೨೫.೦೮.೧೯೪೩ ಪ್ರಯೋಗಾತ್ಮಕ ಶೈಲಿಯ ಪಿಟೀಲು ವಾದನದಿಂದ ಪ್ರಖ್ಯಾತರಾಗಿರುವ ನಟರಾಜ್ರವರು ಹುಟ್ಟಿದ್ದು ಬೆಂಗಳೂರು. ತಂದೆ ಜಿ.ಎನ್. ಜೋಶಿ, ತಾಯಿ ರತ್ನಮ್ಮ. ಒಂಬತ್ತನೆಯ ವಯಸ್ಸಿನಿಂದಲೇ ಎಚ್.ಕೆ. ವೆಂಕಟರಮಣ ಶಾಸ್ತ್ರಿಗಳಲ್ಲಿ ಹಾಡುಗಾರಿಕೆ ಶಿಕ್ಷಣ. ವಿದ್ವಾನ್ ಎ. ವೀರಭದ್ರಯ್ಯ, ಎಚ್.ವಿ. ಕೃಷ್ಣಮೂರ್ತಿಯವರಲ್ಲಿ ಪಿಟೀಲು ವಾದನ ಶಿಕ್ಷಣ. ಬಸವನ ಗುಡಿಯಲ್ಲಿ ಸ್ಥಾಪಿಸಿರುವ ಶ್ರೀರಾಮಕೃಷ್ಣ ಸಂಗೀತ ವಿದ್ಯಾಲಯದ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸಂಗೀತ ಶಿಕ್ಷಣ. ವಿಶಿಷ್ಟ ಶೈಲಿಯ ಪಿಟೀಲುವಾದಕರಾಗಿ ರಾಮೋತ್ಸವ, ಗಣೇಶೋತ್ಸವ, ಪುರಂದರ -ತ್ಯಾಗರಾಜರ ಆರಾಧನೆ, ನವರಾತ್ರಿ ಉತ್ಸವಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು. ಬೆಂಗಳೂರಿನ ಗಾಯನ ಸಮಾಜ, ಮಲ್ಲೇಶ್ವರಂ ಸಂಗೀತಸಭಾ, ತ್ಯಾಗರಾಜ ಗಾನ ಸಭಾ, ಸಪ್ತಸ್ವರ ಸಂಗೀತಸಭಾ, ಸಂಗೀತ ಕೃಪಾಕುಟೀರ, ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಸಂತೋತ್ಸವ ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ, ಗೋವಾ ರಾಜ್ಯಗಳ ಮಂತ್ರಿಗಳ ಕ್ರೀಡಾಕೂಟದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಡೆಸಿಕೊಟ್ಟ ಕಚೇರಿಗಳು, ಹಲವಾರು ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಹೊತ್ತ ಜವಾಬ್ದಾರಿ. ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡಮಿಯ ಪ್ರತಿಷ್ಠಿತ ಪ್ರಶಸ್ತಿ ‘ಕರ್ನಾಟಕ ಕಲಾಶ್ರೀ’, ಹಲವಾರು ಸಂಘ ಸಂಸ್ಥೆಗಳಿಂದ ವೈಲಿನ್ ವಾದನ ಚತುರ, ತಂತ್ರಿವಾದ್ಯ ವಾದನ ನಿಪುಣ, ಧನುರ್ವೀಣಾ ಕೇಸರಿ, ನಾದ ಚಿಂತಾಮಣಿ, ತಂತ್ರಿವಾದ್ಯ ಸಾಮ್ರಾಟ, ಕಲಾಭೂಷಣ, ಪಿಟೀಲುವಾದನ ಚಾಣಾಕ್ಷ ಮುಂತಾದ ಗೌರವ ಪುರಸ್ಕಾರಗಳು.
* * *