ಶಂಶ ಐತಾಳ (ಹಾರ್ಯಾಡಿ ಗಣೇಶ ಐತಾಳ)

Home/Birthday/ಶಂಶ ಐತಾಳ (ಹಾರ್ಯಾಡಿ ಗಣೇಶ ಐತಾಳ)
Loading Events
This event has passed.

೧೮.೦೬.೧೯೪೨ ಕತೆ, ಹಾಸ್ಯಲೇಖನಗಳ ಪ್ರಖ್ಯಾತ ಬರಹಗಾರರಾದ ಶಂಶ ಐತಾಳರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾರ್ಯಾಡಿಯಲ್ಲಿ ೧೯೪೨ರ ಜೂನ್ ೧೮ ರಂದು. ತಂದೆ ಶಂಕರ ನಾರಾಯಣ ಐತಾಳ, ತಾಯಿ ನಾಗವೇಣಿ. ಪ್ರಾರಂಭಿಕ ಶಿಕ್ಷಣ ದ. ಕ. ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬಸ್ರೂರು ಗುಡ್ಡೆ ಶಾಲೆಯಲ್ಲಿ. ಹೈಸ್ಕೂಲು ವಿದ್ಯಾಭ್ಯಾಸ ಬಸ್ರೂರು ತಾಲ್ಲೂಕು ಬೋರ್ಡ್ ಹೈಸ್ಕೂಲು. ನಂತರ ಓದಿದ್ದೆಲ್ಲ ಖಾಸಗಿಯಾಗಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ  ಬಿ.ಎಡ್ ಪದವಿ ಹಾಗೂ ಭಾಷಾಂತರ ವಿಷಯದಲ್ಲಿ ಪಡೆದ ಎಂ.ಫಿಲ್ ಪದವಿಗಳು. ಉದ್ಯೋಗಕ್ಕಾಗಿ ಸೇರಿದ್ದು ಬಸ್ರೂರಿನ ಹೈಸ್ಕೂಲಿನಲ್ಲಿ ಗುಮಾಸ್ತರಾಗಿ ನಂತರ ಶಿಕ್ಷಕ ವೃತ್ತಿಯನ್ನು ಆರಿಸಿಕೊಂಡು ಉಡುಪಿಯ ಕುಂಜಿ ಬೆಟ್ಟು ಕಮಲಾಬಾಯಿ ಪ್ರೌಢಶಾಲೆಯಲ್ಲಿ, ಮೈಸೂರು ಡೆಮಾಸ್ಟ್ರೇಷನ್ ಶಾಲೆಯಲ್ಲಿ ಅಧ್ಯಾಪಕರಾಗಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಹಾಯಕ ಭಾಷಾಂತರಕಾರರಾಗಿ ಕಾರ‍್ಯ ನಿರ್ವಹಿಸಿ ನಿವೃತ್ತಿ. ಸ್ಕೂಲು ಕಾಲೇಜಿನಲ್ಲಿದ್ದಾಗಲೇ ಓದಿನ ಹವ್ಯಾಸದಿಂದ ಓದಿದ್ದು ಶಿವರಾಮ ಕಾರಂತ, ಕುವೆಂಪು, ಅನಕೃ, ತರಾಸು ಮುಂತಾದವರುಗಳ ಕಾದಂಬರಿಗಳು. ಬರವಣಿಗೆಯಲ್ಲಿಯೂ ತೊಡಗಿಸಿಕೊಂಡು ಬರೆದ ಹಲವಾರು ಮಕ್ಕಳ ಕವಿತೆಗಳು ಹಾಗೂ ಕತೆಗಳು. ಹೀಗೆ ಪ್ರಾರಂಭವಾದ ಬರವಣಿಗೆಯ ಹವ್ಯಾಸದಿಂದ ಕತೆ, ಕವನ, ಹಾಸ್ಯ ಲೇಖನ, ವಿಮರ್ಶಾ ಲೇಖನ, ನಗೆ ಚುಟಕಗಳು, ಮುಂತಾದ ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದು, ಅಂದಿನ ಪ್ರಮುಖ ಪತ್ರಿಕೆಗಳಾದ ಗೋಕುಲ, ಕ್ಯೆಲಾಸ, ನವಭಾರತ, ನವಯುಗ, ಯುಗ ಪುರುಷ, ನಗುವ ನಂದ, ಮುಂತಾದವುಗಳಲ್ಲದೆ ಇಂದಿನ ಪತ್ರಿಕೆಗಳಾದ ತರಂಗ, ಸುಧಾ, ಕಸ್ತೂರಿ, ಮಂಗಳ, ಕರ್ಮವೀರ, ವಿನೋದ, ಅಪರಂಜಿ, ಮೊದಲಾದ ಪತ್ರಿಕೆಗಳಿಗೆ ಇಂದೂ ಕೂಡ ಕ್ರಿಯಾಶೀಲರಾಗಿ ಬರೆಯುತ್ತಿರುವವರಲ್ಲಿ ಪ್ರಮುಖರು. ಕೆಲವು ಕತೆಗಳು ತಮಿಳು, ತೆಲುಗು,ಮಲಯಾಳಂ, ಭಾಷೆಗೂ ಅನುವಾದಗೊಂಡಿವೆ. ಹಲವಾರು ಕತೆಗಳು ತರಂಗ, ಉತ್ಥಾನ, ಕರ್ನಾಟಕ ಮಲ್ಲ (ಮುಂಬಯಿ) ಮುಂತಾದ ಪತ್ರಿಕೆಗಳ ಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ. ಬರೆದ ಮೊದಲ ಕಾದಂಬರಿ ‘ಅನಿರೀಕ್ಷಿತ’ ವು ೧೯೭೨ ರಲ್ಲಿ ಪ್ರಕಟವಾಯಿತು. ೧೯೭೩ ರಲ್ಲಿ ಬರೆದ ಅಸ್ವಸ್ಥ ಮತ್ತು ಅತಂತ್ರ ಕಾದಂಬರಿಯನ್ನು ಪ್ರತಿಷ್ಠಿತ ಮನೋಹರ ಗ್ರಂಥ ಮಾಲೆಯು ಪ್ರಕಟಿಸಿದೆ. ಇತರರೊಡನೆ ಸೇರಿ ಸಂಪಾದಿಸಿದ ಕವನ ಸಂಕಲನಗಳು ‘ನವದಿಗಂತ’ ಹಾಗೂ ;ಸಂವಹನ’. ನಂತರ ಬರೆದ ‘ಆವರಣ-ಅನಾವರಣ’ ಕಾದಂಬರಿಯು ತರಂಗ ಹುಟ್ಟು ಹಬ್ಬದ ವಿಶೇಷಾಂಕ (೧೯೯೨) ರಲ್ಲಿ ಪ್ರಕಟಗೊಂಡಿದ್ದರೆ  ‘ಅಂಬಲಿ ಹಳ್ಳಿ’ ಕಾದಂಬರಿಯ ಕೆಲ ಅಧ್ಯಾಯಗಳು ಬೇರೆ ಬೇರೆ ಪ್ರತಿಕೆಗಳಲ್ಲಿ ಪ್ರಕಟವಾಗಿವೆ. ಮಕ್ಕಳಿಗಾಗಿ ಹಲವಾರು ಪುಸ್ತಕಗಳನ್ನು ರಚಿಸಿದ್ದು ರಾಷ್ಟ್ರೋತ್ಥಾನ ಸಾಹಿತ್ಯದ ಭಾರತ-ಭಾರತಿ ಪುಸ್ತಕ ಮಾಲೆಯಿಂದ ‘ರಮಣ ಮಹರ್ಷಿ’ ಮತ್ತು ಐ.ಬಿ.ಎಚ್. ಪ್ರಕಾಶನದಿಂದ ‘ಕೃಷ್ಣರಾಜ ಸಾಗರ’ ಮತ್ತು ‘ಪ್ರವಾಸಿಗಳು ಕಂಡ ಕನ್ನಡಿಗರ ಜನ ಜೀವನ’ ಅಲ್ಲದೆ ‘ಸಂಚಾರ ಸಂಕೇತಗಳು’ ಸುಭಾಷಿತಗಳು’ ಮೊದಲಾದ ಪುಸ್ತಕಗಳನ್ನು ಮಕ್ಕಳಿಗಾಗಿ ರಚಿಸಿದ್ದಾರೆ. ಹಲವಾರು ಹರಟೆ, ಲಲಿತ ಪ್ರಬಂಧಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ೧೯೯೭ ರಲ್ಲಿ ‘ಕವಿಮಂಡೆ’ ಎಂಬ ಸಂಕಲನವೂ ಪ್ರಕಟವಾಗಿದೆ. ಇದಲ್ಲದೆ ಹಲವಾರು ಕೃತಿಗಳನ್ನು ಇಂಗ್ಲಿಷಿನಿಂದ ಅನುವಾದಿಸಿದ್ದು ಅವುಗಳಲ್ಲಿ ‘ಅತ್ಯಂತ ಕೆಳವರ್ಗದ ಮನುಷ್ಯ’ (ನಾಟಕ), ಬಸವಣ್ಣನವರು, ಸುಭಾಷ್ ಚಂದ್ರ ಬೋಸ್, ಸಿ. ವಿ. ರಾಮನ್,  ಇಂದಿರಾಗಾಂಧಿ, ಮುಂತಾದವರುಗಳ ಜೀವನ ಚರಿತ್ರೆಗಳಲ್ಲದೆ ಸ್ವಾಮಿ ಪರಮಾತ್ಮಾನಂದ ಪುರಿಯವರ ‘ಮುಕ್ತಿ ಪಥದಲ್ಲಿ’ (ಭಾರತದ ಪ್ರವಾಸ ಕಥನ), ಸ್ವಾಮಿ ನಿರ್ಮಲಾನಂದರ ‘ಜೀವನ ಕಲೆ ಮತ್ತು ಧರ್ಮ’  ಪ್ರಮುಖವಾದವುಗಳು. ರಮಣ ಮಹರ್ಷಿಗಳ ಪುಸ್ತಕವು ಇಂಗ್ಲಿಷ್, ಹಿಂದಿ, ಮರಾಠಿ, ಭಾಷೆಗೂ ಅನುವಾದಗೊಂಡಿವೆ. ಬಿಳಿಗಿರಿರಂಗನ ಬೆಟ್ಟದ (ಬಿ.ಆರ್ ಹಿಲ್ಸ್), ವಿಶ್ವಶಾಂತಿ ನಿಕೇತನದ ಸ್ವಾಮಿ ನಿರ್ಮಲಾನಂದರ ಜೀವನ ಚರಿತ್ರೆಯನ್ನು ಬರೆದಿರುವುದಲ್ಲದೆ  ಅವರ ಅನೇಕ ಲೇಖನಗಳು ಹಾಗೂ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಧ್ಯಾತ್ಮದ ಬಗ್ಗೆ ಬೆಳೆದ ಒಲವಿನಿಂದ ಲಲಿತಾ ಸಹಸ್ರನಾಮ ವ್ಯಾಖ್ಯಾನ ಕೃತಿಯನ್ನು ರಚಿಸಿದ್ದು, ಈವರೆಗೆ ಬಂದಿರುವ ವ್ಯಾಖ್ಯಾನಗಳಲ್ಲೆಲ್ಲಾ ಉತ್ಕೃಷ್ಟ ಕೃತಿ ಎನಿಸಿದ್ದು ಕೇರಳದ ಮಾತಾ ಅಮೃತಾನಂದ ಮಯಿ ಯವರ ಮಠದಿಂದ ಪ್ರಕಟಗೊಂಡಿದೆ. ಭಾರತೀಯ ವಿದ್ಯಾಭವನದ ಪ್ರಕಟಣೆಗಳಾದ ‘ಭಾರತೀಯ ಜನತೆ ಮತ್ತು ಇತಿಹಾಸ’ ೨೫ ಸಂಪುಟಗಳಿಗಾಗಿ ಹಲವಾರು ಅಧ್ಯಾಯಗಳು, ಮಹಾತ್ಮ ಗಾಂಧಿ ಕೃತಿ ಸಂಚಯದ ಅನೇಕ ಸಂಪುಟಗಳಿಗೆ ಲೇಖನಗಳನ್ನು ಈಗಲೂ ಬರೆಯುತ್ತಿರುವರಲ್ಲದೆ ಹಂಪಿಯ ಕನ್ನಡ ವಿಶ್ವ ವಿದ್ಯಾಲಯ, ಮೈಸೂರು ವಿಶ್ವ ವಿದ್ಯಾಲಯದ ಅಧ್ಯಯನ ಸಂಸ್ಥೆ ಮತ್ತು ಪ್ರಸಾರಾಂಗ ಪ್ರಕಟಣೆಗಳಾದ ವಿಶ್ವಕೋಶ, ಕರ್ನಾಟಕ ವಿಷಯ ವಿಶ್ವಕೋಶ, ಯುಗಯಾತ್ರಿ ಭಾರತೀಯ ಸಂಸ್ಕೃತಿ ಮುಂತಾದ ವಿಶ್ವ ವಿದ್ಯಾಲಯದ ಪ್ರತಿಷ್ಠಿತ ಪ್ರಕಟಣೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಮೈಸೂರು ಆಕಾಶವಾಣಿಯಿಂದ  ಭಾನುವಾರ ರಾತ್ರಿ ಪ್ರಸಾರವಾಗುತ್ತಿದ್ದ ಕಥಾಸಮಯದಲ್ಲಿ ಹಲವಾರು ಕಥೆಗಳು, ಹಾಸ್ಯ ಲೇಖನಗಳು, ರೂಪಕಗಳು, ನಾಟಕಗಳು ಪ್ರಸಾರವಾಗಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top