ವೈ.ಎನ್. ಗುಂಡೂರಾವ್

Home/Birthday/ವೈ.ಎನ್. ಗುಂಡೂರಾವ್
Loading Events
This event has passed.

೦೬.೦೬.೧೯೪೫ ಹಾಸ್ಯಪ್ರಬಂಧ ಲೇಖಕ, ಮಾಹಿತಿ ಸಂಗ್ರಾಹಕ, ಸಂಪಾದಕರಾದ ಗುಂಡೂರಾವ್‌ರವರು ಹುಟ್ಟಿದ್ದು ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಎಂಬ ಕುಗ್ರಾಮದಲ್ಲಿ. ತಂದೆ ಮಾಧ್ಯಮಿಕ ಶಾಲಾ ಮುಖ್ಯೋಪಾದ್ಯಾಯರಾಗಿದ್ದ ವೈ.ಕೆ. ನರಸಿಂಗರಾಯರು, ತಾಯಿ ರಾಜಮ್ಮ. ಪ್ರಾರಂಭಿಕ ಶಿಕ್ಷಣ ಯರಗಂಬಳ್ಳಿ, ಪ್ರೌಢಶಾಲಾವಿದ್ಯಾಭ್ಯಾಸ ಯಳಂದೂರಿನ ಮುನಿಸಿಪಲ್ ಹೈಸ್ಕೂಲು. ಎಸ್.ಎಸ್.ಎಲ್.ಸಿ.ಯ ನಂತರ ಓದಲು ಬೆಂಗಳೂರಿಗೆ ಬಂದು ಗೌರ್ನಮೆಂಟ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು ಸೇರಿದರೂ ಪೂರ್ಣಗೊಳ್ಳದೆ ಉದ್ಯೋಗಕ್ಕೆ ಸೇರಿದ್ದು ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಯಲ್ಲಿ. ಸ್ನೇಹಿತರ ಒತ್ತಾಯಕ್ಕೆ ಮಣಿದು ಬಿಡುವಿನ ವೇಳೆಯಲ್ಲಿ ಸಂಜೆ ಕಾಲೇಜಿಗೆ ಸೇರಿ ಪಡೆದ ಬಿ.ಕಾಂ. ಪದವಿ. ಮೂವತ್ತೆಂಟು ವರ್ಷಗಳ ಸೇವೆಯ ನಂತರ ನಿವೃತ್ತಿ – ಇದೀಗ ಪೂರ್ಣ ಪ್ರಮಾಣದ ಸಾಹಿತ್ಯಾಭ್ಯಾಸ, ಬರೆಹ. ಸದಭಿರುಚಿಯ ಹಾಸ್ಯ ಪ್ರಸಾರಕ್ಕಾಗಿ ಸ್ಥಾಪಿಸಿರುವ ‘ಹಾಸ್ಯಬ್ರಹ್ಮ ಟ್ರಸ್ಟ್’ನ ಸ್ಥಾಪಕ ಸದಸ್ಯರು. ಮಾಧ್ಯಮಿಕ ಶಾಲೆಯಲ್ಲಿ ಲೆಕ್ಕದ ಮೇಸ್ಟ್ರಾಗಿದ್ದ ಸುಬ್ಬರಾಯರಿಂದ ಸಾಹಿತ್ಯದ ಪರಿಚಯ. ಜೊತೆಗೆ ತಂದೆ ಶಾಲೆಯಿಂದ ತಂದಿಡುತ್ತಿದ್ದ ಪತ್ರಿಕೆಗಳ ಓದು. ಅ.ನ.ಕೃ. ಎಂಬುದನ್ನು ಆ.ನಾ.ಕೃ. ಎಂದು ಸಂಬೋಧಿಸಿ ಸುಬ್ಬರಾಯರಿಂದ ಹೊಡೆತ ತಿಂದ ನಂತರವೇ ಗಂಭೀರವಾಗಿ ಸಾಹಿತ್ಯವನ್ನು ಓದತೊಡಗಿ ಪ್ರೌಢಶಾಲೆಗೆ ಬರುವ ವೇಳೆಗೆ ಅ.ನ.ಕೃ., ತ.ರಾ.