ವೈ.ಎಸ್. ಗುಂಡಪ್ಪ

Home/Birthday/ವೈ.ಎಸ್. ಗುಂಡಪ್ಪ
Loading Events
This event has passed.

೧೨.೦೬.೧೯೦೫ ೧೮.೦೬.೧೯೯೮ ಶಿಕ್ಷಕರಾಗಿ ಮಕ್ಕಳ ಸೂಕ್ಷ್ಮಮನಸ್ಸನ್ನರಿತು ಬೋಧಪ್ರದವಾದ ನಾಟಕಗಳನ್ನು ರಚಿಸಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾದಂತೆ ಸಾಹಿತ್ಯ, ಸಂಗೀತ, ನಾಟಕ ಮುಂತಾದವುಗಳ ಸಂಘಟಕರಾಗಿ ಸಮಾಜವು ಸನ್ಮಾರ್ಗದಲ್ಲಿ ನಡೆಯಲು ‘ಸಾಹಿತ್ಯ ಕೂಟ’ವನ್ನು ಸ್ಥಾಪಿಸಿ ಕಡೆಯ ಉಸಿರಿರುವವರೆವಿಗೂ ಕನ್ನಡದ ಪರಿಚಾರಿಕೆಯಲ್ಲಿ ತೊಡಗಿಕೊಂಡಿದ್ದ ವೈ.ಎಸ್. ಗುಂಡಪ್ಪನವರು ಹುಟ್ಟಿದ್ದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನಲ್ಲಿ. ತಂದೆ ಯಲಹಂಕದ ಸುಬ್ರಹ್ಮಣ್ಣಯ್ಯನವರು, ತಾಯಿ ಗೌರಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಟಿಪ್ಪೂಸುಲ್ತಾನ್ ಅರಮನೆಯ ಆವರಣದಲ್ಲಿ. ಮಾಧ್ಯಮಿಕ ಶಾಲಾಭ್ಯಾಸ ಕೋಟೆ ಎ.ವಿ.ಸ್ಕೂಲ್ (ಆಂಗ್ಲೋವರ್ನಾಕ್ಯುಲರ್). ಮಲ್ಲೇಶ್ವರಂ ಪ್ರೌಢಶಾಲೆಗೆ ಸೇರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ. ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ  ‘ಶ್ರೀ ಚಂಪಕಧಾಮ ಸ್ವಾಮಿ ಸೇವಾ ಸಂಘ’ ಸ್ಥಾಪಿಸಿ ದೇವರನಾಮಗಳನ್ನು ತಾವೇ ರಚಿಸಿ ಬಾಲಕರನ್ನು ದೇವಸ್ಥಾನಗಳಿಗೆ ಕರೆದೊಯ್ದು ಭಜನೆ ಕಾರ‍್ಯಕ್ರಮಗಳನ್ನು ನಡೆಸುತ್ತಿದ್ದರು. ಹೀಗೆ ಬರೆದ ಭಜನೆಗಳನ್ನು ‘ಗಾನರಸಾಯನ’ ಎಂಬ ಹೆಸರಿನಲ್ಲಿ ಪ್ರಕಟಿಸಿದರು (೧೯೨೫). ಎಂಟ್ರೆನ್ಸ್ ಪರೀಕ್ಷೆಯಲ್ಲಿತ ತೇರ್ಗಡೆಯಾದ ನಂತರ ಸಂಸಾರದ ಜವಾಬ್ದಾರಿ ಹೊರಬೇಕಾಗಿ ಬಂದಿದ್ದರಿಂದ ಪತ್ರಿಕೆಗಳಿಗೆ ಆಗಾಗ್ಗೆ ಲೇಖನಗಳನ್ನು ಬರೆಯುತ್ತಿದ್ದು, ಪ್ರಜಾಮತ ಪತ್ರಿಕೆ ಉಪಸಂಪಾದಕರಾಗಿ ಸೇರಿದರು. ನಂತರ ಹೊಸಕೋಟೆ ತಾಲ್ಲೂಕು ಕಛೇರಿಯಲ್ಲಿ ಉದ್ಯೋಗ ದೊರೆತಿದ್ದರಿಂದ ತಾಲ್ಲೂಕು ಕಛೇರಿ ಸೇರಿದರು. ಅಲ್ಲಿನ ಆಡಳಿತ ನೋಡಲಾರದೆ ಉದ್ಯೋಗ ತ್ಯಜಿಸಿ ಸೇರಿದ್ದು ಕೋಲಾರದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ. ನಂತರ ಮಾಧ್ಯಮಿಕ ಶಾಲಾ ಶಿಕ್ಷಕರಾಗಿ ಬಡ್ತಿ ದೊರೆತು ಚಿಂತಾಮಣಿ ಶಾಲೆಗೆ ಸೇರಿದ್ದು ೧೯೩೫-೩೬ರ ಸುಮಾರಿನಲ್ಲಿ. ಚಿಂತಾಮಣಿ ಇವರ ಶಿಕ್ಷಕ ವೃತ್ತಿ ಹಾಗೂ ಸಾಂಸ್ಕೃತಿ ಜಗತ್ತಿನ ಕರ್ಮಭೂಮಿಯಾಯಿತು. ಚಿಂತಾಮಣಿ ಶಾಲೆಯಲ್ಲಿ ಶಿಕ್ಷಕರಾದ ನಂತರ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಿದ್ದು ಬೆಂಗಳೂರಿನಲ್ಲಿ ಆರ್.ಕಲ್ಯಾಣಮ್ಮನವರು ಸ್ಥಾಪಿಸಿದ ಮಕ್ಕಳ ಕೂಟದಂತೆ ಕೋಲಾರ ಕರ್ನಾಟಕ ಸಂಘ, ಮಕ್ಕಳ ಕೂಟ, ಮಹಿಳಾ ಸೇವಾ ಸಮಾಜಗಳನ್ನು ಸ್ಥಾಪಿಸಿ ಅದರ ಕಾರ‍್ಯದರ್ಶಿಯಾಗಿದ್ದುದಲ್ಲದೆ ಕಲ್ಯಾಣಮ್ಮನವರ ‘ಸರಸ್ವತಿ’ ಪತ್ರಿಕೆಗೂ ಪದ್ಯಗಳನ್ನು ಬರೆಯತೊಡಗಿದರು.          ಇದಲ್ಲದೆ ಚಿತ್ರಗುಪ್ತ, ಒಕ್ಕಲಿಗರ ಪತ್ರಿಕೆ, ವಿಶ್ವಕರ್ನಾಟಕ, ಪ್ರಜಾವಾಣಿ, ಪ್ರಜಾಮತ, ಸುಬೋಧ, ಪ್ರಬುದ್ಧ ಕರ್ನಾಟಕ, ನಗುವನಂದ, ವಿದ್ಯಾದಾಯಿನಿ ಮುಂತಾದ ಪತ್ರಿಕೆಗಳಿಗೂ ಬರೆಯತೊಡಗಿದರು. ಮಕ್ಕಳನ್ನು ಸನ್ಮಾರ್ಗದಲ್ಲಿ ತರುವ ಜವಾಬ್ದಾರಿ ಶಿಕ್ಷಕರಿಗೆ ಸೇರಿದ್ದು ಎಂದು ಬಲವಾಗಿ ನಂಬಿದ್ದು ವಿದ್ಯಾರ್ಥಿಗಳ ಬೌದ್ಧಿಕ ಬೇಳವಣಿಗೆಗಾಗಿ ಹಲವಾರು ನಾಟಕಗಳನ್ನು ಬರೆದು ವಾರ್ಷಿಕೋತ್ಸವಗಳಲ್ಲಿ ಪ್ರದರ್ಶಿಸತೊಡಗಿದರು. ಅವುಗಳಲ್ಲಿ ಮಗುವಿನ ಮೈಮೆ, ತೋಳರಾಯನ ಸಭೆ, ಅಹಿಂಸಾ ಪರಮೋಧರ್ಮ, ಧ್ರುವ ಬಾಲ, ಗೋಲಿ ಮೈಮೆ, ಬಾಲ ಕಬೀರ, ಕಾಸಿನ ಗಂಟು ಮುಖ್ಯವಾದವುಗಳು. ಇವಲ್ಲದೆ ಬಾಲಕ ಭಂಡಾರ ಎಂಬ ಮಗ್ಗಿ ಪುಸ್ತಕ, ಭ್ರಾತೃ ಭಕ್ತಾಗ್ರಣಿ ಲಕ್ಷ್ಮಣ ಮೂರ್ತಿ ಎಂಬ ಪೌರಾಣಿಕ ಕಾದಂಬರಿಯನ್ನು ಬರೆದಿದ್ದಾರೆ. ಈ ಕಾದಂಬರಿಯು ಮದರಾಸಿನ ಸೆಕೆಂಡರಿ ಶಾಲೆಗಳಿಗೆ ಪಠ್ಯಪುಸ್ತಕವಾಗಿತ್ತು. ವೃತ್ತಿ ರಂಗ ಭೂಮಿಯಲ್ಲಿ ಖ್ಯಾತರಾಗಿದ್ದ ಸಿ.ಬಿ. ಮಲ್ಲಪ್ಪನವರ ಶ್ರೀ ಚಂದ್ರಮೌಳೇಶ್ವರ ನಾಟಕ ಸಂಸ್ಥೆಗಾಗಿ ‘ಮಮತಾ ಮೋಕ್ಷ’, ‘ವಿಧಿವಿಲಾಸ’ ‘ಅದೃಷ್ಟ’ ಮುಂತಾದ ನಾಟಕಗಳನ್ನು ಬರೆದುಕೊಟ್ಟಿದ್ದಾರೆ. ಕನ್ನಡದಲ್ಲಿ ಅಪರೂಪವಾಗುತ್ತಿರುವ ಛಂದೋಬದ್ಧವಾಧ ಕಂದ, ವೃತ್ತ, ಷಟ್ಪದಿ, ರಗಳೆಗಳ ಪ್ರಕಾರದಲ್ಲಿ ಲೀಲಾಜಾಲವಾಗಿ ಬರೆಯಬಲ್ಲ ಪಾಂಡಿತ್ಯ ಪಡೆದಿದ್ದರು. ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಈ ಮೂರು ಪ್ರಕಾರಗಳಲ್ಲಿಯೂ ಕೃತಿ ರಚಿಸಿದ್ದಾರೆ. ಭಾಮಿನಿ ಷಟ್ಪದಿಯಲ್ಲಿ ರಚಿಸಿರುವ ‘ಭಗವಾನ್ ಬುದ್ಧ’ ಪ್ರಕಟವಾಗಬೇಕಾಗಿರುವ ಕೃತಿ. ಇವರ ನೆಚ್ಚಿನ ವಿದ್ಯಾರ್ಥಿಗಳು ಸೇರಿ ‘ಗೆಳೆಯರ ಬಳಗ’ದ ಮೂಲಕ ವೈ.ಎಸ್. ಗುಂಡಪ್ಪನವರ ಆಯ್ದ ಕೃತಿಗಳ ಸಂಕಲನ ‘ಬಂಗಾರದಂಗಾಲು’ (೧೯೮೪) ಪ್ರಕಟಿಸಿದ್ದು, ಪು.ತಿ,ನ ರವರು ಬಿಡುಗಡೆಮಾಡಿದ್ದು ವಿಶೇಷ. ಗಿನ್ನೆಸ್ ದಾಖಲೆಗೆ ಸೇರ‍್ಪಡೆಯಾಗುವಂತಹ ಇವರ ಮತ್ತೊಂದು ಮಹೋನ್ನತ ಸಾಧನೆ ಎಂದರೆ ‘ಸಾಹಿತ್ಯ ಕೂಟ’ದ ಸ್ಥಾಪನೆ. ೧೯೪೮ರಲ್ಲಿ ಸ್ಥಾಪನೆಯಾದ ಈ ಸಾಹಿತ್ಯ ಕೂಟವು ಪ್ರತಿ ಶನಿವಾರದಂದು ತಪ್ಪದೆ ನಡೆದು ಬರುತ್ತಿದೆ. ಕೂಟದಲ್ಲಿ ಪುರಾತನ, ಆಧುನಿಕ ಗ್ರಂಥಗಳ ಕಾವ್ಯ ಪರಿಚಯ, ಸಾಂಸ್ಕೃತಿಕ ಕಾರ‍್ಯಕ್ರಮಗಳ ಮೂಲಕ ಜ್ಞಾನ ಪ್ರಸಾರ, ಉತ್ತಮ ಸಾಹಿತ್ಯ ಪ್ರಚಾರ ಸೇವಾ ಸಂಸ್ಥೆಗಳೊಡನೆ ಸಹಕಾರ ಇವು ಮೂಲ ಉದ್ಧೇಶವಾಗಿದೆ. ೧೨.೪.೧೯೪೮ರ ಸೋಮವಾರ ಸಂಜೆ ವೈ.ಎಸ್. ಗುಂಡಪ್ಪನವರು ತೊರವೆ ರಾಮಾಯಣ ವಾಚನದೊಂದಿಗೆ ಸಾಹಿತ್ಯ ಕೂಟದ ವ್ಯಾಸಂಗ ಗೋಷ್ಠಿಯನ್ನು ಉದ್ಘಾಟಿಸಿದ್ದು ಚಿಂತಾಮಣಿಯ ನಾಗನಾಥೇಶ್ವರ ಸ್ವಾಮಿ ದೇವಾಲಯದ ಹಿಂಭಾಗದ ಬಂಡೆಗಳ ಮೇಲೆ ನಂತರ ನರಸಿಂಹಭಟ್ಟರ ‘ಜಯ ಕೆಫೆ’, ಕಾರುಪಾಕಲ ರಾಮಚಂದ್ರಯ್ಯ ಸೆಟ್ಟರ ಛತ್ರದ ಕೊಠಡಿ, ಶ್ರೀ ತಪಸೇಶ್ವರ ಬಿಲ್ಡಿಂಗ್ ಮಹಡಿಯ ಮೇಲೆ – ಹೀಗೆ ಸ್ಥಳ ಬದಲಾವಣೆ ಮತ್ತು ೧೯.೦೧.೧೯೫೭ರಿಂದ ಕಾರ‍್ಯಕ್ರಮವು ಸೋಮವಾರದಿಂದ ಶನಿವಾರಕ್ಕೆ ಬದಲಾಗಿದ್ದು ಒಂದು ವಾರ ಕೂಡಾ ತಪ್ಪದೆ ಇಂದಿಗೂ ನಡೆಯುತ್ತಾ ಬಂದಿದ್ದು ಇದರಲ್ಲಿ ಭಾಗಿಯಾದ ಶ್ರೀ ಎಲ್.ಎಸ್. ಶೇಷಗಿರಿರಾವ್, ವಿದ್ವಾನ್ ಎನ್. ರಂಗನಾಥ ಶರ್ಮ, ಅರ್ಚಕ ವೆಂಕಟೇಶ್, ಮ.ನ. ಮೂರ್ತಿ, ಪ್ರೊ.ಎಂ. ಗೋಪಾಲಕೃಷ್ಣ ಅಡಿಗ, ಟಿ.ಆರ್. ಮಹದೇವಯ್ಯ, ಪ್ರೊ.ಆರ್.ಜಿ. ಕುಲಕರ್ಣಿ, ಬಾಬು ಕೃಷ್ಣಮೂರ್ತಿ, ಬೇಲೂರ್ ಕೃಷ್ಣಮೂರ್ತಿ, ಕೈಪು ಲಕ್ಷ್ಮೀನರಸಿಂಹ ಶಾಸ್ತ್ರಿ, ಸಿ.ಕೆ. ಪರುಶರಾಮಯ್ಯ, ವೆಂಕಟನಾರಾಯಣ, ಪ್ರೊ. ಚಂದ್ರಶೇಖರ ಪಾಟೀಲ, ಡಾ.ನಾ. ಸೋಮೇಶ್ವರ ಮುಂತಾದ ನಾಡಿನ ಗಣ್ಯ ಲೇಖಕರು ಉಮನ್ಯಾಸ ನೀಡಿದ್ದಾರೆ. ಇದೀಗಲೂ ಮಹಿಳಾ ಸೇವಾ ಸಮಾಜದ ಕಟ್ಟಡದಲ್ಲಿ ಸಾಹಿತ್ಯ ಕೂಟದ ಕಾರ‍್ಯಕ್ರಮಗಳು ನಡೆಯುತ್ತಿದ್ದು ೨೯೧೬ನೆಯ ಕಾರ‍್ಯಕ್ರಮವು ೧೫.೧೨.೨೦೧೨ರಂದು ನಡೆಯಲಿದೆ. ಕಾರ‍್ಯಕ್ರಮದಲ್ಲಿ ಶಾಂತಿಪಾಠ, ಭಗವದ್ಗೀತೆಯ ೧೬ನೆಯ ಅಧ್ಯಾಯದ ಪಠಣ, ಸಾಮೂಹಿಕ ಭಜನೆ, ಉಪನ್ಯಾಸ/ಗಾಯನ, ಅಧ್ಯಕ್ಷರ ನುಡಿ, ಮಂಗಳಾರತಿ, ಸ್ವಸ್ತಿ ವಾಚನ,  ಪ್ರಸಾದ ವಿನಿಯೋಗ ಇವು ತಪ್ಪದೆ ನಡೆಯುತ್ತಾ ಬಂದಿದೆ. ಶ್ರೀ ಬ್ರಹ್ಮ ಚೈತನ್ಯ ಗುರುಗಳನ್ನು ನಂಬಿದವರಾಗಿದ್ದು ೧೯೪೯ರ ಜೂನ್ ೧೩ರಂದು ಶ್ರೀ ಸೀತಾರಾಮ ಲಕ್ಷ್ಮಣ, ಮಾರುತಿ ಮತ್ತು ಶ್ರೀ ಬ್ರಹ್ಮ ಚೈತನ್ಯರ ಬಿಳಿಯ ಅಮೃತ ಶಿಲಾಮೂರ್ತಿಗಳ ಸ್ಥಾಪನೆಗೂ ಕಾರಣರಾಗಿದ್ದು, ಚೈತನ್ಯರ ಹಲವಾರು ಸ್ತೋತ್ರಗಳನ್ನು ರಚಿಸಿದ್ದಾರೆ. ಹೀಗೆ ಸದಾಕಾಲ ಸಾಹಿತ್ಯ, ಸಾಂಸ್ಕೃತಿಕ ಕಾರ‍್ಯಕ್ರಮಗಳಲ್ಲೇ ತೊಡಗಿಸಿಕೊಂಡಿದ್ದ ಗುಂಡಪ್ಪನವರಿಗೆ ೧೯೬೩ರಲ್ಲಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ಡಾ. ರಾಧಾಕೃಷ್ಣನ್ ರವರಿಂದ ಪಡೆದಿದ್ದಾರೆ.  ೧೯೬೬ರಲ್ಲಿ ರಾಜ್ಯ ಸರಕಾರವೂ ಗೌರವಿಸಿದೆ. ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಜಿಲ್ಲಾ ಸಾಹಿತ್ಯ ಪರಿಷತ್ತು ಮುಂತಾದವುಗಳಿಂದ ಸನ್ಮಾನಿತರಾದ ಗುಂಡಪ್ಪನವರು ೧೩.೦೬.೧೯೯೮ರಂದು ಸಾಹಿತ್ಯ ಕೂಟದ ೨೧೫೯ನೆಯ ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದು ಶ್ರೀ ಬ್ರಹ್ಮ ಚೈತನ್ಯರ ಚರಣಗಳಲ್ಲಿ ಲೀನವಾದದ್ದು ೧೯೯೮ರ ಜೂನ್ ೧೮ರಂದು. ಗುಂಡಪ್ಪನವರ ಮಗ ವೈ.ಜಿ. ಅನಂತಶಾಸ್ತ್ರಿಯವರು ತಂದೆಯವರು ಬರೆದಿದ್ದ ದೇವರ ನಾಮಗಳನ್ನು ಸಂಗ್ರಹಿಸಿ “ವೈ.ಎಸ್.ಜಿ: ಒಂದು ಚಿತ್ರಣ ಮತ್ತು ಬಿಡಿ ಹೂಗಳು” ಪುಸ್ತಕವನ್ನು ೨೦೦೦ದಲ್ಲಿ ಮತ್ತು ೨೫.೧೨.೨೦೦೪ರಲ್ಲಿ ೨೫೦೦ನೆಯ ಸಾಹಿತ್ಯ ಕೂಟದ ‘ಸ್ಮೃತಿ ಸ್ತವನ’ ಸ್ಮರಣ ಸಂಚಿಕೆಯನ್ನು ವೈ.ಜಿ. ಗಿರಿಶಾಸ್ತ್ರಿಯವರು ಸಂಪಾದಿಸಿ ಪ್ರಕಟಿಸಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top