ಶಿವರಾಮ ಕಾರಂತ

Home/Birthday/ಶಿವರಾಮ ಕಾರಂತ
Loading Events

೧೦-೧೦-೧೯೦೨ ೯-೧೨-೧೯೯೭ ನಡೆದಾಡುವ ವಿಶ್ವಕೋಶ, ಒಂದು ವಿಶ್ವವಿದ್ಯಾಲಯ, ಕಡಲ ತೀರದ ಭಾರ್ಗವ ಮುಂತಾದ ಯಾವ ಹೊಗಳಿಕೆಗೂ ಮನಸ್ಸು ಕೊಡದೆ, ಕಳೆದ ಶತಮಾನದ ಆದಿಯಿಂದ ಅಂತ್ಯದವರೆಗೂ ಸಾಹಿತ್ಯ ಕೃತಿ ರಚಿಸುತ್ತಲೇ ಬಂದು ಚಟುವಟಿಕೆಗಳಿಂದಲೇ ಕೂಡಿದ ಶಿವರಾಮ ಕಾರಂತರು ಹುಟ್ಟಿದ್ದು ದ.ಕ. ಜಿಲ್ಲೆಯ ಕೋಟದಲ್ಲಿ. ತಂದೆ ಶೇಷ ಕಾರಂತರು, ತಾಯಿ ಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ಕೋಟಾ, ಕುಂದಾಪುರ. ಕಾಲೇಜು ಶಿಕ್ಷಣ ಮಂಗಳೂರು. ಮಹಾತ್ಮ ಗಾಂಜಿಯವರ ಅಸಹಕಾರ ಚಳವಳಿಯಿಂದ ಆಕರ್ಷಿತರಾಗಿ ಸ್ವಾತಂತ್ರ್ಯ ಸಮರಾಂಗಣಕ್ಕೆ ಧುಮುಕಿದರು. ಬಾಲ್ಯದಿಂದಲೇ ಪುಸ್ತಕದ ಬಗ್ಗೆ ಪ್ರೀತಿ. ಬರೆಯುವ ಉತ್ಕಟೇಚ್ಛೆ. ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕೃತಿ ಎಲ್ಲದರಲ್ಲೂ ಆಸಕ್ತಿ ಬೆಳೆಸಿಕೊಂಡವರು. ಪ್ರಥಮ ಪ್ರಕಟಿತ ಕವನ ಸಂಕಲನ ‘ರಾಷ್ಟ್ರಗೀತ ಸುಧಾಕರ’ ೧೯೨೪ರಲ್ಲಿ. ಪ್ರಥಮ ಕಾದಂಬರಿ ವಿಚಿತ್ರ ಕೂಟ ಪತ್ತೆದಾರಿ ಕಾದಂಬರಿ. ನಂತರ ಬರೆದದ್ದು ಸುಮಾರು ೪೫ ಕಾದಂಬರಿಗಳು, ೩೦ ನಾಟಕಗಳು, ತೆರೆಯ ಮರೆಯಲ್ಲಿ, ಹಸಿವು, ಹಾವು, ಕವಿಕರ್ಮ ಮೊದಲಾದ ಕಥಾ ಸಂಕಲನಗಳು. ಗ್ನಾನ, ಚಿಕ್ಕವರು ದೊಡ್ಡವರು ಮೊದಲಾದ ಆರು ಹರಟೆಗಳ ಸಂಕಲನ. ಸುಮಾರು ಹತ್ತು ಪ್ರವಾಸ ಸಾಹಿತ್ಯ ಕೃತಿಗಳು. ವಿಜ್ಞಾನ ಸಂಪುಟಗಳ ರಚನೆ. ಮಕ್ಕಳ ಸಾಹಿತ್ಯದ ಬಗ್ಗೆ ರಚಿಸಿದ ಕೃತಿಗಳೇ ಸುಮಾರು ಇನ್ನೂರು. ಬಾಲ ಪ್ರಪಂಚ, ಅದ್ಭುತ ಜಗತ್ತು, ಚಿತ್ರಕಥಾ ಪುಸ್ತಕಗಳು. ಒಂದು ಸಂಸ್ಥೆ ಮಾಡಲಾಗದ ಕೆಲಸ ಕಾರಂತರೊಬ್ಬರಿಂದಲೇ. ಪುತ್ತೂರಿನಲ್ಲಿ ಬಾಲಭವನ ಸ್ಥಾಪನೆ. ಸಿರಿಗನ್ನಡ ಅರ್ಥಕೋಶ ಒಂದು ಅತ್ಯುತ್ತಮ ನಿಘಂಟು. ಯಕ್ಷಗಾನ ಕಲೆಯ ಬಗ್ಗೆ ಹಲವಾರು ಕೃತಿ ರಚನೆ. ಸ್ವತಃ ಅಭಿನಯಿಸಿದ್ದಲ್ಲದೆ ಹೊಸರೂಪ ಕೊಟ್ಟು ವಿಶ್ವಕ್ಕೆ ಪರಿಚಯಿಸಿದ ರೀತಿ. ಹಲವಾರು ಬಾರಿ ವಿದೇಶಯಾತ್ರೆ. ತಮ್ಮ ವಿಚಾರಗಳನ್ನು ಸ್ಪಷ್ಟವಾಗಿ, ದಿಟ್ಟವಾಗಿ ಪ್ರತಿಪಾದಿಸಿ ಬರೆದ ಕೃತಿಗಳೇ ಹಲವಾರು. ಹುಚ್ಚು ಮನಸಿನ ಹತ್ತು ಮುಖಗಳು, ಸ್ಮೃತಿಪಠಲದಿಂದ, ಅಳಿದುಳಿದ ನೆನಪುಗಳು ಮುಂತಾದುವುಗಳಲ್ಲಿ ಅನುಭವದ ನಿರೂಪಣೆ. ಸಂದ ಪ್ರಶಸ್ತಿ ಗೌರವಗಳಿಗೆ ಲೆಕ್ಕವಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸ್ವೀಡಿಶ್ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ವಿ.ವಿ. ಮತ್ತು ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ ಮುಂತಾದುವು. ಕಾರಂತರ ಷಷ್ಟಬ್ದಿಯಿಂದ ಹಿಡಿದು ೯೨ನೇ ವಯಸ್ಸಿನವರೆಗೆ ವಿವಿಧ ಸಂದರ್ಭಗಳಲ್ಲಿ, ‘ಕಾರಂತ ಮಂಥನ’ದವರೆಗೆ ಎಂಟು ಗೌರವ ಗ್ರಂಥಗಳ ಸಮರ್ಪಣೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಸಾಲಿ ರಾಮಚಂದ್ರರಾಯರು – ೧೮೮೮-೩೧.೧೦.೭೮ ವಸಂತ ಕುಷ್ಟಗಿ  – ೧೯೩೬ ಕುಸುಮ ಸೊರಬ – ೧೯೩೭-೧೪.೩.೯೮ ಶೇಷಾದ್ರಿ ಕಿನಾರೆ – ೧೯೪೭ ತಗಡೂರು ರಾಮಚಂದ್ರರಾಯರು – ೧೮೯೭-೨೮.೧೨.೮೮

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top