ಸಂಪಟೂರು ವಿಶ್ವನಾಥ್

Home/Birthday/ಸಂಪಟೂರು ವಿಶ್ವನಾಥ್
Loading Events
This event has passed.

೨೮..೧೯೩೮ ವ್ಯಕ್ತಿ ವಿಕಸನ,  ಶಿಕ್ಷಣ, ಆರೋಗ್ಯ, ಜೀವನದಲ್ಲಿನ ಸಫಲತೆ, ಪ್ರವಾಸದಲ್ಲಿನ ಎಚ್ಚರಿಕೆ, ಸೌಂದರ್ಯದ ಗುಟ್ಟು – ಹೀಗೆ ಒಂದೇ, ಎರಡೇ…. ಯಾವುದೇ ವಿಷಯ ತೆಗೆದುಕೊಂಡರೂ ಅದರ ಬಗ್ಗೆ ಬರೆದ ಲೇಖನಗಳನ್ನು ಯಾವುದಾದರೊಂದು ಪತ್ರಿಕೆಯಲ್ಲಿ ಪ್ರತಿ ದಿನವೂ ಕಾಣುವ ಹೆಸರೆಂದರೆ ಸಂಪಟೂರು ವಿಶ್ವನಾಥ್‌, ಹುಟ್ಟಿದ್ದು ಬೆಂಗಳೂರು. ತಂದೆ ಎಸ್‌. ಹನುಮಂತರಾವ್‌, ತಾಯಿ ನಾಗಮ್ಮ. ಓದಿದ್ದು ಎಸ್‌.ಎಸ್‌.ಎಲ್‌.ಸಿ. ವರೆಗೆ ಮಲ್ಲೇಶ್ವರದ ಸರಕಾರಿ ಹೈಸ್ಕೂಲು. ಸರಕಾರಿ ಕಲೆ ಮತ್ತು ವಿಜ್ಞಾನ ಕಾಲೇಜಿನಿಂದ ಇಂಟರ್ ಮೀಡಿಯೆಟ್‌, ಸೆಂಟ್ರಲ್‌ ಕಾಲೇಜಿನಿಂದ ಪಡೆದ ಬಿ.ಎಸ್ಸಿ. ಪದವಿ. ಎಂ.ಇ.ಎಸ್‌. ಕಾಲೇಜಿನಿಂದ ಬಿ.ಎಡ್‌ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಡಿಪ್ಲೊಮ. ಬೋಧಕ ವೃತ್ತಿಯನ್ನು ಆಯ್ದುಕೊಂಡು ಗಾಂಧಿನಗರದ ಹೈಯರ್ ಸೆಕೆಂಡರಿ ಶಾಲೆ (ಕುಮಾರ ಪಾರ್ಕ್) ಯಲ್ಲಿ ಎಂಟನೆಯ ತರಗತಿಯಿಂದ ಪಿ.ಯು.ವರೆಗೂ, ೧೯೬೦ರಲ್ಲಿ ಬೋಧಕರಾಗಿ ಸೇರಿ, ಮುಖ್ಯೋಪಾಧ್ಯಾಯರಾಗಿ ೧೯೬೬ರಲ್ಲಿ ನಿವೃತ್ತಿ. ತರಗತಿಗಳಲ್ಲಿ ಪಠ್ಯ ಪುಸ್ತಕಗಳಲ್ಲಿದ್ದ ಪಾಠವನ್ನಷ್ಟೇ ಎಂದೂ ಬೋಧಿಸದೆ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದ ಜ್ಞಾನವನ್ನು ಬೋಧಿಸಿದ್ದೇ ಹೆಚ್ಚು. ತರಗತಿಯ ಹೊರಗಡೆಯೂ ವಿದ್ಯಾರ್ಥಿಗಳಿಗೆ ಉದ್ಯೋಗ, ಶಿಕ್ಷಣ, ಮಾರ್ಗದರ್ಶಿಯಾಗಿ, ರೆಡ್‌ ಕ್ರಾಸ್‌ ಸಮಸ್ಥೆಯ ಕಾರ್ಯಕರ್ತರಾಗಿ, ಜನಸಂಖ್ಯಾ ಶಿಕ್ಷಣದ ಸಂಪನ್ಮೂಲ ವ್ಯಕ್ತಿಯಾಗಿ, ಕರ್ನಾಟಕ ಸಂಗೀತ ನಾಟಕ ಅಕಾಡಮಿಗಾಗಿ ನಾಟ್ಯಶಾಸ್ತ್ರದ ಪಠ್ಯ ಹಾಗೂ ನಟನೆಯ ಶಿಕ್ಷಕರಾಗಿ – ಹೀಗೆ ಹಲವಾರು ಕ್ಷೇತ್ರಗಳಲ್ಲಿ ದುಡಿದಿದ್ದಾರೆ. ಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯ, ಅಣ್ಣಾಮಲೈ ವಿ.ವಿ.ಗಳಲ್ಲಿ ಬಿ.ಎಡ್‌, ಪದವಿಗಳ ಪಠ್ಯೇತರ ಚಟುವಟಿಕೆಗಳ ಪರೀಕ್ಷಕರಾಗಿ, ವಿಜ್ಞಾನ ಸಂಸ್ಥೆ, ಸೆಕೆಂಡರಿ ಎಜುಕೇಷನ್‌ ಬೋರ್ಡ್‌ನ ಪಠ್ಯ ಪುಸ್ತಕ ಸಮಿತಿ ಮತ್ತು ಡಿ.ಎಸ್‌.ಸಿ.ಆರ್.ಟಿ.ಇ. ಕಾರ್ಯಕ್ರಮಗಳ ಸಂಪನ್ಮೂಲ ವ್ಯಕ್ತಿಯಾಗಿಯೂ ಹೊತ್ತ ಜವಾಬ್ದಾರಿಗಳು. ೧೯೬೬ ರಿಂದಲೂ ಬರವಣಿಗೆಯನ್ನೂ ರೂಢಿಸಿಕೊಂಡು ಬರೆದ ಲೇಖನಗಳ ಸಂಖ್ಯೆಯೇ ಸುಮಾರು ೨೦೦೦. ಆಡುಮಟ್ಟದ ಸೊಪ್ಪಿಲ್ಲ ಎನ್ನುವಂತೆ ಬರೆಯದ ವಿಷಯಗಳೇ ಇಲ್ಲ. ಹೀಗೆ ಸರ್ವವಿಷಯದ ಬಗ್ಗೆ ಸಾರ್ವಕಾಲಿಕವಾಗಿ ಬರೆಯುತ್ತಿರುವ ಕೆಲವೇ ಲೇಖಕರಲ್ಲಿ ಪ್ರಮುಖರು. ಬರೆದ ಪುಸ್ತಕಗಳೂ ವೈವಿಧ್ಯಮಯ. ಮಕ್ಕಳ ಕಥಾ ಕೋಶ, ಜನಪ್ರಿಯ ಪುಟಾಣಿಗಳ ಚತುರೋಕ್ತಿಗಳು, ಧೀರ ಬಾಲಕ ಮತ್ತು ಇತರ ಕಥೆಗಳು, ಆನೆಕಥೆ ಮುಂತಾದ ೨೪ ಕೃತಿಗಳು; ವಿಜ್ಞಾನ ರಸ ಪ್ರಶ್ನೆಗಳು, ಜೈವಿಕ ತಂತ್ರಜ್ಞಾನ, ಸರಳ ವಿಜ್ಞಾನ ಪ್ರಯೋಗಗಳು, ಕಿರಿಯರ ವಿಜ್ಞಾನ ಕೋಶ, ರಸ ಪ್ರಶ್ನೆ, ಪದಕೋಶ, ವೈಜ್ಞಾನಿಕ ಕಥೆಗಳಿಂದ ಕೂಡಿದ ಸುಮಾರು ೧೦ ಕೃತಿಗಳು; ಭಾರತದ ಪ್ರತಿಭಾನ್ವಿತರು, ಪ್ರಮುಖ ಜೀವ ವಿಜ್ಞಾನಿಗಳು ಮುಂತಾದ ವ್ಯಕ್ತಿ ಚಿತ್ರಗಳು; ಶಾಲಾ ನಾಟಕಗಳು, ರೇಡಿಯೋ ನಾಟಕಗಳು ಮುಂತಾದ ೨೬ ನಾಟಕಗಳು; ಮಕ್ಕಳ ಆರೈಕೆಯ ಬಗ್ಗೆ ಬರೆದ ‘ನಿಮ್ಮ ಮುದ್ದಿನ ಮಗು’ ಕೃತಿ; ಹಾಸ್ಯ ಚಟಾಕಿ, ಹಾಸ್ಯೋಕ್ತಿಗಳು, ಮಕ್ಕಳ ನಗೆ ನುಡಿ, ಸಾಲಿಗೊಂದು ಜೋಕ್ಸ್‌ ಮುಂತಾದ ಮಕ್ಕಳ ನಗೆ ಹನಿ ಪುಸ್ತಕಗಳು; ರಸ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ವಿಜ್ಞಾನ ರಸ ಪ್ರಶ್ನೆಗಳು, ಸಾಮಾನ್ಯ ಜ್ಞಾನ ಮತ್ತು ರಸಪ್ರಶ್ನೆ ಮೊದಲಾದ ಕೃತಿಗಳು; ಬದುಕಿನಲ್ಲಿ ನೆಮ್ಮದಿ ಕಾಣಲು, ಅಳವಡಿಸಿಕೊಳ್ಳುವ ಸೂತ್ರಗಳ ಬಗ್ಗೆ ಬರೆದ ಸಾರ್ಥಕ ಬದುಕಿನ ಸರಳ ಸೂತ್ರಗಳು, ಸುಖ ಬಾಳಿನ ಸೂತ್ರಗಳು (ಭಾಗ ೧-೨), ಬಾಳಿಗೊಂದು ಬೆಳಕಿಂಡಿ ಮುಂತಾದ ನಿತ್ಯ ಬದುಕಿನಲ್ಲಿ ನೆರವಿಗೆ ಬರುವ ಕೃತಿಗಳು; ಪರಿಸರ, ಗಾದೆಗಳು, ಸಾಮಾನ್ಯರಿಗಾಗಿ ಬರೆದ ಕೃತಿಗಳೂ ಸೇರಿ ಸುಮಾರು ೬೦ ಕ್ಕೂ ಹೆಚ್ಚು ಕೃತಿಗಳು ಪ್ರಕಟಿತ. ಸಾಹಿತ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಂಪಟೂರರನ್ನೂ ಹುಡುಕಿಕೊಂಡು ಬಂದ ಪ್ರಶಸ್ತಿಗಳು ಹಲವಾರು. ಗೊರೂರು ಸಾಹಿತ್ಯ ಪ್ರಶಸ್ತಿ, ಎಂ.ಜಿ. ರಂಗನಾಥನ್‌ ಸ್ಮಾರಕ ಪ್ರಶಸ್ತಿ, ಸ್ನೇಹ – ಸೇತು ಬರಹಗಾರರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಹಾಸ್ಯ ಬ್ರಹ್ಮ ಟ್ರಸ್ಟ್‌ ಗೌರವ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ವಿಭೂಷಣ ಪ್ರಶಸ್ತಿ, ಕಾವ್ಯ ಸಿಂಚನ ಬರಹಗಾರರ ಬಹುಮಾನ, ಕೆಂಪೇಗೌಡ ಪ್ರಶಸ್ತಿ, ಮುಂತಾದ ಪ್ರಶಸ್ತಿ, ಗೌರವಗಳಿಗೆ ಕಳಶವಿಟ್ಟಂತೆ ಎರಡು ಬಾರಿ ೧೯೮೨, ೧೯೯೫ರಲ್ಲಿ ಬೆಂಗಳೂರು ನಗರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಬೆಂಗಳೂರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳು ದೊರೆತಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top