
- This event has passed.
ಲೀಲಾಬಾಯಿ ಕಾಮತ್
October 13
೧೩.೧೦.೧೯೧೧ ೦೩.೧೨.೧೯೯೯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಸ್ವಾತಂತ್ರ್ಯ ಪೂರ್ವದಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಸೀತಾದೇವಿ ಪಡುಕೋಣೆ, ಆನಂದಿ ಸದಾ ಶಿವರಾವ್ ಮುಂತಾದವರಂತೆ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದ ಲಿಲಾಬಾಯಿ ಕಾಮತರು ಹುಟ್ಟಿದ್ದು ಮಂಗಳೂರಿನಲ್ಲಿ ೧೯೧೧ ರ ಅಕ್ಟೋಬರ್ ೧೩ ರಂದು. ತಂದೆ ಶ್ರೀನಿವಾಸ ದಾಂಗೆ, ತಾಯಿ ಕಾಶೀಬಾಯಿ. ಏಳು ವರ್ಷದ ಬಾಲಕಿಯಾಗಿದ್ದಾಗಲೇ ತಂದೆಯ ಪ್ರೀತಿಯಿಂದ ವಂಚಿತರಾಗಿ ಬದುಕಿನುದ್ದಕ್ಕೂ ತಾಯಿಯ ಆದರ್ಶಗಳನ್ನೇ ಪಾಲಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಓದು ಬರೆಹಬಾರದ ಕಾಶೀಬಾಯಿಯವರು ಪತಿಯ ಅಕಾಲ ಮರಣದಿಂದ ಧೃತಿಗೆಡದೆ ಕನ್ನಡ, ಮರಾಠಿ, ತಮಿಳು ಭಾಷೆಗಳನ್ನು ಓದಲು, ಬರೆಯಲು ಕಲಿತು ಮಕ್ಕಳಿಗೆ, ಮೊಮ್ಮಕ್ಕಳಿಗೆ ಆದರ್ಶ ಮಹಿಳೆಯಾಗಿ ಬಾಳಿದರು. ಲೀಲಾರವರು ಓದಿದ್ದು ಐದನೆಯ ತರಗತಿಯವರೆಗೆ ಮಂಗಳೂರಿನ ಕೆನರಾ ಬಾಲಕಿಯರ ಪ್ರೌಢಶಾಲೆಯಲ್ಲಿ. ಹನ್ನೊಂದನೆಯ ವಯಸ್ಸಿಗೇ ಕುಂದಾಪುರದಲ್ಲಿ ವಕೀಲರಾಗಿದ್ದ ರಾಮಚಂದ್ರಕಾಮತ್ ಮತ್ತು ಸೀತಾಬಾಯಿ ಕಾಮತರ ಮಗ ವಿ.ಆರ್. ಕಾಮತರನ್ನು ಮದುವೆಯಾಗಿ ಪತಿಗೃಹ ಸೇರಿದಾಗ ಕಲಿಯುವ ಆಸೆಯಿದ್ದರೂ ಶಿಕ್ಷಣ ಅರ್ಧಕ್ಕೆ ನಿಂತುಹೋಯಿತು. ದಿನಪತ್ರಿಕೆ, ಸಾಪ್ತಾಹಿಕ, ಮಾಸಿಕ ಪತ್ರಿಕೆಗಳನ್ನೋದುತ್ತಲೇ ಭಾಷಾ ಪ್ರೌಢಿಮೆಯನ್ನು ರೂಢಿಸಿಕೊಂಡಿದ್ದು, ಬಿಡುವಿನ ವೇಳೆಯಲ್ಲಿ ಮನೆಯಲ್ಲಿಯೇ. ಹಿಂದಿ ಪ್ರಥಮ, ಮಾಧ್ಯಮ, ರಾಷ್ಟ್ರಭಾಷಾ ಪರೀಕ್ಷೆಗಳಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆಯಾದುದಲ್ಲದೆ ಮರಾಠಿ, ಇಂಗ್ಲಿಷ್ ಭಾಷೆಗಳನ್ನು ಕಲಿತರು. ಲೀಲಾಬಾಯಿ ಕಾಮತರು ಸಾಹಿತ್ಯ ಪ್ರವೇಶಿಸಿದುದು ಕಥೆಗಳ ಅನುವಾದದ ಮುಖಾಂತರ. ‘ವಿಶ್ವಾಸಘಾತ’ (೨.೮.೧೯೪೦) ಇವರು ಬರೆದ ಮೊದಲ ಅನುವಾದಿತ ಕಥೆ ಪ್ರಕಟವಾದುದು ಸ್ವದೇಶಾಭಿಮಾನಿ ಪತ್ರಿಕೆಯಲ್ಲಿ. ತಮ್ಮ ಬರವಣಿಗೆಯನ್ನು ಜಿಜ್ಞಾಸು, ಶ್ರೀಮತಿಲಕ್ಷ್ಮೀ, ಲಕ್ಷ್ಮೀವೆಂಕಟರಾವ್, ಲೀಲಾ ಮುಂತಾದ ಕಾವ್ಯನಾಮಗಳಲ್ಲಿ ಬರೆದಿದ್ದಾರೆ. ಇವರು ಬರೆದ ಅನುವಾದಿತ ಕತೆಗಳು, ಸ್ವತಂತ್ರ ಕಥೆಗಳು ಅಂದಿನ ಪತ್ರಿಕೆಗಳಾದ ಸ್ವದೇಶಾಭಿಮಾನಿ, ರಾಯಭಾರಿ, ಅಂತರಂಗ, ಬಾಲಚಂದ್ರ, ಧುರೀಣ, ನವಯುಗ, ನವಭಾರತ, ಪ್ರಭಾತ, ರಾಷ್ಟ್ರಬಂಧು, ಪ್ರಜಾಮತ, ಕಥಾಂಜಲಿ, ಜೀವನ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹೀಗೆ ಅನುವಾದಿಸಿದ ಬಹುಪಾಲು ಕಥೆಗಳು ಹಿಂದಿ ಮತ್ತು ಮರಾಠಿಯಿಂದ – ಸುಮಾರು ನೂರಕ್ಕೂ ಹೆಚ್ಚು ಕತೆಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿ ಬರೆದ ಕತೆಗಳು ಸುಮಾರು ೨೦. ನವಯುಗ ಪತ್ರಿಕೆಯಲ್ಲಿ ಪ್ರಕಟಗೊಂಡ (೧೩.೧.೧೯೪೨) ‘ನಿಸ್ಪೃತಹತೆ’ ಮೊದಲ ಕತೆ. ಕಾಶಿಯಾತ್ರೆ, ನಾವು ಅಮೆರಿಕಾಕ್ಕೆ ಹೊರಟೆವು, ಇವೆರಡೂ ಪ್ರವಾಸ ಕಥನಗಳು. ತಮ್ಮ ಅಮೆರಿಕಾ ಪ್ರವಾಸವನ್ನು ರೋಚಕವಾಗಿ ವರ್ಣಿಸಿದ್ದಾರೆ. ಸುಮಾರು ಐದು ನಾಟಕಗಳನ್ನು ಬರೆದಿದ್ದು ಅವು ಸವತಿಯ ಸೋಲು, ತಪಸ್ವಿಮುದ್ಗಲಿ, ಅಭಯದಾನ, ನ್ಯಾಯಮಂತ್ರಿ, ಶಬರಿ ಮುಂತಾದವುಗಳು. ಕಥೆಗಳನ್ನಷ್ಟೇ ಅನುವಾದಿಸದೆ ಹಲವಾರು ಅಧ್ಯಾತ್ಮಕ ಲೇಖನಗಳನ್ನು ಅನುವಾದಿಸಿದ್ದು, ಏಕನಾಥ ಭಾಗವತದಿಂದ, ಬದುಕಿನಲ್ಲಿ ಭರವಸೆ, ಅಮರ ಕಥೆಗಳು, ಪರಮಾತ್ಮ ಪ್ರಾಪ್ತಿಯ ವಿವಿಧ ಉಪಾಯಗಳು ಮುಂತಾದವುಗಳಾದರೆ ಕಸೂತಿ ಕಲೆ, ಹಿಂದಿ – ಕನ್ನಡ ಕೋಶ ಮುಂತಾದ ಸಂಕೀರ್ಣ ಕೃತಿಗಳನ್ನು ರಚಿಸಿದ್ದಾರೆ. ಧರ್ಮವೆಡೊ, ಆತ್ಮತೇಜು, ಕವಿಲ್ಯಾ ವಾರ್ಡಿಕೆ ಪ್ರಾಸು (ಕವಿತಾ) ಮುಂತಾದ ಕೊಂಕಣಿ ಭಾಷೆಯಲ್ಲಿ ಲೇಖನಗಳನ್ನು ಬರೆದಿರುವುದಲ್ಲದೆ ಸಂಗೀತಧ್ರುವ ನಾಟಕ, ನ್ಯಾಯಮಂತ್ರಿ, ರೋಗಿಲ್ಯಾಕುಂಡಾತು, ಮೂಢಭಕ್ತಿ, ತಪಸ್ವೀಮುದ್ಗಲಿ ಮುಂತಾದ ಕೊಂಕಣಿ ನಾಟಕಗಳನ್ನೂ ರಚಿಸಿದ್ದಾರೆ. ಜೊತೆಗೆ ಗ್ರಾಮಜೀವನದಲ್ಲಿ ವಿದ್ಯಾಭ್ಯಾಸ ಸೌಲಭ್ಯಗಳು, ಪ್ಲೇಗ್ ಇಲಿ(ಕತೆ), ಪಾನನಿರೋಧದ ಅನಂತರ (ಕತೆ), ಹೆಡ್ ಟೀಚರ್ (ಕತೆ), ಪ್ರಸಿದ್ಧ ದೇವಾಲಯಗಳು, ಗಾಂಧೀಜಿ ನಾ ಕಂಡಂತೆ ಮುಂತಾದ ಹತ್ತಕ್ಕೂ ಹೆಚ್ಚು ಭಾಷಣಗಳು ರೇಡಿಯೋದಲ್ಲಿ ಪ್ರಸಾರಗೊಂಡಿವೆ. ಸಾಹಿತ್ಯದಷ್ಟೇ ಸಾಮಾಜಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದ ಲೀಲಾಬಾಯಿ ಕಾಮತರು ಉಡುಪಿಯ ಮಹಿಳಾ ಸಮಾಜ, ಉಡುಪಿ ನಗರ ಸಭೆಯ ಅಜ್ಜರ ಕಾಡು ವಾರ್ಡ್‌ನ (೧೯೪೦) ಕೌನ್ಸಿಲರ್ ಆಗಿ, ಉಡುಪಿಯ ನಗರ ಸಭೆಯ ಉಪಾಧ್ಯಕ್ಷೆಯಾಗಿಯೂ ದುಡಿದಿದ್ದಲ್ಲದೆ ಮದರಾಸು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯೆಯಾಗಿ (೧೯೪೮) ಆಯ್ಕೆಯಾಗಿ, ಹೀಗೆ ಸೆನೆಟ್‌ಗೆ ಆಯ್ಕೆಯಾದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ೧೯೪೦ರಷ್ಟು ಹಿಂದೆಯೇ ದ.ಕ. ಜಿಲ್ಲಾ ಮಹಿಳಾ ಪರಿಷತ್ತು ಆಯೋಜಿಸಿದ್ದ ಸಮಾವೇಶದಲ್ಲಿ ಸ್ವಾಗತಾಧ್ಯಕ್ಷೆಯಾಗಿ ಆಸ್ತಿಗೆ ಸಮಾನ ಹಕ್ಕು, ವರದಕ್ಷಿಣೆ ಪದ್ಧತಿ ನಿರ್ಮೂಲನ, ಕಡ್ಡಾಯ ಪ್ರಾಥಮಿಕ ಶಿಕ್ಷಣ, ವಿಧವಾಶ್ರಮ ಸ್ಥಾಪನೆ, ಶಿಶುಪಾಲನಾ ಕೇಂದ್ರಗಳ ಸ್ಥಾಪನೆ, ಆರನೆಯ ಫಾರಂ ವರೆಗೆ ಉಚಿತ ಶಿಕ್ಷಣ – ಹೀಗೆ ಹಲವಾರು ಮಹಿಳಾ ಪ್ರಗತಿಪರ ಠರಾವುಗಳನ್ನು ಮಂಡಿಸಿ ಮಹಿಳೆಯರ ಸಬಲೀಕರಣಕ್ಕಾಗಿ ಹಕ್ಕೊತ್ತಾಯ ಮಾಡಿದ್ದು ಅವರ ಜೀವನ ಸಾಧನೆ, ಧೋರಣೆಗಳ ಪ್ರತಿಬಿಂಬವಾಗಿವೆ. ೧೯೨೦ರಲ್ಲಿ ಗಾಂಧೀಜಿಯವರು ಮಂಗಳೂರಿಗೆ ಬಂದಿದ್ದಾಗ ಅವರನ್ನು ನೋಡಿ ಪ್ರಭಾವಿತರಾಗಿ ತಕಲಿ ಹಿಡಿದು ನೂಲಲು ಕಲಿತದ್ದಲ್ಲದೆ ಖಾದಿಧಾರಿಗಳಾದರು. ಮಂಗಳೂರಿನಲ್ಲಿ ನಡೆದ ದ.ಕ. ಜಿಲ್ಲಾ ಎರಡನೆಯ ಸಾಹಿತ್ಯ ಸಮ್ಮೇಳನ (೧೨/೧೩.೧,೧೯೮೫) ಮತ್ತು ಉಡುಪಿ ತಾಲ್ಲೂಕಿನಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ವರ್ಷದಲ್ಲಿ ಸನ್ಮಾನಿತರಾದ ಲೀಲಾಬಾಯಿ ಕಾಮತರು ಮಹಿಳೆಯರ ಶಿಕ್ಷಣ, ಸಂಘಟನೆ, ಜಿಲ್ಲಾ ಬೋರ್ಡ್, ಮುನಿಸಿಪಾಲಿಟಿ, ವಿಧಾನ ಸಭೆ, ಲೋಕಸಭೆ ಮುಂತಾದವುಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ – ಹೀಗೆ ಮಹಿಳೆಯರ ಏಳಿಗೆಯ ಬಗ್ಗೆಯೇ ಸದಾ ಚಿಂತಿಸುತ್ತಿದ್ದ ಲೀಲಾಬಾಯಿ ಕಾಮತರು ಸಾಮಾಜಿಕ ಬದುಕಿನಿಂದ ದೂರವಾದುದು ೧೯೯೯ ರ ಡಿಸೆಂಬರ್ ೩ ರಂದು. (ಫೋಟೋ ಕೃಪೆ: ಡಾ. ಸಬಿಹಾ ಭೂಮಿಗೌಡ)