Loading Events

« All Events

ಸಾರಾ ಅಬೂಬಕ್ಕರ್

June 30

೩೦-೬-೧೯೩೬ ಮುಸ್ಲಿಂ ಮಹಿಳೆಯರಿಗೆ ತಮ್ಮ ಅನಿಸಿಕೆಗಳನ್ನು ಹೊರಹಾಕಲು ಪ್ರತ್ಯೇಕ ವೇದಿಕೆಗಳೇ ಇಲ್ಲದ ಕಾಲದಲ್ಲಿ, ಮುಸ್ಲಿಂ ಮಹಿಳೆಯರ ದನಿಯಾಗಿ ಸಾಹಿತ್ಯದ ಮೂಲಕ ತಮ್ಮ ಅನಿಸಿಕೆಯನ್ನು ಅಭಿವ್ಯಕ್ತಿಸಿದ ಲೇಖಕಿ ಸಾರಾ ಅಬೂಬಕ್ಕರ್ ರವರು ಹುಟ್ಟಿದ್ದು ಕಾಸರಗೋಡಿನ ಚಂದ್ರಗಿರಿ ತೀರದ ಕುಗ್ರಾಮದಲ್ಲಿ. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್, ತಾಯಿ ಚೈನಾಬಿ. ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ. ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಅರೆಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಸಬೇಕೆಂದು ಬಾಲ್ಯದಲ್ಲೇ ಹುಟ್ಟಿದ ನಿರ್ಧಾರ. ಎಂಜನಿಯರ್ ಆಗಿದ್ದ ಅಬೂಬಕ್ಕರ್‌ರೊಡನೆ ವಿವಾಹ. ವಿದ್ಯಾಭ್ಯಾಸಕ್ಕೆ ವಿದಾಯ. ಆದರೆ ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ಓದಿನಲ್ಲಿ ಮಗ್ನರು. ಮನೋವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳ ಆಕರ್ಷಣೆ. ಬದುಕುತ್ತಿದ್ದ ಸುತ್ತಮುತ್ತಲಿನ ಪರಿಸರದಲ್ಲಿ ಮನೋವ್ಯಾಕುಲತೆಗೊಳಗಾಗುತ್ತಿದ್ದ ಬಹಳಷ್ಟು ಮುಸ್ಲಿಂ ಹೆಂಗಸರ ಬಗ್ಗೆ ಸದಾ ಚಿಂತನ. ತಲಾಕ್ ಸಂಪ್ರದಾಯದ, ಮಕ್ಕಳಾದ ನಂತರದ ಅಸಹನೀಯ ಬದುಕು, ಅಣ್ಣ ತಂದುಕೊಡುತ್ತಿದ್ದ ವೈಕಂ ಮಹಮದ್ ಬಷೀರ್‌ರವರ ಕಾದಂಬರಿಗಳ ಪ್ರಭಾವ- ಬರೆಯಬೇಕೆಂಬ ಅಂತರಾಳದ ಒತ್ತಡ. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನ ಎಂ.ಕೆ.ಇಂದಿರಾರವರಂತೆ ನಲವತ್ತು ದಾಟಿದ ನಂತರ ಪ್ರಾರಂಭಿಸಿದ ಸಾಹಿತ್ಯದ ಬರಹ. ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟ. ಹೊರಹೊಮ್ಮಿದ ಶೋಷಿತ ಮುಸ್ಲಿಂ ಮಹಿಳೆಯರ ದನಿ, ವಾಸ್ತವಿಕ ಬದುಕಿನ ಚಿತ್ರಣದ  ಈ ಕಾದಂಬರಿ ಬಹುಬೇಗ ಓದುಗರಿಂದ ಪಡೆದ ಮೆಚ್ಚುಗೆ. ನಂತರ ಬರೆದದ್ದು ಹಲವಾರು ಕಾದಂಬರಿಗಳು. ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-೨), ತಳ ಒಡೆದ ದೋಣಿ, ಪಂಜರ. ಕಥಾ ಸಂಕಲನಗಳು-ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ, ಬಾನುಲಿ ನಾಟಕಗಳು-ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು ಮುಂತಾದುವು. ಲೇಖನ ಮತ್ತು ಅನುವಾದಗಳು-ಲೇಖನ ಗುಚ್ಛ, ಮನೋಮಿ, ಬಲೆ, ನಾನಿನ್ನು ನಿದ್ರಿಸುವೆ (ಕಾದಂಬರಿಗಳು). ಪ್ರವಾಸಕಥನ-ಐಷಾರಾಮದಲ್ಲಿ. ಹುಡಿಕಿಕೊಂಡು ಬಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ  ಪ್ರಶಸ್ತಿ, ಕ.ಸಾ.ಪ.ನ.ಬಿ. ಸರೋಜಾದೇವಿ ಪ್ರಶಸ್ತಿ, ಸಹನಾ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ಸುಳಿಯಲ್ಲಿ ಸಿಕ್ಕವರು ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮತ್ತು ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಇತ್ತೀಚಿನದು-ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಪ್ರಮುಖವಾದುವುಗಳು.   ಇದೇ ದಿನ ಹುಟ್ಟಿದ ಸಾಹಿತಿ : ಬೇಲೂರು ರಾಮಮೂರ್ತಿ – ೧೯೫೧,

Details

Date:
June 30
Event Category: