ಶಾ.ಮಂ. ಕೃಷ್ಣರಾವ್

Home/Birthday/ಶಾ.ಮಂ. ಕೃಷ್ಣರಾವ್
Loading Events
This event has passed.

೦೧.೦೬.೧೯೪೨ ವಿದೇಶಿ ಸಂಸ್ಕೃತಿಯನ್ನು ಹಾಸು ಹೊದ್ದು ಮಲಗಿದ್ದ ಗೋವಾದಲ್ಲಿ ಪಂಚೆಯುಟ್ಟು ಹೊರಟ ವ್ಯಕ್ತಿಯನ್ನು ವಿಚಿತ್ರಪ್ರಾಣಿ ಎನ್ನುವಂತೆ ನೋಡುತ್ತಿದ್ದವರಿಗೆ ‘ಕನ್ನಡ’ ಎಂಬ ಭಾಷೆಯೊಂದಿದೆ ಎಂಬುದನ್ನು ತೋರಿಸಲು ಗೋವದಲ್ಲಿ ಕನ್ನಡ ಸಂಘ ಸ್ಥಾಪಿಸಿ, ಕನ್ನಡದ ಪತಾಕೆ ಹಾರಿಸಿದ ಕೃಷ್ಣರಾವ್ ಹುಟ್ಟಿದ್ದು ಬೆಳಗಾವಿಯಲ್ಲಿ. ತಂದೆ ಮಂಜುನಾಥ ಶ್ಯಾನಭಾಗ, ತಾಯಿ ಗಂಗಾದೇವಿ. ಪ್ರಾರಂಭಿಕ ಶಿಕ್ಷಣದಿಂದ ಹೈಸ್ಕೂಲುವರೆಗೆ ಸಿದ್ಧಾಪುರದಲ್ಲಿ. ಉದ್ಯೋಗದ ನಿಮಿತ್ತ ತಂದೆಯವರು ಗೋವಾಗೆ ವಾಸ್ತವ್ಯವನ್ನು ಬದಲಿಸಿದ್ದರಿಂದ ಇವರ ಕಾಲೇಜು ಶಿಕ್ಷಣವೂ ಗೋವದಲ್ಲಿ. ಆದರೆ ವಿದ್ಯಾಭ್ಯಾಸಕ್ಕೆ ಅಡೆತಡೆಯುಂಟಾಗಿ ಆಯ್ಕೆ ಮಾಡಿಕೊಂಡದ್ದು ಬೋಧಕವೃತ್ತಿ. ಇದಕ್ಕೆ ಮುಂಚೆಯೂ ಸಿದ್ದಾಪುರ ತಾಲ್ಲೂಕಿನಲ್ಲಿ ಅಳವಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಕಾಲ ಸಲ್ಲಿಸಿದ ಸೇವೆ. ಬಾಹ್ಯವಿದ್ಯಾರ್ಥಿಯಾಗಿ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. ಪದವಿ ನಂತರ ಬಿ.ಎಡ್. ಪದವಿಗಳು. ಗೋವಾದ ಗೌರ್ನಮೆಂಟ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿ ಜ್ಯೂನಿಯರ್ ಕಾಲೇಜು ಮಟ್ಟದ ತರಗತಿಗಳಿಗೂ ಬೋಧಿಸಿ, ೪೧ ವರ್ಷಗಳ ಸೇವೆಯ ನಂತರ ನಿವೃತ್ತಿ. ಗೋವಾದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಒಂದು ದೀಕ್ಷೆ ಎಂಬಂತೆ ಸ್ವೀಕರಿಸಿ, ಆಮೂಲಾಗ್ರ ಬದಲಾವಣೆಯಾಗದೆ ಪರಿಣಾಮಬೀರುವುದಿಲ್ಲ ಎಂಬುದನ್ನುರಿತು ಅಲ್ಲಿದ್ದ ಕೇವಲ ೮೧೩ ಕನ್ನಡಿಗರಿಗೆ (೧೯೬೧ ಜನಗಣತಿ ಪ್ರಕಾರ) ಕನ್ನಡ ಕಲಿಸಲು ಪಣತೊಟ್ಟರು. ಬಹುತೇಕ ಇದ್ದ ಕನ್ನಡಿಗರು ಕೆಳದರ್ಜೆಯ ನೌಕರರೇ. ಮನೆಯೊಳಗೆ ಅಲ್ಪಸ್ವಲ್ಪ ಕನ್ನಡ ಧ್ವನಿ ಕೇಬಹುದಿತ್ತೇ ವಿನಃ ರಸ್ತೆಗಿಳಿದರೆ ಗೋವಾ ಭಾಷೆಯಾದ ಕೊಂಕಣಿಯೆ. ತೋಟ, ತಳವಾರರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೊರಟರೆ ಇವರು ಆ ಮಕ್ಕಳನ್ನು ಒಂದೆಡೆ ಕೂಡಿಹಾಕಿ ಕಲಿಸಿದ ಕನ್ನಡಭಾಷೆ. ಹೀಗೆ ಕನ್ನಡದ ಕಂಪ ಮನೆಯಿಂದ ಹೊರಗೂ ಬಂದು ರಸ್ತೆಯಂಚಿನಲ್ಲಿ ಇಬ್ಬರು ನಿಂತು ಮಾತನಾಡಿದರೆ ಕನ್ನಡದ ಸ್ವರ ಕೆಳತೊಡಗಿತು. ಮಡಗಾಂವ್ ಸ್ಥಳವನ್ನೇ ತಮ್ಮ ಕಾರ್ಯಕ್ಷೇತ್ರವೆಂದು ಆಯ್ಕೆ ಮಾಡಿಕೊಂಡಿದ್ದರಿಂದ ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ನಡೆಸಲು ಪ್ರಾರಂಭಿಸದ್ದೇ ಗೋವಾ ಕನ್ನಡ ಸಂಘ (೧೯೬೩). ಆದರೆ ಉದ್ಯೋಗ, ಬದುಕೇ ಪ್ರಮುಖವಾಗಿದ್ದರಿಂದ ಸಂಘ-ಸಂಸ್ಥೆಗಳ ಕೆಲಸಗಳೆಂದರೆ ಎರಡನೆಯ ಆಯ್ಕೆಯೆ. ಆದರೂ ಛಲಬಿಡದೆ ಕೈಯಿಂದಲೇ ಹಣತೆತ್ತು ಕಾರ್ಯಕ್ರಮ ನಡೆಸಿ ಕನ್ನಡವನ್ನು ಪಸರಿಸುವ ಕೈಂಕರ್ಯವನ್ನು ಕೈಗೊಂಡರು. ಸಾಹಿತಿಗಳು, ಸಂಗೀತಗಾರರನ್ನು ಕರೆಸಿ ಕನ್ನಡದ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ಇವರ ಸಾಹಿತ್ಯ ಕಾರ್ಯಕ್ರಮಕ್ಕೆ ಮಿ. ಶಿವಮೂರ್ತಿ ಶಾಸ್ತ್ರಿ, ರಾ.ಯ. ಧಾರವಾಡಕರ್, ಪಾಟೀಲ ಪುಟ್ಟಪ್ಪ, ಅ.ನ.ಕೃ ಮು,ತಾದ ದಿಗ್ಗಜರುಗಳನ್ನೇ ಕರೆಸಿದಂತೆ ಮಲ್ಲಿಕಾರ್ಜುನ ಮನಸೂರ್, ಬಸವರಾಜ ಮನಸೂರ್, ಏಣಗಿ ಬಾಳಪ್ಪ, ಮಾಸ್ಟರ್ ಹಿರಣ್ಣಯ್ಯ ಮುಂತಾದ ಕಲಾವಿದರು, ಸಿನಿಮಾ ನಟರಾದ ರಾಂಗೋಪಾಲ್, ಶ್ರೀನಿವಾಸಮೂರ್ತಿ ಮುಂತಾದವರೆಲ್ಲರೂ ಕಾರ್ಯಕ್ರಮ ನಡೆಸಿಕೊಟ್ಟವರು. ಕನ್ನಡ ಪ್ರಚಾರಕ್ಕಾಗಿ ಹಂತಹಂತವಾಗಿ ಕಾಯರ್ಕ್ರಮಗಳನ್ನು ರೂಪಿಸಿದ್ದರ ಜೊತೆಗೆ ಕನ್ನಡ ಓದುವುದರ ಬಗ್ಗೆಯೂ ಆಸ್ಥೆ ಬೆಳೆಯುವಂತೆ ಮಾಡಲು ಕೈಗೊಂಡ ಕಾರ್ಯಕ್ರಮಗಳೆಂದರೆ ಪುಸ್ತಕಗಳ ಪ್ರಕಟಣೆ, ಸಾಂಸ್ಕತಿಕ ಕಾರ್ಯಕ್ರಮಗಳಲ್ಲಿ, ನಾಟಕಾಭಿನಯಕ್ಕೂ ಒತ್ತು ಕೊಟ್ಟು ಇವರೇ ರಚಿಸಿದ ನಾಟಕಗಳಾದ ರಾಜಧರ್ಮ (ಪೌರಾಣಿಕ), ಬಂಡಲ್ ಬಹದ್ದೂರ್, ಮುದ್ದಾಳರು, ಮಾಮೂಲು (ಸಾಮಾಜಿಕ ನಾಟಕಗಳು) ಮುಂತಾದ ನಾಟಕಗಳನ್ನು ಬರೆದು ಪ್ರಕಟಸಿ ರಂಗದ ಮೇಲೂ ಪ್ರದರ್ಶಿಸಿದರು. ಗೋವೆಯ ದೇವಾಲಯಗಳ ಬಗ್ಗೆ ಕರ್ನಾಟಕದಲ್ಲಿದ್ದವರಿಗೆ ತಿಳಿಸಲು ಬರೆದ ಪುಸ್ತಕ ಗೋವೆಯ ದೇವಾಲಯಗಳ ಚರಿತ್ರೆಯ ‘ದೇವಭೂಮಿ ಗೋಮಂತಕ’ ಮತ್ತು ಗೋವಾ ಸೌಂದರ್ಯವನ್ನು ವಿವರಿಸುವ ಕೃತಿ ‘ಸೌಂದರ್ಯನಿಧಿ ಗೋವಾ’. ಇದಲ್ಲದೆ ಮಕ್ಕಳಿಗಾಗಿ ಬರೆದ ಕೃತಿಗಳು ‘ಗೋವ ಕದಂಬ ಕುಲ’, ವರಕವಿ ತಿಪ್ಪಯ್ಯ ಮಾಸ್ತರರು, ಬಸವರಾಜ ಮನ್ಸೂರ್, ಹಾವನೂರು ಸಂಸ್ಥಾನ, ಬಳ್ಳಾರಿ ಬೀಚಿ, ಅ.ನ.ಕೃಷ್ಣರಾಯ ಮುಂತಾದ ಕೃತಿಗಳು. ಮನ್ಸೂರರ ಮನೆತನದ ವ್ಯಕ್ತಿ ಚಿತ್ರಣ ನೀಡುವ ‘ಚಿಗುರು ನೆನಪು’ ಎಸ್.ಎನ್. ಕೇಶವೈನ್‌ರ ಜೀವನ ಚಿತ್ರಣದ ‘ಬೆಳಕಿನ ಬದುಕು’, ನಟಶೇಖರ ಬಸವರಾಜ ಮನ್ಸೂರ್, ಪಾಪು (ಪಾಟೀಲ ಪುಟ್ಟಪ್ಪ), ಕುಂಚ ಬ್ರಹ್ಮ ಮಡಿವಾಳಪ್ಪ ಮಿಣಜಿಗಿ, ಮಹಾತ್ಮ ಜ್ಯೋತಿರಾವ್ ಪುಲೆ, ಅ.ನ. ಕೃಷ್ಣರಾಯರು ಮುಂತಾದವರ ವ್ಯಕ್ತಿಚಿತ್ರಗಳು ಪ್ರಕಟಗೊಂಡಿವೆ. ಅ.ನ.