ಸರೋಜ ನಟರಾಜನ್

Home/Birthday/ಸರೋಜ ನಟರಾಜನ್
Loading Events
This event has passed.

೨೭.೦೬.೧೯೪೩ ಸಂಗೀತ ಕಲಾವಿದರ, ಸಂಗೀತಜ್ಞರ ಮನೆತನದಲ್ಲಿ ಹುಟ್ಟಿ, ಸಂಗೀತ ವಿದುಷಿ ಎನಿಸಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಹಾಡುತ್ತಿರುವ ಸರೋಜ ನಟರಾಜನ್‌ರವರು ಹುಟ್ಟಿದ್ದು ಮುಂಬಯಿ. ತಂದೆ ಎಂ.ಆರ್‌. ಅನಂತ್, ತಾಯಿ ಜ್ಞಾನಂಬಾಳ್, ೩ನೇ ವಯಸ್ಸಿನಿಂದಲೇ ಸಂಗೀತ ಪಾಠ. ಏಳನೆಯ ವಯಸ್ಸಿಗೆ ವೇದಿಕೆ ಏರಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ. ಮನೆಯಲ್ಲಿ ಸದಾ ಸಂಗೀತದ ವಾತಾವರಣ. ತಾಯಿಯಿಂದ ಪಡೆದ ಮಧುರ ಕಂಠ, ಚಿಕ್ಕಪ್ಪ ಮತ್ತೂರು ಎಂ.ಆರ್‌. ಶಂಕರಮೂರ್ತಿಯವರಿಂದ ಸಂಗೀತ ಶಿಕ್ಷಣ. ನಂತರ ಅಯ್ಯಲೂರು ಕೃಷ್ಣನ್, ಅರಿಯಾಕುಡಿ ರಾಮಾನುಜ ಅಯ್ಯಂಗಾರ್‌, ಮಧುರೆ ಕೃಷ್ಣನ್, ಕಾಕಿನಾಡದ ಮುನಿಕಂಠಿ ವೆಂಕಟರಾವ್ ಮುಂತಾದವರಲ್ಲಿ ಕರ್ನಾಟಕ ಸಂಗೀತದ ಉನ್ನತ ಶಿಕ್ಷಣ. ಹಿಂದೂಸ್ತಾನಿ ಸಂಗೀತ ಕಲಿತದ್ದು ಹೈದರಾಬಾದಿನ ಅಂಬೆದಾಸ ಆಪ್ಟೆಯವರಿಂದ. ಕರ್ನಾಟಕ, ಹಿಂದೂಸ್ತಾನಿ ಸಂಗೀತದ ಜೊತೆ ಸಂಸ್ಕೃತ ಶ್ಲೋಕಗಳ ಗಾಯನ, ಹಿಂದಿ ಭಜನ್ಸ್, ಪಂಜಾಬಿ ಸಭತ್, ಮರಾಠಿ ಅಭಂಗ್, ತೆಲುಗು, ತಮಿಳು, ಕನ್ನಡ ದೇವರನಾಮಗಳು, ಸುಗಮ ಸಂಗೀತ, ಭಾವಗೀತೆ ಹೀಗೆ ಹಲವಾರು ಪ್ರಕಾರಗಳಲ್ಲಿ ಪಡೆದ ಪರಿಣತಿ, ನಡೆಸಿಕೊಟ್ಟ ಕಾರ್ಯಕ್ರಮಗಳು. ಶೋತೃಗಳಿಗೂ ಗಾಯಕಿಯಾದ ತಮಗೂ ಏರ‍್ಪಡಿಸಿಕೊಳ್ಳುತ್ತಿದ್ದ ಸಾಮರಸ್ಯದಿಂದ ನೀಡುತ್ತಿದ್ದ ವೈವಿಧ್ಯಮಯ ಕಾರ್ಯಕ್ರಮ. ಹಲವಾರು ಭರತನಾಟ್ಯ, ಕಥಕ್, ಕೂಚಿಪುಡಿ ನೃತ್ಯಗಳಿಗೆ ನೀಡಿದ ಹಿನ್ನೆಲೆ ಸಂಗೀತ. ರೂಪಕಗಳಿಗೂ ಸಂಗೀತ ನೀಡಿ ನಡೆಸಿಕೊಟ್ಟ ಕಾರ್ಯಕ್ರಮಗಳು. ೧೯೫೩ರಿಂದಲೂ ಆಕಾಶವಾಣಿಯ ಹಲವಾರು ಕೇಂದ್ರಗಳಿಂದ ಇವರ ಸಂಗೀತ ಕಾರ್ಯಕ್ರಮ ಬಿತ್ತರ. ತಿರುಚಿ, ಕ್ಯಾಲಿಕಟ್, ಹೈದರಾಬಾದ್, ಬೆಂಗಳೂರು, ಚೆನ್ನೈ, ಡೆಲ್ಲಿ, ವಿಜಯವಾಡ, ಧಾರವಾಡ ಮುಂತಾದ ಕೇಂದ್ರಗಳಿಂದ ಪ್ರಸಾರ. ಆರೇಳು ಬಾರಿ ವಿದೇಶ ಯಾತ್ರೆ. ಯು.ಕೆ., ಜರ್ಮನಿ, ಫಿನ್ಲೆಂಡ್, ಫ್ರಾನ್ಸ್, ಸ್ವಿಜರ್‌‌ಲ್ಯಾಂಡ್, ನೆದರ್‌ಲ್ಯಾಂಡ್ಸ್‌ ಮುಂತಾದ ದೇಶಗಳಲ್ಲಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ, ಭಾಷಣ, ಪ್ರಾತ್ಯಕ್ಷಿಕೆಗಳಿಂದ ಗಳಿಸಿದ ಪ್ರಸಿದ್ಧಿ. ೧೯೯೮ ರಲ್ಲಿ ವೇಲ್ಸ್‌ನ ಕಾರ್ಡಿಫ್‌ಗೆ ಆಹ್ವಾನಿತರಾಗಿ ಬ್ಯಾಲೆಗಾಗಿ ರಾಗ ಸಂಯೋಜನೆ, ವಾದ್ಯ ಸಂಯೋಜನೆ, ಹಾಡುಗಾರಿಕೆ ಎಲ್ಲ ಜವಾಬ್ದಾರಿ ಹೊತ್ತು, ನಡೆಸಿಕೊಟ್ಟ ಮ್ಯೂಸಿಕ್ ಕೊರಿಯಾಗ್ರಫಿ ಕಾರ್ಯಕ್ರಮ. ಋಷಿಕೇಶದ ಡಿವೈನ್ ಲೈಫ್ ಸೊಸೈಟಿಯಿಂದ ಸಂಗೀತ ಕಲಾರತ್ನ. ಕರ್ನಾಟಕ ಸರಕಾರದ ಕರ್ನಾಟಕ ಕಲಾಶ್ರೀ, ಸಂಗೀತ ಶಾರದಾ ಮುಂತಾದ ಪ್ರಮುಖ ಗೌರವ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು ಸಲ್ಮಾ ಜಬೀನಾ – ೧೯೬೯ ಪ್ರಕೃತಿ. ಜಿ. – ೧೯೭೭

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top