ವೈ.ಎನ್.ಕೆ.

Home/Birthday/ವೈ.ಎನ್.ಕೆ.
Loading Events
This event has passed.

೧೬-೫-೧೯೨೬ ೧೬-೧೦-೧೯೯೯ PUNಡಿತರಾಗಿದ್ದ ಮೂರಕ್ಷರದ ವೈಎನ್‌ಕೆರವರು ಹುಟ್ಟಿದ್ದು ಇಂದಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರ ಎಂಬ ಗ್ರಾಮದಲ್ಲಿ. (ಇದು ಸಂಸರ ಊರೂ ಕೂಡ) ಪ್ರಾರಂಭಿಕ ಶಿಕ್ಷಣ ಹಳ್ಳಿಯಲ್ಲೇ. ಹೈಸ್ಕೂಲಿಗೆ ಸೇರಿದ್ದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲು. ಕಾಲೇಜು ಓದಿದ್ದು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ. ಉನ್ನತ ದರ್ಜೆಯಲ್ಲಿ-ಅತಿ ಹೆಚ್ಚಿನ ಅಂಕಗಳಿಕೆ. ವಿದ್ಯಾರ್ಥಿಯಾಗಿದ್ದಾಗಲೇ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ. ‘ಬಾಲಚಂದ್ರ’ ಎಂಬ ಕೈ ಬರಹದ ಪತ್ರಿಕೆ ನಡೆಸುತ್ತಿದ್ದರು. ಕೆಲ ವರ್ಷ ಕುಸುಮ, ಕಿರಣ ಎಂಬ ಕೈ ಬರಹದ ಪತ್ರಿಕೆಯನ್ನೂ  ಹೊರತಂದರು. ದೇಶ ಬಂಧು ಮತ್ತು ಛಾಯಾ ಮಾಸಪತ್ರಿಕೆಯಲ್ಲಿ ವೃತ್ತಿ ಜೀವನ ಆರಂಭ. ೧೯೪೯ರಲ್ಲಿ ಪ್ರಜಾವಾಣಿ ಬಳಗಕ್ಕೆ ಸೇರ‍್ಪಡೆ. ಉಪ ಸಂಪಾದಕರಾಗಿ, ಸುದ್ದಿ ಸಂಪಾದಕರಾಗಿ, ಸಂಪಾದಕರಾಗಿ ನೇಮಕಗೊಂಡು ೧೯೮೩ರಲ್ಲಿ ನಿವೃತ್ತರಾದರೂ ಒಂದು ವರ್ಷ ಸಲಹೆಗಾರರಾಗಿದ್ದರು. ೧೯೯೧ರಲ್ಲಿ ಸೇರಿದ್ದು ಕನ್ನಡಪ್ರಭ ಬಳಗ. ಪತ್ರಿಕೋದ್ಯಮವೂ ಸಾಹಿತ್ಯದ ಭಾಗವೆನ್ನುವುದನ್ನು ನಿರೂಪಿಸಲು ಹೊಸಹೊಸ ಅಂಕಣವನ್ನು  ಪ್ರಾರಂಭಿಸಿ ಪತ್ರಿಕೆಯ ಸಾಹಿತ್ಯ ಮೌಲ್ಯವನ್ನು  ಹೆಚ್ಚಿಸಿದರು. ಸಾಹಿತ್ಯ ಸೃಷ್ಟಿಯ ಜೊತೆಗೆ ನವ್ಯ ಸಾಹಿತ್ಯದ ಅನೇಕ ಸಾಹಿತಿಗಳನ್ನು  ಸೃಷ್ಟಿಸಿದರು. ನವ್ಯ ಕಾವ್ಯವನ್ನು ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸಲು ಪ್ರಜಾವಾಣಿಯ ಪತ್ರಿಕೆಯಲ್ಲಿ ನವ್ಯ ಸಾಹಿತಿಗಳಿಗೆ ಅಗಾಧ ಬೆಂಬಲ ನೀಡಿದರು. ಹೊಸತನ್ನು ಗುರುತಿಸಿ ಪ್ರಚುರ ಪಡಿಸುವಲ್ಲಿ ಯಾವಾಗಲೂ ಮುಂದು. ಬರವಣಿಗೆಯ ಜೊತೆಗೆ ಫೋಟೋಗ್ರಫಿ, ಚಿತ್ರಕಲೆ, ಟೇಬಲ್ ಟೆನಿಸ್, ಗಾಲ್, ಯೋಗ…..