೧೦.೦೧.೧೯೪೬ ಆಗ್ರಾ ಘರಾಣೆ ಶೈಲಿಯ ಹಿಂದೂಸ್ತಾನಿ ಸಂಗೀತದ ಪ್ರಖ್ಯಾತ ಗಾಯಕಿ ವತ್ಸಲಾ ಮಾಪಾರಿಯವರು ಹುಟ್ಟಿದ್ದು ಶಿರಸಿಯಲ್ಲಿ. ತಂದೆ ದಾಸಪ್ಪ ಮಾಪಾರಿ, ತಾಯಿ ಲಕ್ಷ್ಮೀ ಮಾಪಾರಿ. ವಿದ್ಯಾಭ್ಯಾಸ ನಡೆದುದು ಎಸ್.ಎಸ್.ಎಲ್.ಸಿ. ವರೆಗೆ. ಆದರೆ ಸಂಗೀತದಲ್ಲಿ ಒಲವು ಮೂಡಿ ಪಾಸುಮಾಡಿದ್ದು ಹಲವಾರು ಕಠಿಣ ಪರೀಕ್ಷೆಗಳು. ಆಗ್ರಾ ಘರಾಣೆಯಲ್ಲಿ ಜಿ.ಎಸ್. ಹೆಗಡೆ ಬೆಳ್ಳಿಕೇರಿ ಮತ್ತು ಮೋಹನ ಜಿಕ್ಕರಮನೆಯವರ ಬಳಿ ಶಿಷ್ಯೆಯಾಗಿ ನಿರಂತರ ಅಭ್ಯಾಸ. ಗಾಯನ ವಿಭಾಗದಲ್ಲಿ ದೊರೆತದ್ದು ಪ್ರೊಫೆಷಿಯನ್ಸಿ ಮತ್ತು ಶಿಕ್ಷಕ ಸನ್ನದ್ ಪುರಸ್ಕಾರಗಳು. ಬೆಳಗಾವಿಯ ಗಂಧರ್ವ ಮಹಾವಿದ್ಯಾಲಯದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ವಿಶಾರದ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಕೀರ್ತಿ. ಶಿರಸಿಯ ಪ್ರೊಗ್ರೆಸಿವ್ ಕಿರಿಯ ಮಹಾವಿದ್ಯಾಲಯದಲ್ಲಿ ತಮ್ಮ ೧೮ನೇ ವಯಸ್ಸಿನಲ್ಲೆಯೇ ಸೇರಿದ್ದು ಸಂಗೀತ ಶಿಕ್ಷಕಿಯಾಗಿ. ಕಳೆದ ೨೫ ವರ್ಷಗಳಿಂದಲೂ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಂಗೀತದಲ್ಲಿ ಮಾರ್ಗದರ್ಶನ, ತರಬೇತಿ. ಹಲವಾರು ಕಡೆಗಳಲ್ಲಿ ನಡೆಸಿಕೊಟ್ಟ ಸಂಗೀತ ಶಿಬಿರಗಳು. ಧಾರವಾಡದ ಐಕ್ಯತಾ ಶಿಬಿರ, ಬೆಳಗಾವಿಯ ಪುನಶ್ಚೇತನ ಶಿಬಿರ, ಬೆಂಗಳೂರಿನ ಮಕ್ಕಳ ರಂಗಭೂಮಿ ಕಾರ್ಯಗಾರ, ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಲವಾರು ಕಾರ್ಯಕ್ರಮಗಳು, ಸಮೂಹಗಾಯನ ಕಾರ್ಯಕ್ರಮಗಳ ನಿರ್ದೇಶನ, ನವದೆಹಲಿಯ ಮಾನವ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದಲ್ಲಿ, ಕರ್ನಾಟಕ ರಾಜ್ಯ ಶಿಕ್ಷಣ ಮತ್ತು ಸಂಶೋಧನ ಇಲಾಖೆಗಳ ಆಶ್ರಯದಲ್ಲಿ ನಡೆದ ಕಾರ್ಯಗಾರಗಳು ಮುಖ್ಯವಾದುವುಗಳು. ದೆಹಲಿ, ಬೆಂಗಳೂರು, ಧಾರವಾಡ, ಖಟ್ಮಂಡು ಮುಂತಾದ ಕಡೆಗಳಲ್ಲಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಗಳು, ಕದಂಬೋತ್ಸವ, ಕರಾವಳಿ ಉತ್ಸವಗಳಲ್ಲೂ ಹಿಂದೂಸ್ತಾನಿ ಸಂಗೀತ ಗಾಯನ ಕಾರ್ಯಕ್ರಮ. ಗಾಯನ ಪ್ರತಿಭೆಗಾಗಿ ಸಂದ ಪ್ರಶಸ್ತಿಗಳು ಹಲವಾರು, ಸಾವಂತವಾಡಿ ಮಹಾರಾಜರಿಂದ ಪಡೆದ ಬಂಗಾರದ ಪದಕ, ಖ್ಯಾತ ಹಿಂದೂಸ್ತಾನಿ ಗಾಯಕ ಮಲ್ಲಿಕಾರ್ಜುನ ಮನಸೂರರಿಂದ ಪಡೆದ ಪ್ರಶಸ್ತಿ ಮುಖ್ಯವಾದುವುಗಳು. ಪತಿ ವಿಠಲದಾಸರೊಡನೆ ಶಿರಸಿಯಲ್ಲಿ ನಡೆಸುತ್ತಿರುವ ಶಾರದಾ ಸಂಗೀತ ವಿದ್ಯಾಲಯ ನಾಡಿನ ಹೆಮ್ಮೆಯ ಸಂಗೀತ ಬೋಧನ ಸಂಸ್ಥೆ ಎಂಬ ಹೆಗ್ಗಳಿಕೆ. ಇದೇ ದಿನ ಹುಟ್ಟಿದ ಕಲಾವಿದರು : ವಿ.ಸಿ. ಮಾಲಗತ್ತಿ – ೧೯೨೨ ಬಸವಲಿಂಗಯ್ಯ ಎಸ್. ಮಠ – ೧೯೪೫ ನಾಗರಾಜು ಸಿ. – ೧೯೫೪
* * *