ವಿಶುಕುಮಾರ್ (ವಿಶ್ವನಾಥ್ ಬೋಳೂರ್)

Home/Birthday/ವಿಶುಕುಮಾರ್ (ವಿಶ್ವನಾಥ್ ಬೋಳೂರ್)
Loading Events
This event has passed.

೧೫.೦೬.೧೯೩೫ ೦೪.೧೦.೧೯೮೬ ಸಾಹಿತ್ಯ, ಸಿನಿಮಾ, ನಾಟಕ, ರಾಜಕೀಯ, ಪತ್ರಿಕೋದ್ಯಮ ಹೀಗೆ ಹಲವಾರು ರಂಗಗಳಲ್ಲಿ ಆಸಕ್ತರಾಗಿದ್ದಷ್ಟೇ ಅಲ್ಲದೆ ವಿವಾದಗಳನ್ನು ಸೃಷ್ಡಿಸಿಕೊಂಡು ಸಾಹಿತ್ಯ ಲೋಕದ ಗಮನ ಸೆಳೆದ ವಿಶುಕುಮಾರ್‌ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹಿಂದುಳಿದ ಪಂಗಡದಲ್ಲಿ. ತಂದೆ ದೋಗ್ರ ಪೂಜಾರಿ, ತಾಯಿ ಚಂದ್ರಾವತಿ. ಮಂಗಳೂರಿನಲ್ಲಿ ಪ್ರಾರಂಭಿಕ ಶಿಕ್ಷಣ. ಎಸ್.ಎಸ್.ಎಲ್.ಸಿ ಯ ನಂತರ ಮುಜರಾಯಿ ಇಲಾಖೆಯು ಸೇರಿದಂತೆ ಹಲವಾರು ಸರಕಾರಿ ಉದ್ಯೋಗದಲ್ಲಿ ಕಾರ‍್ಯ ನಿರತರಾಗಿದ್ದು. ಕಡೆಗೆ ಸ್ವಯಂ ನಿವೃತ್ತಿ ಪಡೆದು ಸ್ವತಂತ್ರ ಜೀವನ ನಡೆಸಲು ಪ್ರಾರಂಭಿಸಿದರು. ಹೈಸ್ಕೂಲಿನಲ್ಲಿದ್ದಾಗಲೇ ಕತೆ, ಕವನ, ನಾಟಕಗಳನ್ನು ಬರೆಯತೊಡಗಿದ್ದು, ಹೀಗೆ ಬರೆದ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. ಹಿಂದು – ಮುಸ್ಲಿಂ ಪ್ರೇಮ ಪ್ರಕರಣದ ಹಿನ್ನಲೆಯಲ್ಲಿ ರಚಿಸಿದ ಕಾದಂಬರಿ ಕರಾವಳಿ (೧೯೬೬). ಕನ್ನಡ ಪ್ರಭ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗತೊಡಗಿದಾಗ ವಿವಾದಕ್ಕೆಡೆಮಾಡಿಕೊಟ್ಟು ಪ್ರತಿಭಟನೆ ಪ್ರಾರಂಭವಾಗಿದ್ದರಿಂದ ಪ್ರಕಟಣೆಯನ್ನು ನಿಲ್ಲಿಸಬೇಕಾಯಿತು. ಛಲ ಬಿಡದ ವಿಶುಕುಮಾರ್ ರವರು ಪುಸ್ತಕ ರೂಪದಲ್ಲಿ (೧೯೭೧) ಪ್ರಕಟಿಸಿದ್ದಲ್ಲದೆ ತಮ್ಮದೇ ನಿರ್ದೇಶನದಲ್ಲಿ ಚಲನಚಿತ್ರವನ್ನು ನಿರ್ಮಿಸಿದರು. ಪುನ: ಪ್ರತಿಭಟನೆಗಳು ನಡೆದ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಟ್ಟು ಕರ್ನಾಟಕದ ಇತರೆಡೆ ಪ್ರದರ್ಶನಗೊಂಡಿತು. ಚಲನಚಿತ್ರ ರಂಗದಲ್ಲಿ ಆಸಕ್ತರಾಗಿದ್ದ ವಿಶುಕುಮಾರ್ ರವರು ಚಲನಚಿತ್ರ ನಿಯತ ಕಾಲಿಕ ಚಿತ್ರದೀಪ ಹಾಗೂ ಸಂಜೆವಾಣಿ ದಿನಪತ್ರಿಕೆಯ ಸಂಪಾದಕರಾಗಿಯೂ ಕೆಲಕಾಲ ಕಾರ‍್ಯ ನಿರ್ವಹಿಸಿದರು. ಸಮಕಾಲೀನ ರಾಜಕೀಯವನ್ನು ವಸ್ತುವಾಗಿಸಿಕೊಂಡು ವಿಡಂಬನೆಯ ಮೂಲಕ ರಚಿಸಿದ ನಾಟಕ ‘ಡೊಂಕು ಬಾಲದ ನಾಯಕರು’ (೧೯೮೨). ಇದರ ಮೊನಚು ಭಾಷೆಯನ್ನು ಅರಗಿಸಿಕೊಳ್ಳಲಾಗದ ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದಾಗ ಪೊಲೀಸರ ಆದೇಶದಂತೆ ಕೆಲ ಸಂಭಾಷಣೆಗಳಿಗೆ ಕತ್ತರಿ ಹಾಕಬೇಕಾಯಿತು. ಆದರೂ ಬಹು ಯಶಸ್ವಿ ಎನಿಸಿದ ಈ ನಾಟಕವು ಬೆಂಗಳೂರಿನಲ್ಲಲ್ಲದೆ ಮಂಗಳೂರು, ಕಾಸರಗೋಡು, ಮೈಸೂರು, ಬಳ್ಳಾರಿ, ಕಲ್ಬುರ್ಗಿ ಮುಂತಾದಡೆಗಳಲ್ಲಿ ಸುಮಾರು ೨೫ ಪ್ರದರ್ಶನಗಳನ್ನು ಕಂಡಿತು. ಇವರು ಬರೆದ ಕಾದಂಬರಿಗಳು ಕರಾವಳಿ, ಮದರ್, ವಿಪ್ಲವ, ಕಾಮುಕರು, ಕಪ್ಪು ಸಮುದ್ರ, ಹಂಸಕ್ಷೀರ, ಕರ್ಮ, ಭೂಮಿ, ಈ ಪರಿಯ ಬದುಕು, ಭಟಕಳದಿಂದ ಬೆಂಗಳೂರಿಗೆ, ಮಿಯಾಂವ್ ಕಾಮತ್, ಪ್ರಜೆಗಳು – ಪ್ರಭುಗಳು, ನೆತ್ತರ ಗಾನ, ಭಗವಂತನ ಆತ್ಮ ಕಥೆ, ಗಗನಗಾಮಿಗಳು ಮುಂತಾದ ಇಪ್ಪತ್ತ್ಯೆದಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಕರಾವಳಿ (೧೯೭೭), ಅಖಂಡ ಬ್ರಹ್ಮಚಾರಿಗಳು (೧೯೮೦), ಮದರ್ (೧೯೮೦) ಮತ್ತು ಕೋಟಿ ಚನ್ನಯ್ಯ ಚಲನ ಚಿತ್ರಗಳಾಗಿವೆ. ತುಳು ಭಾಷೆಯ ಕೋಟಿ ಚನ್ನಯ್ಯ ಚಲನ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆತಿದೆ. ರಚಿಸಿದ ನಾಟಕಗಳೆಂದರೆ ಡೊಂಕುಬಾಲದ ನಾಯಕರು, ಪ್ರಜೆಗಳು – ಪ್ರಭುಗಳು, ಹೆಗಲಿಗೆ ಹೆಗಲು, ಕೋಟಿ ಚನ್ನಯ್ಯ, ತರಂಗರಂಗ, ಅಂತರಂಗ, ಈ ಗಂಡಸರು ಮುಂತಾದವುಗಳು. ಬರೆದ ಹಲವಾರು ಕಥೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಕೆಲ ಕಥೆಗಳು ‘ಕುಸುಮ ಕೀರ್ತನ’ಎಂಬ ಸಂಕಲನದಲ್ಲಿ ಸೇರಿದೆ. ತಮ್ಮ ಸೃಜನ ಶೀಲ ಸಾಹಿತ್ಯ ಚಟುವಟಿಕೆಯಿಂದ ಸದಾ ಯಾವುದಾದರೊಂದು ಸಾಹಿತ್ಯಿಕ ಕಾರ‍್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದ ವಿಶುಕುಮಾರರು ಕ್ಯಾನ್ಸರ್‌ಗೆ ಬಲಿಯಾಗಿ ದೂರವಾದದ್ದು ೧೯೮೬ ರ ಅಕ್ಟೋಬರ್ ೪ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top