ಲಕ್ಷ್ಮಣ ಕೊಡಸೆ

Home/Birthday/ಲಕ್ಷ್ಮಣ ಕೊಡಸೆ
Loading Events
This event has passed.

೨೫.೪.೧೯೫೩ ಕಥೆಗಾರ ಲಕ್ಷ್ಮಣ ಕೊಡಸೆಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಸೆ ಎಂಬ ಗ್ರಾಮದಲ್ಲಿ. ತಂದೆ ಕರಿಯನಾಯ್ಕ, ತಾಯಿ ಭರ್ಮಮ್ಮ. ತಂದೆ ಅಲ್ಪಸ್ವಲ್ಪ ವಿದ್ಯೆ ಕಲಿತುದರ ಫಲವೇ ಮಗನನ್ನು ವಿದ್ಯಾವಂತನನ್ನಾಗಿಸ ಬೇಕೆಂಬ ಆಸೆ. ಶಾಲೆಗೆ ಸೇರಿದ್ದು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸರ್ಕಾರಿ ಪ್ರೌಢಶಾಲೆಗೆ. ವಾಹನ ಸೌಕರ‍್ಯವಿರದಿದ್ದ ಕಾಲ. ಓದಿನ ಹಂಬಲದಿಂದ ನಡೆದೇ ಶಾಲೆಗೆ ಹೋಗಿ ಎಸ್.ಎಸ್.ಎಲ್.ಸಿ. ತೇರ್ಗಡೆ. ತಂದೆಗೆ ಹಿಡಿಸಲಾರದ ಸಂತಸ. ಕಾಲೇಜಿಗೆ ಸೇರಿದ್ದು ಬೆಂಗಳೂರಿನ ರೇಣುಕಾಚಾರ‍್ಯ ಕಾಲೇಜಿಗೆ ಪಿ.ಯು.ಗಾಗಿ. ಓದಲು ದೂರದೂರಿಗೆ ಹೋಗಿ ಬಿಡುತ್ತಾನೆಂದು ತಾಯಿಗೆ ದುಃಖ, ಮಗ ಓದಿ ಮುಂದೆ ಬರುತ್ತಾನೆಂದು ತಂದೆಗೆ ಸಂತಸ. ರಜಕ್ಕೆ ಊರಿಗೆ ಹೋದರೆ ಮನೆಯಲ್ಲಿ ಹಬ್ಬದ ವಾತಾವರಣ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎ. (ಆನರ್ಸ್‌) ಪದವಿ. ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಿಂದ ಎಂ.ಎ. ಪದವಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ೧೯೭೨ರಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಎಂ.ಇ.ಎಸ್. ಕಾಲೇಜು ನಡೆಸಿದ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ. ನಂತರ ಬರೆದದ್ದು ಹಲವಾರು ಸಣ್ಣಕಥೆಗಳು. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ಉದಯಕಲಾ ಸಂಘ, ಯುವ ಬರಹಗಾರರು ಮತ್ತು ಕಲಾವಿದರ ಸಂಘದ ಸಕ್ರಿಯ ಸದಸ್ಯ. ಛಾಯಾಗ್ರಹಣ ಮತ್ತು ಯಕ್ಷಗಾನ ಕಲೆಯಲ್ಲಿ ವಿಶೇಷ ಆಸಕ್ತಿ. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಪತ್ರಿಕಾರಂಗ. ಕೆಲಕಾಲ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುತ್ತಿರುವ ಸಾಹಿತ್ಯ ಪರಿಷತ್ ಪತ್ರಿಕೆಯ ಗೌರವ ಸಂಪಾದಕರಾಗಿ ಪ್ರೊ. ದೊಡ್ಡರಂಗೇ ಗೌಡರೊಡನೆ ಪಡೆದ ಅನುಭವ. ನಂತರ ೧೯೭೮ರಲ್ಲಿ ಸೇರಿದ್ದು ಪ್ರಜಾವಾಣಿಯ ಬಳಗ. ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ, ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಇದೀಗ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಣೆ. ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರತಿನಿಯಾಗಿ ಭಾಗವಹಿಸಿದ ಅನುಭವ. ದೆಹಲಿ ಮತ್ತು ತಿರುವನಂತಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸುದ್ದಿ ವಿವರಗಳನ್ನು ವಿಶೇಷ ರೀತಿಯಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಿಸಿದ ಹೆಗ್ಗಳಿಕೆ. ಪ್ರಕಟಿತ ಕಥಾಸಂಕಲನಗಳು-೧೯೮೨ರಲ್ಲಿ ಬಲಿ ಮತ್ತು ೧೯೯೯ರಲ್ಲಿ ಮೈತ್ರಿ, ಇನ್ನಷ್ಟು ಕಥೆಗಳು ಸಂಕಲನ ರೂಪದಲ್ಲಿ ಹೊರಬರಲು ಕಾದು ಕುಳಿತಿವೆ. ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರೊಡನೆ ಕ್ರಿಸ್ತನ ಕುರಿತಾದ ಕವನ ಸಂಕಲನ ಸಂಪಾದಿತ ಕೃತಿ ‘ಕ್ರಿಸ್ತಾಂಜಲಿ.’

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top