Loading Events

« All Events

  • This event has passed.

ಶಿ.ಶಿ.ಬಸವನಾಳ

November 7, 2023

.೧೧.೧೯೯೩ ೨೨.೧೨.೧೯೫೧ ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳರು ಹುಟ್ಟಿದ್ದು ಅಂದಿನ ಧಾರವಾಡ ಜಿಲ್ಲೆಯ ಹಾವೇರಿಯಲ್ಲಿ ತಾ. ೭.೧೧.೧೮೯೩ರಂದು. ಇಂದು ಹಾವೇರಿ ಜಿಲ್ಲಾ ಕೇಂದ್ರವಾಗಿದೆ. ತಂದೆ ಶಿವಯೋಗಪ್ಪನವರು, ಬಾಲ್ಯದ ವಿದ್ಯಾಭ್ಯಾಸ ಬಳ್ಳಾರಿಯ ಸುತ್ತಮುತ್ತ, ಗದುಗಿನಲ್ಲಿ ಮಾಧ್ಯಮಿಕ, ಮೆಟ್ರಿಕ್ಯುಲೇಷನ್ ಮುಗಿಸಿದ್ದು ಧಾರವಾಡದಲ್ಲಿ. ಕಾಲೇಜಿಗೆ ಸೇರಿದ್ದು ಪುಣೆಯ ಡೆಕ್ಕನ್ ಕಾಲೇಜು. ೧೯೧೬ ರಲ್ಲಿ ಎಂ.ಎ. ಪದವಿಯನ್ನು ಮುಂಬಯಿ ವಿಶ್ವವಿದ್ಯಾಲಯದಿಂದ ಅತಿಹೆಚ್ಚಿನ ಅಂಕಗಳಿಸಿ ಪಡೆದರು. ಹಳಗನ್ನಡ ಸಾಹಿತ್ಯದ ಬಗ್ಗೆ ವಿಶೇಷ ಬಲವಿತ್ತು. ಕನ್ನಡ, ಇಂಗ್ಲಿಷ್, ಸಂಸ್ಕೃತ ಈ ಮೂರು ಭಾಷೆಗಳಲ್ಲಿಯೂ ಪ್ರಾವೀಣ್ಯತೆ ಪಡೆದು ವಿದ್ವಾಂಸರೆನಿಸಿದ್ದರು. ಬಸವ ನಾಳರು ಸ್ವತಃ ಶಿಕ್ಷಣ ತಜ್ಞರಾಗಿದ್ದು, ಶಿಕ್ಷಣದ ಮಹತ್ವವನ್ನು ಅರಿತಿದ್ದು, ಶಿಕ್ಷಣ ಪ್ರಸಾರದ ಬಗ್ಗೆ ಅಗಾಧ ನಂಬಿಕೆಯನ್ನಿಟ್ಟುಕೊಂಡಿದ್ದರು. ಶಿಕ್ಷಣವಿಲ್ಲದೆ ಏನನ್ನೂ ಸಾಧಿಸಲಾಗದೆಂಬುದನ್ನು ಮನಗಂಡು, ಇದಕ್ಕಾಗಿ ೧೯೧೬ ರಲ್ಲಿ ಕರ್ನಾಟಕ ಲಿಂಗಾಯತ ಎಜುಕೇಷನ್ ಅಸೋಸಿಯೇಷನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಇದರ ಮೂಲಕ ಬೆಳಗಾವಿಯ ಗಿಲಗಂಚಿ ಅರಟಾಳ ಹೈಸ್ಕೂಲು, ಧಾರವಾಡದಲ್ಲಿ (೧೯೨೨) ರಾಜಾಲಖಮಗೌಡ ಸರದೇಸಾಯಿ ಹೈಸ್ಕೂಲು ಪ್ರಾರಂಭಗೊಂಡವು. ೧೯೩೩ ರಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜನ್ನು ಸ್ಥಾಪಿಸಿ ಡಾ. ನಂದೀಮಠರವರನ್ನು ಪ್ರಾಧ್ಯಾಪಕರನ್ನಾಗಿ ನೇಮಿಸಿದರು. ತಾವು ಕೂಡಾ ಅದೇ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಮತ್ತು ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಇದಲ್ಲದೆ ಕರ್ನಾಟಕದ ಹಲವಾರು ಕಡೆ ಶಿಕ್ಷಣ ಪ್ರಸಾರವನ್ನು ಒಂದು ವ್ರತದಂತೆ ಸ್ವೀಕರಿಸಿ ಬೆಳಗಾವಿಯಲ್ಲಿ ಟ್ರೈನಿಂಗ್ ಕಾಲೇಜು, ಸೊಲ್ಲಾಪುರದಲ್ಲಿ ಕಾಡಾದಿ ಹೈಸ್ಕೂಲು, ಸಂಗಮೇಶ್ವರ ಕಾಲೇಜು, ಬಾಗಲಕೋಟೆಯಲ್ಲಿ ಬಸವೇಶ್ವರ ಕಾಲೇಜು, ಬಳ್ಳಾರಿಯಲ್ಲಿ ವೀರಶೈವ ಕಾಲೇಜು, ಹುಬ್ಬಳ್ಳಿಯಲ್ಲಿ ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜು, ಮತ್ತು ಜೆ.ಜೆ.ಕಾಮರ್ಸ್‌ಕಾಲೇಜು, ಬಿಜಾಪುರದಲ್ಲಿ ಮುಂದಾಳಾಗಿ ದುಡಿದರು. ಇವರು ಬರೇ ಸ್ಕೂಲು, ಕಾಲೇಜುಗಳ ಸ್ಥಾಪನೆಯಲ್ಲಷ್ಟೇ ಆಸಕ್ತಿ ವಹಿಸದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿಯೂ ಪ್ರಮುಖ ಪಾತ್ರವಹಿಸಿದರು. ಸ್ಥಾಪಕರಾಗಿದ್ದಷ್ಟೇ ಅಲ್ಲದೆ ಸದಸ್ಯರಾಗಿ ಜೊತೆಗೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಬೋರ್ಡ್ ಪರೀಕ್ಷಾ ಸದಸ್ಯರಾಗಿ ಮುಂಬಯಿ ವಿ.ವಿ.ದ ಸೆನೆಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಸಾಹಿತ್ಯಾಭ್ಯಾಸಿಯಾಗಿದ್ದುದರಿಂದ ಸಾಹಿತ್ಯ ಕ್ಷೇತ್ರದಲ್ಲಿಯೂ ಇವರ ಸೇವೆ ಗಣನೀಯವಾದುದು. ಕಾವ್ಯಾವಲೋಕನಂ, ಕರ್ನಾಟಕ ಶಬ್ದಾನುಶಾಸನ ಪ್ರಕಾಶಿಕೆ, ಚನ್ನಬಸವ ಪುರಾಣ, ಪ್ರಭುಲಿಂಗಲೀಲೆ, ಶಬರ ಶಂಕರ ವಿಲಾಸಂ, ವೀರಶೈವ ತತ್ತ್ವ ಪ್ರಕಾರ, ಬಸವಣ್ಣನವರ ವಚನಗಳು, ಗಿರಿಜಾ ಕಲ್ಯಾಣ, ಪಂಪಾ ಶತಕ, ರಕ್ಷಾಶತಕ, ಬಸವ ಪುರಾಣ, ಮಲು ಹಣ ರಗಳೆ, ಕೈವಲ್ಯ ಕಲ್ಪವಲ್ಲರಿ, ಕುಂಬಾರ ಗುಂಡಯ್ಯ ರಗಳೆ. ಹಿಂದೂಸ್ಥಾನದ ಇತಿಹಾಸ ಮುಂತಾದ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದರು. ವಿದ್ವಾಂಸರಾಗಿದ್ದ ಶ್ರೀನಿವಾಸ ಅಯ್ಯಂಗಾರ್ಯರ ಸಹಕಾರದಿಂದ ಬಸವಣ್ಣನವರ ೧೨೦ ವಚನಗಳನ್ನು ಇಂಗ್ಲಿಷಿಗೆ ಅನುವಾದಿಸಿದರು. ಶಿಕ್ಷಣ, ಸಾಹಿತ್ಯ ಇವುಗಳ ಪ್ರಸರಣಕ್ಕೆ ಪತ್ರಿಕೆಗಳ ಪಾತ್ರ ಬಹುಮುಖ್ಯವೆಂದರಿತ ಬಸವನಾಳರು ‘ಪ್ರಬೋಧ’ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ಇದರ ಜೊತೆಗೆ ಧಾರವಾಡದಿಂದ ಪ್ರಕಟವಾಗುತ್ತಿದ್ದ ವಾಗ್ಭೂಷಣ ಪತ್ರಿಕೆ, ಆಲೂರು ವೆಂಕಟರಾಯರಿಂದ ಪ್ರಾರಂಭವಾಗಿದ್ದ ಜಯಕರ್ನಾಟಕ ಪತ್ರಿಕೆಗಳಲ್ಲೂ ಸೇವೆ ಸಲ್ಲಿಸಿದರು. ಇವುಗಳ ಜೊತೆಗೆ ಇಂಗ್ಲಿಷ್ ಪತ್ರಿಕೆಗಳಿಗೂ ಹಲವಾರು ಲೇಖನಗಳನ್ನು ಬರೆದರು. ವೀರಶೈವ ಸಾಹಿತ್ಯದಲ್ಲಿ ಪ್ರಕಾಂಡ ಪಂಡಿತರಾಗಿದ್ದುದರಿಂದ ಅಖಿಲ ಭಾರತ ವೀರಶೈವ ಸಮ್ಮೇಳನದ ಉದ್ಘಾಟಕರಾಗಿ ನಿರೋಜಿತರಾಗಿದ್ದರು. ೧೯೪೪ ರಲ್ಲಿ ರಬಕವಿಯಲ್ಲಿ ನಡೆದ ೨೮ನೆಯ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿ ಗೌರವಿಸಲ್ಪಟ್ಟರು. ಪ್ರಾಧ್ಯಾಪಕ, ಶಿಕ್ಷಣ ತಜ್ಞರೆನಿಸಿದ ಬಸವನಾಳರು ತೀರಿಕೊಂಡದ್ದು ೨೨.೧೨.೧೯೫೧ ರಲ್ಲಿ. ಬಸವನಾಳರ ಸ್ಮರಣೆಗಾಗಿ ೧೯೫೬ ರಲ್ಲಿ ಹೊರತಂದ ಗ್ರಂಥ ‘ಬಸವನಾಳ ಸ್ಮಾರಕ ಸಂಪುಟ’.

Details

Date:
November 7, 2023
Event Category: