ವ್ಯಾಸರಾಯ ಬಲ್ಲಾಳ

Home/Birthday/ವ್ಯಾಸರಾಯ ಬಲ್ಲಾಳ
Loading Events

೧-೧೨-೧೯೨೩ ೩೦-೧-೨೦೦೮ ನವೋದಯ, ಪ್ರಗತಿಶೀಲ, ನವ್ಯ ಹೀಗೆ ಸಾಹಿತ್ಯದ ಎಲ್ಲ ಮಜಲುಗಳಲ್ಲೂ ಹಾದು ಮಧ್ಯಮ ವರ್ಗದ ಬದುಕಿನ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಕಾದಂಬರಿಯ ಮೂಲಕ ನಿರೂಪಿಸಿರುವ ವ್ಯಾಸರಾಯ ಬಲ್ಲಾಳರು ಹುಟ್ಟಿದ್ದು ಉಡುಪಿಯಲ್ಲಿ. ತಂದೆ ರಾಮದಾಸ, ತಾಯಿ ಕಲ್ಯಾಣಿ. ಪ್ರಾರಂಭಿಕ ಶಿಕ್ಷಣ ಉಡುಪಿ. ಉದ್ಯೋಗಕ್ಕಾಗಿ ಸೇರಿದ್ದು ಮುಂಬಯಿ ಮಹಾನಗರ. ವಿದೇಶಿ ತೈಲ ಕಂಪನಿ ಒಂದರಲ್ಲಿ ಶೀಘ್ರಲಿಪಿಕಾರರಾಗಿ ಸೇರಿ, ಹಲವಾರು ಹುದ್ದೆಗಳನ್ನಲಂಕರಿಸಿ ಅಕಾರಿಯಾಗಿ ನಿವೃತ್ತಿ. ವೇಗದ ಮುಂಬಯಿಯ ಜೀವನದ ನಡುವೆಯೂ ಸಾಹಿತ್ಯಾಸಕ್ತಿಯನ್ನು ಕಾಯ್ದುಕೊಂಡು ರಚಿಸಿದ್ದು ಹಲವಾರು ಕೃತಿಗಳು. ಬದುಕಿನ ಎಲ್ಲ ರೀತಿಯ ನಡವಳಿಕೆಗಳನ್ನು ಮುಂಬಯಿಯಲ್ಲಿ ಅನುಭವಿಸಿ ಬರೆದದ್ದು ವಿಶಿಷ್ಟ ಕೃತಿಗಳು. ಸುಮಾರು ಐದು ದಶಕಗಳಿಗಿಂತಲೂ ಮಿಕ್ಕು ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡವರು. ಪ್ರಥಮ ಕಥಾ ಸಂಕಲನ ‘ಬದುಕಿನ ಆದರ್ಶ’ ೧೯೫೦ರಲ್ಲಿ ಪ್ರಕಟಿತ. ನಂತರ ಹಲವಾರು ಕಥಾಸಂಕಲನಗಳು. ಕಾಡುಮಲ್ಲಿಗೆ, ಸಂಪಿಗೆ ಹೂ, ತ್ರಿಕಾಲ, ಮಂಜರಿ, ಆಯ್ದಕತೆಗಳು ಮೊದಲಾದುವು. ಕಾದಂಬರಿಗಳು-ಅನುರಕ್ತೆ, ಹೇಮಂತಗಾನ, ವಾತ್ಸಲ್ಯಪಥ, ಉತ್ತರಾಯಣ, ಬಂಡಾಯ, ಆಕಾಶಕೊಂದು ಕಂದೀಲು, ಹೆಜ್ಜೆ, ಹೆಜ್ಜೆಗುರುತು, ಮುಂತಾದುವು. ವಿಚಾರ ಸಾಹಿತ್ಯ-ಕಟ್ಟುವೆವು ನಾವು, ಸ್ವಾತಂತ್ರ್ಯಕ್ಕೆ ಐವತ್ತು ವರ್ಷ. ಕಲಾ ಪರಿಚಯ- ಹೆಬ್ಬಾರರ ರೇಖಾಲಾವಣ್ಯ. ಪ್ರವಾಸಕಥನ-ನಾನೊಬ್ಬ ಭಾರತೀಯ ಪ್ರವಾಸಿ. ನಾಟಕ ರೂಪಾಂತರ- ಮುಳ್ಳೆಲ್ಲಿದೆ ಮಂದಾರ, ಗಿಳಿಯು ಪಂಜರದೊಳಿಲ್ಲ. ಅನುಭವಕಥನ-ಮುಂಬಯಿಯ ದಿನಗಳು. ವ್ಯಕ್ತಿಚಿತ್ರ-ಖುರ್ಷಿದ್ ನಾರಿಮನ್. ವಿಡಂಬನೆ-ಸಂಗ್ರಹ ಭಾರತಾಯಣ. ಸಂದ ಪ್ರಶಸ್ತಿಗಳು ಹಲವಾರು-ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬಂಡಾಯ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪ್ರವಾಸ ಕಥನಕ್ಕೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಮಹಾರಾಷ್ಟ್ರ ಸರಕಾರದ ಗೌರವ ಪ್ರಶಸ್ತಿ, ಬಿ.ಎಂ.ಶ್ರೀ. ಸ್ಮಾರಕ ಪ್ರಶಸ್ತಿ, ಉಡುಪಿ ಪರ‍್ಯಾಯದ ಗದ್ಯಭಾಸ್ಕರ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅ.ನ.ಕೃ ಪ್ರತಿಷ್ಠಾನ ಪ್ರಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಕಾರ್ಕಳ ಜಿಲ್ಲಾ ಸಾಹಿತ್ಯ ಸಮ್ಮೇಳನ ಮತ್ತು ಮದರಾಸು ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಕೆ.ಟಿ. ಪಾಂಡುರಂಗಿ – ೧೯೧೮ ಸುನಂದಾ ತುಂಕೂರು – ೧೯೪೨ ತುಳಸೀಪ್ರಿಯ – ೧೯೫೫ ಲೋಕಾಪುರ. ಐ.ಎ. – ೧೯೫೭

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top