ಸರಿತಾ ಜ್ಞಾನಾನಂದ

Home/Birthday/ಸರಿತಾ ಜ್ಞಾನಾನಂದ
Loading Events
This event has passed.

೨೧..೧೯೪೨  ಸಂಗೀತ, ನೃತ್ಯ, ನಾಟಕ, ಸಾಹಿತ್ಯ ಹೀಗೆ ಹಲವಾರು ರಂಗಗಳಲ್ಲಿ  ಪರಿಣತಿ ಪಡೆದಿರುವುದಲ್ಲದೆ ಮಹಿಳೆಯರ ಸರ್ವತೋಮುಖ ಬೆಳವಣಿಗೆಗಾಗಿ ಸಾಂಸ್ಕೃತಿಕವಾಗಿ ತೊಡಗಿಸಿಕೊಂಡು, ಸಮಾಜದ ಉನ್ನತಿಗಾಗಿ ದುಡಿಯುತ್ತಿರುವ ಸರಿತಾ ಜ್ಞಾನಾನಂದರು ಹುಟ್ಟಿದ್ದು ೧೯೪೨ ರ ಜನವರಿ ೨೧ ರಂದು ಬೆಂಗಳೂರಿನ ಹಲಸೂರಿನಲ್ಲಿ. ತಂದೆ ಎನ್. ಆರ್. ನಂಜುಂಡಸ್ವಾಮಿ, ತಾಯಿ ಸುಬ್ಬಮ್ಮ. ಪ್ರಾರಂಭಿಕ ಶಿಕ್ಷಣ ಬೆಂಗಳೂರು. ಮ್ಯೆಸೂರು ವಿಶ್ವವಿದ್ಯಾಲಯದ ಬಿ. ಎ. ಮತ್ತು ಬಿ.ಎಡ್. ಪದವಿಗಳು ಹಾಗೂ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಪಡೆದ ಎಂ. ಎಡ್. ಪದವಿ. ದಕ್ಷಿಣ ಭಾರತ ಹಿಂದೂ ಪ್ರಚಾರ ಸಭಾ, ಚೆನ್ಯೆನಿಂದ ಹಿಂದಿ ಭಾಷೆಯಲ್ಲಿ ರಾಷ್ಟ್ರಭಾಷಾ ಪ್ರವೀಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವರಲ್ಲದೆ ಕನ್ನಡ, ಇಂಗ್ಲಿಷ್, ತೆಲುಗು, ತಮಿಳು, ಮರಾಠಿ, ಮಲಯಾಳಂ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಡೆದ ಪ್ರಾವೀಣ್ಯತೆ. ಉದ್ಯೋಗಕ್ಕಾಗಿ ಸೇರಿದ್ದು ಸೇಂಟ್ ಆನ್ಸರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕಿಯಾಗಿ,  ನಂತರ ಕೆ.ಜಿ.ಎಫ್.ನ  ಬಿ.ಜಿ.ಎಂ.ಎಲ್ ಶಾಲೆ, ಸೇಂಟ್ ಮೇರೀಸ್ ಬಾಲಕರ ಪ್ರೌಢಶಾಲೆ, ನೂರೀಸ್ ಟಿ.ಸಿ.ಎಚ್. ಶಾಲೆ, ಬೆಂಗಳೂರಿನ ಮಿರ‍್ಯಾಂಡ ಶಾಲೆ ಮೊದಲಾದೆಡೆಗಳಲ್ಲಿ ಕಾರ‍್ಯನಿರ್ವಹಿಸಿ ನಿವೃತ್ತಿ. ಸಾಹಿತ್ಯದಲ್ಲಿ ವಿಶೇಷ ಒಲವಿದ್ದು ತಾವು ಬರೆದ ಕೃತಿಗಳಷ್ಟೇ ಸಂಖ್ಯೆಯ ಅನುವಾದ ಕೃತಿಗಳನ್ನು ರಚಿಸಿದ್ದು ಒಟ್ಟು ಕೃತಿಗಳ ಸಂಖ್ಯೆ ಸುಮಾರು ನೂರರ ಹತ್ತಿರ. ಇವರು ಬರೆದ ಮೊದಲ ಕಾದಂಬರಿ ‘ಒಂದೂರಲ್ಲಿ ಒಬ್ಬ ನಿರ್ಮಲಾ’- ಮಧ್ಯಮವರ್ಗದ ಹೆಣ್ಣಿನ ಬದುಕಿನ ಚಿತ್ರಣವಿರುವ ಕಾದಂಬರಿಯು ವಿಮರ್ಶಕರ ಮೆಚ್ಚುಗೆ ಗಳಿಸಿದ ನಂತರ ಬರೆದ ಕಾದಂಬರಿಗಳು ಹಲವಾರು. ಅಧ್ಯಾಪಕನ ಬದುಕಿನ ಚಿತ್ರಣವಿರುವ ‘ಬೆಂಕಿ ಹೂ’. ಮಹಿಳೆಯೊಬ್ಬರು ಬರೆದ ಮೊಟ್ಟಮೊದಲ ವೈಜ್ಞಾನಿಕ ಕಾದಂಬರಿ ಎಂಬ ಹೆಗ್ಗಳಿಕೆಗೆ ಪ್ರಾಪ್ತವಾದ  ಕಾದಂಬರಿ. ‘ಪರಿಪೂರ್ಣ’, ‘ಬಂಧನಕೆ ಬಂದ ಗಿಳಿ’, ‘ಒಲಿದರೆ ನಾರಿ’ ಮುಂತಾದ ಸಾಮಾಜಿಕ ಕಾದಂಬರಿ, ವೈಜ್ಞಾನಿಕ  ಕಾದಂಬರಿಗಳಲ್ಲದೆ, ಪಾಕೀಸ್ತಾನದಲ್ಲಿ ಶಂಕರ್…, ಪ್ರಪಾತ, ಗಾಜಿನ ಕಣ್ಣು, ಎ ಹೌಸ್ ಟುಲೆಟ್ ಮುಂತಾದ ಪತ್ತೇದಾರಿ ಕಾದಂಬರಿಗಳೂ ಸೇರಿ ೧೮ ಕಾದಂಬರಿಗಳನ್ನು ರಚಿಸಿದ್ದಾರೆ. ‘ತನ್ನ ಮೀನು ತಾನಾದ’ ವೈಜ್ಞಾನಿಕ ಕಾದಂಬರಿಯು ಕನ್ನಡ ಪ್ರಭ ಪತ್ರಿಕೆಯಲ್ಲಿ ಧಾರಾವಾಹಿಯಾಗಿ, ‘ಪ್ರಪಾತ’ ಕಾದಂಬರಿಯು ಕರ್ಮವೀರ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ‘ಒಲಿದರೆ ನಾರಿ’ ಮತ್ತು ‘ಸುವರ್ಣ ಮಾಲಿ’ ಕಾದಂಬರಿಗಳು ‘ಪ್ರಜಾಮತ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ, ‘ವಿಷ ಗರ್ಭ’ ಕಾದಂಬರಿಯು ತರಂಗ ವಾರ ಪತ್ರಿಕೆಯಲ್ಲಿ… ಹೀಗೆ ಹಲವಾರು ಕಾದಂಬರಿಗಳು ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಜನಪ್ರಿಯ ಕಾದಂಬರಿಗಳೆನಿಸಿವೆ. ಶಾಲಾಮಕ್ಕಳು ಅಭಿನಯಿಸಲು ಅನುಕೂಲವಾಗುವಂತಹ ಹೆಣ್ಣೇ ಹೆಚ್ಚು  ಹಾಗೂ ಮಲ್ಲಿಗೆಯ ನಾಟಕ ಸ್ಪರ್ಧೆಯಲ್ಲಿ ಪ್ರಥಮ  ಬಹುಮಾನ ಪಡೆದ ‘ಮೋಡಗಳು’, ನಾಯಿಕೊಡೆ’ ಮೊದಲಾದ ಅಸಂಗತ ನಾಟಕಗಳಲ್ಲದೆ ‘ರಾಕ್ಷಸ’, ‘ಥ್ಯಾಂಕ್ಯು ಮಿಸ್ಟರ್ ಗ್ಲಾಡ್’ (ಅನಿಲ್ ಬರ್ವೆಯವರ ಕಾದಂಬರಿ ಆಧಾರಿತ), ‘ನಾಳೆ ಯಾರದು ?’ ಮುಂತಾದ ಹಲವಾರು ನಾಟಕಗಳನ್ನು ರಚಿಸಿದ್ದಾರೆ. ನಾಟಕಗಳನ್ನು ರಚಿಸಿದ್ದೇ ಅಲ್ಲದೆ, ಸಿ. ಜಿ. ಕೆ.ಯವರ ನಿರ್ದೇಶನದ ‘ನೀಗಿಕೊಂಡ ಸಂಸ’, ಹಾಗೂ ‘ಜುಂನಾಳ ‘ಧೂಳ್ಯನ ಪ್ರಸಂಗ’, ‘ಸಂಗ್ಯಾ ಬಾಳ್ಯ’, ‘ಜೋಕುಮಾರ ಸ್ವಾಮಿ’ ‘ಸಖೀಗೀತ’, ಬೆನಕನ ಕೆರೆ’, ಮುಂತಾದ ೨೦ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸುಮಾರು ಮುನ್ನೂರಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ರಚಿಸಿದ್ದು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟಗೊಂಡಿರುವುದಲ್ಲದೆ ತೆಲುಗು, ತಮಿಳು, ಹಿಂದಿ ಭಾಷೆಗಳಿಗೂ ಅನುವಾದಗೊಂಡಿವೆ. ಹಲವಾರು ಸ್ಪರ್ಧೆಗಳಲ್ಲಿ ಕತೆಗಳು ಬಹುಮಾನ ಪಡೆದಿರುವುದಲ್ಲದೆ ಪ್ರತಿಷ್ಠಿತ ಸಂಕಲನಗಳಲ್ಲೂ ಇವರ ಕತೆಗಳು ಸೇರ‍್ಪಡೆಯಾಗಿವೆ. ‘ಬೃಂದಾವನ’, ಹಾಗೂ ‘ತುಳಸೀ ಕಟ್ಟೆ’, ಎಂಬ ಎರಡು ಕಥಾಸಂಕಲನಗಳೂ ಪ್ರಕಟಗೊಂಡಿವೆ. ಹಲವಾರು ಕತೆಗಳು ದೂರದರ್ಶನದಲ್ಲೂ ಪ್ರಸಾರವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಣೆಯ ಭಾರತ-ಭಾರತಿ ಪುಸ್ತಕ ಮುಂತಾದ ಮಾಲೆಗಾಗಿ, ಮೀರಾಬಾಯಿ, ಅಶ್ವಘೋಷ, ಗಡಿಯಾರ, ಮಿದುಳು, ಕಣ್ಣು ಮುಂತಾದ ಹಲವಾರು ಮಕ್ಕಳ ಪುಸ್ತಕಗಳನ್ನೂ ರಚಿಸಿದ್ದಾರೆ. ಸಂಪಾದಿತ ಕೃತಿಗಳಲ್ಲಿ ಪ್ರಮುಖವಾದವುಗಳೆಂದರೆ ಶರಭಾಂಕಲಿಂಗ ಶತಕಮು, ಡಾ. ಬಾ. ರಾ. ಗೋಪಾಲ್ ಅವರ ಕನ್ನಡ ಲೇಖನಗಳು, ಆಚಾರ‍್ಯ ಶ್ರೀ, ಆಚಾರ‍್ಯಾಭಿವಂದನೆ, ಜಕ್ಕಣಾಚಾರ‍್ಯ, ಮುಂತಾದವು ಪ್ರಮುಖವಾದವುಗಳು. ಅನುವಾದ ಸಾಹಿತ್ಯದಲ್ಲೂ ಇವರ ಕೊಡುಗೆ ದೊಡ್ಡದೆ. ಯಂಡಮೂರಿ ವೀರೇಂದ್ರನಾಥ್, ಸೂರ‍್ಯದೇವರ ರಾಮಮೋಹನರಾವ್, ಡಾ. ಕೊಂಡೂರು ವೀರರಾಘವಾಚಾರ್ಯಲು, ಬಲಿವಾಡ ಕಾಂತರಾವ್, ಮಲ್ಲಾದಿ ವೆಂಕಟ ಕೃಷ್ಣಮೂರ್ತಿ, ಡಾ. ಸಮರಂ ಮುಂತಾದ ತೆಲಗು ಲೇಖಕರು, ತಮಿಳಿನ ಶಿವ ಶಂಕರಿ, ನಾರಾಯಣದತ್ತ ಶ್ರೀಮಾಲಿಯವರ ಹಿಂದಿ, ರಾಮ ಮೊಹಮದ್ ಡಿಸೌಜರವರ ಉರ್ದು ಮತ್ತು ಮರಾಠಿ ಭಾಷೆಗಳಿಂದ ಸುಮಾರು ೪೦ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲದೆ ಕೋಲಾರ ಜಿಲ್ಲೆಯ ಸಾಹಿತಿಗಳನ್ನು ಗುರುತಿಸಿ ಶ್ರೇಷ್ಠಸಾಹಿತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಸಂಘ ಸಂಸ್ಥೆಗಳ ಮೂಲಕ ಸಂಗೀತ, ನೃತ್ಯ ಶಿಕ್ಷಣ ನೀಡಿ ಹಲವಾರು ವಿದ್ಯಾರ್ಥಿನಿಯರು ರ‍್ಯಾಂಕ್ ಪಡೆದಿದ್ದಾರೆ. ದೇವತಾ ಸ್ಮರಣೆಗಾಗಿ ಹಲವಾರು ಕ್ಯಾಸೆಟ್ಟುಗಳನ್ನು ಬಿಡುಗಡೆ ಮಾಡಿದ್ದಾರೆ. ಶಾಲೆಯಲ್ಲಿ ಶಿಕ್ಷಕಿಯಾಗಿದ್ದಷ್ಟೇ ಅಲ್ಲದೆ ಕೆ. ಜಿ.ಎಫ್. ನಲ್ಲಿ ಕನ್ನಡೇತರರಿಗೆ ಕನ್ನಡ ತರಗತಿಗಳನ್ನು ನಡೆಸಿ ಕನ್ನಡ ಭಾಷೆಯನ್ನು ಪರಿಚಯಿಸಿದ್ದಾರೆ. ಹೀಗೆ ಶ್ರೀ ಜ್ಞಾನಾನಂದ (ಜುಲೈ ೫- ನೋಡಿ) ಹಾಗೂ ಶ್ರೀಮತಿ ಜ್ಞಾನಾನಂದರದ್ದು ಅನುರೂಪ ದಾಂಪತ್ಯವಾಗಿದ್ದು ಸಾಹಿತ್ಯ, ನೃತ್ಯ, ಸಂಗೀತ, ಶಿಲ್ಪಕಲೆ, ಮುಂತಾದ ಕಲಾಪ್ರಕಾರಗಳಿಗೆ ಇಬ್ಬರ ಕೊಡುಗೆಯೂ ಬಹು ದೊಡ್ಡದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top