೧೯.೫.೧೯೪೭ ೧೪.೧೦.೨೦೦೪ ವೃತ್ತಿರಂಗ ಭೂಮಿ, ಹವ್ಯಾಸಿ ರಂಗಭೂಮಿ ಮತ್ತು ಚಲನಚಿತ್ರ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಖ್ಯಾತರೆನಿಸಿದ್ದ ಲೋಕೇಶ್ರವರು ಹುಟ್ಟಿದ್ದು ಬೆಂಗಳೂರು. ತಂದೆ ಎಂ.ವಿ. ಸುಬ್ಬಯ್ಯನಾಯ್ಡು, ತಾಯಿ ವೆಂಕಟಮ್ಮ. ಕಾಲೇಜು ವಿದ್ಯಾಭ್ಯಾಸ ಮುಗಿಸಿ ಕಲಿತದ್ದು ಸಿನಿಮಾಟೋಗ್ರಫಿ. ಆದರೆ ಸಂದದ್ದು ರಂಗಭೂಮಿ ಮತ್ತು ಚಲನ ಚಿತ್ರ ಪ್ರಪಂಚಕ್ಕೆ. ಕರ್ನಾಟಕ ಸರಕಾರದ ವಾರ್ತಾ ಇಲಾಖೆಯಲ್ಲಿ ಸಂಗೀತ ಮತ್ತು ನಾಟಕ ವಿಭಾಗದಲ್ಲಿ ಉದ್ಯೋಗ. ಇದರಿಂದ ಹವ್ಯಾಸಕ್ಕೆ ದೊರೆತ ಬೆಂಬಲ. ಬಾಲ್ಯದಿಂದಲೇ ರಂಗಭೂಮಿಯ ಸೆಳೆತ. ತಂದೆಯವರ “ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿ’ಯ ನೇತಾರರಾಗಿ ಹಲವಾರು ವರ್ಷ ನಡೆಸಿದ ಅನುಭವ. ವೃತ್ತಿ ನಾಟಕ ಸಂಸ್ಥೆಯಲ್ಲಿ ಪೌರಾಣಿಕ, ಚಾರಿತ್ರಿಕ, ಸಾಮಾಜಿಕ ನಾಟಕಗಳಲ್ಲಿ ಅಭಿನಯ. ಸಹೋದರಿ ರಚಿಸಿದ “ಸಾಮ್ರಾಟ ಅಶೋಕ್ಕುಮಾರ್’ ನಾಟಕದಲ್ಲಿ ಕುಶಾಲನಾಗಿ, ಸದಾರಮೆಯ ಶೆಟ್ಟಿ – ಆದಿಮೂರ್ತಿಯಾಗಿ ನೀಡಿದ ವೈಶಿಷ್ಟ್ಯಪೂರ್ಣ ಅಭಿನಯ. ನಟನೆಯಷ್ಟೆ ರಂಗ ಶಿಸ್ತಿಗೂ ಕೊಟ್ಟ ಪ್ರಾಮುಖ್ಯತೆ. ವೃತ್ತಿ ರಂಗಭೂಮಿಯ ಜೊತೆಗೆ ಹವ್ಯಾಸಿ ತಂಡಗಳಿಗೂ ತಂದ ಹೊಸತನ. ಪೋಲಿಕಿಟ್ಟಿ, ಕಾಕನಕೋಟೆಯ ಕಾಕನ ಪಾತ್ರ, ತುಘಲಕ್ನಲ್ಲಿ ಅಜೀಜ್ ಪಾತ್ರ ಮರೆಯಲಾಗದ್ದು. ನಟರಂಗ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲೊಬ್ಬರಾಗಿ, ನಟರಂಗದ ಹಲವಾರು ಪ್ರಯೋಗಗಳಲ್ಲಿ ಪ್ರಮುಖ ಪಾತ್ರಧಾರಿ. ಶೇಕ್ಸ್ಪಿಯರನ ನಾಟಕಗಳು, ವೆಯಿಟಿಂಗ್ ಫಾರ್ ಗೋಡೋ. ಜೆಗೆವಾರ, ತೆರೆಗಳು ಮುಂತಾದ ವಿಭಿನ್ನ ಪ್ರಯೋಗಗಳಲ್ಲಿ ಇವರದ್ದು ಸಿಂಹಪಾಲು. ೧೯೫೮ ರಲ್ಲಿ ಭಕ್ತಪ್ರಹ್ಲಾದದ ಮೂಲಕ ಚಿತ್ರರಂಗ ಪ್ರವೇಶ. ಸುಮಾರು ೧೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ. ’ಭೂತಯ್ಯನ ಮಗ ಅಯ್ಯು’, ಪರಸಂಗದ ಗೆಂಡೆತಿಮ್ಮ, ಬ್ಯಾಂಕರ್ ಮಾರ್ಗಯ್ಯ ಹೆಸರು ತಂದುಕೊಟ್ಟ ಚಿತ್ರಗಳು. ಇವುಗಳಿಗೆ ಸಂದ ರಾಜ್ಯ ಪ್ರಶಸ್ತಿ. ಅತ್ಯುತ್ತಮ ನಿರ್ದೇಶನದ ಭುಜಂಗಯ್ಯನ ದಶಾವತಾರಗಳು ಇವರು ಅಭಿನಯಿಸಿದ ಕಾಡು, ಬ್ಯಾಂಕರ್ ಮಾರ್ಗಯ್ಯ, ಗಾನಯೋಗಿ ಪಂಚಾಕ್ಷರಿ ಗವಾಯಿ, ಭೂಮಿ ಗೀತ, ಮುಂಗಾರಿನ ಮಿಂಚು ರಾಷ್ಟ್ರ ಪ್ರಶಸ್ತಿ ಗಳಿಸಿದ ಚಿತ್ರಗಳು. ೧೯೯೯ ರಲ್ಲಿ ರಾಜ್ಯೋತ್ಸವದ ಜೊತೆಗೆ ಹಲವಾರು ಪ್ರಶಸ್ತಿ ಪುರಸ್ಕೃತರು. ಇದೇ ದಿನ ಹುಟ್ಟಿದ ಕಲಾವಿದ ಭಾಗವತ ನೀಲಾವರ ರಾಮಕೃಷ್ಣಯ್ಯ – ೧೯೧೯.

