೦೩.೦೧.೧೮೯೨ ೨೪.೧೦.೧೯೯೭ ಸಂಸ್ಕೃತ, ಕನ್ನಡ, ಇಂಗ್ಲೀಷ್, ಉರ್ದು, ಮರಾಠಿ ಪಂಚಭಾಷಾ ವಿದ್ವಾಂಸರು. ಕರ್ನಾಟಕ ಏಕೀಕರಣಕ್ಕಾಗಿ ಕನ್ನಡ ನಾಡಿನಲ್ಲೆಲ್ಲಾ ಸಂಚರಿಸಿ ‘ಏಕೀಕರಣಶಾಸ್ತ್ರಿ’ ಎಂದೇ ಪ್ರಸಿದ್ಧರಾಗಿದ್ದ ಚಂದ್ರಶೇಖರ ಶಾಸ್ತ್ರಿಗಳು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಹೊಳಲು ಎಂಬ ಗ್ರಾಮದಲ್ಲಿ ಜನವರಿ ೩ರ ೧೮೯೨ರಲ್ಲಿ. ತಂದೆ ಪಟ್ಟದಯ್ಯ, ತಾಯಿ ಬಸಮ್ಮ. ಮೂರನೆಯ ತರಗತಿಯವರೆಗೂ ತಾಯಿಯ ಊರಾದ ಮಾಗಳದಲ್ಲಿ. ಆಗಲೇ ಅಮರಕೋಶ, ನಿಜಲಿಂಗಶತಕ, ಸೋಮೇಶ್ವರ ಶತಕಗಳು ಕಂಠಪಾಠವಾಗಿದ್ದವು. ಇಂಗ್ಲೀಷ್ ಒಂದನೆಯ ತರಗತಿ ಓದಲು ಬಂದದ್ದು ಹೊಳಲುಗೆ. ಅಲ್ಲಿ ಒಮ್ಮೆ ಪಕ್ಕದ ವಿದ್ಯಾರ್ಥಿಯೊಬ್ಬ ಗಣಿತದಲ್ಲಿ ತಪ್ಪು ಮಾಡಿದ್ದು ನೋಡಿ ತಿದ್ದಲು ಹೋದಾಗ ಮಾಸ್ತರಿಗೇ ಕೋಪಬಂದು ಹೊರಗೆ ಕಳುಹಿಸಿದರು. ಅಲ್ಲಿಂದಪುನಃ ಮಾಗಳದ ಪಾಠಶಾಲೆ ಕಡೆಗೆ. ಬ್ಯಾಡಗಿಯ ಸಂಸ್ಕೃತ ಶಾಲೆಗೆ ಸೇರಲು ಹಿತೈಷಿಯೊಬ್ಬರು ಸೂಚಿಸಿದಾಗ ಅಲ್ಲಿಗೆ ನಡೆದರು. ಬ್ಯಾಡಗಿಯಲ್ಲಿ ಪ್ಲೇಗ್ ಕಾಣಿಸಿಕೊಂಡಾಗ ಅಲ್ಲಿಂದ ಹೊರಟು ಮರುವರ್ಷ ಶಿರಹಟ್ಟಿ ಫಕೀರಸ್ವಾಮಿಗಳ ಮಠದಲ್ಲಿ ಜ್ಯೋತಿಷ್ಯ ಶಾಲೆಗೆ ಸೇರಿದರಾದರೂ ಅದೂ ಹಿಡಿಸದೆ ಹುಕ್ಕೇರಿ ಮಠದ ಸಂಸ್ಕೃತ ಶಾಲೆಗೆ ಸೇರಿದರು. ಮುಂದೆ ಗದುಗಿನ ಮಠದಲ್ಲಿ ಸಂಸ್ಕೃತ ಅಧ್ಯಯನವನ್ನು ಮುಂದುವರೆಸಿ, ಸಂಸ್ಕೃತದ ಮೇಲಿನ ಆಸಕ್ತಿಯಿಂದ ೧೯೧೭ ರಲ್ಲಿ ವಾರಣಾಸಿಗೆ ಹೋಗಿ ಜಂಗಮವಾಡಿ ಮಠದಲ್ಲಿ ಅಧ್ಯಯನಕ್ಕೆ ತೊಡಗಿದರು. ಆರು ವರ್ಷಕಾಲ ಅಧ್ಯಯನ ನಡೆಸಿ ವ್ಯಾಕರಣತೀರ್ಥ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ‘ವ್ಯಾಕರಣತೀರ್ಥ’ ಚಂದ್ರಶೇಖರ ಶಾಸ್ತ್ರಿಗಳು ಎನಿಸಿಕೊಂಡರು. ಈ ಸಂದರ್ಭದಲ್ಲಿ ವಾರಣಾಸಿಯ ಸುತ್ತಮುತ್ತ ನಡೆಯುತ್ತಿದ್ದ ಸ್ವಾತಂತ್ಯ್ರ ಹೋರಾಟ, ಧುರೀಣರ ಭಾಷಣಗಳನ್ನು ಕೇಳಿ ದೇಶ ಪ್ರೇಮ ಜಾಗೃತಗೊಂಡಿತು. ಬೆಳೆದ ದೇಶಪ್ರೇಮದಿಂದ ಕನ್ನಡನಾಡಿಗೆ ಏನಾದರೂ ಮಾಡಬೇಕೆಂದು ೧೯೨೪ ರಲ್ಲಿ ಕರ್ನಾಟಕಕ್ಕೆ ಹಿಂದಿರುಗಿ, ಕರ್ನಾಟಕ ಏಕೀಕರಣಕ್ಕಾಗಿ ಇಡೀ ರಾಜ್ಯದಲ್ಲಿ ಸಂಚರಿಸಿ ಲೇಖನಗಳನ್ನು ಬರೆಯುತ್ತಾ, ಸಭೆ ಸಮಾರಂಭಗಳನ್ನು ಸಂಘಟಿಸುತ್ತಾ, ಉಪನ್ಯಾಸಗಳನ್ನು ನೀಡುತ್ತಾ ಕನ್ನಡಿಗರನ್ನು ಎಚ್ಚರಿಸುವ ಕೈಂಕರ್ಯದಲ್ಲಿ ತೊಡಗಿದರು. ಯಾದಗಿರಿಯಲ್ಲಿ ೧೯೨೪ ರಲ್ಲಿ ‘ಚಂದ್ರಶೇಖರ ಗ್ರಂಥಮಾಲೆ’ ಪ್ರಾರಂಭಿಸಿ ಕೆಲವರ್ಷ ನಡೆಸಿದರು. ಇದೇ ವರ್ಷ ಯಾದಗಿರಿಯಲ್ಲಿ ‘ಶಂಕರ ಸಂಸ್ಕೃತ ಕಾಲೇಜು’ ಪ್ರಾರಂಭವಾಗಲು ಕಾರಣರಾದರು. ಇದೇ ಕಾಲೇಜಿನ ಪ್ರಾಂಶುಪಾಲರಾಗಿದ್ದಾಗ, ವಿದ್ಯಾಥಿಗಳು ಸಂಸ್ಕೃತ ತೀರ್ಥ ಪರೀಕ್ಷೆಗೆ ದೂರದ ವಾರಣಾಸಿಗೆ ಹೋಗುವುದನ್ನು ಬಹು ಶ್ರಮದಿಂದ ತಪ್ಪಿಸಿ, ಯಾದಗಿರಿಯಲ್ಲೇ ಕೇಂದ್ರವನ್ನು ತೆರೆಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗುವಂತೆ ಮಾಡಿದರು. ೧೯೩೧ರಲ್ಲಿ ಹುಬ್ಬಳ್ಳಿಯಲ್ಲಿ ಗಂಗಾಧರ ಸಂಸ್ಕೃತ ಕಾಲೇಜು ಪ್ರಾರಂಭಿಸಿ ಕಾಲೇಜಿನ ಪ್ರಾಂಶುಪಾಲರ ಜವಾಬ್ದಾರಿ ಹೊತ್ತು ಮೂರು ಸಾವಿರ ಮಠದಲ್ಲಿ ಗ್ರಂಥಮಾಲೆ ಆರಂಭಿಸಿ ಅದರ ಮುಖ್ಯ ಸಂಚಾಲಕರಾಗಿ ಅನೇಕ ಗ್ರಂಥಗಳನ್ನು ಪರಿಶೋಧಿಸಿ ಪ್ರಕಟಿಸಿದರು. ತಾವು ಗಳಿಸಿದ ವಿದ್ವತ್ನಿಂದ ಹಲವಾರು ಗ್ರಂಥಗಳನ್ನು ರಚಿಸಿ ಪ್ರಕಟಿಸಿದರು. ಮೃತ್ಯುಂಜಯ ಶಿವಯೋಗಿಗಳ ಚರಿತ್ರೆ, ಪಂಡಿತ ಮದನಮೋಹನ ಮಾಳವೀಯ, ಧರ್ಮವೀರ ಸಜ್ಜನಶೆಟ್ಟಿ, ಶಂಕ್ರಣ್ಣನ ನಾಟಕ ಚರಿತೆ, ಕೊಲ್ಲಿಪಾಕಿ, ಚಾಣಕ್ಯನೀತಿ ದರ್ಪಣ, ರಾಜಗಿರಿ, ಶಬರ ಶಂಕರ ಪಾರ್ಥ ಪೌರುಷ, ಬಸವತತ್ತ್ವ ರತ್ನಾಕರ, ಲಿಂಗಧಾರಣೋವೇದ ಮಂತ್ರಗಳು, ಕಾಡುಸಿದ್ದೇಶ್ವರ ವಚನ, ಸ್ವತಂತ್ರ ಸಿದ್ದೇಶ್ವರ ವಚನ, ಭಗವಾನ್ ಬಸವೇಶ್ವರ ಮುಂತಾದ ೧೩ ಕೃತಿಗಳನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿದ್ದ ಶಾಸ್ತ್ರಿಗಳು ಹದಿನೈದು ವರ್ಷಗಳ ಕಾಳ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ೨೫ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆನಡೆದು, ಕಣದಲ್ಲಿ ಹರ್ಡೇಕರ್ ಮಂಜಪ್ಪ, ಆರ್. ಕಲ್ಯಾಣಮ್ಮ, ಎ.ಆರ್. ಕೃಷ್ಣಶಾಸ್ತ್ರಿ, ಪಂಡಿತ ತಾರಾನಾಥ್ರವರುಗಳಿಗಿಂತ ಹೆಚ್ಚು ಮತ ಪಡೆದ ಶಾಸ್ತ್ರಿಗಳು ೧೯೪೦ ರಲ್ಲಿ ಧಾರವಾಡದಲ್ಲಿ ನಡೆದ ಸಮ್ಮೇಳಾನಾಧ್ಯಕ್ಷತೆಯನ್ನು ವಹಿಸಿದ್ದರು. ನಿಜಾಂ ಪ್ರಾಂತ್ಯದ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ (೧೯೪೨) ಆಯ್ಕೆಗೊಂಡಿದ್ದರು. ಹಂಪಿಯಲ್ಲಿ ನಡೆದ ವಿಜಯನಗರ ಸಾಮ್ರಾಜ್ಯದ ಆರನೆಯ ಶತಮಾನೋತ್ಸವ ಸಮಾರಂಭದ ಸಮಿತಿಯ ಕಾರ್ಯದರ್ಶಿಯಾಗಿಯೂ ದುಡಿದರು. ಬಸವಣ್ಣನವರನ್ನು ಕುರಿತು ಸಂಶೋಧಿಸಿದ ‘ಬಸವತತ್ತ್ವರತ್ನಾಕರ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೬೮) ಸಂದಿದೆ. ೧೯೮೩ ರಲ್ಲಿ ರಾಜ್ಯ ಸರಕಾರದ ಪ್ರಶಸ್ತಿಯೂ ದೊರೆತಿದೆ. ಕನ್ನಡ ಸಾಹಿತ್ಯ ಪರಿಷತ್ತು ೧೯೯೩ ರಲ್ಲಿ ಗೌರವ ಸದಸ್ಯತ್ವ ನೀಡಿ ಗೌರವಿಸಿದೆ. ೧೯೯೭ ರಲ್ಲಿ ಚಿದಾನಂದ ಪ್ರಶಸ್ತಿ ಗೌರವವೂ ದೊರೆಯಿತು. ಆದರೆ ಅದೇ ವರ್ಷ ಹಂಪಿ ಕನ್ನಡ ವಿಶ್ವವಿದ್ಯಾಲಯವು ಮರಣೋತ್ತರವಾಗಿ ‘ನಾಡೋಜ’ ಪ್ರಶಸ್ತಿಯನ್ನು ಪ್ರಕಟಿಸಿತು. ಶಾಸ್ತ್ರಿಗಳಿಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ‘ಚಂದ್ರಚೇತನ’ (ಸಂಘರ್ಷ ಪ್ರಕಾಶನ, ಹಡಗಲಿ) ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನೂರು ಐದು ವರ್ಷಗಳು ತುಂಬು ಜೀವನ ನಡೆಸಿ, ಕನ್ನಡದ ಏಳ್ಗೆಗಾಗಿ ಹಗಲಿರುಳೂ ದುಡಿದು, ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನಗಳಲ್ಲೆಲ್ಲಾ ಭಾಗವಹಿಸಿ, ಕರ್ನಾಟಕ ಏಕೀಕರಣ ಚಳುವಳಿಯಿಂದ ಗೋಕಾಕ್ ಚಳುವಳಿಯವರೆಗೂ ಭಾಗವಹಿಸಿದ ಶಾಸ್ತ್ರಿಗಳು ತೀರಿಕೊಂಡದ್ದು ೧೯೯೭ ಅಕ್ಟೋಬರ್ ೨೪ ರಂದು.