ಸು., ಕಟ್ಟೀಮನಿ, ಮಾಸ್ತಿ, ಶಿವರಾಮ ಕಾರಂತ ಮೊದಲಾದವರ ಕಥೆ, ಕಾದಂಬರಿಗಳ ಪರಿಚಯ. ಇದಲ್ಲದೆ ಸುಬ್ಬರಾಯರು ಪ್ರಬಂಧ ಸ್ಪರ್ಧೆಯಿಟ್ಟು ಗೆದ್ದವರಿಗೆ ಬೆದ್ದದುಂಡೆ ಎಂದು ಆಸೆ ತೋರಿಸಿ ಹಿಡಿಸಿದ ಸಾಹಿತ್ಯದ ಹುಚ್ಚ. ನಿಮ್ಮೂರ ಕಟ್ಟಿ ಹನುಮನ ಬಗ್ಗೆ ಪ್ರಬಂಧ ಬರೆಯಿರಿ ಎಂದು ಸುಬ್ಬರಾಯರು ಹೇಳಿದಾಗ ಹನುಮಂತ ಸಮುದ್ರ ಹಾರಿದ ಕತೆ ಕೇಳಿದ್ದು ಜ್ಞಾಪಕಕ್ಕೆ ಬಂದು, ‘ನಮ್ಮೂರ ಹನುಮ ರಾತ್ರಿವೇಳೆ ಊರಮುಂದಿನ ಕೆರೆ ಹಾರಿಕೊಂಡು ಹೋಗಿ ಮಾವಿನತೋಟಕ್ಕೆ ಹೋಗಿ ಮರವೇರಿ ಮಾವಿನ ಹಣ್ಣು ತಿಂದು ಬರುತ್ತಿದ್ದ’ ಎಂದು ಬರೆದು ಸುಬ್ಬರಾಯರಿಂದ ಬೈಸಿಕೊಂಡದ್ದೂ ಉಂಟು. ಸಂಜೆ ಕಾಲೇಜಿಗೆ ಸೇರಿದಾಗ ದೊರೆತ ಸಾಹಿತಿ ಮಿತ್ರರ ಓಡನಾಟದಿಂದ ಸಾಹಿತ್ಯದ ಓದು, ಬರೆಹವನ್ನು ಅತಿ ಗಂಭೀರವಾಗಿ ತೆಗೆದುಕೊಂಡು ಪತ್ರಿಕೆಗಳಿಗೆ ಬರೆದ ಲೇಖನಗಳು. ಮೊದಲ ಲೇಖನ ಕಸ್ತೂರಿ ಮಾಸಪತ್ರಿಕೆ, ಮೊದಲ ಕತೆ ಇಂಚರ ಮಾಸ ಪತ್ರಿಕೆ ಹಾಗೂ ಮೊದಲ ಹಾಸ್ಯಲೇಖನ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡದ್ದು ಮಾರ್ಗರೇಟಿಸಂ V/s ಸೀತಮಿಸಂ. ಇದೇ ಸಂದರ್ಭದಲ್ಲಿ ನಾಟ್ಯಸಂಘ ಥಿಯೇಟರ್ ಸೆಂಟರಿನವರು ಏರ್ಪಡಿಸುತ್ತಿದ್ದ ಅಂತರ ಕಾಲೇಜು ನಾಟಕ ಸ್ಪರ್ಧೆ ಉಲ್ಲಾಳ್‌ಷೀಳ್‌ಗಾಗಿ ನಾಟಕದಲ್ಲಿ ಅಭಿನಯಿಸಿ ಕಾಲೇಜಿಗೆ ಷೀಲ್ಡ್ ದೊರಕಿಸಿದ್ದಲ್ಲದೆ ಮರುವರ್ಷ ನಾಟಕದ ವಿಮರ್ಶೆಗಾಗಿ ಪ್ರಜಾವಾಣಿ ಪತ್ರಿಕೆಯಿಂದ ಪಡೆದ ೧೦೦ ರೂ. ಬಹುಮಾನ (೧೯೭೩). ನಂತರ ಬರೆದ ಹಲವಾರು ಹಾಸ್ಯ ಲೇಖನಗಳು, ಕಥೆಗಳು ಪ್ರಖ್ಯಾತ ನಿಯತಕಾಲಿಕೆಗಳಾದ ಸುಧಾ, ತರಂಗ, ಮಯೂರ, ತುಷಾರ, ಕಸ್ತೂರಿ, ಮತ್ತು ದಿನ ಪತ್ರಿಕೆಗಳಾದ ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿತ. ೧೯೯೪ರಲ್ಲಿ ಪ್ರಕಟವಾದ ಮೊದಲ ಹಾಸ್ಯ ಲೇಖನ ಸಂಕಲನ ‘ನಗೆಮಿಂಚು’, ನಂತರ ‘ನಗೆಮಲ್ಲಿಗೆ’, ಅಡ್ಜೆಸ್ಟ್ ಮಾಡ್ಕೋಬೇಕ್ರಿ…., ಅಸಲಿ-ನಕಲಿ, ನನ್ನ ಪ್ರೀತಿಯ ಅಪ್ಪ (ಪ್ರಬಂಧ ಸಂಕಲನ) ಮುಂತಾದವುಗಳು. ಕಥಾಸಂಕಲನ-ಅನಾವರಣ. ಸಂಪಾದಿಸಿದ ಹಾಸ್ಯ ಸಂಕಲನಗಳು – ನಗೆ ಹೂರಣ, ನಾಡಿಗೇರದ ಆಯ್ದ ನಗೆ ಬರಹಗಳು, ದಾಶರಥಿ ದೀಕ್ಷಿತರ ಆಯ್ದ ನಗೆ ಬರಹಗಳು, ಹಾಸ್ಯಾಂಬರ, ಬೆಸ್ಟ್ ಆಫ್ ಸುನಂದಮ್ಮ, ಬೆಸ್ಟ್ ಆಫ್ ಕಸ್ತೂರಿ, ಬೆಸ್ಟ್ ಆಫ್ ನಾಡಿಗೇರ್, ಸಾ.ಕೃ. ಪ್ರಕಾಶ್‌ರವರ ‘ನಗೆಬಾರದೆ ಅರೆಗಳಿಗೆ’ ಮುಂತಾದವುಗಳು. ಸಂಪಾದಿತ ಕಥಾ ಸಂಕಲನಗಳು – ಅಂಕುರ, ಭೂಮಿಕ. ದಾಸ ಸಾಹಿತ್ಯಕ್ಕೆ ನೀಡಿದ ಕೃತಿ ಎಂದರೆ ‘ಹರಿದಾಸರು ಕಂಡ ಶ್ರೀನಿವಾಸ’ ಧಾರ್ಮಿಕ ಕೃತಿ – ‘ದಾರ್ಶನಿಕರು ಕಂಡ ಆಂಜನೇಯ’, ‘ನಾಗದರ್ಶನ’ (ಇವು ಮೂರು ಇತರೊಡನೆ ಸಂಪಾದಿಸಿದ್ದು) ಇದಲ್ಲದೆ ಅಂಕಣಬರಹಗಳ ಕೃತಿ ‘ಸಾಹಿತಿಗಳು ರಸನಿಮಿಷಗಳು’ ಮತ್ತು ಕನ್ನಡ ಸಾಹಿತ್ಯ ದಿನಮಣಿಗಳು ಅಲ್ಲದೆ ಜೀವನ ಚರಿತ್ರೆಗಳಾದ ಎಂ.ನರೇಂದ್ರಬಾಬು (ಸಿನಿಮಾ) ಎಚ್.ನರಸಿಂಹಯ್ಯ, ಚಿತ್ರರಂಗದ ತ್ರಿವಿಕ್ರಮ ದ್ವಾರಕೀಶ, ಭಾರತ ಸ್ವಾತಂತ್ರ್ಯ ಹೋರಾಟಗಾರರು ಮುಂತಾದವುಗಳು ಸೇರಿ ಒಟ್ಟು ೩೦ ಕೃತಿಗಳು ಪ್ರಕಟಿತ. ‘ಮಬ್ಬು ಹರಿದಾಗ’ ಕೃತಿಗೆ ಕನ್ನಡ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ (ನವ ಸಾಕ್ಷರರಿಗಾಗಿ), ಬೆಂಗಳೂರು ನಗರ ಪಾಲಿಕೆ ಗಿರಿನಗರ ವಿಭಾಗದಿಂದ ಕೆಂಪೇಗೌಡ ಪ್ರಶಸ್ತಿ, ಅಡ್ಜೆಸ್ಟ್ ಮಾಡ್ಕೋಬೇಕ್ರಿ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕುಂಬಾಸ ದತ್ತಿನಿಧಿ ಪ್ರಶಸ್ತಿ, ಬನಶಂಕರಿ ಕ್ಷೇಮಾಭಿವೃದ್ಧಿ ಸಂಘದಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಪತ್ರಿಕೆಗಳ ವಿಶೇಷಾಂಕಗಳ ಬಹುಮಾನ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿಯ ಹಲವಾರು ವಾರ್ಷಿಕ ಸಂಕಲನಗಳಲ್ಲಿ ಹಾಸ್ಯಲೇಖನ, ಪ್ರಬಂಧಗಳ ಸೇರ್ಪಡೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top