, ಶ್ರೀಕೃಷ್ಣ ಸಂಗೀತಸಭಾ, ತ್ಯಾಗರಾಜ ಗಾನಸಭಾಗಳಲ್ಲದೆ ಲಂಡನ್ನಿನಲ್ಲಿ ನಡೆದ ಅಂತಾರಾಷ್ಟ್ರೀಯ ಸಂಗೀತ ಸಮ್ಮೇಳನ, ಆಕ್ಸ್ಫರ್ಡ್, ಕೇಂಬ್ರಿಡ್ಜ್, ಎಡಿನ್ಬರೋ ಸಂಗೀತೋತ್ಸವಗಳಲ್ಲಿ ಪಾಲ್ಗೊಂಡು ದೇಶಕ್ಕೆ ತಂದ ಗೌರವ. ನೂರಾರು ಕೃತಿಗಳ ವಾಗ್ಗೇಯಕಾರರೂ ಹೌದು. ಅಪೂರ್ವ ರಾಗಗಳ, ಅಪೂರ್ವ ಮೇಳಗಳಲ್ಲಿ ಮಾರ್ವ, ಜೋಗ್, ಶುದ್ಧ ಕಲ್ಯಾಣ್, ಗೋರಖ್ ಕಲ್ಯಾಣ್ ಮುಂತಾದ ರಾಗಗಳ ಕರ್ತೃ, ಹಲವಾರು ಧ್ವನಿ ಸುರಳಿ, ಸಿಡಿಗಳನ್ನು ಪ್ರತಿಷ್ಠಿತ ಕಂಪನಿಗಳು ಹೊರತಂದಿವೆ. ಆಕಾಶವಾಣಿ, ದೂರದರ್ಶನದಲ್ಲಿ ಕಾರ್ಯಕ್ರಮ ಪ್ರಸಾರ. ಸಂದ ಪ್ರಶಸ್ತಿ ಗೌರವಗಳು, ಮದರಾಸಿನ ಕೃಷ್ಣ ಗಾನ ಸಭಾದ ಸಂಗೀತ ಚೂಡಾಮಣಿ, ರಾಜ್ಯ ಸರಕಾರದ ಸಂಗೀತ ವಿದ್ವಾನ್, ಗಾನ ಕಲಾ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷತೆ, ಗಾನಕಲಾ ಭೂಷಣ, ಸಂಗೀತ ಸಾರ್ವ ಭೌಮ, ಲಯಕಲಾ ನಿಪುಣ, ಕಲಾ ಜ್ಯೋತಿ ಮುಂತಾದ ಬಿರುದುಗಳು, ತ್ಯಾಗರಾಜ ಪ್ರಶಸ್ತಿ, ಸುಬ್ರಹ್ಮಣ್ಯ ಪಿಳ್ಳೈ ಪ್ರಶಸ್ತಿ, ಇಂಗ್ಲೆಂಡ್, ಐರ್ಲೆಂಡ್, ಸಿಂಗಪೂರ್, ಮಲೇಷಿಯಾ, ದುಬೈ ಮುಂತಾದ ಹೊರರಾಷ್ಟ್ರಗಳಿಂದ ಸನ್ಮಾನ. ಇದೇ ದಿನ ಹುಟ್ಟಿದ ಕಲಾವಿದರು : ಕೃಷ್ಣಮೂರ್ತಿ ದಾಸ್ – ೧೯೩೩ ವೆಂಕಟಶಾಮಾಚಾರ್ಯ ಎನ್. – ೧೯೪೧ ಗಂಗಪ್ಪ ಗುಡಾರದ – ೧೯೬೦ ರಾಧಿಕಾ ದಯಾನಂದ್ – ೧೯೬೫
* * *