ವಾಣಿ (ಬಿ.ಎನ್‌. ಸುಬ್ಬಮ್ಮ)

Home/Birthday/ವಾಣಿ (ಬಿ.ಎನ್‌. ಸುಬ್ಬಮ್ಮ)
Loading Events

೧೨..೧೯೧೭ ೧೪..೧೯೮೮ ಕಾದಂಬರಿ ವಸ್ತುವಿನ ಆಯ್ಕೆಯಲ್ಲಿ ವೈವಿಧ್ಯತೆ ಇದ್ದು, ಸರಳ ಬರವಣಿಗೆಯ, ಅಷ್ಟೇ ಸಹಜತೆಯಿಂದ ಕಾದಂಬರಿಗಳನ್ನು ರಚಿಸುತ್ತಿದ್ದ ವಾಣಿಯವರು ಹುಟ್ಟಿದ್ದು ಶ್ರೀರಂಗಪಟ್ಟಣದಲ್ಲಿ ೧೯೧೭ರ ಮೇ ೧೨ರಂದು. ಶಾಸನ ಸಭೆಯ ಶಾಸಕರಾಗಿ, ರಾಜಸೇವಾಸಕ್ತ ಬಿರುದು ಪಡೆದು, ವಕೀಲರಾಗಿದ್ದ ತಂದೆ ನರಸಿಂಗರಾಯರು. ತಾಯಿ ಹಿರಿಯಕ್ಕಮ್ಮ. ಓದಿದ್ದು ಎಸ್‌.ಎಸ್‌.ಎಲ್‌.ಸಿ.ವರೆಗೆ. ಆದರೆ ಇಂಗ್ಲಿಷ್‌, ಕನ್ನಡ ಪುಸ್ತಕಗಳನ್ನು ಹಿಡಿದು ಕುಳಿತರೆ ಊಟ, ತಿಂಡಿಗಳ ಪರಿವೆಯೆ ಇಲ್ಲದ ಓದು. ಕಿಶೋರಾವಸ್ಥೆಯಲ್ಲಿಯೇ ಮದುವೆಮಾಡಿ ಬಿಡುತ್ತಿದ್ದ ಕಾಲದಲ್ಲಿ ಇವರಿಗೆ ಮದುವೆಯಾದದ್ದು ೧೩ ನೆಯ ವಯಸ್ಸಿಗೆ, ಲಾಯರ್ ಎಂ.ಎನ್‌. ನಂಜುಂಡಯ್ಯನವರೊಡನೆ. ೪೦-೫೦ ಜನರ ತುಂಬಿದ ಕುಟುಂಬ. ಕೆಲಸದಲ್ಲಿ ಬಿಡುವು ಸಿಕ್ಕರೆ ಸಾಕು ಬರವಣಿಗೆಯಲ್ಲಿ ತಲ್ಲೀನರಾಗಿ ಬಿಡುತ್ತಿದ್ದರು. ‘ಚಿಲುಮೆಯಲ್ಲಿ ನೀರು ಉಕ್ಕಿದಂತೆ ಪುಟಿದೇಳುತ್ತಿದ್ದ ಬರವಣಿಗೆಯ ಚೈತನ್ಯವನ್ನು ತಡೆಹಿಡಿಯಲಾರದೆ ಬರೆಯುತ್ತಿದ್ದೆ’ ಎನ್ನುವ ವಾಣಿಯವರದ್ದು ಅತಿ ಸಹಜ ಬರವಣಿಗೆ. ಇವರು ಮೊಟ್ಟಮೊದಲು ಬರೆದ ‘ತಾರಾ’ ಎಂಬ ಕಥೆಯನ್ನು ಪತ್ರಿಕೆಗೆ ಕಳುಹಿಸುವಾಗ ಪ್ರಕಟವಾಗುತ್ತದೆಯೋ ಇಲ್ಲವೋ ಎನ್ನುವ ಹಿಂಜರಿಕೆಯಿಂದ ‘ಶ್ರೀನಾಥ’ ಎಂಬುವರ ಹೆಸರಿನಲ್ಲಿ ಪ್ರಕಟಿಸುವಂತೆ ಸಂಪಾದಕರಿಗೆ ಪತ್ರ ಬರೆದಾಗ, ಕಥೆಯನ್ನು ಮೆಚ್ಚಿದ ಸಂಪಾದಕರು ‘ವಾಣಿ’ ಎಂದು ನಾಮಕರಣ ಮಾಡಿ ಪ್ರಕಟಿಸಿದ್ದೆ ಮುಂದೆ ಶಾಶ್ವತ ಕಾವ್ಯನಾಮವಾಯಿತು. ಹೀಗೆ ಬರೆದ ಎರಡನೆಯ ಕಥೆಯು ಕನ್ನಡ ಸಾಹಿತ್ಯ ಪರಿಷತ್ತಿನ ಭಾಸ್ಕರರಾವ್‌ ಸ್ಮಾರಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದದ್ದು, ಇವರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಬೆಳೆಯುವಂತೆ ಮಾಡಿತು. ನಂತರ ಪ್ರಕಟವಾದ ಏಳು ಕತೆಗಳನ್ನು ಸೇರಿಸಿ ೧೯೪೪ರಲ್ಲಿ ಹೊರತಂದ ಕಥಾಸಂಕಲನಕ್ಕೆ ಮಾಸ್ತಿಯವರು ಮುನ್ನುಡಿ ಬರೆದು ಹಾರೈಸಿದರು. ನಂತರ ಬಂದ ಕಥಾಸಂಕಲನಗಳು ‘ನಾಣಿಯಮದುವೆ’, ‘ಬಾಬು ಬರ್ತಾನೆ’, ‘ಅರ್ಪಣೆ’, ‘ಅಪರೂಪದ ಅತಿಥಿ’, ‘ಹ್ಯಾಪಿ ಬರ್ತ್‌‌ಡೇ’ ಮುಂತಾದವು. ಉತ್ತರ ಭಾರತವು ಚಂಡಮಾರುತದಿಂದ ಸಂಕಷ್ಟಕ್ಕೊಳಗಾದ ಸುದ್ದಿಯನ್ನಾಧರಿಸಿ ರಚಿಸಿದ ಕಾದಂಬರಿ ‘ಬಿಡುಗಡೆ’. ಈ ಮೊದಲ ಕಾದಂಬರಿ ಬಿಡುಗಡೆಯಾಗಲು ಬಹಳಷ್ಟು ವರ್ಷ ಕಾಯಬೇಕಾಯಿತು. ಪ್ರಕಾಶಕರನ್ನು ಹುಡುಕುವುದೇ ಬಹುಪ್ರಯಾಸವಾಗಿದ್ದ ಕಾಲ. ಮೊಟ್ಟ ಮೊದಲ ಕಾದಂಬರಿಯನ್ನು ಮೈಸೂರಿನ ಡಿ.ವಿ.ಕೆ. ಮೂರ್ತಿಯವರು ತಮ್ಮ ಪ್ರಕಾಶನದಡಿಯಲ್ಲಿ ಪ್ರಕಟಿಸಿದ್ದೇ ಅಲ್ಲದೆ ನಂತರ ಬರೆದ ಕಾದಂಬರಿಗಳೆಲ್ಲವನ್ನೂ ಪ್ರಕಟಿಸಿದರು. ಬಿಡುಗಡೆ, ಎರಡು ಕನಸು, ಶುಭಮಂಗಳ, ಕಾವೇರಿ ಮಡಿಲಲ್ಲಿ, ಹೊಸಬೆಳಕು, ಅನಿರೀಕ್ಷಿತ, ಪ್ರೇಮಸೇತು, ತ್ರಿಶೂಲ, ಸುಲಗ್ನಾಸಾವಧಾನ ಮುಂತಾದ ೨೦ ಕಾದಂಬರಿಗಳಲ್ಲಿ ಎರಡುಕನಸು, ಶುಭಮಂಗಳ, ಹೊಸಬೆಳಕು ಚಲನಚಿತ್ರಗಳಾಗಿ ಪ್ರಸಿದ್ಧಿ ಪಡೆದಿವೆ. ಕೆಲವು ಕಾದಂಬರಿಗಳು ಮಲಯಾಳಂ ಹಾಗೂ ತೆಲುಗಿಗೂ ಅನುವಾದಗೊಂಡಿವೆ. ೫೧೮ ವಚನಗಳ ಸಂಗ್ರಹ ‘ನವನೀತ’ ಪ್ರಕಟಗೊಂಡಿದ್ದು, ಅಂಕಣಕಾರರಾದ ಹಾ.