ರೇಖಾ ಕಾಖಂಡಕಿ

Home/Birthday/ರೇಖಾ ಕಾಖಂಡಕಿ
Loading Events
This event has passed.

೦೯.೦೬.೧೯೫೧ ಪ್ರಸಿದ್ಧ ಕಾದಂಬರಿಕಾರ್ತಿ ರೇಖಾ ಕಾಖಂಡಕಿಯವರು ಹುಟ್ಟಿದ್ದು ಬಾಗಲಕೋಟೆಯಲ್ಲಿ ೧೯೫೧ರ ಜೂನ್ ೯ರಂದು. ಒಂಬತ್ತು ಜನ ಮಕ್ಕಳಲ್ಲಿ ಕಡೆಯವರು. ತಂದೆ ಮಧ್ವರಾವ್ ಕುಲಕರ್ಣಿ, ತಾಯಿ ವತ್ಸಲಾ ಬಾಯಿ. ಓದಿದ್ದು ಬಾಗಲಕೋಟೆಯ ಪಾಣಿಮಹಲ್ ಶಾಲೆಯಲ್ಲಿ ಪ್ರಾರಂಭಿಕ ಶಿಕ್ಷಣ. ಪ್ರೌಢಶಾಲಾಶಿಕ್ಷಣ ಬೆಂಗಳೂರು. ಮದುವೆಯ ನಂತರ ಅಚಾರ್ಯ ಪಾಠಶಾಲಾ ಕಾಲೇಜಿನಿಂದ ಪಡೆದ ಬಿ.ಎ. ಪದವಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಾಗಲಕೋಟೆಗೆ ಸಂಸಾರವನ್ನು ಸ್ಥಳಾಂತರಿಸಿದರೂ ಜಮೀನಿನ ಉಸ್ತುವಾರಿ ನೋಡಿಕೊಳ್ಳಲು ಸ್ವಂತ ಸ್ಥಳವಾದ ಬೊಮ್ಮಣಗಿಗೆ ತಂದೆ ಎಡತಾಗುತ್ತಿದ್ದರು. ಆಗೆಲ್ಲಾ ಬಸ್ಸಿನ ಸೌಕರ್ಯವಿಲ್ಲದೆ ಬಾಗಲಕೋಟೆಯಿಂದ ಬೊಮ್ಮಣಗಿಗೆ ನಡೆದೇ ಪ್ರಯಾಣ, ಮತ್ತೆ ಬಾಗಲಕೊಟೆಗೆ. ಹೀಗೆ ನಡೆದು ಸುಸ್ತಾಗಿ ಬಂದ ತಂದೆ ‘ಸ್ವಲ್ಪ ಕಾಲು ಒತ್ರೆವ್ವ ಕಥಿ ಹೇಳ್ತೀನಿ’ ಎಂದರೆ ಸಾಕು ಇವರ ಕಥೆ ಕೇಳುವ ಆಸೆಯಿಂದ ತಂದೆಯ ಕಾಲೊತ್ತುತ್ತ ಕೇಳಿದ ಕಥೆಗಳೆಷ್ಟೋ. ಬಿಡುವಿನ ವೇಳೆಯಲ್ಲಿ ಭೈರಪ್ಪ, ತ.ರಾ.ಸು., ತ್ರಿವೇಣಿ, ಅ.ನ.ಕೃ. ಮುಂತಾದವರುಗಳ ಕೃತಿಗಳನ್ನೋದಿ ಪ್ರಭಾವಿತರಾದರು. ಬರೆಯಬೇಕೆಂದು ಮನಸ್ಸಿನಲ್ಲಿ ಮೂಡುತ್ತಿದ್ದ ಒಂದು ರೀತಿಯ ಒತ್ತಡದಿಂದ ಬರೆದ ಕಥೆಗಳನ್ನು ಹಿಡಿದು ಮನೆಯ ಹತ್ತಿರದಲ್ಲಿದ್ದ ಮಾಸ್ತಿಯವರನ್ನು ಕಾಣಲು ಹೋದರು. ಅವರು ಪಕ್ಕದಲ್ಲಿದ್ದ ಎಂ.ವಿ. ಸೀತಾರಾಮಯ್ಯನವರನ್ನು ಕಾಣಲು ತಿಳಿಸಿದರು. ಅವರ ಮನೆಗೆ ಹೋಗಿ ಕೊಟ್ಟಾಗ, ನಾಲ್ಕುದಿನ ಬಿಟ್ಟು ಬರಲು ತಿಳಿಸಿದರು. ಆ ನಾಲ್ಕು ದಿನಗಳು ನಾಲ್ಕ ಯುಗಗಳಂತೆ, ಪರೀಕ್ಷೆಗೆ ಬರೆದ ವಿದ್ಯಾರ್ಥಿಯಂತೆ ಕಾದರು. ಹೋಗಿ ನೋಡಿದಾಗ ‘ವಯಸ್ಸಿಗೆ ತಕ್ಕಂತೆ ಪ್ರೇಮ-ಪ್ರೀತಿ ಎಂದು ಬರೆದಿದ್ದೀರಿ ಸುತ್ತಲಿನ ಸಮಾಜದಲ್ಲಿ ನಡೆಯುವುದನ್ನೂ ವೀಕ್ಷಿಸುತ್ತ ಇತರ ವಿಷಯಗಳ ಬಗ್ಗೆಯೂ ಬರೆಯಬೇಕು’ ಎಂದು ಸೂಚಿಸಿ ಹರಸಿಕಳುಹಿಸಿದರು. ನಂತರ ಎಚ್.ಎಸ್. ಪಾರ್ವತಿಯವರ ಪರಿಚಯವಾದ ಮೇಲೆ ಬರೆದ ಕಥೆಗಳು ಮಲ್ಲಿಗೆ, ಜನಪ್ರಗತಿ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡವು. ಕಾಲೇಜು ಓದುತ್ತಿದ್ದಾಗ ಬರೆದ ಕೋಟಿ ಕಾದಂಬರಿಯು ಬಾಗಕೋಟೆಯ ಪರಿಸರದ ವಸ್ತುವಾಗುಳ್ಳ ಕಾದಂಬರಿ. ಮಲ್ಲಿಗೆ ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು. ನಂತರ ಬರೆದ ಕಾದಂಬರಿಗಳು ಬಂಧನ, ಅರುಣರಾಗ, ಹೊಸಹೆಜ್ಜೆ ಮುಂತಾದವುಗಳು. ಎರಡನೆಯ ಮಗಳು ಹುಟ್ಟಿದ ನಂತರವೇ ಇವರು ತಮ್ಮ ಜ್ಞಾನ ತೃಷೆ ಹಿಂಗಿಸಿಕೊಳ್ಳಲು ಓದಿದ್ದು ಎಂ.ಎ. ಕನ್ನಡ ಪದವಿಗಾಗಿ. ಬಾಗಲಕೋಟೆಯ ಸಿಪಾಯರ ವಠಾರದಲ್ಲಿದ್ದಾಗ ಇವರು ಹುಟ್ಟಿದ ಸಂದರ್ಭದಲ್ಲೇ ಬಾಜು ಮನೆಯ ಬಸಮ್ಮನಿಗೂ ಮಗು ಹುಟ್ಟಿ ಶೀತಬಾಧೆಯಿಂದ ಮಗು ತೀರಿಕೊಂಡು, ಪ್ರತಿದಿನ ದುಃಖದಲ್ಲೇ ಕೊರಗುತ್ತಿದ್ದವಳ ಬಳಿ ಇವರ ತಾಯಿ ಹೋಗಿ ‘ಬಸವ್ವಾ ಎಲ್ಲಿ ಉಡಿ ಹಿಡಿ’ ಎಂದು ತನ್ನ ಮಗುವನ್ನೇ ಬಸಮ್ಮನ ಉಡಿಗೆ ಹಾಕಿ ಬಂದರು. ಹೀಗೆ ಬೆಳೆದ ಇವರ ಬದುಕೂ ಒಂದು ರೀತಿ ‘ವಸುದೈವ ಕುಟುಂಬಕಂ’ ಅಪ್ಪನ ಕಥೆ ಹೇಳುವ ಕಲೆ, ತಾಯಿಯ ಅಂತಃಕರಣ, ಮಾನವೀಯತೆ, ಪರೋಪಕಾರ ಬುದ್ಧಿ ಮುಂತಾದ ಗುಣಗಳೆಲ್ಲವೂ ಇವರಲ್ಲೂ ಪಡಿಮೂಡಿದ್ದು ಹಲವಾರು ಕಾದಂಬರಿಗಳಲ್ಲಿ ಪ್ರಾದೇಶಿಕ ಭಾಷೆಯ ಸೊಗಡು, ದಟ್ಟ ಅನುಭವ, ಸಾಮಾಜಿಕ ಸ್ಥಿತ್ಯಂತರಗಳು ಮುಂತಾದವುಗಳೇ ವೈವಧ್ಯಮಯ ವಸ್ತುಗಳಾಗಿ, ಮೂಲದ್ರವ್ಯಗಳಾಗಿ ಪ್ರಕಟಗೊಂಡಿವೆ. ಆರುಣರಾಗ ಚಲನಚಿತ್ರವಾಗಿ ಪ್ರಖ್ಯಾತಿಯನ್ನು ಪಡೆದಿದ್ದರೆ ಲಂಬಾಣಿಗಳ ಬದುಕಿನ ನೈಜ ಚಿತ್ರಣವನ್ನು ನೀಡಿರುವ ‘ಹೊಸ ಹೆಜ್ಜೆ’ ಕಾದಂಬರಿಯು ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಹುಮಾನ ಪಡೆದುದಲ್ಲದೆ ಧಾರವಾಹಿಯಾಗಿಯೂ ಮೆಚ್ಚುಗೆ ಗಳಿಸಿತು. ಇದ್ದೂ ಇಲ್ಲದ ಸಂಬಂಧಗಳು ಕಾದಂಬರಿಯು ‘ಮಹಾನವಮಿ’ ಎಂಬ ಹೆಸರಿನಿಂದ ಈಟೀವಿಯಲ್ಲಿ ಧಾರಾವಾಹಿಯಾಗಿ ಜನಪ್ರಿಯತೆ ಗಳಿಸಿದ್ದಲ್ಲದೆ ಹೊಸ ಹೆಜ್ಜೆ, ಬಂಧನ, ತೇಲಿ ಹೋದ ನೌಕೆ, ಕಪ್ಪುತೆಲೆ, ಆಡಿಸಿದಳು ಯಶೋಧೆ ಕೃತಿಗಳೂ ಧಾರವಾಹಿಯಾಗಿ ಪ್ರಸಾರಗೊಂಡಿವೆ. ‘ದತ್ತು ಮಾಸ್ತರ’ ಕೃತಿಯು ಹಿಂದಿ ಭಾಷೆಗೆ ಭಾಷಾಂತರವಾಗಿ ಆಕಾಶವಾಣಿಯಲ್ಲಿ ನಾಟಕ ರೂಪದಲ್ಲಿ ಪ್ರಸಾರಗೊಂಡು ಪ್ರಥಮ ಬಹುಮಾನ ಪಡೆದ ಕೃತಿ. ‘ಸದು ಎಂಬ ಬ್ರಹ್ಮಾಂಡ’ ಮತ್ತು ‘ಬದುಕು ಪಾರಿಜಾತದ ಹೂವಲ್ಲ’ ಕೃತಿಗಳು ಮರಾಠಿ ಭಾಷೆಗೆ ಅನುವಾದಗೊಂಡಿವೆ. ಇದಲ್ಲದೆ ಇವರು ಬರೆದ ಇತರ ಕಾದಂಬರಿಗಳೆಂದರೆ ಬಯಲು ಭೂಮಿ, ಬಯಲು ಆಲಯ, ಪೃಥೆ, ತ್ರಸ್ತ ಮುಂತಾದ ಪ್ರಸನ್ನವೆಂಕಟದಾಸರ ಜೀವನಾಧಾರಿತ ಕಾದಂಬರಿಯೂ ಸೇರಿ ಸುಮಾರು ೩೦ಕ್ಕೂ ಹೆಚ್ಚು ಕಾದಂಬರಿಗಳು ಪ್ರಕಟವಾಗಿವೆ. ಆಗಾಗ್ಗೆ ಬರೆದ ಸಣ್ಣ ಕಥೆಗಳು ಋತುಮಾನದ ಕಥೆಗಳು, ಬದುಕು ಪಾರಿಜಾತದ ಹೂವಲ್ಲ ಕಥಾ ಸಂಗ್ರಹಗಳಲ್ಲಿ ಸೇರಿವೆ. ಇವರು ಬರೆದ ಪ್ರತಿಯೊಂದು ಕಾದಂಬರಿಯೂ ಯಾವುದಾದರೊಂದು ಪ್ರಶಸ್ತಿಗೆ ಪರಿಗಣಿತವಾಗಿದೆ. ವರ್ಧಮಾನ ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜಾರಾಂ ಪ್ರಶಸ್ತಿ, ಎಸ್.ಆರ್. ಪಾಟೀಲ ಪ್ರತಿಷ್ಠಾನ ಪ್ರಶಸ್ತಿ, ಹಾವನೂರ ಸಾಹಿತ್ಯ ಪ್ರಶಸ್ತಿ, ಸುಧಾಮೂರ್ತಿ ಸಾಹಿತ್ಯ ಪ್ರಶಸ್ತಿ, ವಿಶ್ವಭಾರತಿ ಸಾಹಿತ್ಯ ಪುರಸ್ಕಾರ, ಗೀತಾದೇಸಾಯಿ ದತ್ತಿ ನಿಧಿ ಪ್ರಶಸ್ತಿ, ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನದ ನವರತ್ನ ಸಾಹಿತ್ಯ ಪ್ರಶಸ್ತಿ, ಭಾರತಿಸುತ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಲ್ಲದೆ ನಾರ್ಥ್ ಕ್ಯಾಲಿಫೋರ್ನಿಯಾ ಕನ್ನಡ ಸಂಘ, ಮಿನಿಯಾ ಪೊಲೀಸ್ ಕನ್ನಡ ಸಂಘ, ಅಮೆರಿಕಾ ಮುಂತಾದ ವಿದೇಶಿ ಸಂಘ-ಸಂಸ್ಥೆಗಳಿಂದಲೂ ಸನ್ಮಾನಿತರು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top