೧೮.೦೧.೧೯೬೬ ಭರತನಾಟ್ಯ ಕಲಾವಿದೆ ವಿದ್ಯಾರವರು ಹುಟ್ಟಿದ್ದು ಶ್ರೀರಂಗಪಟ್ಟಣದಲ್ಲಿ. ತಂದೆ ಬಿ.ಎಸ್. ಅನಂತರಾಮಯ್ಯ, ತಾಯಿ ಕಮಲಮ್ಮ. ಓದಿದ್ದು ಬಿಕಾಂ. ಎಲ್.ಎಲ್.ಬಿ. ಪತ್ರಿಕೋದ್ಯಮದಲ್ಲಿ ಡಿಪ್ಲೊಮ. ಬಾಲ್ಯದಿಂದಲೇ ಸಂಗೀತದಲ್ಲಿ ಮೂಡಿದ ಅಭಿರುಚಿ, ಶಾಲಾ ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ. ಆಯ್ದುಕೊಂಡದ್ದು ಭರತನಾಟ್ಯ ಪ್ರಕಾರ (ಮೈಸೂರು ಶೈಲಿ) ಮತ್ತು ಕರ್ನಾಟಕ ಸಂಗೀತ. ಅರಮನೆಯ ನೃತ್ಯಗಾರ್ತಿಯಾಗಿದ್ದ ಕೆ. ವೆಂಕಟಲಕ್ಷ್ಮಮ್ಮನವರ ಕೊನೆಯ ಶಿಷ್ಯೆಯಾಗಿ ಹತ್ತು ವರ್ಷಗಳ ಕಾಲ ಪಡೆದ ಭರತನಾಟ್ಯ ಶಿಕ್ಷಣ. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ೧೯೯೦ರಲ್ಲಿ ರಂಗಪ್ರವೇಶ. ಮೈಸೂರು, ಬೆಂಗಳೂರು, ಶ್ರೀರಂಗಪಟ್ಟಣಗಳಲ್ಲಿ ನಾಟ್ಯ ಸರಸ್ವತಿ ಜಟ್ಟಿತಾಯಮ್ಮನವರ ಸ್ಮರಣಾರ್ಥ ಶ್ರೀ ಮಾತೃಕಾ ನೃತ್ಯ ಶಾಲೆಯ ಸ್ಥಾಪನೆ. ಮೈಸೂರು ಭರತನಾಟ್ಯ ಶೈಲಿಯ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ತೋರಿದ ಸಾಧನೆ. ನೃತ್ಯ ಕಲಿಕೆಯೊಂದಿಗೆ ವೈಣಿಕ ವಿದ್ವಾನ್ ಪ್ರೊ. ಆರ್.ಎನ್. ದೊರೆಸ್ವಾಮಿ, ಡಾ. ಆರ್.ಎನ್. ಶ್ರೀಲತಾ ರವರಲ್ಲಿ ಕರ್ನಾಟಕ ಸಂಗೀತಾಭ್ಯಾಸ, ಭರತನಾಟ್ಯ ಕಲಾವಿದೆಯಾಗಿ, ಶಿಕ್ಷಕಿಯಾಗಿ, ನಿರ್ದೇಶಕಿಯಾಗಿ ತೋರಿದ ಅಸಾಧಾರಣ ಪ್ರತಿಭೆ. ಮೈಸೂರಿನಲ್ಲಿ ಜಟ್ಟಿ ತಾಯಮ್ಮನವರ ಸ್ಮರಣಾರ್ಥ ನೃತ್ಯೋತ್ಸವ, ಬಾದಾಮಿ, ಚಾಲುಕ್ಯ ಸಾಮ್ರಾಜ್ಯೋತ್ಸವ, ದಸರ ವಸ್ತುಪ್ರದರ್ಶನ, ಶ್ರೀರಂಗಪಟ್ಟಣದ ಲಕ್ಷ ದೀಪೋತ್ಸವ, ಶ್ರವಣ ಬೆಳಗೊಳದ ಬಾಹುಬಲಿ ಮಹಾ ಮಸ್ತಕಾಭಿಷೇಕ, ಬೆಂಗಳೂರಿನ ನಾದ ನೃತ್ಯ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-ಮಂಡ್ಯ, ಬೆಂಗಳೂರಿನ ಅಖಿಲ ಕರ್ನಾಟಕ ನೃತ್ಯ ಸಮ್ಮೇಳನ, ಹಂಪಿ ಉತ್ಸವ, ಬಾದಾಮಿ ಕದಂಬೋತ್ಸವ, ಸಂಸ್ಕೃತಿ ಸಂಭ್ರಮ ಮುಂತಾದೆಡೆ ನೃತ್ಯ ಪ್ರದರ್ಶನಗಳು. ಕಲಾ ಪ್ರತಿಭೋತ್ಸವ, ಕಲಾಶ್ರೀ ಸ್ಪರ್ಧೆ, ಮಲಯಾಳಂ ಪತ್ರಿಕೆಯ ಶಾಸ್ತ್ರೀಯ ನೃತ್ಯ ಸ್ಪರ್ಧೆ, ಕೇರಳ ವಿಶ್ವವಿದ್ಯಾಲಯದ ಶಾಸ್ತ್ರೀಯ ನೃತ್ಯ ಸ್ಪರ್ಧೆ ಮುಂತಾದುವುಗಳಲ್ಲಿ ತೀರ್ಪುಗಾರರಾಗಿ ನಿರ್ವಹಿಸಿದ ಕಾರ್ಯಗಳು. ಮಂಡ್ಯ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕೇರಳ ವಿಶ್ವವಿದ್ಯಾಲಯ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಮಹಾನಗರ ಪಾಲಿಕೆ, ಸಂಸ್ಕೃತಿ ಇಲಾಖೆ-ನವದೆಹಲಿ ಮುಂತಾದುವುಗಳಿಂದ ದೊರೆತ ಗೌರವ ಸನ್ಮಾನಗಳು. ಇದೇ ದಿನ ಹುಟ್ಟಿದ ಕಲಾವಿದರು : ಜನಾರ್ದನರಾವ್ ಮಾನೆ. ಪಿ.ಎನ್. – ೧೯೫೦
* * *