ಸತ್ಯಕಾಮ

Home/Birthday/ಸತ್ಯಕಾಮ
Loading Events
This event has passed.

೨.೩.೧೯೨೦ ೨೦.೧೦.೧೯೯೮ ಸತ್ಯಕಾಮರ ನಿಜನಾಮ ಅನಂತಕೃಷ್ಣ ಶಹಪೂರ. ಇವರು ಹುಟ್ಟಿದ್ದು ಗಲಗಲಿಯಲ್ಲಿ. ತಂದೆ ಕೃಷ್ಣಾ ಹಾಗೂ ತಾಯಿ ರುಕ್ಮಿಣಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ಗಲಗಲಿಯಲ್ಲೇ ಶಿಕ್ಷಣ ಪಡೆದದ್ದು. ಹೈಸ್ಕೂಲಿಗೆ ಸೇರಿದ್ದು ಬಾಗಲಕೋಟೆ. ಆದರೆ ವಿದ್ಯೆಗೆ ಶರಣುಹೊಡೆದು ಊರಿಗೆ ವಾಪಸ್ಸು ಬಂದರು. ಎಳೆವೆಯಿಂದಲೇ ಬೆಳೆದು ಬಂದದ್ದು ನಾಟಕದ ಕಡೆ ಒಲವು. ಕಟ್ಟಿದ್ದು “ಜೀವನ ನಾಟ್ಯ ವಿಲಾಸಿ ಮಂಡಲ.” ಹಲವಾರು ನಾಟಕಗಳ ಪ್ರಯೋಗ. ದೇಶದಲ್ಲೆಲ್ಲಾ ವ್ಯಾಪಿಸಿದ್ದ ಸ್ವಾತಂತ್ರ್ಯದ ಕಾವಿಗೆ ಬಲಿಯಾಗಿ, ಚಳವಳಿಗೆ ಧುಮುಕಿದರು. ೧೯೪೨ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇವರ ನೇತಾರರು ಕಾಖಂಡಕಿ ರಾಮಾಚಾರ‍್ಯರು, ತ್ರ್ಯಂಬಕ ದೇಶಪಾಂಡೆ, ಬುರ್ಲಿ ಬಿಂದುಮಾಧವರಾಯರು. ನೇತಾರರ ಮಾತಿನ ಮೋಡಿಗೆ ಒಳಗಾದರು. ಚಳವಳಿಗಾರರ ಬೆನ್ನು ಹತ್ತಿ ಹೋಗಿ ಆಪಾದನೆಗೊಳಗಾಗಿ ತಲೆಮರೆಸಿಕೊಂಡು ಓಡಾಟ ಕೆಲಕಾಲ. ಆದರೂ ಬಂಧನಕ್ಕೊಳಗಾಗಿ ಅನುಭವಿಸಿದ್ದು ಜೈಲುಶಿಕ್ಷೆ. ಸ್ಕೂಲು ಕಾಲೇಜಿನಿಂದ ಕಲಿಯುವುದಕ್ಕಿಂತ ಜೀವನ ರಂಗದಲ್ಲಿ ಕಲಿತದ್ದೇ ಜಾಸ್ತಿ. ಸ್ವಪ್ರಯತ್ನದಿಂದ ಗಳಿಸಿದ್ದು ಅಪಾರ ಜ್ಞಾನ ಸಂಪತ್ತು. ಉಡುಪಿಯಲ್ಲಿ ಅನಂತ ಪದ್ಮನಾಭ ಎಂಬ ಹೆಸರಿನಿಂದ ಕಲಿತದ್ದು ಸಂಸ್ಕೃತ. ಒಂದೆಡೆ ನಿಲ್ಲದ, ಕೂಡದ ಮನಸ್ಸು, ವಯಸ್ಸು. ದೇಶ ಸಂಚಾರದ ಚಕ್ರವನ್ನು ಕಾಲಿಗೆ ಕಟ್ಟಿಕೊಂಡು ಸುತ್ತಿದ್ದು ಇಡೀ ಭಾರತ. ನಾಟಕ, ಕವಿತೆ, ಕಾದಂಬರಿಗಳ ರಚನೆಯಲ್ಲಿ ಎಳೆವೆಯಿಂದಲೇ ತೊಡಗಿಸಿಕೊಂಡಿದ್ದರು. ವೀಣೆ, ಮಾತೃಮಂದಿರ, ಮಾತೃಲಹರಿ, ಗಂಗಾಲಹರಿ ನಾಲ್ಕು ಕವನ ಸಂಕಲನಗಳು. ಉತ್ತರಾಯಣ, ಬತ್ತಿದ ಕಡಲು, ಆಹುತಿ, ರಾಜಕ್ರೀಡೆ, ರಾಜಬಲಿ, ತಣ್ಣಗಿನ ಬೆಂಕಿ, ಬೆಂಕಿಯ ಮಗಳು, ಮುಂತಾದ ಇಪ್ಪತ್ತಕ್ಕಿಂತ ಹೆಚ್ಚು ಕಾದಂಬರಿಗಳು. ಶೃಂಗಾರ ತೀರ್ಥ, ನಾಯಿಮೂಗು, ಒಡೆದ ಕನ್ನಡಿ, ಮನ್ವಂತರ, ಹಳೆಯ ರಾಜಕೀಯ ಮೊದಲಾದ ಕಥಾಸಂಕಲನಗಳು. ತ್ರಿಸುಪರ್ಣ, ತಂತ್ರಯೋನಿ, ಋಷಿ ಪಂಚಮಿ, ಚಿಂತನಪರ, ಪಂಚಮಗಳ ನಡುವೆ, ಅರ್ಧನಾರಿ, ಲಾವಣ್ಯ ಇನ್ನಿತರ ಕೃತಿಗಳು. ‘ಶ್ರೀ’, ’ಕಲ್ಯಾಣ’ ಸತ್ಯಕಾಮರ ಸ್ವಂತ ಪತ್ರಿಕೆಗಳು. ಕಲ್ಕಿ, ಸಾಧನಾ, ಸಂಕ್ರಾಂತಿ, ಪಂಚಾಮೃತ, ಸಂಯುಕ್ತ ಕರ್ನಾಟಕದಲ್ಲೂ ಕೆಲ ಕಾಲ ದುಡಿದರು. ಜಮಖಂಡಿಯ ಹತ್ತಿರವಿರುವ ಕಲ್ಲಹಳ್ಳಿಯ ಗುಡ್ಡಗಾಡನ್ನು ನಂದನ ವನವನ್ನಾಗಿ ಪರಿವರ್ತಿಸಿದ ಕೃಷಿ ಅನುಭವಿ. ಶಾಕ್ತ್ಯಾರಾಧನೆಯಲ್ಲಿ ಆಕರ್ಷಿತರಾಗಿ ೧೪ನೇ ವಯಸ್ಸಿನಿಂದಲೇ ತೊಡಗಿಸಿಕೊಂಡಿದ್ದು, ತಾಂತ್ರಿಕ ಲೋಕದ ನಿಗೂಢ ಅರಿಯಲು ಉಜ್ಜಯಿನಿ ಯಾತ್ರೆ, ಗಳಿಸಿದ್ದು ಮಂತ್ರ-ತಂತ್ರ ವಿದ್ಯೆಯಲ್ಲಿ ಅಪಾರ ಜ್ಞಾನ. ಈ ಅನುಭವದಿಂದಲೇ ಹೊಮ್ಮಿದ ಕೃತಿ ‘ಪಂಚಮಗಳ ನಡುವೆ.’ ಸಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಚಿ.ಶ್ರೀ. ಕುಲಕರ್ಣಿ – ೧೯೧೦ ಕೆ.ಎಸ್. ನಾರಾಯಣಸ್ವಾಮಿ – ೧೯೨೯ ರಾಘವೇಂದ್ರ ಖಾಸಾನೀಸ – ೧೯೩೩ ಭುವನೇಶ್ವರಿ ಬಾಗಲಕೋಟೆ – ೧೯೩೩ ಜಗದಾಂಬ ಮಲ್ಲೇದೇವರು – ೧೯೪೧ ಬಸವರಾಜ ವೀರಭದ್ರಶಿರೂರ – ೧೯೪೧

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top