೨೨-೪-೧೯೩೧ ಹುಟ್ಟಿದ್ದು ಮೈಸೂರಿನಲ್ಲಾದರೂ ಬೆಳೆದದ್ದು, ವಿದ್ಯಾಭ್ಯಾಸ ಪಡೆದದ್ದು ಬೆಂಗಳೂರಿನಲ್ಲಿ. ಹೈಸ್ಕೂಲುವರೆಗೆ ಮಹಿಳಾ ಸೇವಾ ಸಮಾಜ ಮತ್ತು ಮಹಾರಾಣಿ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ವರೆಗೆ. ಜೊತೆಗೆ ಸಂಗೀತದಲ್ಲಿ ವಿದ್ವತ್ ಪದವಿ. ತಂದೆ ಎಚ್. ವೆಂಕಟೇಶಮೂರ್ತಿ, ತಾಯಿ ಸೀತಮ್ಮ. ಚಿಕ್ಕಂದಿನಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ಇವರ ಮೊದಲ ಕಥೆ ಕಥಾವಳಿ ಪತ್ರಿಕೆಯಲ್ಲಿ ಪ್ರಕಟಿತ. ಇವರ ಬರಹಗಳು ಸುಧಾ, ಮಯೂರ, ತರಂಗ, ತುಷಾರ, ಕರ್ಮವೀರ, ಮಲ್ಲಿಗೆ ಮುಂತಾದ ನಾಡಿನ ಪ್ರಖ್ಯಾತ ಪತ್ರಿಕಗಳೆಲ್ಲದರಲ್ಲೂ ಪ್ರಕಟಿತ. ಹಲವಾರು ಸಾಹಿತ್ಯ ಕೃತಿಗಳ ರಚನೆ-ಕಾದಂಬರಿಗಳು : ಹಳ್ಳಿಯಿಂದ ದಿಲ್ಲಿಗೆ, ಆಸೆಯ ಸೇತುವೆ, ಜಾಲಿಯ ಮರ, ಅಪಾತ್ರ, ವಾನಪ್ರಸ್ಥ, ವಧು. ಕಥಾಸಂಕಲನ : ಇಷ್ಟಾರ್ಥ ಈ ನೆಲ-ಈ ಜಲ. ಮಕ್ಕಳ ಸಾಹಿತ್ಯ : ದಿನೇಶನ ರಜಾದಿನಗಳು, ರಶ್ಮಿಯ ಗೆಳತಿ ಮಾಧವಿ, ದಿನೇಶನ ದೀಪಾವಳಿ, ಬೆಟ್ಟದಮನೆ, ಉಡುಗೊರೆ (ನೂರೊಂದು ಕಥೆಗಳ ಸಂಕಲನ), ಪ್ರಪಂಚದ ಕಥೆಗಳು (ದೇಶ ವಿದೇಶದ ಜಾನಪದ ಕಥಾ ಸಂಗ್ರಹ), ದಿನೇಶನ ಲೈಬ್ರರಿ ಮುಂತಾದುವು. ೧೯೬೬ರಿಂದ ೧೯೮೬ರವರೆಗೆ ಸಮಾನಾಸಕ್ತ ಲೇಖಕಿಯರನ್ನು ಸೇರಿಸಿ ಸ್ಥಾಪಿಸಿದ ಸಾಹಿತ್ಯ ಕೂಟದಲ್ಲಿ ನಡೆದ ಚರ್ಚೆ, ಹರಟೆ, ವಿಮರ್ಶೆ, ಸ್ವ-ಸಾಹಿತ್ಯ ವಾಚನಗಳ ದಾಖಲಾತಿಯ ಗ್ರಂಥ ‘ಸ್ನೇಹ-ಸೌಹಾರ್ದ’ದ ಸಂಪಾದಕಿ, ಇತ್ತೀಚೆಗೆ ಬಿಡುಗಡೆಗೊಂಡಿದೆ. ಹಲವಾರು ಬಾರಿ ವಿದೇಶ ಪ್ರವಾಸ. ಲಂಡನ್, ಪ್ಯಾರಿಸ್, ಕೆನಡಾ, ಮೆಕ್ಸಿಕೋ ಸಂದರ್ಶನ. ನ್ಯೂಯಾರ್ಕಿನಲ್ಲಿ ಶಿವರಾಮಕಾರಂತರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ (೧೯೮೯)ದಲ್ಲಿ ಪ್ರಬಂಧ ಮಂಡನೆ. ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ‘ಹರ್ ಸ್ಟೋರಿ’ ವಿಭಾಗದಲ್ಲಿ ಮಕ್ಕಳ ಸಾಹಿತ್ಯ ಹಾಗೂ ಮಹಿಳಾ ಸಾಹಿತ್ಯ ಕುರಿತು ವಿಚಾರ ಮಂಡನೆ. ವಾಷಿಂಗ್ಟನ್ ಕನ್ನಡ ಸಂಘದಲ್ಲಿ ಸಾಹಿತ್ಯ ಸಂವಾದ. ಡೋವರ್ ವಿಶ್ವವಿದ್ಯಾಲಯದಲ್ಲಿ ಭಾಷಣ, ಹ್ಯೂಮನ್ ರಿಲೇಷನ್ಸ್ ಕಮೀಷನ್ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಚಾರ ಮಂಡನೆ, ಮಕ್ಕಳಿಗಾಗಿ ಕಥಾ ನಿರೂಪಣೆ, ಹಲವಾರು ಕಾರ್ಯಕ್ರಮಗಳು. ೧೯೯೩ರಿಂದ ವಿದೇಶ ವಾಸಿ. ಸಂದ ಪ್ರಶಸ್ತಿಗಳು ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಗೊರೂರು ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ, ಐದನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ಸನ್ಮಾನ ಮುಂತಾದುವುಗಳು. ಇದೇ ದಿನ ಹುಟ್ಟಿದ ಸಾಹಿತಿಗಳು : ಎಲ್.ಕೆ. ಅನಂತ ಸುಬ್ರಹ್ಮಣ್ಯ (ಮಣಿ) – ೧೯೨೮ ಎಂ.ಎಸ್. ಉಮೇಶ್ – ೧೯೪೫

