Loading Events

« All Events

  • This event has passed.

ಸಾಲಿ ರಾಮಚಂದ್ರರಾಯರು

October 10, 2023

೧೦.೧೦.೧೮೮೮ ೩೧.೧೦.೧೯೭೮ ಅಪ್ಪಟ ಕನ್ನಡ ಪ್ರೇಮಿ, ಅಪ್ರತಿಮ ದೇಶಬಂಧು, ಕನ್ನಡವನ್ನು ಗಾಯತ್ರಿ ಮಂತ್ರವೆಂದು ತಿಳಿದವರು, ಶಿಷ್ಯರನ್ನು ಮಕ್ಕಳಂತೆ ಕಂಡವರು ಆದ ಸಾಲಿ ರಾಮಚಂದ್ರರಾಯರು ಹುಟ್ಟಿದ್ದು ೧೮೮೦ ರ ಅಕ್ಟೋಬರ್ ೧೦ ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ. ತಂದೆ ಸುಬ್ಬರಾಯರು ಉಪಾಧ್ಯಾಯ ವೃತ್ತಿಯಲ್ಲಿದ್ದವರು. ಕಷ್ಟದ ಬದುಕನ್ನು ಹಾಸಿ ಹೊದ್ದವರು. ಒಂದುವರೆ ವರ್ಷದ ಮಗುವಾಗಿದ್ದಾಗಲೇ ತಂದೆಯ ಪ್ರೀತಿಯಿಂದ ವಂಚಿತರಾಗಿ, ಹತ್ತು ವರುಷದ ಹುಡುಗನಾಗಿದ್ದಾಗ ತಾಯಿ ಮತ್ತು ಅಜ್ಜಿಯನ್ನು ಕಳಕೊಂಡದ್ದು, ಗಾಂಧಿಭಕ್ತರಾಗಿದ್ದ ಸಾಲಿಯವರು ಗಾಂಧೀಜಿಯವರ ಕರೆಗೆ ಓಗೊಟ್ಟು ಸತ್ಯಾಗ್ರಹಕ್ಕಾಗಿ ಇದ್ದ ಒಬ್ಬ ಮಗನನ್ನು ಕಳುಹಿಸಿ, ಪ್ಲೇಗ್‌ ಪಾಲಾದದ್ದು, ಮೂವತ್ತಾರನೆಯ ವಯಸ್ಸಿನಲ್ಲಿ ಹೆಂಡತಿಯನ್ನು ಕಳೆದುಕೊಂಡು ಮೂವರು ಮಕ್ಕಳಿಗೆ ತಂದೆ – ತಾಯಿ ಆದದ್ದು, ಹೀಗೆ ಒಂದೇ, ಎರಡೇ….ಸಾವು ನೋವುಗಳನ್ನು ಸಂಗಾತಿಯಾಗಿ ಸ್ವೀಕರಿಸಿ ಬಾಳಿನುದ್ದಕ್ಕೂ ಕಡುಕಷ್ಟದಲ್ಲಿ ಬಾಳಿದರೂ ಕನ್ನಡವನ್ನು ಮಾತ್ರ ವ್ರತದಂತೆ ಸ್ವೀಕರಿಸಿದವರು. ನಿರಾಧಾರ ಬಾಲಕನಾದ ಸಾಲಿಯವರು ವಾರಾನ್ನದಿಂದ ಶಿಕ್ಷಣ ಮುಂದುವರೆಸುತ್ತಿದ್ದಾಗ ಸಹಾಯ ಹಸ್ತ ನೀಡಿದವರು ಆರ್.ಎ. ಜಾಗೀರದಾರರು. (ಕರ್ನಾಟಕ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿದ್ದವರು). ಮೆಟ್ರಿಕ್‌ ಮುಗಿಸಿದ ನಂತರ ಉದ್ಯೋಗಕ್ಕೆ ಸೇರಿದ್ದು ಅಂಚೆ ಇಲಾಖೆಗೆ. ಈ ಉದ್ಯೋಗವೂ ಒಗ್ಗದೆ ಪುಣೆಗೆ ಹೋಗಿ ಸೇರಿದ್ದು ಫರ್ಗುಸನ್‌ ಕಾಲೇಜಿಗೆ. ಆದರೆ ತಿಲಕರ ಬಂಧನದಿಂದ ಪ್ರೇರಿತರಾಗಿ ಕಾಲೇಜು ತೊರೆದು ಸೇರಿದ್ದು ಚಳವಳಿಗೆ. ನಂತರ ಪುಣೆಯ ಡೆಕ್ಕನ್‌ಕಾಲೇಜು ಸೇರಿ ಪಡೆದ ಬಿ.ಎ. ಪದವಿ. ಮೊದಲು ರೊದ್ದ ಶ್ರೀನಿವಾಸರಾಯರು ಧಾರವಾಡದಲ್ಲಿ ಪ್ರಾರಂಭಿಸಿದ್ದ ಕರ್ನಾಟಕ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಕೆಲಕಾಲ. ವಿದ್ಯಾರ್ಥಿಗಳನ್ನು ಮಕ್ಕಳೆಂದೇ ತಿಳಿದು ಕಲಿಸುವ ಶಿಕ್ಷಕ. ವಿದ್ಯಾರ್ಥಿಗಳು ತರಗತಿಯಲ್ಲಿ ಶಿಸ್ತು ಭಂಗ ಮಾಡುವುದನ್ನು ಎಂದೂ ಸಹಿಸುತ್ತಿರಲ್ಲಿಲ್ಲ. ಮಕ್ಕಳನ್ನು ಶಿಕ್ಷಿಸುವುದರ ಬದಲು ತಾವೇ ಶಿಕ್ಷೆಗೆ ಒಳಗಾಗುತ್ತಿದ್ದರು. ಕಲಿಸುವುದರಲ್ಲಿ ತನ್ನದೇ ತಪ್ಪಿರಬಹುದೆಂದು ಶಿಕ್ಷೆವಿಧಿಸಿಕೊಂಡಾಗ, ಹುಡುಗರು ತಮ್ಮ ತಪ್ಪನ್ನರಿತು ತಿದ್ದಿಕೊಳ್ಳುತ್ತಿದ್ದರು. ಹುಬ್ಬಳ್ಳಿಯ ತೊರವಿ ಹೈಸ್ಕೂಲು, ವಿಜಾಪುರದ ಕೃಷ್ಣಾ ಪಾಠಶಾಲೆಯಲ್ಲಿಯೂ ಕೆಲಸಮಾಡಿದರು. ‘ನವರತ್ನಮಂಡಲ’ ಎಂಬ ಸಾಹಿತಿ ಮಿತ್ರರ ಬಳಗವನ್ನು ಕಟ್ಟಿಕೊಂಡು ಕಾವ್ಯಕೃಷಿಯನ್ನು ಪ್ರಾರಂಭಿಸಿದರು. ೧೯೨೪ರಲ್ಲಿ ನಡೆದ ಬೆಳಗಾವಿಯ ಮಹಾ ಕಾಂಗ್ರೆಸ್‌ ಮಹಾಧಿವೇಶನದಲ್ಲಿ ಗಾಂಧೀಜಿಯವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದರು. ಜಯಕರ್ನಾಟಕ ಪತ್ರಿಕೆಯಲ್ಲಿ ಕೆಲಕಾಲ ಉಪಸಂಪಾದಕರಾಗಿ ದುಡಿದಿದ್ದಲ್ಲದೆ ಬಾಗಲಕೋಟೆಯಿಂದ ಪ್ರಕಟವಾಗುತ್ತಿದ್ದ ‘ಜನಜೀವನ’ ಪತ್ರಿಕೆಗೆ ಗಾಂಧೀಜಿಯವರ ‘ನವಜೀವನ’ ಪತ್ರಿಕೆಯ ಲೇಖನಗಳನ್ನು ಅನುವಾದಿಸಿ ಪ್ರಕಟಿಸಿದರು. ಬಿ. ಎ. ಪದವಿ ಪಡೆದ ನಂತರ ಧಾರವಾಡದ ರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕರಾಗಿ ದುಡಿದರು. ಹಿಂದಿ, ಗುಜರಾತಿ, ಮರಾಠಿ, ಪಾಲಿ ಹಾಗೂ ರಷ್ಯನ್‌ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಸಾಲಿ ರಾಮಚಂದ್ರರಾಯರು ಕವಿಯಾಗಿ, ಕತೆಗಾರರಾಗಿ, ಕಾದಂಬರಿಕಾರರಾಗಿ, ನಾಟಕಕಾರರಾಗಿ, ಅನುವಾದಕರಾಗಿ ಸುಮಾರು ೨೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಆವಿನದು ನೊರೆಹಾಲನೊಲ್ಲೆನು ದೇವಲೋಕದ ಸುಧೆಯನೊಲ್ಲೆನು ದೇವಿ, ನಿನ್ನಯ ನಾಮದನುಪಮ ರುಚಿಯನಂತಿಹೆನು| ಪಾವನೆಯ ನಿನ್ನಂಘ್ರಿಕಮಲದ ಸೇವೆ ದೊರೆತಿಹುದೆನಗೆ ತಾಯೇ, ಶ್ರೀವರನ ದಯೆಯಿಂದ! ಮತ್ತಿನ್ನೇನು ಬೇಡೆನಗೆ! ಎಂದು ತಮ್ಮ ಅಂತರಂಗದಲ್ಲಿದ್ದ, ಹಂಬಲವನ್ನು ವ್ಯಕ್ತಪಡಿಸಿದರು. ‘ಹಂಬಲು’ ಕವನದ ಈ ಸಾಲುಗಳನ್ನು ಓದಿದ ಆಲೂರು ವೆಂಕಟರಾಯರು ‘ವಾಗ್ಭೂಷಣ’ ಪತ್ರಿಕೆಯಲ್ಲಿ ಪ್ರಕಟಿಸಿದರು. ಕನ್ನಡದ ಬಗ್ಗೆ ತಮಗಿದ್ದ ಅವ್ಯಾಜ ಪ್ರೇಮದಿಂದ, ಕನ್ನಡವನ್ನು ಅದ್ಭುತ ಗಾಯತ್ರಿ ಮಂತ್ರವೆಂದೇ ಬಗೆದಿದ್ದು – ಕನ್ನಡದ ನೆಲದ ಪುಲ್ಲೆನಗೆ ಪಾವನ ತುಳಸಿ ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ ಕನ್ನಡದ ನೆಲದ ಕಲ್ಲೆನಗೆ ಶಾಲಗ್ರಾಮ ಶಿಲೆ | ಕನ್ನಡಂ ದೈವಮೈ ಕನ್ನಡದ ಶಬ್ದಮೆನಗೋಂಕಾರ ಮೀಯೆನ್ನ ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳೆನಗೆ | ಎಂದು ಬರೆದು ಕನ್ನಡ ನಾಡು – ನುಡಿಯ ಬಗ್ಗೆ ತಮಗಿದ್ದ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಗಾಂಧೀಜಿಯವರ ಸೇವಕನಾಗಿ ದಂಡಿಯಾತ್ರೆಗೆ ಹೋಗಿ ಬಂದ ಮಗ ಶ್ರೀಕೃಷ್ಣ ಜ್ವರದ ಬಾಧೆಯಿಂದ ಸಾವಿಗೀಡಾದಾಗ ಸಹೃದಯರ ಮನಮಿಡಿಯುವಂತೆ ಬರೆದ ನೀಳ್ಗವಿತೆ ‘ತಿಲಾಂಜಲಿ’ (೧೯೩೨). ಕವಿಯ ವೈಯಕ್ತಿಕ ಬದುಕಿನ ದಾರುಣ ಘಟನೆಯೇ ಕಾವ್ಯವಾಗಿ ಹರಿದು ಬಂದಿದ್ದು ಕನ್ನಡ ಸಾಹಿತ್ಯದ ಮೊಟ್ಟಮೊದಲ ಶೋಕಗೀತೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಇವರ ಪ್ರಥಮ ಕವನಗಳ ಸಂಗ್ರಹ ಪ್ರಕಟವಾದುದು ೧೯೨೫ರಲ್ಲಿ, ನಂತರ ಬಂದುದು ಕುಸುಮಾಂಜಲಿ, ಚಿತ್ರಸೃಷ್ಟಿ ಮುಂತಾದವುಗಳಾದರೆ ‘ಅಭಿಸಾರ’ – ಕಥನಕಾವ್ಯ. ಇವುಗಳಲ್ಲದೆ ಸಿಪಾಯವ್ವ, ಐದುಜಾಣ ಪ್ರಾಣಿಗಳು ಮಕ್ಕಳ ಕಥಾಸಂಕಲನಗಳಾದರೆ ಜಯಗುರುದೇವ, ಯದುಪತಿ ಎಂಬ ಎರಡು ಕಾದಂಬರಿಗಳು ಮತ್ತು ಸುಕನ್ಯಾ ಎಂಬ ಏಕಾಂಕ ನಾಟಕವನ್ನು ರಚಿಸಿದ್ದಾರೆ. ರಾಮಾಯಣವನ್ನು ಸರಳಗನ್ನಡದಲ್ಲಿ ರಚಿಸುವುದು ಸಾಲಿಯವರ ಮಹತ್ವದ ಆಕಾಂಕ್ಷೆಗಳಲ್ಲೊಂದಾಗಿದ್ದು ಇದಕ್ಕಾಗಿ ರಾಮಾಯಣವನ್ನು ಆಮೂಲಾಗ್ರವಾಗಿ ಅಧ್ಯಯನ ನಡೆಸಿ ವಾಲ್ಮೀಕಿ ರಾಮಾಯಣರ ಸೌಂದರ್ಯವನ್ನು ಮನಸಾರೆ ಸವಿದು, ತಮಗಾದ ಆನಂದವನ್ನು ಇತರರೂ ಸವಿಯುವಂತೆ ಆಗಲೆಂದೇ ರಚಿಸಿದ್ದು ‘ಶ್ರೀರಾಮಚರಿತ’ (ಬಾಲಕಾಂಡ ಹಾಗೂ ಅಯೋಧ್ಯಾಕಾಂಡಗಳು). ತೀವ್ರಗತಿಯಲ್ಲಿ ಅಡತಡೆಗಳಿಲ್ಲದೆ ಸರಸವಾಗಿ, ಸುಗಮವಾಗಿ ಸಾಗುವ ಈ ಪದ್ಯ ಪ್ರವಾಹವನ್ನು ಶರಚತುಷ್ಟದಿಯಲ್ಲಿ ರಚಿಸಿರುವುದು ವಿಶೇಷ. ಈ ಎರಡು ಕಾಂಡಗಳು ಪ್ರಕಟಗೊಂಡನಂತರ ವಿಮರ್ಶಕರೊಬ್ಬರ ಚುಚ್ಚುಮಾತಿಗೆ ಮನನೊಂದು ಏತಕ್ಕಾಗಿ ಕನ್ನಡದಲ್ಲಿ ಬರೆದು ಪ್ರಕಟಿಸಬೇಕು, ಎಂದೆನ್ನುತ್ತಾ ಬರೆದುದನ್ನು ಯಾರಿಗೂ ತೋರಿಸುತ್ತಿರಲ್ಲಿಲ್ಲ. ಕಡೆಗೆ ಕನ್ನಡದಲ್ಲಿ ಏಕೆ ಬರೆಯಬೇಕೆಂದೆನಿಸಿ ಸಂಸ್ಕೃತದಲ್ಲಿ ಬರೆಯತೊಡಗಿ ರಚಿಸಿದ್ದು ಅಭಿಸಾರಮ್‌, ಸುಧಾಮಚರಿತಮ್, ಶರಣಾಗತಿ ಮತ್ತು ಗದ್ಯರಾಮಾಯಣಮ್‌ ಮುಂತಾದವುಗಳು. ಇವುಗಳಲ್ಲದೆ ಕೌಸಲ್ಯಾವಿವಾಹ, ಮೇಘದೂತ, ಕನ್ನಡ ಭಾಗವತವು ಮುಂತಾದ ಖಂಡಕಾವ್ಯಗಳನ್ನು ಮೊದಲು ರಚಿಸಿದ್ದಿದೆ. ಶತಮಾನೋತ್ಸವ ಕಾಣಬೇಕಾಗಿದ್ದ, ಕನ್ನಡ ಸಿರಿ ಹೆಚ್ಚಿಸಿದ ಸಾಲಿ ರಾಮಚಂದ್ರರಾಯರು ತಮ್ಮ ೯೦ ನೆಯ ವಯಸ್ಸಿನಲ್ಲಿ ಸಾಹಿತ್ಯ ಲೋಕದಿಂದ ಕಣ್ಮರೆಯಾದರು, ಆತ್ಮೀಯರು, ಇಬ್ಬರು ಹೆಣ್ಣುಮಕ್ಕಳು, ಮೊಮ್ಮಕ್ಕಳು, ಶಿಷ್ಯ ಬಳಗದವರು ಸೇರಿ ಹೊರತಂದ ಸಂಸ್ಮರಣ ಗ್ರಂಥ ‘ಸಾಲಿ ರಾಮಚಂದ್ರರಾಯರು’ ೧೯೮೦ರಲ್ಲಿ ಪ್ರಕಟಗೊಂಡಿತು. ಇವರ ಸಮಗ್ರ ಕಾವ್ಯವನ್ನು ಜನಪ್ರಿಯ ಪುಸ್ತಕಮಾಲೆಯಡಿಯಲ್ಲಿ ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರವು ೧೯೯೬ರಲ್ಲಿ ಹೊರತಂದಿದೆ.

Details

Date:
October 10, 2023
Event Category: