ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ

Home/Birthday/ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ
Loading Events
This event has passed.

೧೨..೧೯೨೯ ಸ್ವಾಮಿ ವಿವೇಕಾನಂದರು ಚಿಕಾಗೊ ಸರ್ವಧರ್ಮ ಸಮ್ಮೇಳನಕ್ಕೆ ಹೊರಟಾಗ ಆರ್ಥಿಕ ನೆರವಿಗಾಗಿ ನಿಧಿ ಸಂಗ್ರಹಿಸಿದ ಅಳಸಿಂಗ ಪೆರುಮಾಳರ ಜೀವನ ವೃತ್ತಾಂತ ಬರೆದ, ಶೃಂಗೇರಿ ಗುರು ಪರಂಪರೆ, ಶೃಂಗೇರಿ ಮಹಾತ್ಮರುಗಳ ಬಗ್ಗೆ ಗ್ರಂಥ ರಚಿಸಿರುವ ಲಕ್ಷ್ಮೀನರಸಿಂಹ ಶಾಸ್ತ್ರಿಯವರು ಹುಟ್ಟಿದ್ದು ಮಂಡ್ಯಜಿಲ್ಲೆಯ ಮದ್ದೂರು ತಾಲ್ಲೂಕಿನ ಹುರಗಲವಾಡಿ ಗ್ರಾಮದಲ್ಲಿ ೧೯೨೯ ರ ಮೇ ೧೨ ರಂದು. ತಂದೆ ಲಕ್ಷ್ಮೀನರಸಿಂಹಶಾಸ್ತ್ರಿ, ತಾಯಿ ಸೀತಮ್ಮ. ಮೂರನೆಯ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡ ಶಾಸ್ತ್ರಿಯವರು ಬೆಳೆದದ್ದು ಅಜ್ಜ-ಅಜ್ಜಿ ಹಾಗೂ ಚಿಕ್ಕಪ್ಪ-ಚಿಕ್ಕಮ್ಮನವರ ಆಶ್ರಯದಲ್ಲಿ. ಎಸ್‌.ಎಸ್‌.ಎಲ್‌.ಸಿ.ವರೆಗೆ ಓದಿದ್ದು ಮಂಡ್ಯದಲ್ಲಿ, ಇಂಟರ್ ಮೀಡಿಯೆಟ್‌ ಓದಿದ್ದು ಮೈಸೂರು. ಇಂಟರ್ಮೀಡಿಯೆಟ್‌ ನಂತರ ಉದ್ಯೋಗಕ್ಕೆ ಸೇರಿದ್ದು ಅಂಚೆ ಮತ್ತು ತಂತಿ ಇಲಾಖೆಯಲ್ಲಿ. ಅಂಚೆ ಇಲಾಖೆಯಲ್ಲಿ ಸಮರ್ಥ ಉದ್ಯೋಗಿ ಎನಿಸಿಕೊಂಡಿದಷ್ಟೇ ಅಲ್ಲದೆ, ಅಂಚೆ ಇಲಾಖೆಯ ಜನಾನುರಾಗಿ ಕಾರ್ಮಿಕ ಮುಖಂಡರೆನಿಸಿಕೊಂಡರು. ಸ್ವಾತಂತ್ರ್ಯ ಚಳುವಳಿಯ ಕಾವು ದೇಶದ ತುಂಬ ಹರಡಿದಾಗ ಗಾಂಧೀಜಿಯವರ ಕರೆಗೆ ಓಗೊಟ್ಟು ಹಲವಾರು ಸಂಸ್ಥೆಗಳ ಉದ್ಯೋಗಿಗಳೂ ಚಳುವಳಿಯಲ್ಲಿ ಪಾಲ್ಗೊಳ್ಳತೊಡಗಿದರು. ಹೀಗೆ ಶಾಸ್ತ್ರಿಯವರೂ ಚಳವಳಿಯಲ್ಲಿ ಪಾಲ್ಗೊಂಡು ಸರಕಾರದ ಕೆಂಗಣ್ಣಿಗೆ ಗುರಿಯಾಗಿ, ‘ತಪ್ಪುಮಾಡಿದರವನ್ನು ಕೊಪ್ಪಕ್ಕೆ ಹಾಕು’ ಎಂಬ ನಾಣ್ಣುಡಿಯಂತೆ ವರ್ಗ ಮಾಡಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಎಂಬಲ್ಲಿಗೆ. ಹೀಗೆ ಶಿಕ್ಷೆಯ ರೂಪದಲ್ಲಿ ಸರಕಾರ ಲ.ನ. ಶಾಸ್ತ್ರಿಯವರನ್ನು ವರ್ಗಮಾಡಿದ್ದು ಒಂದು ರೀತಿಯ ವರವಾಗಿ ಪರಿಣಮಿಸಿತು. ಪಕ್ಕದಲ್ಲಿದ್ದ ಶೃಂಗೇರಿಗೆ ಆಗಾಗ್ಗೆ ಭೇಟಿಕೊಡತೊಡಗಿದ್ದರಿಂದ ಶೃಂಗೇರಿಯ ಶಾರದಾಪೀಠ, ದೇವಸ್ಥಾನ, ಶೃಂಗೇರಿ ಗುರುಗಳಿಂದ ಆಕರ್ಷಿತರಾಗಿ ಶೃಂಗೇರಿಯ ಪೀಠದ ಬಗ್ಗೆ ಹೆಚ್ಚು ಹೆಚ್ಚು ಅಧ್ಯಯನ ಶೀಲರಾಗುವಂತೆ ಪ್ರೇರೇಪಿಸಿತು. ನವೋದಯ ಕಾಲದಲ್ಲಿ ಕಾವ್ಯರಚನೆ ಮಾಡತೊಡಗಿದ ಶಾಸ್ತ್ರಿಯವರು ರಚಿಸಿದ ಮೊದಲ ಕವನ ಸಂಕಲನ ‘ಪೂರ್ವರಾಗ’ ಪ್ರಕಟವಾದದ್ದು ೧೯೬೦ರಲ್ಲಿ. ನಂತರ ಪ್ರಿಯದರ್ಶಿ ಮತ್ತು ಕಿಸಾಗೌತಮಿ, ಬಲಿವಾಮನ, ಮಾರ್ಕಂಡೇಯ, ಹಿರಣ್ಯಕಶಿಪು ಮುಂತಾದ ಕಾವ್ಯ ಸಂಗ್ರಹಗಳು ಪ್ರಕಟವಾದವು. ವಯಸ್ಕರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಋಷ್ಯಶೃಂಗ, ಕೌಶಿಕ ಮತ್ತು ಧರ್ಮವ್ಯಾಧ, ಧರ್ಮರಾಯ ಮತ್ತು ಮುಂಗುಸಿ ಮತ್ತು ಶ್ರೇಷ್ಠರು ಯಾರು? ಮುಂತಾದ ನಾಲ್ಕು ಕೃತಿಗಳನ್ನೂ ಪ್ರಕಟಿಸಿದರು. ಶೃಂಗೇರಿಯ ಬಗ್ಗೆ ಹೆಚ್ಚು ಹೆಚ್ಚು ಅರಿಯುತ್ತಾ, ಧಾರ್ಮಿಕ ಹಾಗೂ ಗುರುಪರಂಪರೆಯ ಬಗ್ಗೆ ಸಂಶೋಧಿಸುತ್ತಾ ಹೋದಂತೆಲ್ಲಾ ಹಲವಾರು ಕೃತಿ ರಚನೆಗೆ ಪ್ರೇರಣೆ ನೀಡಿತು. ಧಾರ್ಮಿಕ ವಿಷಯಗಳ ಬಗ್ಗೆ ಸಂಶೋಧಿಸಿ ಬರೆದ ಕೃತಿಗಳು-ಗಾಯತ್ರಿ ಮಂತ್ರ, ನನ್ನ ಕರ್ತವ್ಯ, ಉಪದೇಶ ಮಂಜರಿ ಮತ್ತು ಅನುಗ್ರಹ ಪರಂಪರೆ ಮುಂತಾದ ಕೃತಿಗಳು. ಶೃಂಗೇರಿಯ ಗುರು ಪರಂಪರೆಯ ಬಗ್ಗೆ ಮಹಾತಪಸ್ವಿ ಶ್ರೀ ಚಂದ್ರಶೇಖರ ಭಾರತಿ, ಶ್ರೀ ಸಚ್ಚಿದಾನಂದ ಭಾರತಿ, ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು, ಗುರುದೇವ ವಿದ್ಯಾತೀರ್ಥ, ರಾಜಯೋಗಿ ನರಸಿಂಹ ಭಾರತಿ ಮುಂತಾದ ೧೨ ಕೃತಿಗಳು, ಶೃಂಗೇರಿ ಪೀಠ ಮತ್ತು ಮಹಾತ್ಮರುಗಳ ಬಗ್ಗೆ ತುಂಗೆಯ ಮಡಿಲ ತಪಸ್ವಿ, ಶ್ರೀ ಶಾರದಾ, ಶ್ರೀ ಜಗದ್ಗುರು ಜಯಗುರು ಶಂಕರ, ಅಭಿನವ ಶಂಕರ ಮೊದಲಾದ ೧೦ ಕೃತಿಗಳಲ್ಲದೆ ಮಹಾತ್ಮರ ಜೀವನ ಚರಿತ್ರೆಗಳಾದ ಸಂತ ಶ್ರೀರಾಮಾನುಜ, ಸ್ವಾಮಿ ಶ್ರೀರಾಮತೀರ್ಥ, ದಯಾನಂದ ಸರಸ್ವತಿ, ಶ್ರೀ ಅರವಿಂದಮಹರ್ಷಿ, ವ್ಯಾಸಮಹರ್ಷಿ ಮುಂತಾದ ೧೨ ಕೃತಿಗಳನ್ನು ಪ್ರಕಟಿಸಿದ್ದಾರೆ. ಮದರಾಸಿನಲ್ಲಿ ಉಪಾಧ್ಯಾಯರಾಗಿದ್ದು, ಸ್ವಾಮಿ ವಿವೇಕಾನಂದರ ಧಾರ್ಮಿಕ ಪ್ರವಚನಗಳಿಂದ ಆಕರ್ಷಿತರಾಗಿ, ಅವರ ನೆಚ್ಚಿನ ಶಿಷ್ಯರೆನಿಸಿ, ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನಕ್ಕೆ ತೆರಳಲು ಹಣ ಸಂಗ್ರಹಿಸಿ ಆರ್ಥಿಕವಾಗಿ ಬೆನ್ನೆಲುಬಾಗಿ ನಿಂತ ಅಳಸಿಂಗ ಪೆರುಮಾಳರು – ವಿವೇಕಾನಂದರ ಬಗ್ಗೆ ‘ಕರ್ಮಯೋಗಿ ಅಳಸಿಂಗ ಪೆರುಮಾಳ್‌’ (೨೦೦೦) ಇವರು ರಚಿಸಿದ ಕೃತಿ. ಅಳಸಿಂಗ ಪೆರುಮಾಳ್‌ – ವಿವೇಕಾನಂದರ ಗುರುಶಿಷ್ಯರ ಬಾಂಧವ್ಯದ ಬಗ್ಗೆ ತಿಳಿಸುವ ಕೃತಿ. ಅಳಸಿಂಗ ಪೆರುಮಾಳರು ವಿವೇಕಾನಂದರಲ್ಲಿಟ್ಟಿದ್ದ ಗುರುಭಕ್ತಿಯ ಬಗ್ಗೆ ಲ.ನ. ಶಾಸ್ತ್ರಿಯವರು ಅರಿಯುತ್ತಾ ಹೋದಂತೆಲ್ಲ ಅವರಿಬ್ಬರ ನಿಕಟ ಸಂಪರ್ಕದ ಬಗ್ಗೆ, ಬೆಳಕು ಚೆಲ್ಲಲು, ಅವರ ಪತ್ರವ್ಯವಹಾರವನ್ನೂ ಶೋಧಿಸಿ ರಚಿಸಿದ ಕೃತಿ ‘ಪತ್ರತರಂಗಿಣಿ’ ೨೦೦೫ರಲ್ಲಿ ಪ್ರಕಟವಾದ ಕೃತಿ. (೨೦.೨.೧೮೯೩ ರಿಂದ ೨೩.೧೦.೧೮೯೬ ರವರೆಗೆ ವಿವೇಕಾನಂದರು ವಿದೇಶದಿಂದ ಅಳಸಿಂಗಪೆರುಮಾಳರಿಗೆ ಬರೆದ ಪತ್ರಗಳು). ಹೀಗೆ ಲ.ನ.. ಶಾಸ್ತ್ರಿಯವರು ರಚಿಸಿದ ಕೃತಿಗಳು ಸುಮರು ೭೦ ಕ್ಕೂ ಹೆಚ್ಚು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top