ಕೃ. ರವರ ಮೇಲಿನ ಪ್ರೀತಿಗಾಗಿ, ಅವರೊಡಗೂಡಿದ ಒಡನಾಟಕ್ಕಾಗಿ, ಅವರ ತತ್ತ್ವಾದರ್ಶಗಳಿಗಾಗಿ, ಅವರ ಸಾಹಿತ್ಯ ಪ್ರೀತಿಗಾಗಿ, ಅವರ ಕನ್ನಡ ನಾಡು-ನುಡಿಯ ಮೇಲಿನ ನಿಷ್ಠೆಗಾಗಿ ಅ.ನ.ಕೃ.ರವರ ಹೆಸರನ್ನು ಚಿರಸ್ಥಾಯಿಗೊಳಿಸಲು ಕೈಗೊಂಡ ಕಾರ್ಯಕ್ರಮವೆಂದರೆ ನಾಡಿನ ಹಿರಿ-ಕಿರಿಯ ಲೇಖಕರಿಂದ ಲೇಖನಗಳನ್ನು ಬರೆಸಿ ಪ್ರಕಟಿಸಿದ ಅಭಿನಂದನ ಗ್ರಂಥ ‘ರಸಚೇತನ’ (೧೯೭೦). ಅಂದು ಪುಸ್ತಕಗಳ ಮಾರಾಟವೂ ಒಂದು ಸಮಸ್ಯೆಯೇ. ಸಂಪಾದಕರಾಗಿ ಪುಸ್ತಕ ಪ್ರಕಟಸಿ ಆದದ್ದು ನಷ್ಟಕರೆ. ಆದರೂ ಧೃತಿಗೆಡದೆ ೧೯೭೨ ಮತ್ತು ೧೯೭೩ರಲ್ಲಿ ಅ.ನ.ಕೃರವರ ‘ಬರಹಗಾರನ ಬದುಕು’ ಮತ್ತು ಚಿರಚೇತನ (ಮುನ್ನುಡಿಗಳ ಸಂಗ್ರಹ) ಕೃತಿಗಳನ್ನು ಪ್ರಕಟಿಸಿದರು. (ಕನ್ನಡ ಪುಸ್ತಕಕಗಳ ಮುದ್ರಣದ ಯಾವ ಸೌಕರ್ಯವೂ ಇಲ್ಲದ ಗೋವಾದಲ್ಲಿ ಕುಳಿತು, ಮುದ್ರಣಕ್ಕಾಗಿ ಹುಬ್ಬಳ್ಳಿಗೆ ಎಡತಾಕಿ ಹರಸಾಹಸಪಟ್ಟರೂ ಮುದ್ರಿಸಿದರೆಂದರೆ ಇದು ಅ.ನ.ಕೃ. ಮೇಲಿನ ಪ್ರೀತಿಯ ದ್ಯೋತಕ.) ನಂತರ ೧೯೭೭ರಲ್ಲಿ ಬೀಚಿಯವರ ಬಗ್ಗೆ ಹೊರತಂದ ಅಭಿನಂದನ ಗ್ರಂಥ ತಿಂಮದರ್ಶನ. ಇದು ಹಾಸ್ಯಸಾಹಿತ್ಯದ ಮೈಲಿಗಲ್ಲು ಎನಿಸಿದ ಕೃತಿಯಾಗಿ ೨೦೦೮ರಲ್ಲಿ ವಿಸ್ತೃತ ಆವೃತ್ತಿಯೂ ಪ್ರಕಟವಾಯಿತು. ಇದಲ್ಲದೆ ಡಾ.ವಿ.ಎಸ್. ಸೋಂದೆಯವರ ‘ಜನಸೇವಕ’, ಡಾ.ಬಿ.ಎಸ್. ಸ್ವಾಮಿಯವರ ‘ಮಧುವ್ರತ’ ಮುಂತಾದ ಗೌರವಗ್ರಂಥಗಳನ್ನೂ ಸಂಪಾದಿಸಿದ್ದಾರೆ. ಹಲವಾರು ಗ್ರಂಥಗಳನ್ನು ಕೊಂಕಣಿಯಿಂದ ಕನ್ನಡಕ್ಕೆ ಅನುವಾದಿಸಿ ಕೊಂಕಣಿ ಕನ್ನಡಿಗರ ಸ್ನೇಹಸೇತುವಾಗಿದ್ದಾರೆ. ಅವುಗಳಲ್ಲಿ ‘ರಶ್ಮಿ’ (ಕೊಂಕಣಿ ಕವಿತೆಗಳು), ‘ಮಗುವಿನ ಭಾಗಜಗತ್ತು’ (ಕೊಂಕಣಿ ಕಥಾಸಂಗ್ರಹ) ಮುಂತಾದವುಗಳನ್ನು ಕೊಂಕಣಿಯಿಂದಲ್ಲದೆ ‘ಯುಗ ಪ್ರವರ್ತಕ ಜೀವೊತ್ತಮತೀರ್ಥರು’ ಕೃತಿಯನ್ನು ಮರಾಠಿಯಿಂದ ಅನುವಾದಿಸಿದ್ದಾರೆ. ಇದಲ್ಲದೆ ಸಮರಸ, ಕದಂಬ, ಅಭಿನಂದನ, ಕದಿರು, ಸಿಂಗಾರ, ಸ್ಮರಣೆ, ಚಂದನ, ಮಾಂಡವಿ, ರಶ್ಮಿ ಮುಂತಾದ ಸ್ಮರಣ ಸಂಚಿಕೆಗಳು ಮತ್ತು ನ್ಯಾಷನಲ್ ಬುಕ್‌ಟ್ರಸ್ಟ್‌ಗಾಗಿ ರಾಧೆಯಲ್ಲ, ರುಕ್ಮಿಣಿಯೂ ಅಲ್ಲ (ಹಿಂದಿಯಿಂದ – ಅಮೃತಾಪ್ರೀತಮ್) ಕೇಂದ್ರ ಸಾಹಿತ್ಯ ಅಕಾಡಮಿಗಾಗಿ ಕಾರ್ಮೆಲಿನ್ (ಕೊಂಕಣಿ-ಕಾದಂಬರಿ – ಲೇ. ದಾಮೋದರ ಮಾವಜೊ) ಮುಂತಾದವು ಪ್ರಕಟಗೊಂಡಿವೆ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದು ದೆಹಲಿಯ ಕೆ.ಕೆ. ಬಿರ್ಲಾ ಫೌಂಡೇಶನ್, ಕೇಂದ್ರ ಸಾಹಿತ್ಯ ಅಕಾಡಮಿಯ ಸದಸ್ಯರಾಗಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಯಾಗಿ, ಕೊಂಕಣಿ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ ದುಡಿದ ಶಾಮಂರವರಿಗೆ ದೆಹಲಿಯ ಕರ್ನಾಟಕ ಸಂಘದಿಂದ ‘ದೆಹಲಿ ಕನ್ನಡಿಗ’, ಕರ್ನಾಟಕ ಸಂಘ ಸಿದ್ಧಾಪುರ, ಬೆಳಗಾವಿ ಕಲಾವೃಂದ, ಗೋವಾ ಕನ್ನಡ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಶಿರಸಿಯ ಅರ್ಬನ್ ಬ್ಯಾಂಕ್, ಕುಮಟಾದ ಡಾ.ಎ.ವಿ. ಬಳಿಗಾ ಕಲೆ ಮತ್ತು ವಿಜ್ಞಾನ ಕಾಲೇಜು ಮುಂತಾದವುಗಳಿಂದ ಸನ್ಮಾನ. ಬೆಂಗಳೂರಿಗೆ ಬಂದು ನೆಲೆಸಿದಾಗ ನೂತನ ವಾರಪತ್ರಿಕೆಯ ಸಂಪಾದಕರ ಜವಾಬ್ದಾರಿಯನ್ನು ಕೆಲಕಾಲ ನಿರ್ವಹಿಸಿದರಾದರೂ ಇದೀಗ ಪೂರ್ಣಪ್ರಮಾಣದಲ್ಲಿ ಮರವಣಿಗೆಯಲ್ಲೇ ತೊಡಗಿಸಿಕೊಂಡಿರುವ ಶಾ.ಮಂ.ರವರಿಗೆ ಸ್ನೇಹಿತರು ಅರ್ಪಿಸುತ್ತಿರುವ ಗೌರವ ಗ್ರಂಥ ‘ಪದಪಥಿಕ’ (೦೩.೦೬.೨೦೧೨).

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top