ವಿಜಯ ಸಿಂಧೂರ

Home/Birthday/ವಿಜಯ ಸಿಂಧೂರ
Loading Events
This event has passed.

೦೭.೦೬.೧೯೪೦ ಪ್ರಾಣಿ-ಪಕ್ಷಿ, ಮರ-ಗಿಡ, ಮಣ್ಣು-ಮುಗಿಲು ಮುಂತಾದ ಪ್ರಕೃತಿಯ ನೈಸರ್ಗಿಕ ದೃಶ್ಯಗಳನ್ನು ತಮ್ಮ ಕಲೆಯ ಮೂಲಕ ಅಭಿವ್ಯಕ್ತಿಪಡಿಸುತ್ತಿರುವ ವಿಜಯ ಸಿಂಧೂರ ರವರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಬನಹಟ್ಟಿಯ ಶ್ರೀಮಂತ ಕುಟುಂಬದಲ್ಲಿ, ತಂದೆ ಗಂಗಪ್ಪ, ತಾಯಿ ಬಸಮ್ಮ. ಬಾಲ್ಯದಿಂದಲೇ ಮನೆಯಲ್ಲಿ ತೂಗು ಹಾಕಿದ್ದ ರವಿವರ್ಮನ ಚಿತ್ರಗಳಿಂದ ಆಕರ್ಷಿತರಾಗಿ ತಾವೂ ಅದರಂತೆ ಮಾಡಬೇಕೆಂದು ಪ್ರಾರಂಭಿಸಿದ್ದು ಚಿತ್ರಕಲೆ. ಶಿವ-ಪಾರ್ವತಿ, ಗಣಪತಿ ಚಿತ್ರಬಿಡಿಸಿ ಬಣ್ಣ ತುಂಬಿದರು. ಇಂಜಿನಿಯರ್‌ ಅಥವಾ ಡಾಕ್ಟರ್‌ ಆಗಬೇಕೆಂದು ಆರಿಸಿಕೊಂಡ ಐಚ್ಛಿಕ ವಿಷಯ ಗಣಿತ ಕೈಕೊಟ್ಟು ಚಿತ್ರಕಲೆಯತ್ತ ಹೊರಳಿದ ಮನಸ್ಸು. ಪುಣೆಯ ಅಭಿನವ ಕಲಾ ವಿದ್ಯಾಲಯದ ಎಸ್.ಎಸ್. ಕಾಮತ್ ಮತ್ತು ಮುಂಬಯಿಯ ದಂಡಾವತಿಯವರ ನೂತನ ವಿದ್ಯಾಶಾಲೆಯಲ್ಲಿ ಚಿತ್ರಕಲಾಭ್ಯಾಸ. ಶಂಕರ ರಾವ್  ಪಲ್ಸೀಕರ್‌ರವರ ಮಾರ್ಗದರ್ಶನ. ಪಡೆದದ್ದು ಚಿತ್ರಕಲೆಯ ಡಿಪ್ಲೊಮ. ಶಿಷ್ಯವೇತನದಿಂದ ಅಭ್ಯಸಿಸಿದ್ದು ಭಿತ್ತಿ ಚಿತ್ರಕಲೆ. ತೈಲವರ್ಣ ಮಾಧ್ಯಮದಲ್ಲಿ ಮಾಡಿದ ಅಪಾರ ಸಾಧನೆ. ಭಾವಚಿತ್ರಗಳ ರಚನೆಯಲ್ಲಿ ತುಂಬುತ್ತಿದ್ದ ಜೀವ ಕಳೆ. ಮಲ್ಲಿಕಾರ್ಜುನ ಮನಸೂರ್‌, ಸವಾಯಿ ಗಂಧರ್ವ, ಗಂಗೂಬಾಯಿ ಹಾನಗಲ್, ರಂಗಭೂಮಿ ಕಲಾವಿದ ದೇಶಪಾಂಡೆ ಮುಂತಾದವರ ಚಿತ್ರ ರಚನೆ. ಬೆಂಗಳೂರಿನ ಮ್ಯಾಕ್ಸ್‌ಮುಲ್ಲರ್‌ ಭವನ, ಕರ್ನಾಟಕ ಲಲಿತ ಕಲಾ ಅಕಾಡಮಿ, ತಾಜ್ ಆರ್ಟ್ ಗ್ಯಾಲರಿ ಮುಂಬಯಿ, ಜಹಂಗೀರ್‌ ಆರ್ಟ್ ಗ್ಯಾಲರಿ, ಇಮೇಜಸ್ ಗ್ಯಾಲರಿ-ಬೆಂಗಳೂರು, ಜಮಖಂಡಿ, ಬಿಜಾಪುರ, ಹೈದರಾಬಾದ್ ಕಲಾಭವನ ಮುಂತಾದೆಡೆ ಏಕವ್ಯಕ್ತಿ ಪ್ರದರ್ಶನ. ಧರಣ ಆರ್ಟ್ಸ್‌ಗ್ಯಾಲರಿ- ದೆಹಲಿ, ಅಖಿಲ ಭಾರತ ಕಲಾ ಪ್ರದರ್ಶನಗಳಾದ ಮುಂಬಯಿ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ, ಹೈದರಾಬಾದ್, ಭೂಪಾಲ್ ಭಾರತ ಭವನ, ಪ್ಯಾರಿಸ್ಸಿನ ಆರ್ಟಿಸ್ಟ್ ಇಂಡಿಯನ್‌ನಲ್ಲಿ ಸಾಂಘಿಕ ಪ್ರದರ್ಶನಗಳು. ಹೈದರಾಬಾದ್, ಬೆಂಗಳೂರು, ಧಾರವಾಡ, ಮೈಸೂರು, ನಾಗಪುರ, ಕಲಬುರ್ಗಿ ಕಲಾಶಿಬಿರಗಳಲ್ಲಿ ಭಾಗಿ. ಆರ್ಟಿಸ್ಟ್‌ಸೊಸೈಟಿ ಆಫ್ ಇಂಡಿಯಾ, ಮುಂಬಯಿ ಟಾಟಾ ಗುಂಪಿನ ಕಂಪನಿಗಳು, ನ್ಯಾಷನಲ್ ಗ್ಯಾಲರಿ ಆಫ್ ಮಾಡರ‍್ನ ಆರ್ಟ್ಸ್ ಮುಂತಾದ ಸಂಗ್ರಹಗಳಲ್ಲಿ ಸಂಗ್ರಹೀತ. ಸಂದ ಪ್ರಶಸ್ತಿ ಗೌರವಗಳು – ಬಾಂಬೆ ಆರ್ಟ್‌ ಸೊಸೈಟಿ ಪ್ರಶಸ್ತಿ, ಪಟೇಲ್ ಟ್ರೋಫಿ ಆಫ್ ಆರ್ಟ್‌ಸೊಸೈಟಿ ಆಫ್ ಇಂಡಿಯಾ, ಕೇಂದ್ರ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ಕೋಲ್ಕತ್ತಾದ ಅಖಿಲ ಭಾರತ ಕಲಾ ಪ್ರದರ್ಶನ, ರಾಜ್ಯ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಕಲಾವಿದರು ಪದ್ದಣ್ಣ – ೧೯೩೬ ಹನುಮಂತಪ್ಪ ಬಡಿಗೇರ – ೧೯೩೭ ವಿರೂಪಾಕ್ಷ ರಾವ್ ಎ – ೧೯೫೪ ಬೋಳುವಾರು ಐ.ಕೆ. – ೧೯೫೬ ಬಸವರಾಜ ಬಸವಾಪಟ್ಣ – ೧೯೬೫.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top