Loading Events

« All Events

  • This event has passed.

ವೀರೇಂದ್ರ ಸಿಂಪಿ

October 14, 2023

೧೪-೧೦-೧೯೩೮ ಪ್ರಸಿದ್ಧ ಪ್ರಬಂಧಕಾರರಾದ ವೀರೇಂದ್ರ ಸಿಂಪಿಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ. ತಂದೆ ಪ್ರಸಿದ್ಧ ಜಾನಪದ ತಜ್ಞ ಸಿಂಪಿ ಲಿಂಗಣ್ಣ, ತಾಯಿ ಸೊಲಬವ್ವ. ಪ್ರಾರಂಭಿಕ ಶಿಕ್ಷಣ ಚಡಚಣ. ಕಾಲೇಜು ಶಿಕ್ಷಣ ಬಿಜಾಪುರದ ವಿಜಯಾ ಕಾಲೇಜಿನಿಂದ ಬಿ.ಎ. ಪದವಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ೧೯೬೨ರಲ್ಲಿ. ಉದ್ಯೋಗ ಪ್ರಾರಂಭಿಸಿದ್ದು ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೯೯ರಲ್ಲಿ ನಿವೃತ್ತಿ. ನಿವೃತ್ತಿಯ ನಂತರವೂ ಚಿದಂಬರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ‍್ಯರಾಗಿ ನಾಲ್ಕು ವರ್ಷ ಸೇವೆ. ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯ ರಚನೆಯ ಹುಚ್ಚು. ‘ಖೊಟ್ಟಿ ನಾಣ್ಯ’ ಎಂಬ ಕಥೆ ‘ಸಂಗಮ’ ಕೈ ಬರಹದ ಪತ್ರಿಕೆಯಲ್ಲಿ ಪ್ರಕಟಿತ. ಏಕಲವ್ಯ ಎಂಬ ಹಿಂದಿ ನಾಟಕವನ್ನು ಕನ್ನಡಕ್ಕೆ ಅನುವಾದ. ಇಂದಿನ ವಿದ್ಯಾರ್ಥಿಗಳಲ್ಲಿ ‘ಅಸಂತೋಷವೇಕೆ?’ ಪ್ರಬಂಧ ಬರೆದು ಅಂತರ ಕಾಲೇಜು ಸ್ಪರ್ಧೆಯಲ್ಲಿ ಪಡೆದ ಬಹುಮಾನ. ಕಥೆ, ವಿಮರ್ಶೆ ಕಾಲೇಜು ಪತ್ರಿಕೆಗಳಲ್ಲಿ ಪ್ರಕಟಿತ. ಇಂಗ್ಲಿಷ್ ಪ್ರಾಧ್ಯಾಪಕರಾದರೂ ಬರೆದದ್ದೆಲ್ಲಾ ಕನ್ನಡದಲ್ಲೆ. ಪ್ರಮುಖ ಪ್ರಬಂಧ ಬರಹಗಾರರು. ಅಂಕಣಕಾರರೆಂದೇ ಪ್ರಸಿದ್ಧಿ. ಪ್ರಬಂಧ ಸಂಕಲನಗಳು-ಕಾಗದದ ಚೂರು, ಭಾವ ಮೈದುನ, ಸ್ವಚ್ಛಂದ ಮನದ ಸುಳಿಗಾಳಿ, ಪರಸ್ಪರ ಸ್ಪಂದನ, ಲಲಿತ ಪ್ರಬಂಧಗಳು, ಆಯ್ದ ಲಲಿತ ಪ್ರಬಂಧಗಳು. ಸಂಪಾದಿತ-ಚನ್ನಬಸವಣ್ಣನವರ ವಚನಗಳು, ಬೀದರ ಜಿಲ್ಲಾ ದರ್ಶನ, ಬೀದರ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರು, ಅಂಕಣ ಬರಹ/ವೈಚಾರಿಕ ಲೇಖನಗಳು- ಜೀವನವೆಂದರೇನು ? ಸುಖಸಾಧನ, ಬಣ್ಣಗಾರಿಕೆ, ಯೋಗಾರಂಭ. ವಿಮರ್ಶೆ/ಸಮೀಕ್ಷೆ-ಕನ್ನಡದಲ್ಲಿ ಲಲಿತ ಪ್ರಬಂಧಗಳು, ಗಾಯ್ ಡಿ ಮೊಪಾಸನ ಕಥೆಗಳು, ಸಿಂಪಿ ಲಿಂಗಣ್ಣನವರ ಸಾಹಿತ್ಯ, ಇಂಡಿ ತಾಲ್ಲೂಕ ದರ್ಶನ. ಜೀವನಚರಿತ್ರೆ-ಮಾಸ್ತಿ ವೆಂಕಟೇಶ ಅಯ್ಯಂಗಾರ್, ಆಯ್ದಕ್ಕಿ ಮಾರಯ್ಯ, ಮಾದಾರ ಚೆನ್ನಯ್ಯ, ಚನ್ನಬಸವಣ್ಣ, ಆರ್.ವಿ. ಬೀಡಪ್, ಹತ್ತು ಪಾಶ್ಚಾತ್ಯ ಕಾದಂಬರಿಕಾರರು. ಹಲವಾರು ಗೌರವ ಪ್ರಶಸ್ತಿಗಳ ಗರಿ. ಭಾವಮೈದುನ ಲಲಿತ ಪ್ರಬಂಧಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಸ್ವಚ್ಛಂದ ಮನದ ಸುಳಿಗಾಳಿ ಪ್ರಬಂಧ ಸಂಕಲನವು ಕರ್ನಾಟಕ ವಿಶ್ವವಿದ್ಯಾಲಯ, ಶಿವಾಜಿ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಮೊದಲ ಬಿ.ಎ. ಪಠ್ಯವಾಗಿ ಆಯ್ಕೆ. ಪರಿಸರ ಸ್ಪಂದನಕ್ಕೆ ಗುಲಬರ್ಗಾ ವಿ.ವಿ.ದ ಬಹುಮಾನ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವಿಜಾಪುರ, ಬೀದರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಮಾಲತಿ ರಾಮದಾಸ್ – ೧೯೪೫ ಎಸ್. ಮಂಜುನಾಥ್ – ೧೯೬೦ ಡಾ. ಸಂತೋಷಕುಮಾರ ಶೆಟ್ಟಿ – ೧೯೭೧ (ಯಳಂದೂರು) ಡಿ.ಎಲ್. ವಿಜಯಕುಮಾರಿ – ೧೯೫೨

Details

Date:
October 14, 2023
Event Category: