೧೨-೧-೧೯೩೩ ವಿಜಾಪುರದಲ್ಲಿ ಶಾಂತಾದೇವಿಯರ ಜನನ. ತಂದೆ ಸಿದ್ದಪ್ಪ, ತಾಯಿ ಭಾಗೀರಥಿದೇವಿ. ಕಂದಾಯ ಇಲಾಖೆಯಲ್ಲಿ ಮಾಮಲೆದಾರರಾಗಿದ್ದ ತಂದೆಯವರು ಮುಂಬೈ ಕರ್ನಾಟಕದ ಅಸಿಸ್ಟೆಂಟ್ ಕಮೀಷನರಾಗಿ ನಿವೃತ್ತರು. ಅಪಾರವಾದ ಸಾಹಿತ್ಯದ ಒಲವು. ಮನೆಯಲ್ಲಿ ಇಂಗ್ಲಿಷ್, ಕನ್ನಡ ಪುಸ್ತಕಗಳ ದೊಡ್ಡ ಭಂಡಾರ. ಸಾಹಿತ್ಯ, ಅಧ್ಯಾತ್ಮ ಕೃತಿಗಳಿಗೆ ಮೊದಲ ಪ್ರಾಶಸ್ತ್ಯ.. ಮಾಸ್ತಿ, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶಂಬಾ ಜೋಶಿ, ಗೋಕಾಕ್, ರಂ.ಶ್ರೀ. ಮುಗಳಿ, ಶಿ.ಶಿ. ಬಸವನಾಳ, ಹರ್ಡೇಕರ್ ಮಂಜಪ್ಪ, ಫ.ಗು. ಹಳಕಟ್ಟಿ, ಸಿಂಪಿ ಲಿಂಗಣ್ಣ, ಸ.ಸ. ಮಾಳವಾಡ ಮುಂತಾದ ಸಾಹಿತಿಗಳ ಸಂಗ. ಮಗಳಿಗೂ ಹಿಡಿದ ಸಾಹಿತ್ಯದ ಹುಚ್ಚು. ಕಿವಿಗೆ ಬೀಳುತ್ತಿದ್ದ ಸಾಹಿತ್ಯದ ಚರ್ಚೆ. ತಂದೆಯಿಂದಲೇ ‘ಜೇನ್ ಆಸ್ಟಿನ್’ಳ ಕಾದಂಬರಿ ಓದಿ ಬರವಣಿಗೆಯ ಪರಿಚಯ. ಪ್ರಾಥಮಿಕ ವಿದ್ಯಾಭ್ಯಾಸ ವಿಜಾಪುರ. ಮಾಧ್ಯಮಿಕ ವಿದ್ಯಾಭ್ಯಾಸ-ರೋಣ, ರಾಣಿ ಬೆನ್ನೂರು, ಬೈಲಹೊಂಗಲ. ಮೆಟ್ರಿಕ್ಯುಲೇಷನ್ ಮುಗಿಸಿದಾಗ ಚನ್ನವೀರ ಕಣವಿಯವರೊಡನೆ ಮದುವೆ ನಿಶ್ಚಯ. ಓದಿಗೆ ಮಂಗಳ. ನಿಶ್ಚಿತಾರ್ಥ-ಮದುವೆಗೂ ಎರಡು ವರ್ಷ ಅಂತರ. ಕಣವಿಯವರ ಪ್ರೇಮ ಪತ್ರದಲ್ಲಿ ಕಾವ್ಯಭಾಷೆ. ಮದುವೆಯ ನಂತರ ಪ್ರೇರಣೆ-ಬರವಣಿಗೆ. ಶಾಂತಾದೇವಿಯವರು ಬರೆದ ಹಲವಾರು ಕಥೆಗಳು ಪ್ರಕಟಿತ. ಓದುಗರಿಂದ ಪ್ರಶಂಸೆ, ಕಥೆಗಾರ್ತಿಯ ಉದಯ. ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ವೈಶಿಷ್ಟ್ಯ. ಸಂಜೆಮಲ್ಲಿಗೆ, ಬಯಲು-ಆಲಯ, ಮರು ವಿಚಾರ, ಜಾತ್ರೆ ಮುಗಿದಿತ್ತು, ಕಳಚಿಬಿದ್ದ ಪೈಜಣ, ನೀಲಿಮಾತೀರ – ಕಥಾಸಂಕಲನಗಳು. ಅಜಗಜಾಂತರ-ಹರಟೆಗಳ ಸಂಗ್ರಹ. ನಿಜಗುಣ ಶಿವಯೋಗಿ-ಮಕ್ಕಳ ಪುಸ್ತಕ ಪ್ರಕಟಿತ. ಬಯಲು-ಆಲಯ ಕಥಾಸಂಕಲನಕ್ಕೆ ೧೯೭೪ರ ಸಾಹಿತ್ಯ ಅಕಾಡಮಿ ಬಹುಮಾನ. ೧೯೮೭ರಲ್ಲಿ ಅಕಾಡಮಿ ಪ್ರಶಸ್ತಿ ಪುರಸ್ಕಾರ. ಹಲವಾರು ಕಥೆಗಳು ಹಿಂದಿ, ಇಂಗ್ಲಿಷ್, ಮಲೆಯಾಳಂಗೂ ಭಾಷಾಂತರದ ಹೆಗ್ಗಳಿಕೆ. ಕವಿ ಚೆನ್ನವೀರ ಕಣವಿ-ಕಥಗಾರ್ತಿ ಶಾಂತಾದೇವಿಯವರ ಅನುಪಮ ಜೋಡಿ. ಇದೇ ದಿನ ಹುಟ್ಟಿದ ಸಾಹಿತಿಗಳು : ಆರ್. ಶಾಮಾಶಾಸ್ತ್ರಿ – ೧೮೬೮-೨೩.೧.೪೪ ಪ್ರಮೀಳ ದೇಶಪಾಂಡೆ – ೧೯೨೪ ಶ್ರೀನಿವಾಸ ಹಾವನೂರ – ೧೯೨೯-೫.೪.೧೦ ಲೀಲಾದೇವಿ ಆರ್. ಪ್ರಸಾದ್ – ೧೯೩೪ ಕೃಷ್ಣಕೊಲ್ಹಾರ ಕುಲಕರ್ಣಿ – ೧೯೪೦ ವೀರಪ್ಪ ಮೊಯಿಲಿ – ೧೯೪೦ ಮರುಳು ಸಿದ್ದಪ್ಪ – ೧೯೪೦ ಜಿ.ಎನ್. ರಂಗನಾಥರಾವ್ – ೧೯೪೨ ಅಂಶುಮಾಲಿ – ೧೯೪೫ ಜಿ.ವಿ. ರೇಣುಕಾ – ೧೯೪೪

