೦೭-೦೩-೧೯೦೫ ೩೧-೦೫-೧೯೭೧ ಕಲಬುರ್ಗಿಯ ಕಲಾವಿಕಾಸದ ಸಂಕೇತ, ಕಲಾ ತಪಸ್ವಿ ಶಂಕರರಾವ್ ಆಳಂದಕರ ರವರು ಹುಟ್ಟಿದ್ದು ಕಲಬುರ್ಗಿ. ಸರಾಫ ವೃತ್ತಿಯ ನಾರಾಯಣ ನಾಯಕರು ತಂದೆ, ತಾಯಿ ಚಂದೂಬಾಯಿ. ಮಗ ಕಲಿತು ತನ್ನ ವೃತ್ತಿ ಮುಂದುವರೆಸಿದರೆ ಸಾಕೆಂದು ಬಯಸಿದ ತಂದೆ. ಆದರೆ ಗುರುಗಳಾದ ಬಿ.ಜಿ. ಸಾಠೆಯವರು ಶಂಕರರಾವ್ ರವರ ಅಚ್ಚುಕಟ್ಟು ಆಕೃತಿ ರಚನೆ ನೋಡಿ ಡ್ರಾಯಿಂಗ್ ಅಭ್ಯಾಸ ಮಾಡಿಸಿದ್ದು ಜೋಶಿಯವರಲ್ಲಿ. ಮನೆಯವರ ವಿರೋಧದ ನಡುವೆಯೂ ಸೇರಿದ್ದು ಮುಂಬಯಿಯ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್. ಆದರೆ ಆರ್ಥಿಕ ತೊಂದರೆಯಿಂದ ಡ್ರಾಯಿಂಗ್ ಶಿಕ್ಷಕರಾಗಿ ದುಡಿಯುತ್ತಾ ಚಿತ್ರಕಲೆಯಲ್ಲಿ ಹೈಯರ್ ಡಿಪ್ಲೊಮ ಗಳಿಸಲಾರದೆ ಹಿಂದಿರುಗಿದ್ದು ಕಲಬುರ್ಗಿಗೆ. ಉದ್ಯೋಗಕ್ಕಾಗಿ ಸೇರಿದ್ದು ನೂತನ ವಿದ್ಯಾಶಾಲೆಯಲ್ಲಿ ಮಾಸ್ತರರಾಗಿ. ಜೊತೆಗೆ ರಂಗಭೂಮಿ ಪೋಸ್ಟರ್ ಬರೆಯುವ ಉಪವೃತ್ತಿ. ಹಗಲು ರಾತ್ರಿ ದುಡಿಮೆ. ಹದಗೆಟ್ಟ ಆರೋಗ್ಯ. ಆ ಸ್ಥಿತಿಯಲ್ಲಿ ಕುಂಚವನ್ನು ಬಿಡದೆ ಮಾಡಿದ ಕಲಾಸೇವೆ. ಸದಾ ಪ್ರಯೋಗಶೀಲ ಮನಸ್ಸು. ಬೇಂದ್ರೆಯವರ ಕವಿತೆಗಳು, ಬಸವಣ್ಣನವರ ವಚನಗಳನ್ನು ವಿವರಣೆ ಪಡೆದು ಅರ್ಥೈಸಿಕೊಳ್ಳುವಿಕೆ. ಠಾಗೋರರ ಗೀತಾಂಜಲಿ ಕೃತಿಯ ಆಮೂಲಾಗ್ರ ಅಧ್ಯಯನ. ಬಿಡಿಸಿದ ಚಿತ್ರಸಂಪುಟ Gurudev in my vision (ನನ್ನ ದೃಷ್ಟಿಯಲ್ಲಿ ಗುರುದೇವ) ಭಗವದ್ಗೀತೆಯನ್ನು ಇಡಿಯಾಗಿ ಚಿತ್ರರೂಪದಲ್ಲಿ ಬಿಡಿಸಿದ ಖ್ಯಾತಿ. ಶ್ರೀ ಅರವಿಂದ, ಲೋಕಮಾನ್ಯ ತಿಲಕ್, ವಿನೋಬ ರವರ ಭಗವದ್ಗೀತೆಯ ಪಠಣ. ಕನ್ನಡ, ಮರಾಠಿ, ಸಂಸ್ಕೃತ, ಇಂಗ್ಲಿಷ್, ಉರ್ದು ಭಾಷೆಗಳ ಸಂಪರ್ಕ. ಕೆಲಕಾಲ ನಿಜಾಂ ಆಳ್ವಿಕೆಯ ಹೈದರಾಬಾದ್ ಸರಕಾರದ ವಾರ್ತಾ ಇಲಾಖೆಯಲ್ಲಿ ಆರ್ಟಿಸ್ಟ್ ಹುದ್ದೆ. ಪಠ್ಯ ಪುಸ್ತಕಗಳಿಗೆ ರಚಿಸಿದ ರೇಖಾಚಿತ್ರಗಳು. ಹೈದರಾಬಾದ್ ವಿಧಾನ ಸಭೆಗಾಗಿ ನೆಹರುರವರ ಪೂರ್ಣ ತೈಲಚಿತ್ರ, ನೆಹರು ಚಿತ್ರಸಂಪುಟ ರಚನೆ. Mahatmaji’s Fourteen Principles, ನಿಜಾಮರ ಪೂರ್ವಜರ ಚಿತ್ರಮಾಲಿಕೆ, Glorious of Jha ಚಿತ್ರ ಸಂಪುಟಗಳ ರಚನೆ. ಬೆಟಗೇರಿ ಕೃಷ್ಣಶರ್ಮ, ವಿ.ಸೀ. ಬೇಂದ್ರೆ, ಇಂಗ್ಲೆಂಡಿನ ಸರ್ವೋದಯ ನಾಯಕ ಡೊನಾಲ್ಡ್ ಗ್ರೂಂ, ಪುಣೆಯ ಪಟವರ್ಧನೆ ಮುಂತಾದವರೆಲ್ಲರ ಮಿತ್ರ. ೧೯೬೬ರಲ್ಲಿ ಕರ್ನಾಟಕದ ರಾಜ್ಯ ಪ್ರಶಸ್ತಿ ಪುರಸ್ಕೃತರು. ಇದೇ ದಿನ ಹುಟ್ಟಿದ ಕಲಾವಿದರು : ಶಿಶುನಾಳ ಶರೀಫ್ – ೧೮೧೯ ಎ.ವಿ. ವೆಂಕಟಕೃಷ್ಣ – ೧೯೨೬ ಪಾರ್ವತಿ ಸುತ – ೧೯೩೮ ಎಂ.ಆರ್. ಸತ್ಯನಾರಾಯಣರಾವ್ – ೧೯೪೬ ಕೆ.ವಿ. ನಾಗರಾಜಮೂರ್ತಿ – ೧೯೫೭
* * *