Loading Events

« All Events

  • This event has passed.

ವಿ. ಚಿಕ್ಕವೀರಯ್ಯ

November 5, 2023

.೧೧.೧೯೩೦ ೨೯..೨೦೦೭ ಕಾವ್ಯಲೋಕದಲ್ಲಿ ವೀಚಿ ಎಂದೇ ಪ್ರಖ್ಯಾತರಾಗಿರುವ ವಿ.ಚಿಕ್ಕವೀರಯ್ಯನವರು ಹುಟ್ಟಿದ್ದು ತುಮಕೂರು ನಗರಕ್ಕೆ ಸೇರಿದ ಚಿಕ್ಕವೀರಯ್ಯನ ಪಾಳ್ಯದಲ್ಲಿ. ತಂದೆ ವೀರಭದ್ರಯ್ಯನವರು ಹಿಂದುಳಿದ ವರ್ಗಕ್ಕೆ ಸೇರಿದ ಬಡ ರೈತರು. ತಾಯಿ ಗಂಗಮ್ಮ. ವಿದ್ಯಾಭ್ಯಾಸ ತುಮಕೂರಿನಲ್ಲೆ. ಇಂಟರ್ ಮೀಡಿಯಟ್ ಓದುತ್ತಿದ್ದಾಗ ತಂದೆ ತೀರಿಕೊಂಡಿದ್ದರಿಂದ ಅನಿವಾರ್ಯವಾಗಿ ವಿದ್ಯೆಗೆ ಶರಣು ಹೊಡೆಯಬೇಕಾಯಿತು. ಪ್ರೌಢಶಾಲೆಯಲ್ಲಿದ್ದಾಗಲೇ ಸಾಹಿತ್ಯಸಕ್ತ. ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದ ತಕ್ಷಣ ಮಾಡಿದ ಮೊದಲ ಕೆಲಸವೆಂದರೆ ಸಾಹಿತ್ಯದ ಕಾರ್ಯಕ್ರಮಗಳನ್ನೇರ್ಪಡಿಸಿ ಕುವೆಂಪು, ಮಾಸ್ತಿ, ಮುಂತಾದ ಸಾಹಿತಿಗಳನ್ನು ಆಹ್ವಾನಿಸಿ ಸಾಹಿತ್ಯಲೋಕದ ದಿಗ್ಗಜರನ್ನು ಶಾಲೆಗೆ ಪರಿಚಯಿಸಿದ್ದು. ಇವರ ಕಾವ್ಯದ ಬರವಣಿಗೆಗೆ ಪ್ರೋತ್ಸಾಹ ನೀಡಿದವರು ಎಸ್.ಕೆ. ಕರೀಂಖಾನರು. ಕರೀಂಖಾನರ ಸಂಪರ್ಕಕ್ಕೆ ಬಂದ ನಂತರ ಬರೆದ ಕವಿತೆಗಳನ್ನು ಅವರ ಮುಂದೆ ಓದತೊಡಗಿದರು. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ವಾಣಿ’, ಶಾ. ಬಾಲುರಾವ್ ಸಂಪಾದಕತ್ವದ ‘ಲೇಖ’ ಮುಂತಾದ ಮಾಸಪತ್ರಿಕೆಗಳಲ್ಲಿ ಕವಿತೆಗಳು ಪ್ರಕಟಗೊಂಡವು. ಇವರ ಮೊದಲ ಕವಿತಾ ಸಂಕಲನ ಪ್ರಣಯ ಚೈತ್ಯಕ್ಕೆ (೧೯೬೧) ಗೋಪಾಲ ಕೃಷ್ಣ ಅಡಿಗರೇ ಮುನ್ನುಡಿ ಬರೆದು ಹಾರೈಸಿದ್ದಾರೆ. ಹೊಟ್ಟೆಪಾಡಿಗಾಗಿ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದರೂ ಆತ್ಮಸಂತೋಷಕ್ಕಾಗಿ ಕಾವ್ಯರಚನೆ, ಸಮಾನ ಮನಸ್ಕರೊಡನೆ ಒಡನಾಟ, ಸಾಮಾಜಿಕ ಕರ್ತವ್ಯಗಳ ನಿರ್ವಹಣೆಯ ಜೊತೆಗೆ ಆಯ್ದುಕೊಂಡದ್ದು ರಾಜಕೀಯ. ೧೯೫೬ ರಲ್ಲಿ ತುಮಕೂರು ಪುರಸಭೆಯ ಸದಸ್ಯರಾಗುವುದರ ಮೂಲಕ ಸಾರ್ವಜನಿಕ ಕ್ಷೇತ್ರವನ್ನು ಪ್ರವೇಶಿಸಿದವರು ನಂತರ ತುಮಕೂರು ಪುರಸಭೆಯ ಉಪಾಧ್ಯಕ್ಷರಾಗಿ (೧೯೫೯-೬೦), ಅಧ್ಯಕ್ಷರಾಗಿ (೧೯೭೧-೭೩) ಕಾರ್ಯನಿರ್ವಹಿಸಿದರು. ವಿದ್ಯಾರ್ಥಿ ಮುಖಂಡರಾಗಿ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಂತೆ, ಪುರಸಭಾಧ್ಯಕ್ಷರಾದ ನಂತರ ಬೇಂದ್ರೆ, ಅಡಿಗರು ಮುಂತಾದವರುಗಳನ್ನು ಆಹ್ವಾನಿಸಿ ಪೌರಸನ್ಮಾನವನ್ನೇರ್ಪಡಿಸಿದರು. ಇವರ ಮೊದಲ ಕವನ ಸಂಕಲನ ಪ್ರಣಯ ಚೈತ್ರದ ನಂತರ ‘ವಿಷಾದ ನಕ್ಷೆ’, ‘ಸಂಕರತಳಿ’, ‘ನವಿಲು ಮನೆ’, ‘ಅಭಿನಯದ ಬಯಲು’, ‘ನಿತ್ಯ ಮದುವಣಗಿತ್ತಿ’, ‘ಬಂತೆಂದರೂ ಇದ್ದುದಿತ್ತೆಯಿತ್ತು’ ಮುಂತಾದ ಕವನ ಸಂಕಲನಗಳ ಜೊತೆಗೆ ‘ಮಹಾಯಾನ’ ಆಯ್ದ ಕವನ ಸಂಕಲನವೂ ಪ್ರಕಟಗೊಂಡವು. ‘ಸಿದ್ಧರ ಬೆಟ್ಟ: ಒಂದು ಸಂದರ್ಶನ’, ‘ಇವರು ನನ್ನವರು’, ‘ನೆಚ್ಚಿನವರು’, ‘ಇಷ್ಟಮಿತ್ರರು’ ಮುಂತಾದ ಗದ್ಯಕೃತಿಗಳೂ ಪ್ರಕಟಿತ. ಇವುಗಳಲ್ಲದೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ೧೯೭೧ ರಲ್ಲಿ ‘ನಿಕಷ’ ಎಂಬ ರಾಜಕೀಯ ಹಾಗೂ ಸಾಂಸ್ಕೃತಿಕ ಮಾಸ ಪತ್ರಿಕೆಯನ್ನು ಹೊರತಂದರು. ಇವರ ಸಾಹಿತ್ಯ ಪ್ರೀತಿಯದ್ಯೋತಕವಾಗಿ ತುಮಕೂರಿನ ಗೆಳೆಯರು ಅರ್ಪಿಸಿದ ಅಭಿನಂದನ ಗ್ರಂಥ ‘ಹಣ್ಣುಮೆಟ್ಟಿದ ಅವರೆ’. ಈ ಸಂದರ್ಭದಲ್ಲಿ ಇವರಿಗೆ ಅರ್ಪಿಸಿದ ೧.೩೨,೦೦೦ ರೂ.ಗಳನ್ನು ‘ವೀಚಿ ಸಾಹಿಯ ಪ್ರತಿಷ್ಠಾನ’ ಸ್ಥಾಪಿಸಲು ನೀಡಿದ್ದು, ಪ್ರತಿವರ್ಷವೂ ಇವರ ಹೆಸರಿನಲ್ಲಿ ಪ್ರತಿಷ್ಠಾನವು ‘ವೀಚಿ ಪ್ರಶಸ್ತಿ’ ನೀಡುತ್ತ ಬಂದಿದೆ. ೧೯೯೩ ರಲ್ಲಿ ತುಮಕೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೯೪ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೯೮ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದ ವೀಚಿಯವರು ಅನಾರೋಗ್ಯದಿಂದ ನಿಧನರಾದದ್ದು ತಾ. ೨೯.೯.೨೦೦೭ ರಲ್ಲಿ.

Details

Date:
November 5, 2023
Event Category: