ವೈ.ಕೆ. ಮುದ್ದುಕೃಷ್ಣ

Home/Birthday/ವೈ.ಕೆ. ಮುದ್ದುಕೃಷ್ಣ
Loading Events

೦೫.೦೬.೧೯೪೭ ಜಾನಪದ ಗಾರುಡಿಗ ಎಸ್.ಕೆ. ಕರೀಂ ಖಾನರ ಪ್ರಭಾವದಿಂದ ಜಾನಪದ ಗೀತೆಗಳ ಗಾಯನವನ್ನ ಮೈಗೂಡಿಸಿಕೊಂಡು ಅದ್ವಿತೀಯ ಗಾಯಕರೆನಿಸಿರುವ ಮುದ್ದುಕೃಷ್ಣರವರು ಹುಟ್ಟಿದ್ದು ಹಾಸನ ಜಿಲ್ಲೆಯ ಯಡಕೆರೆ. ತಂದೆ ಕೃಷ್ಣೇಗೌಡ, ತಾಯಿ ಕೆಂಚಮ್ಮ. ಕೃಷಿಕರ ಮನೆತನದಲ್ಲಿ ಬೆಳೆದರೂ ಮೈಗೂಡಿಸಿಕೊಂಡದ್ದು ಜಾನಪದ ಗಾಯನ, ರಂಗಾಸಕ್ತಿ, ಓದಿದ್ದು ಬಿ.ಎಸ್ಸಿ. ಲೋಕ ಸೇವಾ ಆಯೋಗದ ಮುಲಕ ರಾಜ್ಯ ಅಬಕಾರಿ ಇಲಾಖೆಗೆ ಸೇರ‍್ಪಡೆ. ಡೆಪ್ಯುಟಿ ಕಮೀಷನರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ, ಬೆಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾಗಿ, ಎಂ.ಎಸ್. ಐ.ಎಲ್. ನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಪೂರ್ಣ ಸಮಯ ಗಾಯನಕ್ಕೆ ಮೀಸಲು. ಹತ್ತನೆಯ ವಯಸ್ಸಿನಿಂದಲೇ ರಂಗ ಗೀತೆಗಳನ್ನು ಹಾಡಿ, ನಾಟಕಗಳಲ್ಲಿ ಪಾತ್ರ ವಹಿಸಿ ಪಡೆದ ಪ್ರಶಂಸೆ. ಕಾಳಿಂಗರಾವ್, ಭಾಳಪ್ಪ ಹುಕ್ಕೇರಿ, ಅನಂತಸ್ವಾಮಿಯವರ ಹಾಡುಗಾಡಿಕೆಯ ಪ್ರಭಾವ. ಅನೇಕ ಪ್ರಸಿದ್ಧರೊಡಗೂಡಿ ಹಾಡಿದರೂ ರೂಢಿಸಿಕೊಂಡ ಸ್ವತಂತ್ರ ಶೈಲಿ. ಹಂಪಿ ಉತ್ಸವ, ಕದಂಬೋತ್ಸವ ಮುಂತಾದ ಉತ್ಸವಗಳಲ್ಲಿ ಭಾಗಿ. ಹವ್ಯಾಸಿ ರಂಗಭೂಮಿಯ ಕಲಾವಿದರಾಗಿ, ನೂರಾರು ನಾಟಕಗಳಲ್ಲಿ ಅಭಿನಯ, ನಿರ್ದೇಶನ, ಕಿರುತೆರೆಯಲ್ಲೂ ಅಭಿನಯ. ಧ್ವನಿಸುರುಳಿ, ಸಿ.ಡಿ.ಗಳ ಬಿಡುಗಡೆ. ೧೯೮೫ ರಲ್ಲಿ ಅಮೆರಿಕ ಪ್ರವಾಸ ಮಾಡಿ ನಡೆಸಿಕೊಟ್ಟ ಕಾರ್ಯಕ್ರಮ, ೧೯೮೮ ರಲ್ಲಿ ಇಂಗ್ಲೆಂಡಿನ ಮ್ಯಾಂಚೆಸ್ಟರ್‌, ೧೯೯೮ ರಲ್ಲಿ ಅಮೆರಿಕದ ಹಲವಾರು ಕಡೆ ಸುಗಮ ಸಂಗೀತ ಕಾರ್ಯಕ್ರಮಗಳು. ೨೦೦೨ರ ಡೆಟ್ರಾಯಟ್ ವಿಶ್ವ ಕನ್ನಡ ಸಮ್ಮೇಳನ, ೨೦೦೬ರ ದುಬೈ, ಬಹೆರೆನ್, ಕುವೈತ್, ಅಬುದಾಬಿಗಳಲ್ಲಿ ಕಾರ್ಯಕ್ರಮಗಳು. ಹಲವಾರು ಸಂಘ ಸಂಸ್ಥೆಗಳ ಒಡನಾಟ. ಯುವರಂಗ ಸ್ಥಾಪಕ ಅಧ್ಯಕ್ಷರಾಗಿ, ‘ಧ್ವನಿ’ ಸುಗಮ ಸಂಗೀತದ ವ್ಯವಸ್ಥಾಪಕ ಟ್ರಸ್ಟಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ. ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಲು ಅಂಚೆ ಮೂಲಕ ಕನ್ನಡ, ದೂರದರ್ಶನ, ಆಕಾಶವಾಣಿ ಮೂಲಕ ಕನ್ನಡ, ಸಂಘ ಸಂಸ್ಥೆಗಳಲ್ಲಿ, ಉದ್ದಿಮೆಗಳಲ್ಲಿ ಕನ್ನಡ ಕಲಿಕೆಯ ಶಿಬಿರದ ಕಾರ್ಯಕ್ರಮಗಳು. ಪ್ರತಿಷ್ಠಿತ ’ಕನ್ನಡ ಭವನ’ದ ರೂವಾರಿ. ದಸರಾ ರಾಜ್ಯಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪುರಸ್ಕಾರ, ಸರ್‌.ಎಂ.ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಕಲಾಶ್ರೀ ಪ್ರಶಸ್ತಿ, ಎಸ್.ಕೆ. ಕರೀಂ ಖಾನ್‌ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಿ. ಕಾಳಿಂಗರಾವ್ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು:  ನಂದ್ಯಾಲ ಎಸ್.ರಾಮಮೂರ್ತಿ – ೧೯೪೭ ಅಶ್ವತ್ಥ್ ನಾರಾಯಣರಾವ್.ಎನ್. – ೧೯೪೬ ಅಪ್ಪಾಜಪ್ಪ.ಕೆ.ಎಸ್.- ೧೯೫೪ ಮಾಲತಿ ಮೇಲ್ಮನೆ – ೧೯೬೧

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top