Loading Events

« All Events

  • This event has passed.

ವಿ.ಗ. ನಾಯಕ

September 1, 2023

೦೧..೧೯೫೦ ಸರಳ ಸಜ್ಜನಿಕೆಯ, ಸರಸಮಾತಿನ, ದಿಟ್ಟನಿಲುವಿನ, ಶಿಕ್ಷಕರಾದರೂ ಸದಾ ಅಧ್ಯಯನ ಶೀಲ ವ್ಯಕ್ತಿತ್ವದ ವಿನಾಯಕ ಗಣಪತಿ ನಾಯಕರು ಹುಟ್ಟಿದ್ದು ೧೯೫೦ರ ಸೆಪ್ಟಂಬರ್ ೧ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕರ್ಕಿಕೋಡಿಯಲ್ಲಿ. ತಂದೆ ಗಣಪತಿ ನಾಯಕ, ತಾಯಿ ಸೀತಾದೇವಿ ನಾಯಕ. ಪ್ರಾಥಮಿಕ ಶಿಕ್ಷಣ ಹೊನ್ನಾವರ ತಾಲ್ಲೂಕಿನ ಬೇರಂಕಿ, ಶಿರಾಲಿ, ವಾಲಗಳ್ಳಿ ಮುಂತಾದೆಡೆ, ಪ್ರೌಢಶಾಲಾ ಶಿಕ್ಷಣ ಹೊನ್ನಾವರದ ಸೇಂಟ್‌ ಥಾಮಸ್‌ ಪ್ರೌಢಶಾಲೆಯಲ್ಲಿ. ಹೊನ್ನಾವರದ ಕಲೆ ಮತ್ತು ವಿಜ್ಞಾನ ಮಹಾಲಯ ಹಾಗೂ ಮೈಸೂರಿನ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಗಳಿಂದ ಗಳಿಸಿದ ಉನ್ನತ ವಿದ್ಯಾಭ್ಯಾಸ. ಬೋಧಕರಾಗಿ ಸೇರಿದ್ದು ದ.ಕ. ಜಿಲ್ಲೆಯ ಅಡ್ಯನಡ್ಕದ ಜನತಾ ಪದವಿ ಪೂರ್ವ ವಿದ್ಯಾಲಯದಲ್ಲಿ ಅಧ್ಯಾಪಕರಾಗಿ. ಪ್ರೌಢಶಾಲೆಯಲ್ಲಿದ್ದಾಗಲೇ ಸಾಹಿತ್ಯಾಭಿರುಚಿ ಬೆಳೆದು ಬರೆದ ಹಲವಾರು ಕವಿತೆ, ಕಥೆಗಳು ಹೊನ್ನಾವರದಿಂದ ಪ್ರಕಟವಾಗುತ್ತಿದ್ದ ‘ಜನತಾ’ ಪತ್ರಿಕೆಯಲ್ಲಿ ಪ್ರಕಟಿತ. ‘ಹೊನ್ನೂರಜಾಜಿ’ ಪ್ರಥಮ ಕವನ ಸಂಕಲನವು ಪ್ರಕಟವಾದದ್ದು ೧೯೬೮ರಲ್ಲಿ. ನಂತರ ಒಳಗೂಡಿನಲ್ಲಿ, ಗೋಲಗುಮ್ಮಟ, ನೆಲಗುಮ್ಮ ಮೊದಲಾದ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಇವರ ಮೊದಲ ವಿಮರ್ಶಾ ಸಂಕಲನ ‘ಒರೆಗಲ್ಲು’ ಪ್ರಕಟವಾದದ್ದು ೧೯೮೮ ರಲ್ಲಿ. ಜನಪದ ಚಿಂತನೆಯ ಲೇಖನಗಳು, ಡಾ. ಬೆಸಗರ ಹಳ್ಳಿ ರಾಮಣ್ಣನವರ ಕಥಾ ಸಾಹಿತ್ಯದ ಪರಿಶೀಲನೆ, ದಲಿತ ಬಂಡಾಯ ಧ್ವನಿ: ಪ್ರಜ್ಞೆಪ್ರೇರಣೆ, ಮುಂತಾದ ಲೇಖನಗಳಿಂದ ಕೂಡಿದ್ದರೆ ಎರಡನೆಯ ವಿಮರ್ಶಾ ಸಂಕಲನ ‘ಪ್ರತಿಸ್ಪಂದನ’ದಲ್ಲಿ ಕಯ್ಯಾರ ಕಿಞ್ಞಣ್ಣರೈಗಳ ಶಿಶುಗೀತೆಗಳು, ಅನುಪಮ ನಿರಂಜನ:ಮುಕ್ತಿ ಚಿತ್ರ, ಪಾಂಡೇಶ್ವರ ಗಣಪತಿರಾಯರ ಕಥೆ: ಮೃತ್ಯುಮುಖಕ್ಕೆ, ಅಮೃತ ಸೋಮೇಶ್ವರರ ‘ತೀರದ ತೆರೆ’ ಮತ್ತು ಲೇಖಕರಿಗೆ, ಸಂಶೋಧಕರಿಗೆ ಉಪಯುಕ್ತವಾಗಬಲ್ಲ ‘ಅನಾರ್ಯವಿವರ’ ಈ ಪುಸ್ತಕದಲ್ಲಿದೆ. ನಾಯಕರ ಮತ್ತೆರಡು ವಿಮರ್ಶಾ ಕೃತಿಗಳೆಂದರೆ ‘ಕನ್ನಡದಲ್ಲಿ ಹನಿಗವನಗಳು’ ಮತ್ತು ‘ತಾರ್ಕಣೆ’. ತಾರ್ಕಣೆ ಕೃತಿಯಲ್ಲಿ ಕರಾವಳಿ ಜಾನಪದ, ಜನಪದ ಕಾಳಜಿಗಳು, ಜಾನಪದದ ಪ್ರಗತಿಪರ ಆಶಯಗಳು ಮುಂತಾದ ಮೌಲಿಕ ಲೇಖನಗಳಿವೆ. ‘ಹನಿಗವನಗಳು’ ಎಂಬ ಪುಟ್ಟ ವಿಮರ್ಶಾ ಕೃತಿಯಲ್ಲಿ ನವೋದಯ, ನವ್ಯ, ನವ್ಯೋತ್ತರ, ಬಂಡಾಯ ಮುಂತಾದ ಹಂತಗಳಲ್ಲಿ ಅನೇಕ ಕವಿಗಳು ರಚಿಸಿದ ಹನಿಗವನಗಳನ್ನು ಹುಡುಕಿ ಹನಿಗವನದ ಪರಂಪರೆಯನ್ನು ಗುರುತಿಸಲು ಪ್ರಯತ್ನಿಸಿದ ಕೃತಿ. ಜಾನಪದ ಸಂಶೋಧಕರಾಗಿ, ಕವಿಯಾಗಿ , ವಿಮರ್ಶಕರಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ನಾಯಕರು ನಿಯಮಿತವಾಗಿ ಪತ್ರಿಕೆಗಳಿಗೆ ಬರೆದ ಅಂಕಣ ಬರಹಗಳ ಕೃತಿ ‘ಬಿಡುಗಡೆ’. ಅಂಕಣ ಬರಹದ ಮಿತಿಯಲ್ಲೂ ಸಮಗ್ರ ಚಿತ್ರಣ ನೀಡುವಂತಹ ಲೇಖನಗಳನ್ನು ಬರೆದಿರುವುದೇ ನಾಯಕರ ಲೇಖನ ವೈಶಿಷ್ಯ್ಯ. ಮತ್ತೊಂದು ಅಂಕಣ ಬರಹಗಳ ಸಂಗ್ರಹ ‘ವಾಲಗ’. ಇವರ ಮತ್ತೊಂದು ಪ್ರಮುಖ ಚಿಂತನಗಳ ಕೃತಿ ಎಂದರೆ ‘ಕವಿಯಿಂದ ಕಿವಿಗೆ’. ಆಕಾಶವಾಣಿಯ ಚಿಂತನ ಬರಹಗಳಿಗೆ ಮಾದರಿಯಾದ ಲೇಖನಗಳು ಪದಲಾಲಿತ್ಯ, ಸೊಗಸಾದ ನಿರೂಪಣೆ, ಆಕರ್ಷಕ ಪದವಿನ್ಯಾಸದಿಂದ ಕೂಡಿದ್ದು ಜನಸಾಮಾನ್ಯರಿಗೂ ಬಹುಬೇಗ ತಲುಪುವ ಕೃತಿಯಾಗಿದೆ. ಶಾಲಾ ಅಧ್ಯಾಪಕರಾದರೂ ಸಂಶೋಧನ ಬುದ್ಧಿಯ ನಾಯಕರು ಆಯ್ದುಕೊಂಡು ನಡೆಸಿರುವ ವ್ಯಾಪಕ ಅಧ್ಯಯನದ ಕೃತಿ ‘ಹರಿಕಾಂತ ಸಂಸ್ಕೃತಿ’. ಇದೊಂದು ಮೀನುಗಾರ ಕುಲದ ಜನಾಂಗೀಯ ಅಧ್ಯಯನ ಕೃತಿ. ಕರಾವಳಿ ತೀರದಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಬೇರು, ಮೊಗೇರು, ಹರಿಕಾಂತರು ಮೊದಲಾದ ಕನ್ನಡ ಮಾತನಾಡುವ ಮಾತೃ ಪ್ರಧಾನ ಸಂಸ್ಕೃತಿಗೆ ಸೇರಿದ ಮೀನುಗಾರ ಜನಾಂಗದ ಪಂಗಡದವರಾದರೆ ಖಾರ್ವಿ, ಖಂಡೆಖಾರ್ವಿ, ಗಾಬಿತ ಮೊದಲಾದ ಪಿತೃಪ್ರಧಾನ ವ್ಯವಸ್ಥೆಗೆ ಸೇರಿದ ಮೀನುಗಾರರದ್ದು ಮತ್ತೊಂದು ಗುಂಪು. ಇವೆರಡರ ಅಧ್ಯಯನದ ಕೃತಿಯೇ ‘ಹರಿಕಾಂತ ಸಂಸ್ಕೃತಿ’. ವಿಶ್ವವಿದ್ಯಾಲಯದ ಧನ ಸಹಾಯದಿಂದ ಸಂಶೋಧನೆ ಮಾಡುವ ವಿದ್ಯಾರ್ಥಿಯಂತೆ ಅತ್ಯಂತ ಶ್ರದ್ಧೆ, ಪರಿಶ್ರಮಗಳಿಂದ ಮಾಡಿರುವ ಆಳವಾದ ಅಧ್ಯಯನದ ಕೃತಿ. ಜನಾಂಗೀಯ ಅಧ್ಯಯನದ ಮತ್ತೊಂದು ಕೃತಿ ಎಂದರೆ ಕಾಸರಗೋಡಿನ ಹಳೆ ಪೈಕರು. ಇವುಗಳಲ್ಲದೆ ನಾಯಕರ ಇತರ ಕೃತಿಗಳೆಂದರೆ ಜಾನಪದ ಪ್ರಕಾರದಲ್ಲಿ ರಚಿಸಿರುವ ಕೃತಿಗಳು. ನಿಮ್ಮಸೃಷ್ಟಿ-ನಮ್ಮದೃಷ್ಟಿ, ಬೀಸೇಕುಂಕುಮದ ತೆನೆಗಾಳಿ, ಮದುವೆ ಮನೆ ಚೆಂದ, ದಿಬ್ಬಣ, ಗಂಧದ ಮರವೇ ನೆರಳಾಗು ಮುಂತಾದ ೭ ಕೃತಿಗಳು. ಕುಮಟಾದ ಯಕ್ಷಗಾನ ಮೇಳದ ಸಾಧನೆಯನ್ನು ಗುರುತಿಸಿರುವ ಅಪರೂಪದ ಪುಸ್ತಕ ‘ಚಿನ್ನದ ಪೆಟ್ಟಿಗೆ’. ಇದರ ಜೊತೆಗೆ ಹಲವಾರು ಸಾಹಿತ್ಯ ಸಮ್ಮೇಳನಗಳ ಸ್ಮರಣಸಂಚಿಕೆ, ಕವಿತೆಗಳ ಸಂಕಲನ, ಆಯ್ದ ಬರಹಗಳ ಸಂಕಲನ (ಡಾ.ನಾ. ಮೊಗಸಾಲೆ), ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಾಗಿ ‘ಗುಮಟಿಯ ಪದಗಳು’ ಮತ್ತು ನೀರ್ಪಾಜೆ ಭೀಮ ಭಟ್ಟರ ಅಭಿನಂದನ ಗ್ರಂಥ ‘ಅಭ್ಯುದಯ’ ಮುಂತಾದವುಗಳನ್ನು ಸಂಪಾದಿಸಿದ್ದಾರೆ. ಸದಾಕ್ರಿಯಾಶೀಲ ಬದುಕನ್ನೂ ಪ್ರೀತಿಸುವ ನಾಯಕರು ದ.ಕ. ಜಿಲ್ಲಾ ಸಾಹಿತ್ಯಪರಿಷತ್ತಿನ ಕಾರ್ಯದರ್ಶಿಯಾಗಿ, ಕನ್ನಡ ಅಭಿವೃದ್ಧಿ ಪಾಧಿಕಾರದ ಗೌರವ ಸದಸ್ಯರಾಗಿ, ನೀರ್ಪಾಜೆ ಭೀಮಭಟ್ಟ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿಯಾಗಿ, ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ-ಹೀಗೆ ಹಲವು ಹತ್ತು ಜವಾಬ್ದಾರಿಯುತ ಸ್ಥಾನಗಳಲ್ಲಿ  ಕಾರ್ಯನಿರತರಾಗಿರುವ ನಾಯಕರಿಗೆ ಸಂದ ಗೌರವ ಸನ್ಮಾನಗಳಿಗೂ ಲೆಕ್ಕವಿಲ್ಲ. ಕರ್ನಾಟಕ ಸಾಹಿತ್ಯ ಅಕಾಡಮಿ, ಮಂಗಳೂರು ವಿ.ವಿ. ಇವರ ಕೃತಿಗಳನ್ನು ಪ್ರಕಟಿಸಿದ್ದರೆ ತಾಲ್ಲೂಕು ಹಲವಾರು ಬಾರಿ ರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನ, ದೂರದರ್ಶನ ಸಂದರ್ಶನ ಕಾರ್ಯಕ್ರಮಗಳಲ್ಲಿ, ಹಲವಾರು ಸಾಹಿತ್ಯ ಸಮ್ಮೇಳನಗಳ ಗೋಷ್ಠಿಯ ಅಧ್ಯಕ್ಷತೆ, ಅಕಾಡಮಿ, ಸಂಘ-ಸಂಸ್ಥೆ-ಸಮಿತಿಗಳ ತೀರ್ಪುಗಾರರ ಜವಾಬ್ದಾರಿ, ‘ಪ್ರತಿಸ್ಪಂದನ’ ಕೃತಿಗೆ ವರ್ಧಮಾನ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಪಾತ್ರರಾಗಿದ್ದು, ೨೦೦೪ರಲ್ಲಿ ‘ಹೊನ್ನೂರುಜಾಜಿ’ ಮತ್ತು ೨೦೦೬ ರಲ್ಲಿ ‘ನಾವಿಕ’ ಎಂಬ ಎರಡು ಅಭಿನಂದ ಗ್ರಂಥಗಳನ್ನೂ ಅಭಿಮಾನಿಗಳು ಅರ್ಪಿಸಿ ಪ್ರೀತಿ ತೋರಿದ್ದಾರೆ.

Details

Date:
September 1, 2023
Event Category: