Loading Events

« All Events

ವಿ.ಜಿ. ಭಟ್ಟ

December 3

.೧೨.೧೯೨೩ ..೧೯೯೧ ವಿಡಂಬನೆಯ ಮೂಲಕ ತಮ್ಮ  ಸುತ್ತಲ ಸಮಾಜದ ತೋರಿಕೆ, ಟೊಳ್ಳುತನಗಳನ್ನು ಬಯಲಿಗೆಳೆಯಲು ಪ್ರಯತ್ನಿಸಿದ ವಿಷ್ಣುಗೋವಿಂದ ಭಟ್ಟರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಡತೋಕ ಗ್ರಾಮದಲ್ಲಿ ಡಿಸೆಂಬರ್ ೩ರ ೧೯೨೩ರಲ್ಲಿ. ತಂದೆ ಗೋವಿಂದಭಟ್ಟರು, ತಾಯಿ ಗಂಗಮ್ಮ. ತಂದೆಗೆ ಮಗ ಕೃಷಿಕನಾಗಬೇಕೆನ್ನಿಸಿದರೆ, ಮಗ ಸಾಹಿತ್ಯ ಕೃಷಿಗಿಳಿದ. ಪ್ರಾಥಮಿಕ ಶಿಕ್ಷಣ ಹೊನ್ನಾವರ, ಮಾಧ್ಯಮಿಕ ಶಿಕ್ಷಣ ಜಮಖಂಡಿಯಲ್ಲಿ ವಾರಾನ್ನದ ಹುಡುಗನಾಗಿ. ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಅಂದಿನ ಮುಂಬೈ ಪ್ರಾಂತ್ಯಕ್ಕೆ ರ್ಯಾಂಕ್ ಪಡೆದ ವಿದ್ಯಾರ್ಥಿ. ಕಾಲೇಜು ಶಿಕ್ಷಣ ಸಾಂಗ್ಲಿಯಲ್ಲಿ. ಪುಣೆ ಹಾಗೂ ಕೊಲ್ಲಾಪುರದಲ್ಲಿ ಸ್ನಾತಕೋತ್ತರ ಪದವಿ. ಬಿ.ಎ.ಪದವೀಧರರಾದ ನಂತರ ಶಿಕ್ಷಕರಾಗಿ ಕೆಲಕಾಲ. ಆದರೆ ಸಂಶೋಧಕರಾಗಬೇಕೆಂದು ಬಂದದು ಧಾರವಾಡಕ್ಕೆ. ಆದರೆ ೧೯೪೭ರಲ್ಲಿ ಸ್ಥಾಪನೆಯಾದ ಖಾದಿಗ್ರಾಮೋದ್ಯೋಗದಲ್ಲಿ ಉದ್ಯೋಗ ದೊರೆತು ನಿರ್ದೇಶಕರವರೆಗೂ ಬಡ್ತಿ ಪಡೆದರು. ೧೯೮೧ ರಲ್ಲಿ ನಿವೃತ್ತಿಯ ನಂತರ ಮುಂಬಯಿ ವಾಸ. ಬಾಲ್ಯದಿಂದಲೂ ಪದ್ಯದ ಹುಚ್ಚಿಗೆ ಒಳಗಾಗಲು ಪ್ರಭಾವ ಬೀರಿದವರೆಂದರೆ ಗೋಕಾಕ ಹಾಗೂ ಬೇಂದ್ರೆಯವರು. ಇವರ ಮೊದಲ ಕವನ ಸಂಕಲನ ‘ಸವಿನೆನಪು’ ೧೯೪೬ ರಲ್ಲಿ ಪ್ರಕಟವಾಗಿ ಕೊನೆಯ ಕವನ ಸಂಕಲನ ಪ್ರಾರ್ಥನೆಯವರೆಗೆ ಸುಮಾರು ೨೨ ಕವನ ಸಂಕಲನಗಳು ಪ್ರಕಟಿತ. ಸು.ರಂ. ಎಕ್ಕುಂಡಿ, ರಾಕು ಮತ್ತೆ ಕೆಲವು ನವೋದಯ ಲೇಖಕರು ಇವರ ಸಹಪಾಠಿಗಳು. ೧೯೪೬ ರಿಂದ ೧೯೭೬ ರವರೆಗೆ ಸಾಗಿದ ಕಾವ್ಯಕೃಷಿಯು ಇದ್ದಕ್ಕಿದ್ದಂತೆ ಬತ್ತಿ ಹೋದಂತೆನಿಸಿ ಪುನಃ ಥಟ್ಟನೆ ಚಿಗುರೊಡೆದದ್ದು ೧೯೮೩ ರಲ್ಲಿ. ಒಟ್ಟು ಕೃತಿಗಳ ಮೊದಲರ್ಧ ಭಾಗದ ಕವಿತೆಗಳಲ್ಲಿ ತುಂಟತನ, ವಿಡಂಬನೆಗಳಿಂದ ಕೂಡಿದ್ದರೆ ಎರಡನೆಯರ್ಧ ಭಾಗದಲ್ಲಿ ವೇಧಾಂತ, ದರ್ಶನ, ಚಿಂತನೆ ಮುಂತಾದ ಅನುಭಾವದಿಂದ ಕೂಡಿವೆ. ಪದ್ಯಗಳ ಸಂಕಲನಗಳ ಜೊತೆಗೆ ಭಟ್ಟರ ಕೆಲ ಗದ್ಯಕೃತಿಗಳೂ ಪ್ರಕಟಗೊಂಡಿವೆ. ‘ಸಹ್ಯಾದ್ರಿ’ ಉತ್ತರ ಕನ್ನಡದ ಜೀವನ ಚಿತ್ರಗಳಾದರೆ, ‘ಬುರುಕಿ’, ‘ದಿವ್ಯ ಕಥೆಗಳು’ ಮತ್ತು ಪೆದ್ದಂಕಥೆಗಳು’ ಕಥಾ ಸಂಗ್ರಹಗಳು. ‘ಧ್ರುವ ದೋಸ್ತ್‌’ ಮತ್ತೊಂದು ಮಕ್ಕಳ ಕಥಾ ಸಂಗ್ರಹ. ‘ಖಾದಿಗ್ರಾಮೋದ್ಯೋಗ’ ಅನುವಾದಿತ ಕೃತಿಯಾದರೆ ‘ಉಪ್ಪಿನ ಮಾರಾಟ’ ಎಂಬ ನಾಟಕವನ್ನೂ ರಚಿಸಿದ್ದಾರೆ. ಇದೇ ಸಂದರ್ಭದಲ್ಲಿ ‘ಗ್ರಾಮ ಜೀವನ’ ಎಂಬ ಪತ್ರಿಕೆಯನ್ನು ಕೆಲಕಾಲ ನಡೆಸಿದರು. ೧೯೮೪ರ ನಂತರ ಭಟ್ಟರು ತಮ್ಮ ಕವನ ಸಂಕಲನಗಳನ್ನು ದಿವಂಗತ ಪತ್ನಿಯ ಹೆಸರಿನಲ್ಲಿ ‘ರುಕ್ಮಿಣೀ ಪ್ರಕಾಶನದ’ ದಡ ಹೊರತಂದಿದ್ದಾರೆ. ಪ್ರಶಸ್ತಿ-ಪುರಸ್ಕಾರ, ಮಾನ-ಸನ್ಮಾನಗಳನ್ನು ಬಯಸದ ಕವಿ ಚಿಪ್ಪಿಗೊಳಗಿನ ಜೀವಿಯಂತೆ ಬರವಣಿಗೆಯಲ್ಲಿಯೇ ಮಗ್ನರಾಗಿದ್ದರೂ ೧೯೮೩ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹುಡುಕಿಕೊಂಡು ಬಂದಿತು. ಸದಾ ಬದಲಾವಣೆಗಾಗಿ ಬಯಸುತ್ತಿದ್ದ ಕವಿ ಬದುಕಿನಿಂದ ದೂರಾದದ್ದು ೬.೪.೧೯೯೧ ರಲ್ಲಿ.

Details

Date:
December 3
Event Category: