ರಾ.ಹ. ದೇಶಪಾಂಡೆ (ರಾಮಚಂದ್ರ ಹಣಮಂತರಾಯ ದೇಶಪಾಂಡೆ)

Home/Birthday/ರಾ.ಹ. ದೇಶಪಾಂಡೆ (ರಾಮಚಂದ್ರ ಹಣಮಂತರಾಯ ದೇಶಪಾಂಡೆ)
Loading Events
This event has passed.

೨೦..೧೮೬೧   ೨೬..೧೯೩೧ ಕನ್ನಡ ನಾಡಿನಲ್ಲಿಯೇ ಎಂ.ಎ. ಪದವಿಯನ್ನು ಪ್ರಪ್ರಥಮವಾಗಿ ಬಂಗಾರದ ಪದಕದೊಡನೆ ಪಡೆದ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಗೆ ಕಾರಣರಾದ, ‘ಸಿರಿಗನ್ನಡಂ ಗೆಲ್ಗೆ’ ಮಂತ್ರವನ್ನು ಕನ್ನಡಿಗರಿಗೆ ಉಪದೇಶಿಸಿದ ಕನ್ನಡದ ಕಲಿ ರಾ.ಹ. ದೇಶಪಾಂಡೆಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ, ಧಾರವಾಡ ತಾಲ್ಲೂಕಿನ ನರೇಂದ್ರ ಗ್ರಾಮದಲ್ಲಿ ೧೮೬೧ ರ ಮಾರ್ಚ್ ೨೦ ರಂದು. ತಂದೆ ಹಣುಮಂತರಾಯರು. ಪ್ರಾರಂಭಿಕ ಶಿಕ್ಷಣ ನರೇಂದ್ರದಲ್ಲಿ. ಪ್ರೌಢಶಾಲೆಗೆ ಸೇರಿದ್ದು ಧಾರವಾಡದ ಬಾಸೆಲ್‌ ಮಿಷನ್‌ ಹೈಸ್ಕೂಲು ನಂತರ ಸರಕಾರಿ ಹೈಸ್ಕೂಲು. ಮುಂಬಯಿಯಲ್ಲಿ ನಡೆದ ಮೆಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ೨೧ ನೆಯ ಸ್ಥಾನ ಪಡೆದು ಹಾಗೂ ಧಾರವಾಡ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದು (೧೮೭೮) ಉತ್ತೀರ್ಣನಾದ ವಿದ್ಯಾರ್ಥಿ. ಧಾರವಾಡದ ಕಲೆಕ್ಟರ್ ಆಗಿದ್ದ ಈ.ಪಿ. ರಾಬರ್ಟ್‌ಸನ್‌ ವಿದ್ಯಾರ್ಥಿವೇತನ ಪಡೆದು, ಸೇರಿದ್ದು ಪುಣೆಯ ಡೆಕ್ಕನ್‌ ಕಾಲೇಜು (೧೮೭೮). ಕಾಲೇಜಿನಲ್ಲಿ ದೊರೆತ ಕಿರಿಯ ಶಿಷ್ಯವೇತನ (JUNIOR SCHOLARSHIP), ಮುಂಬಯಿ ವಿಶ್ವವಿದ್ಯಾಲಯಕ್ಕೆ ಎರಡನೆಯ ಸ್ಥಾನ ಪಡೆದು ಇಂಟರ್ ಮೀಡಿಯೆಟ್‌ನಲ್ಲಿ (೧೮೮೦) ಉತ್ತೀರ್ಣರಾದರು. ಹಿರಿಯ ಶಿಷ್ಯವೇತನ (SENIOR SCHOLARSHIP) ದೊರೆತು ಸೇರಿದ್ದು ಬಿ.ಎ. ತರಗತಿಗೆ. ಇಂಗ್ಲಿಷ್‌ನಲ್ಲಿನ ಪರಿಣತಿಗಾಗಿ ಹ್ಯಾವ್‌ಲಾಕ್‌ ಬಹುಮಾನ, ಸಂಸ್ಕೃತ ಸಾಧನೆಗಾಗಿ ಮೇಜರ್ ಥಾಮಸ್‌ ಕ್ಯಾಂಡಿ ಶಿಷ್ಯ ವೇತನ ಪಡೆದು ೧೮೮೨ ರಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ. ಆನರ್ಸ್ ಪದವಿ ಪಡೆದರು. ಇದಕ್ಕಾಗಿ ಮುಂಬಯಿ ಸರಕಾರದಿಂದ ದಕ್ಷಿಣ ಫೆಲೊ ಆಗಿ ಆಯ್ಕೆಗೊಂಡು ಕಾಲೇಜಿನಲ್ಲಿ ಪಾಠ ಹೇಳುವ ಅಧಿಕಾರ ಪಡೆದು ಪ್ರಭಾವಿ ಅಧ್ಯಾಪಕರೆನಿಸಿದರು. ೧೮೮೪ ರಲ್ಲಿ ಎಂ.ಎ. ಪದವಿಯಲ್ಲಿ ಉತ್ತೀರ್ಣರಾಗಿ, ಧಾರವಾಡದ ಕಲೆಕ್ಟರಾಗಿದ್ದ ಈ.ಪಿ. ರಾಬರ್ಟ್‌ಸನ್‌ ಬಂಗಾರ ಪದಕ ಮತ್ತು ಐದುನೂರು ರೂ.ಗಳ ಗ್ರಂಥಗಳ ಬಹುಮಾನ ಪಡೆದರು. ಧಾರವಾಡಕ್ಕೆ ಹಿಂದಿರುಗಿದಾಗ ಆರತಿ ಬೆಳಗಿ ರೈಲುನಿಲ್ದಾಣದಿಂದ ಆನೆಯಮೇಲೆ ಮೆರವಣಿಗೆಯಲ್ಲಿ ಕರೆದೊಯ್ದರು. ಡೆಕ್ಕನ್‌ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದ ಡ.ಬ್ಯೂ.ಎ. ರಸೆಲ್‌ ಎಂಬುವರನ್ನು ಮುಂಬಯಿ ಪ್ರಾಂತದ ದಕ್ಷಿಣ ಭಾಗದ (ಉತ್ತರ ಕರ್ನಾಟಕ) ಎಜುಕೇಷನಲ್‌ ಇನ್‌ಸ್ಪೆಕ್ಟರೆಂದು ನೇಮಕವಾಗಿದ್ದು ಕನ್ನಡದ ಬೆಳವಣಿಗೆಗೆ ಸಹಾಯಕವಾಯಿತು. ೧೮೨೬ರ ಸುಮಾರಿನಲ್ಲೇ ಶಿಕ್ಷಣ ವ್ಯವಸ್ಥೆ ಜಾರಿಗೊಂಡಾಗ ಹುಬ್ಬಳ್ಳಿ-ಧಾರವಾಡಗಳಲ್ಲಿ ಮರಾಠಿ ಶಾಲೆಗಳನ್ನು ತೆರೆದರು. ಈ ಸಂದರ್ಭದಲ್ಲಿ ಧಾರವಾಡಕ್ಕೆ ಸಹಾಯಕ ಕಲೆಕ್ಟರಾಗಿ ಬಂದಿದ್ದ ವಾಲ್ಟರ್ ಈಲಿಯಟ್‌ ಸಾಹೇಬರು ಮಾತೃಭಾಷೆ ಕನ್ನಡವಿರುವ ಸ್ಥಳಗಳಲ್ಲಿ ಕನ್ನಡಶಾಲೆ ತೆರೆಯಲು ಶಿಫಾರಸ್ಸು ಮಾಡಿದರು. ಕನ್ನಡ ಪರ ಧೋರಣೆಯನ್ನು ಹೊಂದಿದ್ದ ರಸೆಲ್‌ ಸಾಹೇಬರು ರಾಹದೇಯವರ ಪ್ರಗತಿಯನ್ನು ಗಮನಿಸಿ ಬೆಳಗಾವಿಯ ಸರದಾರ ಹೈಸ್ಕೂಲಿನ ಸಹಾಯಕ ಹೆಡ್‌ಮಾಸ್ತರಾಗಿ ನೇಮಿಸಿದರು. ವರಿಷ್ಟ ಹುದ್ದೆಗಳೆಲ್ಲ ಆಂಗ್ಲರ ಕೈಯಲ್ಲೇ ಇರಬೇಕಾದ ಸಂದರ್ಭದಲ್ಲಿ, ಖಾಲಿಬಿದ್ದ ಧಾರವಾಡದ ಹೈಸ್ಕೂಲಿನ ಹೆಡ್‌ಮಾಸ್ತರ ಹುದ್ದೆಗೆ ರಾಹದೇ.ಯವರನ್ನು ಆಂಗ್ಲ ಅಧಿಕಾರಿ ಹೂಗ್‌ ವರ್ಫ್‌ ಶಿಫಾರಸುಮಾಡಿದರೂ, ರಾಹದೇಯವರಿಗೆ ಹೆಡ್‌ ಮಾಸ್ತರ ಹುದ್ದೆಗೆ ಸಮನಾದ ಡೆಪ್ಯೂಟಿ ಎಜುಕೇಷನಲ್‌ ಇನ್‌ಸ್ಪೆಕ್ಟರ್ ಹುದ್ದೆನೀಡಿ ಕಾರವಾರಕ್ಕೆ ವರ್ಗಮಾಡಿದರು. ಊಟ-ವಸತಿ, ಅನಾರೋಗ್ಯದ ಸಮಸ್ಯೆಯಿಂದ ಕೊಂಚ ಬಳಲಿದರೂ ಶಾಲೆಯ ತಪಾಸಣೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. ಹೆಡ್‌ಮಾಸ್ತರಾಗಿ, ಟ್ರೈನಿಂಗ್‌ ಕಾಲೇಜಿನ ವೈಸ್‌ ಪ್ರಿನ್ಸಿಪಾಲರಾಗಿ, ಪ್ರಿನ್ಸಿಪಾಲರಾಗಿ, ಕನ್ನಡ ಭಾಷಾಂತರಕಾರರಾಗಿ, ಮುಂಬಯಿ ಶಿಕ್ಷಕರ ತರಬೇತಿ ಕಾಲೇಜಿನ ಪ್ರಾಧ್ಯಾಪಕರಾಗಿ, ಪಠ್ಯಪುಸ್ತಕಗಳ ಪರಿಷ್ಕರಣ ಸಮಿತಿ ಸದಸ್ಯರಾಗಿ, ಪ್ಲೇಗ್‌ ಹಾವಳಿಯಲ್ಲಿ ಅಧೀಕ್ಷಕರಾಗಿ,- ಹೀಗೆ ಹಲವಾರು ಜವಾಬ್ದಾರಿಗಳನ್ನೂ ಅತ್ಯಂತ ಸಮರ್ಥವಾಗಿ ನಿರ್ವಹಿಸಿದರೂ ಹೆಡ್‌ಮಾಸ್ತರಾಗಿಯೇ ನಿವೃತ್ತರಾಗಬೇಕಾಯಿತು. ಹೋದೆಡೆಯಲ್ಲೆಲ್ಲಾ ವಿದ್ಯಾರ್ಥಿಗಳಿಗೆ ಗ್ರಂಥಾಲಯ, ವಸತಿಗೃಹ, ಸಂಗೀತ ಹಾಗೂ ಕೈಗಾರಿಕಾ ವೃತ್ತಿ ಪರ ವಿಭಾಗಗಳು, ಬಡವಿದ್ಯಾರ್ಥಿಗಳಿಗೆ ಕಲ್ಯಾಣನಿಧಿ, ಶಾಲೆಯ ಆವರಣದಲ್ಲಿ, ಓದಲು ಹುಮ್ಮಸ್ಸು ನೀಡುವಂತಹ ಸುಂದರ ಹೂದೋಟ ಮುಂತಾದವುಗಳಿಗೆ ಗಮನಕೊಟ್ಟು ನಿರ್ಮಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣರಾದರು. ಹೆಸರಿಗೆ ಕನ್ನಡ ಶಾಲೆಗಳೇ ಎನಿಸಿದ್ದರೂ ಮರಾಠಿಭಾಷೆಯದೇ ಪ್ರಾಬಲ್ಯವಿದ್ದುದನ್ನು ಪ್ರಶ್ನಿಸುತ್ತಲೇ ಬಂದರು. ಕನ್ನಡದ ಮೇಲಿನ ಮರಾಠಿಗರ ಧಾಳಿಯ ವಿರುದ್ಧ ಸಂಘ ಶಕ್ತಿ ಅನಿವಾರ್ಯವೆಂದು ಅರಿತು ಕನ್ನಡ ಹೋರಾಟಕ್ಕಾಗಿ ಸಂಘವನ್ನು ಸ್ಥಾಪಿಸಲು ನಿರ್ಧರಿಸಿ ಸಮಾನ ಮನಸ್ಕರಾದ ಹೈಕೋರ್ಟಿನ ವಕೀಲರಾಗಿದ್ದ ಶಾಮರಾವ ವಿಠ್ಠಲರಾವ ಕೈಕಿಣಿ, ಪ್ರಥಮಾಧ್ಯಕ್ಷರಾಗಿ, ವೆಂಕಟರಂಗೋ ಕಟ್ಟಿಯವರು ಉಪಾಧ್ಯಕ್ಷರಾಗಿ ಕಾರ್ಯಕಾರಿ ಸಮಿತಿಯಲ್ಲಿ ಗುರುಸಿದ್ದಪ್ಪ ಗಿಲಗಂಜಿ, ರೊದ್ದ ಶ್ರೀನಿವಾಸರಾಯರು, ರಾಮರಾವದೇಸಾಯಿ, ಶಾಂತವೀರಪ್ಪ ಮೆಣಸಿನಕಾಯಿ, ಶೇಷಗಿರಿರಾವ್‌ ಕುಪ್ಪೀಕರ, ಗುರಾಚಾರ್ಯ ಮೊದಲ ಹಾಗೂ ಧೊಂಡೋ ನರಸಿಂಹ ಮುಳಬಾಗಿಲು ಇವರುಗಳಿಂದ ಕೂಡಿದ ಸಂಸ್ಥೆಯನ್ನು ಸ್ಥಾಪಿಸಿ ರಾ.ಹ. ದೇಶಪಾಂಡೆಯವರು ಸಂಸ್ಥಾಪಕ ಕಾರ್ಯದರ್ಶಿಯಾಗಿ ನಂತರ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಉಪಾಧ್ಯಾಕ್ಷರಾಗಿ ದುಡಿದರು. ಸಭೆ-ಸಮಾರಂಭದ ತಿಳುವಳಿಕೆ ಪತ್ರದ ಮೇಲೆ ‘ಕನ್ನಡ ಬೆಳೆಯಲಿ’ ಎಂಬ ತಮ್ಮ ಆಸೆಯನ್ನು ಮುದ್ರಿಸಿದ್ದು ಮುಂದೆ ಇದನ್ನೇ ‘ಸಿರಿಗನ್ನಡಂ ಗೆಲ್ಗೆ’ ಎಂಬ ದಿವ್ಯ ಮಂತ್ರವನ್ನು ಊರ್ಜಿತಗೊಳಿಸಿ, ಕನ್ನಡಿಗರಿಗೆ ಪಠಿಸಲು ಕೊಟ್ಟರು. ಕನ್ನಡ ನಾಡಿನ ಉದ್ದಗಲಕ್ಕೂ ಸಂಚರಿಸಿ ಕನ್ನಡಿಗರಲ್ಲಿ ನಾಡು-ನುಡಿಯ ಬಗ್ಗೆ ಜಾಗೃತಿಯನ್ನುಂಟು ಮಾಡಿದ ಬಿ.ಎಂ.ಶ್ರೀ.ಯವರು ಒಮ್ಮೆ ಧಾರವಾಡಕ್ಕೆ ಬಂದು, ವಿದ್ಯಾವರ್ಧಕ ಸಂಘದಲ್ಲಿ ಉಪನ್ಯಾಸ ಕೊಟ್ಟು ಧಾರವಾಡದ ಜನರಲ್ಲಿ ಉತ್ಸಾಹ ತುಂಬಿ ಹೋದರು. ಸಂದರ್ಶಕರ ಪುಸ್ತಕದಲ್ಲಿ ವಿದ್ಯಾವರ್ಧಕ ಸಂಘದ ಜನಜಾಗೃತಿಯನ್ನು  ಮೆಚ್ಚಿ ಬರೆದರು. ಇಲ್ಲರೂ ಇದನ್ನು ಓದಿ ಮೆಚ್ಚಿದರೆ, ಒಬ್ಬರಿಗೆ ಹಿಡಿಸದಾಯಿತು. ಶ್ರೀ.