ಮಾ. ನಾಯಕರು ಮುನ್ನುಡಿ ಬರೆದಿದ್ದಾರೆ. ಇವರು ತೀರಿಕೊಂಡ ನಂತರ ಪ್ರಕಟವಾದ ಕೃತಿ ಎಂದರೆ ‘ತಾರಮ್ಮಯ್ಯ’ ಎಂಬ ಹರಟೆಗಳ ಸಂಗ್ರಹ. ಹಲವಾರು ನಾಟಕಗಳನ್ನೂ ಬರೆದಿದ್ದು ಅವು ಪ್ರಕಟಣೆಯ ಅದೃಷ್ಟ ಕಂಡಿಲ್ಲ. ಮನೆಮಗಳು ಕಾದಂಬರಿಗೆ ೧೯೬೨ರಲ್ಲಿ ರಾಜ್ಯ ಸರಕಾರದ ಪ್ರಶಸ್ತಿ ದೊರೆಯಿತು. ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿದ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೭೦ರಲ್ಲಿ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಸನ್ಮಾನ, ೧೯೭೨ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆದ ೪೭ ನೆಯ ಕನ್ನಡ ಸಾಹಿತ್ಯ ಸಮ್ಮೇಳನ (೧೯೭೦) ದಲ್ಲಿ ಮಹಿಳಾ ಗೋಷ್ಠಿಯ ಅಧ್ಯಕ್ಷತೆ, ಧರ್ಮಸ್ಥಳದಲ್ಲಿ ನಡೆದ ವಾರ್ಷಿಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಂಡ್ಯದಲ್ಲಿ ನಡೆದ ಲೇಖಕಿಯರ ಸಂಘದ ಸಮ್ಮೇಳಾನಧ್ಯಕ್ಷತೆ ಮುಂತಾದ ಗೌರವವಗಳು. ೧೯೭೬ರಲ್ಲಿ ಪತಿ ನಂಜುಂಡಯ್ಯನವರು ಅಪಘಾತದಲ್ಲಿ ಮರಣ ಹೊಂದಿದ್ದು, ೧೯೮೪ರಲ್ಲಿ ಮಗ ಕೆನಡಾದಲ್ಲಿ ಅಕಾಲ ಮೃತ್ಯವಿಗೊಳಗಾಗಿ ಚಿತಾಭಸ್ಮವನ್ನೂ ನೋಡಬೇಕಾಗಿ ಬಂದ ಸಂದರ್ಭದ ಕೊರಗಿನಿಂದ ಆರೋಗ್ಯದ ಮೇಲೆ ಪರಿಣಾಮಬೀರಿ, ಪಾರ್ಶ್ವವಾಯು ಪೀಡಿತರಾಗಿ ಸಾಹಿತ್ಯಲೋಕದಿಂದ ದೂರವಾದದ್ದು ೧೯೮೮ ರ ಫೆಬ್ರವರಿ ೧೪ ರಂದು. ಸಾಹಿತ್ಯರಚನೆ ಎನ್ನುವುದು ಕೇವಲ ಕಲ್ಪನೆಯಷ್ಟೆ ಅಲ್ಲದೆ, ಅನುಭವದ ಭಾಗ ಕೂಡಾ ಸರಿಸಮಾನವಾಗಿ ಬೆರೆತಾಗ ಮಾತ್ರ ಸಾಹಿತ್ಯ ಸೃಷ್ಟಿ ಸಾಧ್ಯ ಎಂದು ಅಕ್ಕನ ಮಗಳು ತ್ರಿವೇಣಿಯವರೊಡನೆ ಆಗಾಗ್ಗೆ ಹೇಳುತ್ತಿದ್ದಂತೆ ರಚಿಸಿದ್ದು ಒಟ್ಟು ೨೮ ಕೃತಿಗಳು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top