ಸರಸ್ವತಿದೇವಿ ಗೌಡರ

Home/Birthday/ಸರಸ್ವತಿದೇವಿ ಗೌಡರ
Loading Events
This event has passed.

೨೮.೦೨.೧೯೨೩ ೦೧.೦೭.೧೯೭೩ ಉತ್ತರ ಕರ್ನಾಟಕದ ಹಲವಾರು ಲೇಖಕಿಯರು ಸ್ವಾತಂತ್ರ‍್ಯಪೂರ್ವದಲ್ಲಿಯೇ ಸ್ತ್ರೀಪರ ಕಾಳಜಿಗಳ ಬಗ್ಗೆ, ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅವರಲ್ಲಿ ಪ್ರಮುಖರಾಗಿದ್ದ ಸರಸ್ವತಿದೇವಿ ಗೌಡರ ರವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಸಂಪಗಾವಿ ತಾಲ್ಲೂಕಿನ ತಿಗಡಿ ಎಂಬ ಹಳ್ಳಿಯಲ್ಲಿ. ತಂದೆ ಮುಂಬೈ ಪ್ರಾಂತ್ಯದ ಆಡಳಿತಗಾರರಾಗಿದ್ದ ಬಸವಲಿಂಗಪ್ಪ ಅಡಿವೆಪ್ಪ ನಿರಡಿ. ತಾಯಿ ಪಾರ್ವತಿದೇವಿ ನಿರಡಿ. ವಿದ್ಯಾವಂತ ಮನೆತನದಲ್ಲಿ ಹುಟ್ಟಿದ್ದರಿಂದ ವಿದ್ಯೆಗೆ ಎಲ್ಲ ರೀತಿಯ ಸೌಕರ್ಯಗಳೂ ದೊರೆತು ಪ್ರಾರಂಭಿಕ ಶಿಕ್ಷಣ ಪಡೆದುದು ಬೆಳಗಾವಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ. ಹತ್ತಿರದಲ್ಲಿ ಹೆಣ್ಣು ಮಕ್ಕಳ ಪ್ರೌಢಶಾಲೆಗಳಿಲ್ಲದೆ ಮುಂದಿನ ಶಿಕ್ಷಣ ಅಲಭ್ಯವಾದರೂ ಮನೆಯಲ್ಲಿಯೇ ಕುಳಿತು ‘ಕನ್ನಡ ಜಾಣ’ ಪರೀಕ್ಷೆಯಲ್ಲಿ ಉತ್ತೀರ್ಣರಾದುದಲ್ಲದೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ರಾಷ್ಟ್ರಭಾಷಾ ವಿಶಾರದೆಯಾದರು. ಜೊತೆಗೆ ಇಂಗ್ಲಿಷ್ ಕಲಿತಿದ್ದರಿಂದ ಸಾಹಿತ್ಯ ರಚನೆಯಲ್ಲಿ ಆಸಕ್ತಿ ಬೆಳೆಯತೊಡಗಿತು. ಬಿಡುವಿನ ವೇಳೆಯಲ್ಲಿ ದೇಶದ, ರಾಜ್ಯದ ಇತಿಹಾಸಕ್ಕೆ, ಪ್ರಾಚೀನ ಪರಂಪರೆಗೆ ಸಂಬಂಧಿಸಿದ, ಭಾರತೀಯ ಮಹಿಳೆಯರ ಆಗುಹೋಗುಗಳ, ಮಹಿಳೆಯರೇ ಬರೆದ ಗ್ರಂಥಗಳ ವಿಸ್ತಾರ ಓದನ್ನು ಕೈಗೊಂಡು ತಮ್ಮ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಂಡರು. ಮದುವೆಯಾಗಿ ಮೂರು ಮಕ್ಕಳ ತಾಯಿಯಾದ ನಂತರವೂ ಸಾಹಿತ್ಯ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಬಿಡುವಿಲ್ಲದೆ ದುಡಿದರು. ನಿರಂತರವಾದ ಅವರ ಕಲಿಕೆಯ ಹಂಬಲದಿಂದ ‘ಶಿವಾನುಭವ’ ಪರೀಕ್ಷೆ ಬರೆದು ಚಿನ್ನದ ಪದಕ ಪಡೆದರು. ಅಖಿಲ ಭಾರತ ‘ಅಕ್ಕನ ಬಳಗ’ದ ಕಾರ್ಯದರ್ಶಿಯಾಗಿ ಅಕ್ಕನ ಬಳಗ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಣ್ಣ ಕಥೆ, ಕಾವ್ಯ, ನಾಟಕ, ಜೀವನ ಚರಿತ್ರೆ ಮತ್ತು ಪ್ರಬಂಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಇವರ ಮೊದಲ ಏಕಾಂಕ ನಾಟಕ ‘ಕನ್ನಡ ನಾಡ ದೇವಿ’ ಪ್ರಕಟವಾದುದು ೧೯೪೨ರಲ್ಲಿ. ಹಲವಾರು ಸಣ್ಣ ಕಥೆಗಳನ್ನು ಬರೆದಿದ್ದು ಅವು ಉತ್ತರ ಕರ್ನಾಟಕದ ಜಯಂತಿ, ಜಯ ಕರ್ನಾಟಕ, ಜ್ಯೋತಿ, ಸಮರ ಸಂಚಯ, ಸೋದರಿ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೌಟುಂಬಿಕ ಚೌಕಟ್ಟಿನೊಳಗೆ ಸ್ತ್ರೀಯರ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳ ವಿಶ್ಲೇಷಣೆಗಳು, ಸಾಂಪ್ರದಾಯಿಕ ಬದುಕಿನ ಆಚರಣೆಗಳು, ಪದ್ಧತಿಗಳು, ವೈಧವ್ಯ, ವರದಕ್ಷಿಣೆಯ ಪಿಡುಗು ಮುಂತಾದವುಗಳನ್ನು ವಿವೇಚಿಸಿ ಬರೆದ ಹಲವಾರು ಕಥೆಗಳನ್ನು ಎರಡು ಸಂಕಲನಗಳಲ್ಲಿ ಹೊರತಂದಿದ್ದಾರೆ. ಮೊದಲ ಸಂಕಲನ ‘ಅಲ್ಪ ವಿರಾಮ’ (೧೯೫೮). ಇದರಲ್ಲಿ ಹತ್ತು ಕಥೆಗಳಿದ್ದರೆ, ಎರಡನೆಯ ಸಂಕಲನ ‘ಪುಣ್ಯ ಸ್ಮೃತಿ’ (೧೯೭೨) ಯಲ್ಲಿಯೂ ಹತ್ತು ಕಥೆಗಳಿವೆ. ಇವಲ್ಲದೆ ಇನ್ನೂ ಹಲವಾರು ಕಥೆಗಳನ್ನು ಬರೆದಿದ್ದಾರೆ. ಕಥೆಗಳ ಜೊತೆಗೆ ಕಾವ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದು ಹಲವಾರು ಕವಿತೆಗಳನ್ನು ಬರೆದಿದ್ದರೂ ಅವು ಸಂಕಲನ ರೂಪದಲ್ಲಿ ಹೊರಬಂದಿಲ್ಲ. ಇವರ ಮತ್ತೊಂದು ಆಸಕ್ತ ಪ್ರಕಾರವೆಂದರೆ ನಾಟಕ ರಚನೆ ಮತ್ತು ರಂಗ ಭೂಮಿಯ ಪ್ರದರ್ಶನಗಳು. ಸುಮಾರು ಹದಿನಾಲ್ಕು ನಾಟಕಗಳನ್ನು ಬರೆದಿದ್ದಾರೆ. ಹನ್ನೆರಡನೆಯ ಶತಮಾನದ ಶರಣರ ಕ್ರಾಂತಿಯನ್ನು ವಸ್ತುವನ್ನಾಗಿಸಿಕೊಂಡು ಬರೆದ ನಾಟಕಗಳೆಂದರೆ ಆಯ್ದಕ್ಕಿ ಲಕ್ಷ್ಮಮ್ಮ, ಕಲ್ಯಾಣದ ರೂಪಕ, ಕಲ್ಯಾಣದ ಕೊನೆಗಾಲ, ಕೂಡಲ ಸಂಗಮ, ನಿಲಾಂಬಿಕೆ ಮತ್ತು ಮೋಳಿಗೆ ಮಾರಯ್ಯ. ಚಾರಿತ್ರಿಕ ನಾಟಕಗಳೆಂದರೆ ಕೆಳದಿಯ ಚೆನ್ನಮ್ಮಾಜಿ, ಸಂಗೊಳ್ಳಿ ರಾಯಣ್ಣ, ಮಲ್ಲ ಸರ್ಜಾ ಮುಂತಾದವುಗಳು. ಸಾಮಾಜಿಕ ನಾಟಕಗಳೆಂದರೆ ಉಡುಗೊರೆ, ಕಳೆದ ಕೈಗಡಿಯಾರ, ಧರ್ಮಸಂಕಟ, ನಾಲಗೆಯ ಬೆಲೆ ಮತ್ತು ಕನ್ನಡ ನಾಡಿನ ಮಹಿಳಾ ಪರಂಪರೆ. ಸರಸ್ವತಿ ದೇವಿಯವರ ಸಾಹಿತ್ಯ ರಚನೆಯಲ್ಲಿ ಪ್ರಬಂಧ ರಚನೆಗಳು ಸಿಂಹಪಾಲು ಪಡೆದುಕೊಂಡಿವೆ. ಮಹಾನುಭಾವ ಬಸವಣ್ಣನವರು, ರಾಣಿ ಮಹಾದೇವಿ, ವೈಹಾಳಿಯ ವೈಪರಿತ್ಯ, ಹಿಂದಿ ಅವಶ್ಯಕವೋ ಅನವಶ್ಯಕವೋ ಮುಂತಾದ ಹಲವಾರು ಪ್ರಬಂಧಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಮೊದಲ ವ್ಯಕ್ತಿ ಚಿತ್ರ ಸಂಕಲನ ‘ಭಾರತದ ವೀರ ಮಹಿಳೆಯರು’. ಈ ಕೃತಿಯು ೧೯೪೪ರಲ್ಲಿ ಪ್ರಕಟಗೊಂಡಿದ್ದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಹುಮಾನ ಪಡೆದುದಲ್ಲದೆ ಎರಡು ಮುದ್ರಣಗಳನ್ನು ಕಂಡಿದೆ. ಇದಲ್ಲದೆ, ‘ಭಾರತದ ಜೈನ ವೀರ ಮಹಿಳೆಯರು’ ಮತ್ತು ‘ಶಿವ ಶರಣೆಯರ ಚರಿತ್ರೆಗಳ ಸಂಗ್ರಹ’ ಎಂಬ ಮತ್ತೆರಡು ಕೃತಿಗಳನ್ನು ಪ್ರಕಟಿಸಿದ್ದಾರೆ. ಸರಸ್ವತಿ ದೇವಿಯವರ ಹಲವಾರು ಪ್ರಬಂಧಗಳಲ್ಲಿ ಮಹಿಳೆಯರ ಕ್ಷೇಮಾಭಿವೃದ್ಧಿ, ಮಹಿಳೆಯರ ಪ್ರಗತಿಗೆ ಸಂಬಂಧಿಸಿದ ಕಾನೂನು, ಶಿಕ್ಷಣ ಕ್ಷೇತ್ರದ ವಿಚಾರಗಳು, ಗ್ರಾಮಾಂತರ ಪ್ರದೇಶದ ಮಹಿಳೆಯರ ಸಮಸ್ಯೆಗಳು, ಮಹಿಳಾ ಸಂಸ್ಥೆಗಳ ಕಾರ್ಯಾಚರಣೆ ಮುಂತಾದ ಸ್ತ್ರೀಪರ ವಿಚಾರಗಳನ್ನು ತಮ್ಮ ಪ್ರಬಂಧಗಳಲ್ಲಿ ಚರ್ಚಿಸಿದ್ದಾರೆ. ಮಹಿಳೆಯರಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿಗೆ ಕಾನೂನಿನ ಪರಿಹಾರವನ್ನು ಹೇಗೆ ಪಡೆದುಕೊಳ್ಳಬಹುದೆನ್ನುವುದನ್ನು ಕುರಿತು ‘ಹಿಂದು ಕಾಯಿದೆ ಮತ್ತು ಸ್ತ್ರೀಧನ’ ಮತ್ತು ‘ಮಹಿಳಾ ಜೀವನದ ಸಮಸ್ಯೆಗಳು ಮತ್ತು ಪರಿಹಾರ’ ಎಂಬ ಎರಡು ಕೃತಿಗಳನ್ನು ರಚಿಸಿದ್ದಾರೆ. ಹೀಗೆ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮ ಚಿಂತನೆಗಳನ್ನು ಬರಹಗಳ ಮೂಲಕ ವ್ಯಕ್ತಪಡಿಸುತ್ತಾ, ಸಮಾಜ ನಿರ್ಮಾಣ ಕಾರ್ಯದಲ್ಲಿ ಬರಹಗಾರರ ಜವಾಬ್ದಾರಿ ಎಷ್ಟೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top