ಯವರಿಗೆ ಪತ್ರ ಬರೆದರು, ‘ನೀವು ಕನ್ನಡದ ಬಗೆಗೆ ಅಭಿಮಾನದ ಮಾತು ಹೇಳಿ ಉದ್ದುದ್ದ ಭಾಷಣ ಮಾಡುತ್ತೀರಿ, ನೀವು ನಿಮ್ಮ ಅಭಿಮಾನವನ್ನು ಕೃತಿಯಲ್ಲೂ ತೋರಿಸಬೇಕು. ಕನ್ನಡವು ಮಧುರವಾದ ಭಾಷೆ ಎಂದು ಹೇಳುವ ನೀವು ಸಂದರ್ಶಕರ ಪುಸ್ತಕದಲ್ಲಿ ಇಂಗ್ಲಿಷ್‌ನಲ್ಲಿ ಏಕೆ ಬರೆದ್ದೀರಿ?’ ಎಂದು.  ರಾ.ಹ. ದೇಶಪಾಂಡೆಯವರು ಪತ್ರ ಬರೆದಾಗ ಶ್ರೀ.ಯವರು ‘ತಮ್ಮದು ತಪ್ಪಾಯಿತು’ ಎಂದು ಪತ್ರ ಬರೆದು ತಿಳಿಸಿದರಂತೆ. ಕರ್ನಾಟಕದ ಇತರ ಭಾಗಗಳಿಗೆ ಕೊಂಡಿಯಾಗಿ ಭಾಷಾ ಏಕೀಕರಣವನ್ನು ಸಾಧಿಸಲು ವಾಗ್ಭೂಷಣ ಪತ್ರಿಕೆಯನ್ನು ೧೮೯೬ ರ ನವಂಬರ್ ನಲ್ಲಿ ಹೊರಡಿಸಿದರು. ೧೮೯೫ ರ ಸುಮಾರಿನಲ್ಲಿ ಉತ್ತರ ಕರ್ನಾಟಕದಲ್ಲಿ ಪುಸ್ತಕ ಪ್ರಕಟಣೆ ನಿರಾಶಾದಾಯಕವಾಗಿದ್ದು ವರ್ಷಕ್ಕೆ ಕೇವಲ ೮ ಪುಸ್ತಕಗಳು ಪ್ರಕಟಗೊಂಡಿದ್ದು, ಗ್ರಂಥಪ್ರಕಟಣೆಯಿಂದಲೇ ಭಾಷೆ ಬೆಳೆಯಬೇಕೆಂದು ನಿರ್ಧರಿಸಿ ಪುಸ್ತಕ ಬಹುಮಾನ ಯೋಜನೆಯನ್ನು ತಂದಾಗ, ಗಳಗನಾಥರು ತಮ್ಮ ಚೊಚ್ಚಲ ಕೃತಿ ‘ಪದ್ಮನಯನೆ’ ಕಾದಂಬರಿಗೆ ಬಹುಮಾನ ಪಡೆದರು. ಕನ್ನಡದಲ್ಲಿ ಮಾತನಾಡುವುದಕ್ಕೆ, ಹಾಡುವುದಕ್ಕೆ, ಪದ್ಯ ರಚಿಸುವುದಕ್ಕೆ, ಪ್ರಬಂಧ ರಚಿಸುವುದಕ್ಕೆ, ವಿಮರ್ಶಾತ್ಮಕ ಲೇಖನಗಳನ್ನು ಬರೆಯುವುದಕ್ಕೆ ಸದಸ್ಯರು ಬಹುಮಾನಗಳನ್ನಿಟ್ಟು ಕನ್ನಡಕ್ಕೆ ಪ್ರೋತ್ಸಾಹ ನೀಡಿದರು. ಕನ್ನಡ ಭಾಷೆಯ ಉದ್ದೀಪನಕ್ಕಾಗಿ ತಾವೇ ಗ್ರಂಥ ರಚನೆಯನ್ನೂ ಪ್ರಾರಂಭಿಸಿ ಜೀವನ ಚರಿತ್ರೆಗಳು, ಐತಿಹಾಸಿಕ ಗ್ರಂಥಗಳು, ಪಠ್ಯಪುಸ್ತಕಗಳನ್ನು ರಚಿಸಿದರು. ಇದಲ್ಲದೆ ಸಾಹಿತ್ಯ ಪರಿಷತ್ಪತ್ರಿಕೆ, ಶುಬೋಧಯ, ಕರ್ನಾಟಕ ವೈಭವ ಮುಂತಾದ ಪತ್ರಿಕೆಗಳಿಗೂ ಕನ್ನಡ ಉದ್ಧಾರಕ್ಕಾಗಿ ಲೇಖನಗಳನ್ನೂ ಬರೆದರು. ೧೮೯೧ರಲ್ಲಿ ಇವರು ಪ್ರಕಟಿಸಿದ ಚೊಚ್ಚಲ ಕೃತಿ ‘ಚೈತನ್ಯ ಚರಿತ್ರೆ’. ಈ ಗ್ರಂಥವನ್ನು ಪ್ರಶಂಸಿಸಿ ಹಿತಬೋಧಿನಿ (ಮೈಸೂರು), ಸುದರ್ಶನ (ಮಂಗಳೂರು) ಪತ್ರಿಕೆಗಳು ವಿಮರ್ಶೆಯನ್ನು ಬರೆದುವು. ಎರಡನೆಯ ಕೃತಿ (೧೮೯೨) ‘ಗ್ರೇಟ್‌ ಬ್ರಿಟನ್‌ ಅಯರ್ಲಂಡ್‌ ದೇಶಗಳ ಸಂಕ್ಷಿಪ್ತ ವರ್ಣನೆ’. ಇದನ್ನೂ ಹೈಸ್ಕೂಲು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಬರೆದ ಪುಸ್ತಕ. ಮೂರನೆಯ ಪುಸ್ತಕ ‘ಚರಿತ್ರ ಸಂಗ್ರಹ’ (೧೮೯೨). ಇದನ್ನು ಟ್ರೈನಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಗಮದಲ್ಲಿಟ್ಟುಕೊಂಡು ಸಿದ್ಧಪಡಿಸಿದ ಕೃತಿ. ಇದರಲ್ಲಿ ಐದು ಭಾರತೀಯ ಮತಸ್ಥಾಪಕರ, ಏಳು ಅರಸರ ವ್ಯಕ್ತಿಚಿತ್ರಗಳಿದ್ದು ಎರಡನೆಯ ಆವೃತ್ತಿಯಲ್ಲಿ ೧೮ ಆಳರಸರ – ಮೊಗಲ್ ಅರಸರಿಂದ ಡಾಲ್ ಹೌಸಿಯವರೆಗೆ ಬರೆದ ವ್ಯಕ್ತಿ ಚಿತ್ರಗಳನ್ನು ಸೇರಿಸಿದರು. ನಾಲ್ಕನೆಯ ಕೃತಿ ‘ಅಕ್ಬರ ಚಕ್ರವರ್ತಿ ಚರಿತ್ರೆ’ (೧೮೯೩). ಈ ಗ್ರಂಥದಲ್ಲಿ ಮೊಗಲ್ ಅರಸರ ಮಹಾಪುರುಷ ಅಕ್ಬರ್‌ನ ಕುರಿತಾದದ್ದು. ಇದನ್ನು ಮೈಸೂರಿನ ಅರಸರಾಗಿದ್ದ ಶ್ರೀ ಚಾಮರಾಜೇಂದ್ರ ಒಡೆಯರಿಗೆ ಅರ್ಪಿಸಿದ್ದಾರೆ. ಐದನೆಯ ಕೃತಿ ‘ಮೊಗಲ್ ಬಾದಷಾಹ’ (೧೮೯೫). ಭಾರತದ ಸಮಗ್ರ ಇತಿಹಾಸದ ಮೊದಲ ಕಂತಾಗಿ ರಚಿಸಿ ‘ಪಾಳಿ, ಸಂಸ್ಕೃತ ಮತ್ತು ಹಳಗನ್ನಡ ಶಾಸನಗಳು’ ಎಂಬ ಕೃತಿ ರಚಿಸಿದ ಜೆ.ಎಫ್. ಫ್ಲೀಟರಿಗೆ ಅರ್ಪಿಸಿದ್ದಾರೆ. ಮತ್ತೊಂದು ಪಠ್ಯಪುಸ್ತಕ ‘ಬಾಯಿಲೆಕ್ಕದ ಮೊದಲ ಪುಸ್ತಕ’ ಇದರಲ್ಲಿ ಬೀಜಗಣಿತದ  ಮೂಲತತ್ತ್ವಗಳನ್ನು ವಿವರಿಸುವ ಕೃತಿ. ನಂತರ ಇವರು ರಚಿಸಿದ ಕೃತಿಗಳು – ನೂರ್ ಜಹಾನ್, ಹೈದರಾಲಿ, ಟೀಪುಸುಲ್ತಾನ್, ನಾನಾಫಡನವೀಸ ಮುಂತಾದ ವ್ಯಕ್ತಿ ಚಿತ್ರಗಳು, ಕಥೆಗಳನ್ನೊಳಗೊಂಡ ‘ಬೀರಬಲ್ಲನ ಚರಿತ್ರೆ’ (೧೯೨೩), ‘ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆ’ (೧೯೨೩) ಮುಂತಾದವಲ್ಲದೆ ಕರ್ನಾಟಕ ಇತಿಹಾಸವನ್ನು ಸಾರುವ ‘ಕರ್ನಾಟಕ ಸಾಮ್ರಾಜ್ಯ ಸಂಪುಟ-೧’ (೧೯೨೬). ಇದರಲ್ಲಿ ವೇದ ಕಾಲದಿಂದ ಹಿಡಿದು ಕ್ರಿ.ಶ. ೭೫೭ರವರೆಗೆ ಅಂದರೆ ಬಾದಾಮಿ ಚಾಲುಕ್ಯರವರೆಗೆ; ಸಂಪುಟ-೨ರಲ್ಲಿ ಕ್ರಿ.ಶ. ೧೧೮೦ರವರೆಗೆ ಮತ್ತು ಸಂಪುಟ-೩ರಲ್ಲಿ ಕ್ರಿ.ಶ. ೧೩೧೨ರವರೆಗೆ ಚಿತ್ರಿಸಿದ್ದಾರೆ. ೪ನೆಯ ಸಂಪುಟದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ, ಅಭಿವೃದ್ಧಿ ಕುರಿತುದಾಗಿತ್ತು. ಪುಸ್ತಕಗಳನ್ನು ಬರೆದು ಮುದ್ರಿಸಿದ್ದಷ್ಟೇ ಅಲ್ಲದೆ ಓದುಗರಿಗೆ ತಲುಪಬೇಕೆಂಬ ಆಶಯದಿಂದ ತಮ್ಮ ಮನೆಯಲ್ಲಿಯೇ ‘ಶ್ರೀ ಶಂಕರ ಕರ್ನಾಟಕ ಪುಸ್ತಕ ಭಂಡಾರ’ವನ್ನು ಪ್ರಾರಂಭಿಸಿ, ಹಿರಿಯಮಗ ಶ್ರೀಪಾದರಾಯರಿಗೆ ಕರ್ನಾಟಕ ಕಾಲೇಜಿನಲ್ಲಿ ಸಿಕ್ಕ ಡೆಮಾಸ್ಟ್ರೇಟರ್ ಉದ್ಯೋಗವನ್ನು ತೊರೆಸಿ ಮಾರಾಟದ ಜವಾಬ್ದಾರಿಯನ್ನು ವಹಿಸಿದರು. ಡಾ. ನಂದೀಮಠ, ಗೋಕಾಕ್, ತುಕೋಳ್, ಶಿ.ಶಿ. ಬಸವನಾಳ, ಮುಗಳಿ ಮುಂತಾದವರೆಲ್ಲರೂ ಈ ಪುಸ್ತಕ ಭಂಡಾರವನ್ನೇ ಅವಲಂಬಿಸಿದ್ದರು. ‘ಕರ್ನಾಟಕ ಸಾಮ್ರಾಜ್ಯದ’ ನಾಲ್ಕನೆಯ ಸಂಪುಟದ ಮಾಹಿತಿ ಸಂಗ್ರಹಣೆಗಾಗಿ ಓಡಾಟ, ಮೊಮ್ಮಗಳ ಮದುವೆಯ  ತರಾತುರಿ, ಕನ್ನಡಕ್ಕಾಗಿ ಅವಿರತ ದುಡಿತದ ಮಧ್ಯದಲ್ಲಿಯೂ ಮೊಮ್ಮಗಳ ಮದುವೆ ಪೂರೈಸಿ ಬೀಗರನ್ನು ಬೀಳ್ಕೊಟ್ಟು ೧೯೩೧ರ ಏಪ್ರಿಲ್ ೨೬ರಂದು ರಾತ್ರಿ, ಕನ್ನಡಕ್ಕಾಗಿ ಶ್ರೀಗಂಧದಂತೆ ತೇಯ್ದುಕೊಂಡ ರಾ.ಹ. ದೇಶಪಾಂಡೆಯವರು ಕನ್ನಡ ಲೋಕವನ್ನು ತ್ಯಜಿಸಿದರು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top