ವಿದ್ವಾನ್ ಎನ್. ರಂಗನಾಥಶರ್ಮ

Home/Birthday/ವಿದ್ವಾನ್ ಎನ್. ರಂಗನಾಥಶರ್ಮ
Loading Events
This event has passed.

೭-೪-೧೯೧೬ ಸಂಸ್ಕೃತ, ಕನ್ನಡ ಎರಡು ಭಾಷೆಯಲ್ಲೂ ವಿದ್ವಾಂಸರೆನಿಸಿದ ರಂಗನಾಥ ಶರ್ಮರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ. ತಂದೆ ತಿಮ್ಮಪ್ಪ, ತಾಯಿ ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿ. ಮಾಧ್ಯಮಿಕ ಓದಿದ್ದು ಸೊರಬ. ತಂದೆ ಹಾಗೂ ಚಿಕ್ಕಪ್ಪನವರು ಸಂಸ್ಕೃತ ಪಂಡಿತರೆನಿಸಿದ್ದು ರಂಗನಾಥಶರ್ಮರ ಮೇಲೆ ಬೀರಿದ ಪ್ರಭಾವ ಅಗಾಧ. ಕಿತ್ತು ತಿನ್ನುವ ಬಡತನ, ಓದಿನ ಹಂಬಲ. ಇಂಗ್ಲಿಷ್ ಕಲಿಯುವ ಆಸೆ. ಹೈಸ್ಕೂಲು ಸೇರಲು ಇದ್ದುದು ಶಿವಮೊಗ್ಗದಲ್ಲಿ ಅವಕಾಶ. ಊಟ-ವಸತಿ ಯೋಚನೆ. ಕಡೆಗೆ ಕನ್ನಡ-ಸಂಸ್ಕೃತ ಅಧ್ಯಯನ ಮಾಡಿದರೆ ಉಪಾಧ್ಯಾಯರ ವೃತ್ತಿಯಾದರೂ ಸಿಕ್ಕರೆ ಹೊಟ್ಟೆ ಹೊರೆದೀತೆಂಬ ಯೋಚನೆ. ಸೇರಿದ್ದು ಅಗಡಿ ‘ಆನಂದವನ ಆಶ್ರಮ.’ ಸಂಸ್ಕೃತ ಕಲಿಯುವವರಿಗೆ ಉಚಿತ ಊಟ-ವಸತಿ. ಆಕರ್ಷಕವಾಗಿ ಕಂಡ ಆಹ್ವಾನ. ಆದರೆ ಬಯಲು ಸೀಮೆಯ ಹುಡುಗನಿಗೆ ಒಗ್ಗದ ಹವಾಮಾನ. ಮರಳಿ ಊರಿಗೆ. ಕಡೆಗೆ ಸೇರಿದ್ದು ಕೆಳದಿ ಸಂಸ್ಕೃತ ಪಾಠಶಾಲೆ. ಕಾವ್ಯಪರೀಕ್ಷೆ ಪಾಸು. ಮುಂದಿನ ದಾರಿ ಹಿಡಿದುದು ಬೆಂಗಳೂರಿನ ಜಯಚಾಮರಾಜೇಂದ್ರ ಕಾಲೇಜು. ಹನ್ನೊಂದು ವರ್ಷ ಸತತ ಸಂಸ್ಕೃತ ಕಲಿಕೆ. ವ್ಯಾಕರಣ, ಅಲಂಕಾರ ಶಾಸ್ತ್ರದಲ್ಲಿ ಪಾಂಡಿತ್ಯ. ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆ, ಪದವಿ. ೧೯೪೩ರಲ್ಲಿ ಹಾಸನದ ಮಾಧ್ಯಮಿಕ ಹಾಗೂ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಣೆ. ಕಡೆಗೆ ತಾವು ಓದಿದ ಬೆಂಗಳೂರಿನ ಜಯಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ೨೮ ವರ್ಷ ಸೇವೆ ಮಾಡಿ ವ್ಯಾಕರಣ ಶಾಸ್ತ್ರ, ಅಲಂಕಾರಶಾಸ್ತ್ರ ಬೋಸಿ, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಸಂಸ್ಕೃತ, ಕನ್ನಡ ಎರಡು ಭಾಷೆಯಲ್ಲೂ ರಚಿಸಿದ ಕೃತಿಗಳು ಸುಮಾರು ಐವತ್ತಕ್ಕೂ ಹೆಚ್ಚು . ಸಂಸ್ಕೃತ ಗ್ರಂಥಗಳು-ಗುರು ಪರಂಪರಾಚರಿತಮ್, ಸಂಸ್ಕೃತ ಪ್ರಥಮ ಪ್ರವೇಶ : ಶ್ರೀಬಾಹುಬಲಿ ವಿಜಯಂ (ನಾಟಕ), ಏಕಚಕ್ರಂ (ನಾಟಕ) ಮುಂತಾದುವು. ಕನ್ನಡ ಗ್ರಂಥಗಳು ಭಾಷಾಂತರ ಪಾಠ: ಲೌಕಿಕ ನ್ಯಾಯಗಳು, ಹೊಸಗನ್ನಡ ವ್ಯಾಕರಣ, ವಾಲ್ಮೀಕಿ ಮುನಿಗಳ ಹಾಸ್ಯ ಪ್ರವೃತ್ತಿ, ವರದಹಳ್ಳಿ ಶ್ರೀಧರ ಸ್ವಾಮಿಗಳು, ಶ್ರೀರಾಮಚಂದ್ರ, ಸೂಕ್ತಿ-ವ್ಯಾಪ್ತಿ ಮೊದಲಾದುವು. ಅನುವಾದಗಳು- ಶ್ರೀಮದ್‌ವಾಲ್ಮೀಕಿ ರಾಮಾಯಣ (ಏಳು ಕಾಂಡಗಳು) ಅಮರ ಕೋಶ, ವಿದುರ ನೀತಿ, ಶ್ರೀಮದ್ ಭಾಗವತ (ದಶಮಸ್ಕಂದ), ಪ್ರಾರ್ಥನಾ ಶ್ಲೋಕಗಳು, ವಿಷ್ಣು ಪುರಾಣ, ಶ್ರುತಿ ಸಾರ ಸಮುದ್ಧರಣ, ವಾಕ್ಯ ಪದೀಯ ಜೊತೆಗೆ ಹಲವಾರು ಗ್ರಂಥಗಳ ಸಂಪಾದನೆ. ಸಂದ ಗೌರವ ಪ್ರಶಸ್ತಿಗಳು-ಆದಿಚುಂಚನಗಿರಿಯಲ್ಲಿ ನಡೆದ ಕರ್ನಾಟಕ, ಸಂಸ್ಕೃತ ಪರಿಷತ್‌ನ ಐದನೆಯ ಸಮ್ಮೇಳನದ ಅಧ್ಯಕ್ಷತೆ, ಸಂಸ್ಕೃತ ಅಧ್ಯಾಪನೆಗೆ ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಸ್ಕೃತ ವಿದ್ವಾಂಸರಿಗೇ ಮೀಸಲಾದ ರಾಷ್ಟ್ರ ಪ್ರಶಸ್ತಿ ಮುಖ್ಯವಾದುವುಗಳು. ಇವರಿಗೆ ಅರ್ಪಿಸಿದ ಅಭಿನಂದನ ಗ್ರಂಥ ರಂಗಾಭಿನಂದನ, ೧೯೯೪ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಕಿಟೆಲ್ – ೧೮೩೨-೧೯.೧೨.೧೯೦೩ ಶಾಂತರಸ – ೧೯೨೬-೧೩.೪.೦೮ ಶಾಂತ ಶಶಿಕಿರಣಂ – ೧೯೩೧ ಪದ್ಮ ಪುಟ್ಟಣ್ಣ – ೧೯೩೫ ಜಂಬಣ್ಣ ಅಮರಚಿಂತ – ೧೯೪೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top