ಹೀಗೆ ಹಲವಾರು ಹವ್ಯಾಸಗಳು. ಹೊಸ ಅಲೆಯ ಚಿತ್ರ ನಿರ್ಮಾಣಕ್ಕೂ ಕಾರಣಕರ್ತರು. ಸಂಸ್ಕಾರ, ವಂಶವೃಕ್ಷ, ಹಂಸಗೀತೆ, ಕನ್ನೇಶ್ವರ ರಾಮ, ಫಣಿಯಮ್ಮ ಈ ಚಿತ್ರಗಳ ಯಶಸ್ಸಿಗೆ ಬಹುಮಟ್ಟಿಗೆ ಕಾರಣರು. ಶಬ್ದಗಳ ಜೊತೆಗೆ ಆಟವಾಡುವುದೆಂದರೆ ಖುಷಿ. ಇವರು ರಚಿಸಿದ ಕೃತಿಗಳು ಸುಮಾರು ೨೮. ಜಾಕ್‌ಲಂಡನ್, ಮೊಮ್ಮಗಳ ಮುಯ್ಯಿ, ಮುಂದೇನು ರಾಮನ್, ಅಮೆರಿಕದ ಚಿತ್ರಕಲೆ ಸಂಕ್ಷಿಪ್ತ ಇತಿಹಾಸದಿಂದ ಹಿಡಿದು ವಂಡರ್‌ಲೋಕ ಸೃಷ್ಟಿಸಿದ WONDER-ಕಣ್ಣು, WONDER-ವಂಡರ್ WONDER-ಥಂಡರ್, WONDER-ಲ್ಯಾಂಪ್ ಹೀಗೆ ಪಟ್ಟಿ ಬೆಳೆಯುತ್ತದೆ. ಇವರ ಜ್ಞಾಪಕ ಶಕ್ತಿಯ ಬಗ್ಗೆ  ಕೈಲಾಸಂಗೆ ಅಚ್ಚರಿ. ‘ನನ್ನ  ಕೃತಿಗಳೆಲ್ಲಾ  ಸುಟ್ಟುಹೋದರೂ ವೈ.ಎನ್.ಕೆ. ಎಂಬ ಹುಡುಗನಿದ್ದಾನಲ್ಲಾ’ ಎಂದಿದ್ದರಂತೆ. ಪತ್ರಿಕೋದ್ಯಮದ ಅಸಾಧಾರಣ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕಾ ಅಕಾಡಮಿ ಪ್ರಶಸ್ತಿ, ಹಾಸ್ಯ ಸಂಕಲನ-ಹಾಸ್ಯಬರಹಗಳಿಗಾಗಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ವೈ.ಎನ್.ಕೆ.ರವರು ನ್ಯೂಯಾರ್ಕಿನಿಂದ ಮುಂಬಯಿಗೆ ಬರುವ ದಾರಿಯಲ್ಲಿ ವಿಮಾನದಲ್ಲೇ ಹೃದಯ ಸ್ಥಂಭನಕ್ಕೊಳಗಾದರು. ೨೦೦೩ರಲ್ಲಿ ಶ್ರೀ ವಿಶ್ವೇಶ್ವರ ಭಟ್ಟರು ಬೆಸ್ಟ್ ಆಫ್ ವಂಡರ್ಸ್‌ (ಸಂಪಾದಿತ), ನನ್ನ ಪ್ರೀತಿಯ ವೈ.ಎನ್.ಕೆ. ಕೃತಿ ಬರೆದು ಗೌರವ ತೋರಿದ್ದಾರೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಬಿ. ಚಂದ್ರಶೇಖರ್ (ಬಿಸಿ) – ೧೯೧೬-೧೩.೧೨.೨೦೦೦ ಕೃ.ಭ. ಪೆರ್ಲ – ೧೯೨೩ ವಿ. ವೆಂಕಟಲಕ್ಷ್ಮೀ – ೧೯೪೮ ಕೆಳದಿ ವೆಂಕಟೇಶ ಜೋಯಿಸ್ – ೧೯೬೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top