ವೈದೇಹಿ

Home/Birthday/ವೈದೇಹಿ
Loading Events
This event has passed.

೧೨..೧೯೪೫ ಮನೆಮಂದಿಗೆಲ್ಲ ವಸಂತಿ, ಶಾಲೆಯ ಸಹಪಾಠಿಗಳಿಗೆ ಜಾನಕಿ ಹೆಬ್ಬಾರ್, ಓದಿನ ನಂತರ ಪತ್ರಕರ್ತೆಯಾದಾಗ ಯಶವಂತಿ, ಅವಂತಿ ಮುಂತಾದ ಹಲವಾರು ಹೆಸರುಗಳಿಂದ ಪರಿಚಿತರಾಗಿರುವ ವೈದೇಹಿಯವರು ಹುಟ್ಟಿದ್ದು ದ.ಕ. ಜಿಲ್ಲೆಯ ಕುಂದಾಪುರದಲ್ಲಿ ೧೯೪೫ ರ ಫೆಬ್ರವರಿ ೧೨ ರಂದು. ತಂದೆ ಎ.ವಿ.ಎನ್‌ ಹೆಬ್ಬಾರ್, ತಾಯಿ ಮಹಾಲಕ್ಷ್ಮೀಯಮ್ಮ ಓದಿದ್ದು ಕುಂದಾಪುರದ ಎಲಿಮೆಂಟರಿ ಶಾಲೆ, ಬೋರ್ಡ್ ಹೈಸ್ಕೂಲು ಮತ್ತು ಭಂಡಾರ್ ಕರ್ ಕಾಲೇಜಿನಿಂದ ಬಿ.ಕಾಂ. ಪದವಿ. ಚಿಕ್ಕಂದಿನಿಂದಲೇ ಸಾಹಿತ್ಯದ ಬಗ್ಗೆ ಮೂಡಿದ ಒಲವು. ತಂದೆಯ ಮನೆಯಲ್ಲಿದ್ದ ಪುಸ್ತಕಗಳ ಸಂಗ್ರಹ. ತುಳಸೀ ರಾಮಾಯಣ, ಚೈತನ್ಯ ಚರಿತಾವಳೀ, ವಾಲ್ಮೀಕಿ ರಾಮಾಯಣ ಮುಂತಾದವುಗಳ ಜೊತೆಗೆ ಕಡೆಂಗೋಡ್ಲು, ಸೇಡಿಯಾವು ಮುಂತಾದವರುಗಳ ಕೃತಿಗಳ ಓದು. ಮನೆ ಮಕ್ಕಳೇ ಬರೆದು ವಿನ್ಯಾಸಗೊಳಿಸುತ್ತಿದ್ದ ‘ಸಾಹಿತ್ಯ ಜ್ಯೋತಿ’ ಕೈಬರಹದ ಪತ್ರಿಕೆ. ಮಕ್ಕಳು ಬರೆದ ಕಥೆ, ಕವನಗಳಿಗೆ ಅಪ್ಪಯ್ಯನ ಮುನ್ನುಡಿ, ಅಣ್ಣನ ಸಂಪಾದಕತ್ವ – ಹೀಗೆ ಬೆಳೆದ ಸಾಹಿತ್ಯದ ಒಡನಾಟ. ಒಮ್ಮೆ ಬರೆದ ಕಥೆ ‘ನೀರೆಯರ ಮನ’ ಎಂಬುದನ್ನು ಸುಧಾ ಪತ್ರಿಕೆಗೆ ಕಳುಹಿಸಿದರು. ಅದೊಂದು ನೈಜ ಘಟನೆಯನ್ನಾಧರಿಸಿ ಬರೆದದ್ದರಿಂದ ಪ್ರಕಟಿಸುವುದು ಬೇಡ ಎಂದು ಸಂಪಾದಕರಿಗೆ ಪತ್ರ ಬರೆದರು. ಆದರೆ ಆಗ ಸಂಪಾದಕರಾಗಿದ್ದ ಎಂ.ಬಿ. ಸಿಂಗ್‌ರವರು, ಕಥೆ ಚೆನ್ನಾಗಿದ್ದರಿಂದ ‘ವೈದೇಹಿ’ ಎಂಬ ಹೆಸರಿನಿಂದ ಪ್ರಕಟಿಸಿಯೇ ಬಿಟ್ಟರು. ಜಾನಕಿ ಹೆಬ್ಬಾಲ್‌ ಆಗಿದ್ದವರು ವೈದೇಹಿಯಾದರು. ಬರವಣಿಗೆಯ ಬಗ್ಗೆ ವಿಶ್ವಾಸ ಮೂಡಿದ್ದರಿಂದ ಬರೆದ ಹಲವಾರು ಕಥೆಗಳು ಕರ್ಮವೀರ, ಮಯೂರ, ಸುಧಾ, ಪ್ರಜಾವಾಣಿ, ಉದಯವಾಣಿ, ಕಸ್ತೂರಿ, ಸಾಕ್ಷಿ (ಸಾಗರ) ಸಂಕ್ರಮಣ, ವನಿತಾ, ಮಲ್ಲಿಗೆ, ಗೆಳತಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಇವರ ಸೃಜನಶೀಲ ಪ್ರತಿಭೆಯು ಕಥೆ, ಕಾದಂಬರಿ, ಕಾವ್ಯ, ನಾಟಕ, ಪ್ರಬಂಧ ಸಾಹಿತ್ಯಗಳ ಮೂಲಕ ಹೊರ ಹೊಮ್ಮಿದೆ. ತಮ್ಮ ಸುತ್ತಲಿನ ವಿದ್ಯಮಾನಗಳನ್ನೂ ಗ್ರಹಿಸಿ, ಮಕ್ಕಳು-ಸ್ತ್ರೀ ಪರ ಸೂಕ್ಷ್ಮ ಸಂವೇದಗಳಿಗೆ ಕುಂದಾಪುರದ ತಾಲ್ಲೂಕಿನ ಆಡು ಮಾತಿನ ಸೊಬಗನ್ನೂ ಸೇರಿಸಿ ಬರೆಯುತ್ತಿರುವ ವಿಶಿಷ್ಟ ಲೇಖಕಿ. ಇವರ ಮೊದಲ ಕಥಾ ಸಂಕಲನ ‘ಮರ ಗಿಡ ಬಳ್ಳಿ’ ಯನ್ನು ಸಾಗರದ ಅಕ್ಷರ ಪ್ರಕಾಶನವು ೧೯೭೯ರಲ್ಲಿ ಹೊರ ತಂದಿದೆ. ಪ್ರಜಾವಾಣಿ ಪತ್ರಿಕೆಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದೇ ಒಂದು ಪ್ರತಿಷ್ಠೆಯ ಸಂಕೇತ ಎನಿಸುತ್ತಿದ್ದ ಸಂದರ್ಭದಲ್ಲಿ, ೧೯೮೦ರಲ್ಲಿ ನಡೆದ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದರೆ, ೧೯೮೨ ರ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿಯೂ ‘ಅಸ್ಪೃಶ್ಯರು’ ಕಾದಂಬರಿಗಾಗಿ ಪ್ರಥಮ ಬಹುಮಾನ ಪಡೆದರು. ಹೀಗೆ ಬರೆದ ಸಣ್ಣ ಕಥೆಗಳು ‘ಅಂತರಂಗದ ಪುಟಗಳು’ (೧೯೮೪), ‘ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗಳು’ (೧೯೯೧), ‘ಅಮ್ಮಚ್ಚಿ ಎಂಬ ನೆನಪು’ (೨೦೦೦), ‘ಕ್ರೌಂಚಪಕ್ಷಿಗಳು’ (೨೦೦೫), ‘ಅಲೆಗಳಲ್ಲಿ ಅಂತರಂಗ’ (೨೦೦೬) ಮುಂತಾದ ಸಂಗ್ರಹಗಳಲ್ಲಿ ಸೇರಿವೆ. ಸಂಜೆಹೊತ್ತು ಮಕ್ಕಳು ಮರಿಗಳೊಡನೆ ದೇವರ ಮನೆಯಲ್ಲಿ ಕುಳಿತು ಧ್ಯಾನಿಸುವಾಗ, ಭಜನೆಯಲ್ಲಿ ಪಾಲ್ಗೊಂಡಾಗ ಹಲವು ಕಥೆ, ಕವನಗಳಿಗೆ ಉದ್ಭವ ಕೇಂದ್ರವೆನಿಸಿ, ಆವಾಹಿಸಿಕೊಂಡು ಬರೆದ ಕವನಗಳು ‘ಬಿಂದು ಬಿಂದಿಗೆ’ (೧೯೯೦), ‘ಪಾರಿಜಾತ’ (೧೯೯೯) ಸಂಕಲನಗಳಲ್ಲಿ ಪ್ರಕಟವಾಗಿವೆ. ಲಂಕೇಶ್‌ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ ‘ಮಲ್ಲಿನಾಥನ ಧ್ಯಾನ’ ೧೯೯೬ರಲ್ಲಿ ಪ್ರಕಟವಾಗಿದ್ದರೆ, ಸ್ಮೃತಿಕಥನ ‘ಜಾತ್ರೆ’ ೧೯೯೮ರಲ್ಲಿ ಮತ್ತು ಲೇಖನ, ಕಥೆ, ಸಂದರ್ಶನ, ಅನುವಾದಗಳ ಮಿಶ್ರಸಂಗ್ರಹ ‘ಮೇಜು ಮತ್ತು ಬಡಗಿ’-೨೦೦೭ರಲ್ಲಿ ಪ್ರಕಟಿತ. ಕೋ.ಲ. ಕಾರಂತರ, ವಿದ್ವಾನ್‌ ಸೇಡಿಯಾಪು ಕೃಷ್ಣಭಟ್ಟರ, ನಾಟಕಕಾರ ಬಿ.ವಿ. ಕಾರಂತರ ನೆನಪುಗಳ ಚಿತ್ತಾರವನ್ನು ನಿರೂಪಿಸಿರುವ ‘ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು’ (೧೯೮೪), ಸೇಡಿಯಾವು ನೆನಪುಗಳು (೧೯೯೬), ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ (೨೦೦೩) ಪ್ರಕಟವಾಗಿವೆ. ಹಲವಾರು ಕೃತಿಗಳನ್ನು ಅನುವಾದಿಸಿರುವ ವೈದೇಹಿಯವರು ಕಮಲಾದೇವಿ ಚಟ್ಟೋಪಾಧ್ಯಾಯರ INDIAN WOMAN STRUGGLE FOR FREEDOM – ‘ಭಾರತೀಯ ಮಹಿಳೆಯ ಸ್ವಾತಂತ್ರ್ಯ’, ಮೈತ್ರೇಯ ಉಪಾಧ್ಯಾಯರು ಬರೆದ SILVER SHACKLES – ‘ಬೆಳ್ಳಿಯ ಸಂಕೋಲೆಗಳು’, ಸ್ವಪ್ನಾದತ್ತ ಅವರ THE SUN FARIES – ‘ಸೂರ್ಯಕಿನ್ನರಿಯರು’ ಮತ್ತು ಸಂಗೀತ ವಿದ್ವಾಂಸರಾದ ಡಾ. ಭಾಸ್ಕರ ಚಂದಾವರ್ಕರ್ ರವರ ಉಪನ್ಯಾಸಗಳು – ‘ಸಂಗೀತ ಸಂವಾದ’ ಮುಂತಾದ ಅನುವಾದಗಳು ಪ್ರಕಟಗೊಂಡಿವೆ. ಇವರು ಬರೆದ ನಾಟಕಗಳು ಧಾಂ, ಧೂಂ ಸುಂಟರಗಾಳಿ, ಮೂಕನ ಮಕ್ಕಳು, ಗೊಂಬೆ ಮ್ಯಾಕೆಬೆತ್‌, ಢಾಣಾಢಂಗುರ, ನಾಯಿಮರಿ ನಾಟಕ, ಸೂರ್ಯಬಂದ, ಝಂ ಝಾಂ ಆನೆ ಮತ್ತು ಪುಟ್ಟಿ, ಕೋಟು ಗುಮ್ಮ, ಹಕ್ಕಿ ಹಾಡು, ಅರ್ಧ ಚಂದ್ರ ಮೀಠಾಯಿ, ಸೋಮಾರಿ ಓಲ್ಯಾ, ಅಳಿಲು ರಾಮಾಯಣ ಮತ್ತು ಸತ್ರು ಅಂದ್ರೆ ಸಾಯ್ತಾರ? ಮುಂತಾದವುಗಳನ್ನು ನೀನಾಸಂ, ರಂಗಾಯಣ, ಕಿನ್ನರಮೇಳ, ಚಿನ್ನ-ಬಣ್ನ ಮೊದಲಾದ ತಂಡಗಳಿಂದ ಅಭಿನಯಿಸಲ್ಪಟ್ಟಿವೆ. ಇವರ ಕೆಲ ಆಯ್ದ ಕಥೆಗಳು ಮರಾಠಿಗೆ ‘ಅಂತರೀಚಿಪಾನೇ’ (ಉಮಾ ಕುಲಕರ್ಣಿ), ಇಂಗ್ಲಿಷ್‌ ‘GULABI TALKIES AND OTHER STORIES’-MRS, TEJASWINI NIRANJANA, ಜಾತ್ರೆ – `JATHRE THE TEMPLE FAIR’- MRS. NAYANA KASHYAP, ಮತ್ತೆ ಕೆಲ ಕಥೆ ಕಾದಂಬರಿ ಬೆಂಗಳೂರು ಮತ್ತು ಮಂಗಳೂರು ವಿ.ವಿ.ದ ತರಗತಿಗಳಿಗೆ ಪಠ್ಯವಾಗಿ, ಕೆಲ ಕವನಗಳು ಆಂಥಾಲಜಿಗಳಲ್ಲೂ, ಹಲವಾರು ಕಥೆಗಳು ಮಲಯಾಳಂ, ತಮಿಳು, ತೆಲುಗು, ಹಿಂದಿ, ಗುಜರಾತಿ ಭಾಷೆಗಳಿಗೂ ಅನುವಾದಗೊಂಡಿವೆ. ‘ಗುಲಾಬಿ ಟಾಕೀಸ್‌ ಮತ್ತು ಸಣ್ಣ ಅಲೆಗಳು’ ಕಥೆಯನ್ನು ಆಧರಿಸಿ ಗಿರೀಶ್‌ ಕಾಸರವಳ್ಳಿಯವರು ನಿರ್ದೇಶಿಸಿದ ಗುಲಾಬಿ ಟಾಕೀಸ್‌ ಚಲನ ಚಿತ್ರವು (೨೦೦೮) ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರೀಯ ಪ್ರಶಸ್ತಿ ಗಳಿಸಿದೆ. ತಮ್ಮ ಆಪ್ತ, ಆರ್ದ್ರ ಬರೆಹಗಳ ಮೂಲಕ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತಿರುವ ವೈದೇಹಿಯವರಿಗೆ ಗೀತಾದೇಸಾಯಿ ದತ್ತಿ ನಿಧಿ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಪ್ರಶಸ್ತಿ, ಕಥಾ ಪ್ರಶಸ್ತಿ (೨ ಬಾರಿ) ಅನುಪಮಾ ಪ್ರಶಸ್ತಿ, ಎಂ.ಕೆ. ಇಂದಿರಾ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ (೨ ಬಾರಿ) ಅತ್ತಿಮಬ್ಬೆ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿಯ ಸಮ್ಮೇಳಾನಧ್ಯಕ್ಷರ ಗೌರವ, ಮಾಸ್ತಿ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ. ಸದ್ಯ ಪ್ರಜಾವಾಣಿ ಪತ್ರಿಕೆಯಲ್ಲಿ ನಿರ್ವಹಿಸುತ್ತಿರುವ ಅಂಕಣ ಬರೆಹ ‘ಹರಿವ ನೀರು’.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top