Loading Events

« All Events

  • This event has passed.

ವೇಣುಗೋಪಾಲ ಸೊರಬ

November 29, 2023

೨೯.೧೧.೧೯೩೭ ೨೧.೦೩.೧೯೯೫ ತಮ್ಮ ಕಾವ್ಯ ಕೃತಿಗಳಲ್ಲಿ ಮಿತವಾದ ಭಾಷೆ, ಸಹಜವಾದ ಶೈಲಿ, ನುಡಿಕಟ್ಟುಗಳ ಸಂಯಮ ಪ್ರಯೋಗ, ರಸಪ್ರಜ್ಞೆ ಹಾಗೂ ಚಿಂತನ ಪ್ರಜ್ಞೆಯಿಂದ ಪ್ರಮುಖ ಕವಿಗಳಲೊಬ್ಬರೆನಿಸಿದ್ದ ವೇಣುಗೋಪಾಲ ಸೊರಬರು ಹುಟ್ಟಿದ್ದು ಈಗಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ೧೯೩೭ರ ನವೆಂಬರ್ ೨೯ ರಂದು. ತಂದೆ ವಕೀಲರಾಗಿದ್ದ ರಾಮರಾವ್ ಸೊರಬರವರು, ತಾಯಿ ಸೀತಾಬಾಯಿ. ತಂದೆ ತಾಯಿಗಳ ಪ್ರೀತಿಯಿಂದ ವಂಚಿತರಾಗಿ ಬೆಳೆದದ್ದು ದೊಡ್ಡಕ್ಕ ವೆಂಕಮ್ಮ ಹಾಗೂ ಭಾವನವರಾದ ಶ್ರೀನಿವಾಸಾಚಾರ್ ರವರುಗಳ ಪ್ರೀತಿಯ ಪರಿಸರದಲ್ಲಿ. ಪ್ರಾರಂಭಿಕ ಶಿಕ್ಷಣ ಚಳ್ಳಕೆರೆ ಹಾಗೂ ಹರಿಹರದಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಶಿಕ್ಷಣ ಪಡೆದನಂತರ ಮೈಸೂರಿನ ಮಹಾರಾಜ ಕಾಲೇಜಿನಿಂದ ಪಡೆದ ಬಿ.ಎ. ಪದವಿ ಹಾಗೂ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ. ೧೯೬೫ರಲ್ಲಿ ಕನಕಪುರ ರೂರಲ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇರಿ , ಸುಮಾರು ೨೫ ವರ್ಷಗಳ ನಂತರ ಎನ್.ಎಂ.ಕೆ.ಆರ್,ವಿ.ಮಹಿಳಾಕಾಲೇಜುಸೇರಿ, ನಿವೃತ್ತಿಗೆ ನಾಲ್ಕು ತಿಂಗಳ ಮುಂಚೆ ಬದುಕಿನಿಂದಲೇ ನಿವೃತ್ತರಾಗಿಬಿಟ್ಟರು. ಶಾಲಾ ಕಾಲೇಜಿನ ದಿನಗಳಿಂದಲೂ ಕವನ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದ ಸೊರಬರು ೧೯೫೯ ರಲ್ಲಿ ‘ದತ್ತಾವತರಣ’ ಎಂಬ ಕವನ ರಚಿಸಿ ಬೇಂದ್ರೆಯವರಿಂದ ಹಸ್ತಾಕ್ಷರ ಹಾಗೂ ಮೆಚ್ಚುಗೆ ಪಡೆದಿದ್ದರು. ಮೊದಲ ಕವನ ಸಂಕಲನ ಮುಸುಕು – ನಸುಕು ಪ್ರಕಟವಾದದ್ದು ೧೯೬೬ ರಲ್ಲಿ. ಸುಮಾರು ಮೂರು ದಶಕಗಳ ಕಾವ್ಯ ಕೃಷಿಯಲ್ಲಿ ಹನ್ನೆರಡು ಕವಿತಾ ಸಂಕಲನಗಳು, ಐದು ಕಾದಂಬರಿಗಳು, ಒಂದು ಕಥಾ ಸಂಕಲನ, ಒಂದು ಪ್ರಬಂಧ ಸಂಕಲನ, ಮಕ್ಕಳ ಸಾಹಿತ್ಯ ಕೃತಿಗಳೂ ಸೇರಿ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಗಂಡು ಹೆಣ್ಣಿನ ಅಂತರಂಗದ ಸಂಬಂಧಗಳನ್ನು ಅಭಿವ್ಯಕ್ತಿ ಪಡಿಸುತ್ತ, ಹೊಸತನವನ್ನು ತೋರುತ್ತಾ  ಸಾಗುವ ‘ಧಾರೆ’ ಕವನ ಸಂಕಲನ ಮತ್ತು ವಿಶಿಷ್ಟಧಾಟಿಯಲ್ಲಿ, ವಿನೂತನ ರೀತಿಯಲ್ಲಿ ಚಿರಂತನ ಪ್ರೇಮವನ್ನು ನಿರೂಪಿಸುವ ‘ಪ್ರಮೇಯ’ ಸಂಕಲನಗಳು ಕನ್ನಡ ಕಾವ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ‘ಮಾನವಿ’ ಕೂಡಾ ಅವರ ಪ್ರಮುಖ ಕಾವ್ಯ ಕೃತಿಯಾಗಿದ್ದು ಪೂರ್ವ ಪಶ್ಚಿಮಗಳ ವಿವಿಧ ಪಾತ್ರಗಳ ವಿಶಿಷ್ಟ ನೋಟದಿಂದ ಕೂಡಿದೆ. ಪಶ್ಚಿಮದ ಪಾತ್ರಗಳ ಒಳನೋಟಗಳನ್ನು ತೆರೆದಿಡುವ ಒಫಿಲಿಯ, ಮಿರಾಂಡ, ಡೆಸ್ಡಿಮೋನ, ಕ್ಲಿಯೋಪಾತ್ರ, ಅಂತಿಗೊನೆಯ ಪಾತ್ರಗಳ ಚಿತ್ರಣವಿದ್ದರೆ, ಪೂರ್ವದ ಪಾತ್ರಗಳಾದ ಸೀತಾ, ಸಾವಿತ್ರಿ, ದ್ರೌಪದಿ, ಶಕುಂತಲೆ, ಮಹಾದೇವಿಯಕ್ಕ ಮುಂತಾದವರುಗಳ ಮನಸ್ಸಿನಾಳದಲ್ಲಿ ನಡೆಯುವ ತುಮುಲಗಳನ್ನು ಚಿತ್ರಿಸಿದ್ದಾರೆ. ಮಿರಾಂಡ, ಕ್ಲಿಯೋ ಪಾತ್ರಳ ರೂಪ ಸೌಂದರ್ಯರಾಶಿಯನ್ನು ಚಿತ್ರಿಸುತ್ತಾ ಸೀತಾ – ಸಾವಿತ್ರಿಯರು ಪರಂಪರಾನುಗತವಾಗಿ ರೂಢಿಸಿಕೊಂಡಿರುವ ಸಾತ್ವಿಕ ಗುಣಗಳನ್ನು ಚಿತ್ರಿಸಿದ್ದಾರೆ. ಮಾಸ್ತಿ, ಕಾರಂತ, ಗೋಕಾಕ, ಕುವೆಂಪು, ಪುತಿನ, ವಿಸೀ, ಕೆಎಸ್ ನ ಮೊದಲಾದ ಹಿರಿಯ ಕವಿಗಳ ಜೊತೆಗೆ ಹೊಸ ಪೀಳಿಗೆಯ ಹಲವಾರು ಕವಿಗಳ ವ್ಯಕ್ತಿ ಚಿತ್ರಗಳನ್ನು ಕವನ ರೂಪದಲ್ಲಿ ಸೆರೆಹಿಡಿದು ಪ್ರತಿಬಿಂಬ ತೋರಿಸಿರುವ ಕವಿತೆಗಳ ಸಂಕಲನ ‘ಬಿಂಬ’. ಇದೊಂದು ವಿಶಿಷ್ಟ ಕೃತಿಯಾಗಿದ್ದು ಆಯಾಯ ವ್ಯಕ್ತಿಗಳು ಇವರ ಮನಸ್ಸಿನ ಮೇಲೆ ಬೀರಿದ ಪ್ರಭಾವವನ್ನು ಚಿತ್ರಿಸುತ್ತಾ ಹೋಗಿದ್ದಾರೆ. ಇವಲ್ಲದೆ ಸೊರಬರ ಇತರ ಕವಿತಾ ಸಂಕಲನಗಳೆಂದರೆ ಜೀವ ಜೀವಂತ, ಲೂಸಿ, ಸವಾಲು, ಸುಳ್ಳು ಬುರುಕಿ, ಹೂ ಹಿಗ್ಗು ಇವುಗಳ ಜೊತೆಗೆ ಪ್ರಕಟಿಸಿರುವ ಅನುವಾದ ಸಂಕಲನ ‘ಜನ್ಮ ಜ್ಯೋತಿ’ (ಯಶೋಧರ ಗೋಪಾಲ್ ರಾವ್ ಅವರ ಇಂಗ್ಲಿಷ್ ಕವಿತೆಗಳ ಅನುವಾದ) ಮುಂತಾದವುಗಳು ಸೇರಿ ೧೨ ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಆಕಾಶವಾಣಿಯ ಅಂತಾರಾಷ್ಟ್ರೀಯ ಜಾಲದಲ್ಲಿ ‘ರೆಯ್ನಿ ಸೀಸನ್ ಇನ್ ಕನ್ನಡ ಪೊಯೆಟ್ರಿ’, ಎಂಬ ವಿಷಯದ ಬಗ್ಗೆ ಇಂಗ್ಲಿಷಿನಲ್ಲಿ ಭಾಷಣಮಾಡಿ ಹೆಸರು ಗಳಿಸಿದ್ದರ ಜೊತೆಗೆ ಏಷಿಯನ್ ಬಯೋಗ್ರಾಫಿಕಲ್ ಸೊಸೈಟಿಯ ವಾರ್ಷಿಕ ಗ್ರಂಥದಲ್ಲೂ ಇವರ ಹೆಸರು ಸೇರ್ಪಡೆ ಹಾಗೂ ಐ.ಸಿ.ಸಿ.ಆರ್. ಹೊರತಂದಿರುವ ‘ಇಂಡಿಯನ್ ಪೊಯೆಟ್ರಿ ಟುಡೇ’ ಪುಸ್ತಕದಲ್ಲಿ ಕನ್ನಡ ಕವಿತೆಗಳನ್ನು ಇಂಗ್ಲಿಷ್ ಗೆ ಭಾಷಾಂತರಿಸಿ ಕನ್ನಡೇತರರೂ ಕನ್ನಡ ಕವಿತೆಗಳನ್ನು ಗಮನಿಸುವಂತೆ ಮಾಡಿದ್ದಾರೆ. ಆಗಾಗ್ಗೆ ಹಲವಾರು ಕಥೆ, ಪ್ರಬಂಧಗಳನ್ನು ರಚಿಸಿದ್ದು ‘ಉತ್ಸವ’ ಕಥಾ ಸಂಕಲನದಲ್ಲಿ ಹನ್ನೆರಡು ಕತೆಗಳಿದ್ದರೆ, ಸುತ್ತು ಬಳಸು ಎಂಬ ಎರಡು ನೀಳ್ಗತೆಗಳನ್ನೂ  ಪ್ರಕಟಿಸಿದ್ದಾರೆ. ವಸ್ತುವಿನ ಆಯ್ಕೆ, ನಿರೂಪಣ ತಂತ್ರ, ಶೈಲಿ ಇವುಗಳಿಂದ ಓದುಗರಿಗೆ ಪ್ರಿಯವೆನಿಸುತ್ತವೆ. ಕನಕಪುರದ ಕಾಲೇಜಿನಲ್ಲಿ ಸುಮಾರು ವರ್ಷಗಳ ಕಾಲ ಅಧ್ಯಾಪನದಲ್ಲಿ ತೊಡಗಿದ್ದಷ್ಟೇ ಅಲ್ಲದೇ ಕನಕಪುರ ತಾಲ್ಲೂಕಿನ ಪ್ರತಿಯೊಂದು ಅಂಶವನ್ನು ಸೂಕ್ಷ್ಮವಾಗಿ ಗಮನಿಸಿ ತಾಲ್ಲೂಕಿನ ವಿಸ್ತೃತ ಮಾಹಿತಿ ಒದಗಿಸುವ ಕೃತಿ ‘ಕನಕಪುರ ತಾಲ್ಲೂಕು ದರ್ಶನ’. ನಾ. ಕಸ್ತೂರಿಯವರ ಅನರ್ಥಕೋಶ, ಬೀಚಿ ಯವರ ತಿಂಮರಸಾಯನದಂತೆ ಬಾಳಿನ ತಿರುಳನ್ನು, ಹಿರಿತನದ ಅನುಭವೋಕ್ತಿಗಳನ್ನು ಪದ ಪ್ರಯೋಗಕ್ಕೆ ಒಳಪಡಿಸಿ ಪ್ರತ್ಯುತ್ಪನ್ನತೆಗಳನ್ನು ಸ್ಫೋಟಿಸುವ ಕೃತಿ ‘ಸಮಕಾಲೀನ ಪಡೆ ನುಡಿ’. ಈ ಕೃತಿಯಲ್ಲಿ ಬಳಸಿರುವ ಭಾಷೆಗೆ ಮಾಂತ್ರಿಕತೆಯಿದೆ, ವಿಶೇಷ ಅರ್ಥಗಳಿವೆ. ಇವಲ್ಲದೆ ಐದು ಕಾದಂಬರಿಗಳನ್ನು ರಚಿಸಿದ್ದು, ಅವುಗಳಲ್ಲಿ ‘ಬಯಲಾಗದ ಜನ’ ಮೊದಲ ಕಾದಂಬರಿ, ಎರಡನೆಯ ಮುದ್ರಣ ಕಂಡಿರುವುದೇ ಜನಪ್ರಿಯತೆಗೆ ಸಾಕ್ಷಿ. ಬದುಕು ಮತ್ತು ಕಲೆಯ ಅವಿಚ್ಛಿನ್ನ ಸಂಬಂಧವನ್ನು ನಿರೂಪಿಸುವ ‘ಸರೀಕರು’, ಗಂಡು ಹೆಣ್ಣಿನ ಸ್ನೇಹ – ಪ್ರೀತಿಗಳ ದ್ವಂದವನ್ನು ಒರೆಹಚ್ಚುವ ‘ಅನಾಥ ಪ್ರಭು’, ಅಲ್ಲದೆ ಪ್ರಸಂಗ, ಸೋಲುಗಳೇ ಇಲ್ಲ ಮುಂತಾದ ಕಾದಂಬರಿಗಳನ್ನು ರಚಿಸಿದ್ದು ಅತಿ ಮಹತ್ವದ ಕವಿ, ಕಾದಂಬರಿಕಾರರೆನಿಸಿದ್ದರು. ಇಂಗ್ಲಿಷ್ ನಲ್ಲಿ ‘ಟೂ ಚಿಲ್ಡ್ರನ್ ಅಂಡ್ ಸಿಂಗಿಂಗ್ ಬರ್ಡ್’, ‘ಆನ್ ಆಂಥಾಲಜಿ ಆಫ್ ಕನ್ನಡ ಪೊಯೆಮ್ಸ್’ , ಹಾರ್ಡ್ ಟೈಮ್’ (ಸುಮತೀಂದ್ರ ನಾಡಿಗರೊಡನೆ ಅನುವಾದ), ಹೇಮಲತಾ ಜಾನ್ ರೊಡನೆ ‘ಪಯನೀರ್ ರೈಟರ್ಸ್ ಆಫ್ ಸೌತ್ ಇಂಡಿಯಾ’ (ಸಂಪಾದಿತ) ಮುಂತಾದವುಗಳ ಜೊತೆಗೆ ಮಕ್ಕಳಿಗಾಗಿ ನವಿಲು ತೋಟ (ಅನಿತಾ ದೇಸಾಯಿಯವರ ಪೀಕಾಕ್ ಗಾರ್ಡನ್ ಅನುವಾದ) ಮತ್ತು ತುಂಗಭದ್ರ ಎಂಬ ಎರಡು ಕೃತಿಗಳನ್ನು ರಚಿಸಿದ್ದಾರೆ. ವೇಣುಗೋಪಾಲ ಸೊರಬರ ‘ಕಪ್ಪಿ’ ನಾಟಕಕ್ಕೆ ರಾಜ್ಯ ಮಟ್ಟದ ಉಮೇಶ ರುದ್ರ ಪಾರಿತೋಷಕ (ಬಹುಮಾನ) ಮತ್ತು ‘ಮಾನವಿ’ ಕವನ ಸಂಕಲನಕ್ಕೆ ಆರ್ಯಭಟ ಸಾಹಿತ್ಯ ಪ್ರಶಸ್ತಿ ದೊರೆತಿವೆ. ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಸಂಸ್ಥೆ ಮತ್ತು ಕಡಮತ್ ಲಕ್ಷದ್ವೀಪ ಸಾಹಿತ್ಯ ಕಲಾ ಅಕಾಡಮಿಯ ಸಹಯೋಗದಲ್ಲಿ ನಡೆದ ಬರಹಗಾರರ ಕೂಟಕ್ಕೂ ಆಹ್ವಾನಿತರಾಗಿ ಲಕ್ಷದ್ವೀಪಕ್ಕೆ ಹೋಗಿ ಬಂದ ನಂತರ, ಕುಟುಂಬದವರೊಂದಿಗೆ ಕನ್ಯಾಕುಮಾರಿ ಪ್ರವಾಸ ಹೋಗಿ ಹಿಂದಿರುಗುವಾಗ ದಾರಿಯಲ್ಲೇ ಅಸ್ವಸ್ಥರಾಗಿ ಸಾಹಿತ್ಯ ಲೋಕದಿಂದ ದೂರವಾದದ್ದು  ೧೯೯೫ರ ಮಾರ್ಚ್ ೨೧ ರಂದು.

Details

Date:
November 29, 2023
Event Category: