ಸಿದ್ಧಯ್ಯ ಪುರಾಣಿಕ

Home/Birthday/ಸಿದ್ಧಯ್ಯ ಪುರಾಣಿಕ
Loading Events
This event has passed.

೧೮..೧೯೧೮ ..೧೯೯೪ ಅಧಿಕಾರದಲ್ಲಿದ್ದರೂ ಗೋಕಾಕ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಲ್ಲದೆ ಡಾ. ಸರೋಜಿನಿ ಮಹಿಷಿ ಸಮಿತಿ, ಕನ್ನಡಗಡಿಸಮಿತಿ, ಕನ್ನಡ ಪ್ರಾಧಿಕಾರದ ಸದಸ್ಯರಾಗಿ ಕನ್ನಡದ ಹಿತ ಕಾಯುವಲ್ಲಿ ವಿಶೇಷ ಆಸಕ್ತಿವಹಿಸಿ, ತಹಸೀಲ್ದಾರರಾಗಿ ಆಯ್ಕೆಗೊಂಡಾಗ ಮಾಸ್ತಿಯವರು ‘ಕನ್ನಡಕ್ಕಾದ ನಷ್ಟ’ ಎಂದು ನುಡಿದಾಗ, “ನಾನು ಕನ್ನಡದ ಕೈಬಿಡುವುದಿಲ್ಲ, ಕೈಲಾದಷ್ಟು ಸಾಹಿತ್ಯ ಸೇವೆ ಮಾಡುತ್ತೇನೆ” ಎಂದು ನುಡಿದಂತೆ ನಡೆದು, ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ‘ಕಾವ್ಯಾನಂದ’ ಕಾವ್ಯನಾಮದ ಸಿದ್ಧಯ್ಯ ಪುರಾಣಿಕರು ಹುಟ್ಟಿದ್ದು ೧೯೧೮ ರ ಜೂನ್‌ ೧೮ ರಂದು. ರಾಯಚೂರು ಜಿಲ್ಲೆಯ ಯಲುಬುರ್ಗಿ ತಾಲ್ಲೂಕಿನ ದ್ಯಾಂಪುರ ಎಂಬ ಹಳ್ಳಿಯಲ್ಲಿ. ತಂದೆ ಕಲ್ಲಿನಾಥ ಶಾಸ್ತ್ರಿ, ತಾಯಿ ದಾನಮ್ಮ. ಅಜ್ಜ ಚೆನ್ನಕವಿ. ಕಾವ್ಯಪ್ರಿಯರ ಮನೆತನ. ಪ್ರಾರಂಭಿಕ ಶಿಕ್ಷಣ ಗಾಂವಠಿ ಶಾಲೆಯಲ್ಲಿ (ಗ್ರಾಮದ ಶಾಲೆ). ಆ ಶಾಲೆಗೆ ಮಾಸ್ತರಾಗಿ ಬರುವುದೇ ಕಷ್ಟ. ವಿದ್ಯಾರ್ಥಿಗಳ ಸಂಖ್ಯೆ ಬಹು ಕಡಿಮೆ. ಗ್ರಾಮದವರು ನೀಡುತ್ತಿದ್ದ ಭತ್ಯೆ ಅತಿಕಡಿಮೆ. ಯಾವ ಮಾಸ್ತರು ಬಂದರೂ ನಾಲ್ಕುದಿನ. ಅಂಥಾ ಶಾಲೆಯಲ್ಲಿ ಇವರ ಕಲಿಕೆ. ಆದರೆ ತಂದೆಯೇ ಮನೆಯಲ್ಲಿ ಗುರುಗಳಾಗಿ ಪ್ರೀತಿಯಿಂದ ಹೇಳಿದ ಪಾಠ. ತಂದೆಗೆ ಪುರಾಣ , ಪ್ರವಚನ ವೃತ್ತಿ. ಸ್ವಾಧ್ಯಾಯಿಯಾಗಿದ್ದು ಪುರಾಣ-ಪ್ರವಚನಕ್ಕೆ ಬೇಕಾಗುವ ಸಂಸ್ಕೃತ ಸುಭಾಷಿತಗಳು, ಕನ್ನಡ ಶತಕಗಳು, ಹಾಡುಗಬ್ಬಗಳು, ವಚನಗಳು, ಹಾಸ್ಯ ಕಥೆಗಳು ಮುಂತಾದವುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದುದು ಮತ್ತು ಸಾಹಿತ್ಯ, ವ್ಯಾಕರಣ, ಛಂದಸ್ಸು ಇವುಗಳನ್ನು ಕಲಿಸುವುದರ ಜೊತೆಗೆ ಜೈಮಿನಿ ಭಾರತ, ಶಬರ ಶಂಕರ ವಿಲಾಸ, ಪ್ರಭುಲಿಂಗಲೀಲೆಗಳನ್ನು ಓದಿ ಹೇಳುತ್ತಿದ್ದುದರಿಂದ ಸಿದ್ಧಯ್ಯ ಪುರಾಣಿಕರಿಗೂ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಲು ಕಾರಣವಾಯಿತು. ಪ್ರಾಥಮಿಕ ಶಿಕ್ಷಣ ಚಿಕ್ಕೇನಕೊಪ್ಪ ಶಾಲೆಯಲ್ಲಿ. ಕುಕನೂರಿನ ‘ವಿದ್ಯಾನಂದ ಗುರುಕುಲ’ದ ಮಾಧ್ಯಮಿಕ ಶಿಕ್ಷಣ (ನಿಜಾಮ ಕರ್ನಾಟಕದ ನೂತನ ಪಾಠಶಾಲೆ) ದಲ್ಲಿ ಪಡೆದ ಪ್ರಥಮ ಸ್ಥಾನ. ಕಲಬುರ್ಗಿಯ ಸರಕಾರಿ ಹೈಸ್ಕೂಲಿನಲ್ಲಿ ಪ್ರೌಢಶಾಲಾ ವಿಧ್ಯಾಭ್ಯಾಸ. ಹೈಸ್ಕೂಲು ಓದುತ್ತಿದ್ದಾಗ ‘ಗುರುಬಸವ ಮಠ’ದಲ್ಲಿ ವಾಸ್ತವ್ಯ, ಕರೆದವರ ಮನೆಯಲ್ಲಿ ಊಟ, ಸ್ವಯಂ ಪಾಕ ಇಲ್ಲವೇ ಶ್ರೀಮಠದಲ್ಲಿ ದೊರೆಯುತ್ತಿದ್ದ ಧಾರಾಳ ಪ್ರಸಾದ. ‘ಗುರುಮಠದ ಬಸವ ಗೆಳೆಯರು’ ಗುಂಪಿಗಾಗಿ ಬರೆದ ನಾಟಕ ‘ಬೆಳವಾಡಿ ಮಲ್ಲಮ್ಮ’. ಶಿವಾಜಿ ಪಾತ್ರಧಾರಿಯಾಗಿ ರಂಗದ ಮೇಲೂ ಅಭಿನಯಿಸಿ ಗಳಿಸಿದ ಯಶಸ್ಸು. ವೀರಶೈವ ತರುಣ ಸಂಘದ ಕಾರ್ಯದರ್ಶಿ, ಚರ್ಚಾಕೂಟದ ಕಾರ್ಯದರ್ಶಿಯಾಗಿ ನಡೆಸಿದ ಹಲವಾರು ಸಾಹಿತ್ಯ ಕಾರ್ಯಕ್ರಮಗಳು. ಇದೇ ಸಂದರ್ಭದಲ್ಲಿ ಇವರ ಮೊಟ್ಟಮೊದಲ ಕವಿತೆಯೊಂದು ‘ಜಯಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟವಾದಾಗ, ಕವಿಯಾದೆನೆಂಬ ಭ್ರಾಂತಿಯಿಂದ ಪತ್ರಿಕೆಯನ್ನೂ ಊರಲೆಲ್ಲಾ ತೋರಿಸಿ ಬಂದರು. ಮೆಟ್ರಿಕ್‌ ಪರೀಕ್ಷೆಯಲ್ಲಿ ಉಸ್ಮಾನಿಯಾ ವಿ.ವಿ.ಕ್ಕೆ ಮೂರನೆಯ ಸ್ಥಾನ ಪಡೆದಿದ್ದರೆ ಬಿ.ಎ. ಪರೀಕ್ಷೆಯಲ್ಲಿ ವಿ.ವಿ.ಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ (೧೯೪೨). ಆಲಮಟ್ಟಿಯಲ್ಲಿದ್ದು ಕರ್ನಾಟಕ ಗಾಂಧಿ ಎನಿಸಿಕೊಂಡಿದ್ದ ಹರ್ಡೇಕರ್ ಮಂಜಪ್ಪನವರ ಆಶ್ರಮದಲ್ಲಿದ್ದಾಗ ಕರ್ನಾಟಕ ಕಟ್ಟುವ ಕೆಲಸಕ್ಕೆ ಪಡೆದ ದೀಕ್ಷೆ. ಇಲ್ಲಿದ್ದಾಗ ಇವರು ಬರೆದ ‘ಕಾವ್ಯದೇವಿ’ ಎಂಬ ನೀಳ್ಗವಿಕೆಯ ಕೊನೆಯಲ್ಲಿ ನಿನ್ನಾತ್ಮವಾನಂದ ನನ್ನಾತ್ಮ ಕಾವ್ಯ! ಇಂತು ಕಾವ್ಯಾನಂದ ನಾನು ಸುಶ್ರಾವ್ಯ/ ಎಂದು ಬರೆದಿದ್ದು ಅದು ಶರಣ ಸಂದೇಶ ಪತ್ರಿಕೆಯಲ್ಲಿ ಪ್ರಕಟವಾದ ನಂತರ ಇತರರು ಇವರನ್ನು ‘ಕಾವ್ಯಾನಂದ’ ಎಂದೇ ಕರೆಯತೊಡಗಿದರು. ಮುಂದೆ ಇದೇ ಇವರ ಕಾವ್ಯನಾಮವಾಯಿತು. ತಹಸೀಲ್ದಾರರಾಗಿ ಉದ್ಯೋಗವನ್ನು ಪ್ರಾರಂಭಿಸಿ ಅಸಿಸ್ಟೆಂಟ್‌ ಕಲೆಕ್ಟರ್, ಅಸಿಸ್ಟೆಂಟ್‌ ಕಮೀಷನರಾಗಿ, ಅಸಿಸ್ಟೆಂಟ್‌ ರೆವಿನ್ಯೂ ಸೆಕ್ರಟರಿಯಾಗಿ, ಡೆಪ್ಯುಟಿಕಲೆಕ್ಟರಾಗಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾಗಿ, ಡೆಪ್ಯುಟಿಕಮೀಷನರಾಗಿ, ಲೇಬರ್ ಕಮೀಷನರಾಗಿ – ಹೀಗೆ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ದಕ್ಷತೆಗೆ ಪ್ರಾಮಾಣಿಕತೆಗೆ ಹೆಸರಾಗಿ ಕಾರ್ಮಿಕ ಕಮೀಷನರಾಗಿದ್ದಾಗ ನಿವೃತ್ತರು. ಕನ್ನಡ, ಹಿಂದಿ, ಉರ್ದು, ಸಂಸ್ಕೃತ, ಇಂಗ್ಲಿಷ್‌ ಭಾಷೆಗಳ ಸಾಹಿತ್ಯವನ್ನೂ ಆಳವಾಗಿ ಅಧ್ಯಯನ ಮಾಡಿರುವ ಕಾವ್ಯಾನಂದರು ಕನ್ನಡ, ಇಂಗ್ಲಿಷ್‌ ಎರಡು ಭಾಷೆಗಳಲ್ಲೂ ಕೃತಿ ರಚಿಸಿರುವರು. ಇವರ ಮೊದಲ ಕವಿತಾ ಸಂಕಲನ ‘ಜಲಪಾತ’ ಪ್ರಕಟವಾದುದು ೧೯೫೩ ರಲ್ಲಿ, ‘ಪ್ರಜಾ’ ವಾರ ಪತ್ರಿಕೆಯ ಸಂಪಾದಕರಾಗಿದ್ದ ಆರ್.ಜಿ. ಜಾಗೀರದಾರರು ಪ್ರಕಟಿಸಿದ ಈ ಕವನ ಸಂಕಲನಕ್ಕೆ ಬೇಂದ್ರೆಯವರು ಮುನ್ನುಡಿ ಬರೆದು ಹಾರೈಸಿದ್ದಾರೆ. ಗೆಳೆಯರೊಡನೆ ಸೇರಿ ಹೈದರಾಬಾದಿನಲ್ಲಿದ್ದಾಗ ಪ್ರಾರಂಭಿಸಿದ ‘ಸಹಜೀವನ ಸಾಹಿತ್ಯ ಮಾಲೆ’ ಯಲ್ಲಿ ಕರುಣಾ ಶ್ರಾವಣ ಕವನ ಸಂಕಲನ (೧೯೫೫), ತುಷಾರ ಹಾರ ಕಿರುಗತೆಗಳ (೧೯೫೬) ಸಂಗ್ರಹವು ಪ್ರಕಟವಾಯಿತು. ಇದೇ ಪ್ರಕಾಶನದಡಿ ಮಾನ್ವಿ ನರಸಿಂಗರಾಯರ ‘ಸಂಸಾರ ನೀತಿ’ ಜಿ. ಅನ್ನದಾನಿಯವರು ಸಂಪಾದಿಸಿದ ‘ಚೆನ್ನಬಸವನ ಸಾಹಿತ್ಯ’ ಕೃತಿಗಳು ಪ್ರಕಟಗೊಂಡರೂ ರಾಜ್ಯ ಪುನರ್ರ‍ಚನೆಯಾದಾಗ ಪ್ರಕಾಶನ ಸಂಸ್ಥೆಯನ್ನು ನಿಲ್ಲಿಸಬೇಕಾಯಿತು. ಇದಕ್ಕೆ ಮೊದಲೇ ಇವರು ಹರ್ಡೇಕರ್ ಮಂಜಪ್ಪನವರೊಡನೆ ಸೇರಿ ಸಂಪಾದಿಸಿದ ‘ಕೃತಿ ಸುಬೋಧ ಸಾರ’, ರಾಘವೇಂದ್ರ ಇಟಗಿಯವರೊಡನೆ ‘ಶ್ರೀಕಾರ ಹಾಗೂ ಪ್ರಬಂಧಮಾಲೆ’, ಸ್ವತಂತ್ರವಾಗಿ ರಚಿಸಿದ ೩ ಅಂಕದ ನಾಟಕ ಆತ್ಮಾರ್ಪಣ, ಭಾರತವೀರ ರಂಗಪ್ರಯೋಗದ ನಾಟಕಗಳಾದರೆ ‘ರಜತರೇಖೆ’ ಪ್ರಸಾರ ನಾಟಕ. ಮಾನ್ವಿ ನರಸಿಂಗರಾಯರೊಡನೆ ಸಂಪಾದಿಸಿದ ಕೃತಿ ‘ಪದ್ಯರತ್ನಾಕರ’ ಮತ್ತು ಬಿ.ಎ. ಸನದಿಯವರೊಡನೆ ‘ಶರಣ ಪ್ರಸಾದ’ ಕೃತಿಗಳನ್ನೂ ಸಂಪಾದಿಸಿದರು. ನಂತರ ಪ್ರಕಟವಾದ ಕವನ ಸಂಕಲನಗಳೆಂದರೆ ‘ಮಾನಸ ಸರೋವರ’ ‘ಮೊದಲು ಮಾನವನಾಗು’ ಮುಂತಾದವುಗಳಾದರೆ ‘ಕಲ್ಲೋಲ ಮಾಲೆ’ ಎಂಬ ಅನುಭಾವ ಗೀತಗಳು. ಇವರ ಈ ಅನುಭಾವಗೀತಗಳಲ್ಲಿ ಬದುಕಿನ ದರ್ಶನದ, ಜೀವನ ಸಾಕ್ಷಾತ್ಕಾರದ ಅತೀಂದ್ರಿಯ ಅನುಭವಗಳ ಹಲವಾರು ಪದ್ಯಗಳಿವೆ.

ಬಾಲ್ಯ-ಹಣ್ಣು, ಹಣ್ಣು ಎಂದಿತು ತಾರುಣ್ಯ- ಹೆಣ್ಣು, ಹೆಣ್ಣು ಎಂದಿತು ವಾರ್ಧಕ್ಯ – ಹೊನ್ನು, ಹೊನ್ನು ಎಂದಿತು ಮುಪ್ಪು- ಮಣ್ಣು, ಮಣ್ಣು ಎಂದಿತು

ಇದುವೆರೆಗೆ ನೀ ತುಳಿದೆ ಮಣ್ಣನ್ನೂ ಇನ್ನೇನು ಮಣ್ಣು ತುಳಿಯಲಿದೆ ನಿನ್ನನ್ನೂ!

ಇಂತಹ ಹಲವಾರು ಅನುಭಾವದ ಪದ್ಯಗಳನ್ನು ಕಲ್ಲೋಲಮಾಲೆಯಲ್ಲಿ ಕಾಣಬಹುದು. ಮಕ್ಕಳ ಸಾಹಿತ್ಯಕ್ಕೂ ಇವರ ಕೊಡುಗೆ ಬಹುದೊಡ್ಡದೆ. ‘ತುಪ್ಪರೊಟ್ಟಿ ಗೇ ಗೇ ಗೇ’, ಹಾಗೂ ‘ಗಿಲ್‌ ಗಿಲ್‌ ಗಿಲಗಚ್ಚಿ’ ಪ್ರಖ್ಯಾತ ಪದ್ಯ ಸಂಕಲನಗಳಾಗಿವೆ. ಶರಣರ ಸಾಹಿತ್ಯದಲ್ಲಿ ವಿಶೇಷ ಆಸಕ್ತರಾಗಿದ್ದು ಬಸವಣ್ಣನವರ ಬದುಕನ್ನೂ ಆಧರಿಸಿದ ನಾಟಕ ‘ಆತ್ಮಾರ್ಪಣ’. ಸ್ವತಂತ್ರ ವೀರಸಿದ್ಧೇಶ್ವರನ ಅಂಕಿತದಲ್ಲಿ ವಚನೋದ್ಯಾನ, ವಚನನಂದನ, ಶರಣ ಚರಿತಾಮೃತ, ಸಿದ್ಧರಾಮ ಮುಂತಾದ ಕೃತಿಗಳನ್ನೂ ‘ಬಸವ ಜರ್ನಲ್‌’ ಪತ್ರಿಕೆಯ ಸಂಪಾದಕರಾಗಿ ಅಲ್ಲಮನ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ. ಇದರ ಜೊತೆಗೆ ಇವರ ಇನ್ನೊಂದು ಜೀವನ ಚರಿತ್ರೆಯ ಕೃತಿ ಎಂದರೆ ಉರ್ದುಕವಿ ‘ನಜೀರ್ ಅಕ್ಬರಾಬಾದಿ’ ಜೀವನ ಚರಿತ್ರೆ ಮತ್ತು ಕಾವ್ಯದ ವಿಸ್ತಾರವಾದ ಪರಿಚಯ ಮಾಡಿಸಿದ್ದಾರೆ. ಪ್ರಾಮಾಣಿಕ ದಕ್ಷ ಅಧಿಕಾರಿ ಎನಿಸಿದ್ದು,ಇವರ ಅಧಿಕಾರಾವಧಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಸಂದ ಮಹತ್ತರ ಕೊಡುಗೆ ಎಂದರೆ ಮೈಸೂರು ವಿ.ವಿ.ದ ವಿಶ್ವಕೋಶ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಯೋಜನೆಗೆ ಸ್ಪಷ್ಟರೂಪ ಕೊಡುವಲ್ಲಿ ವಹಿಸಿದ ಪಾತ್ರ. ಹೀಗೆ ಕನ್ನಡದ ಅಭಿವೃದ್ಧಿಗಾಗಿ ಆಡಳಿತಾತ್ಮಕವಾಗಿ, ಸಾಹಿತ್ಯಿಕವಾಗಿ ದುಡಿದ ಪುರಾಣಿಕರನ್ನು ಕಲಬುರ್ಗಿಯಲ್ಲಿ ನಡೆದ ೫೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಮಾಡಿ ಕನ್ನಡನಾಡು ತೋರಿದ ಗೌರವದ ಜೊತೆಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ತು-ಕೋಲ್ಕತ್ತಾದಿಂದ ಭಿಲ್ವಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸ.ಸ.ಮಾಳವಾಡ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪದವಿಯಲ್ಲದೆ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥಗಳೆಂದರೆ ಐವತ್ತೈದು ವರ್ಷ ತುಂಬಿದ ಸಂದರ್ಭದಲ್ಲಿ ಬೆಳಗಾವಿ ಗೆಳೆಯರಿಂದ ‘ಕಾವ್ಯಾನಂದ’ (೧೯೭೩), ವಿಜಾಪುರದ ಗೆಳೆಯರಿಂದ ‘ಕಾವ್ಯಶ್ರೀ’, ಕಲಬುರ್ಗಿಯ ಜೀವನ ವಿಕಾಸದ ಗೆಳೆಯರಿಂದ ‘ಜೀವನ ವಿಕಾಸ’ದ ಬಹುದೊಡ್ಡ ವಿಶೇಷಸಂಚಿಕೆ, ೬೨ ವರ್ಷ ತುಂಬಿದ ಸಂದರ್ಭದಲ್ಲಿ ವಚನೋದ್ಯಾನ ದರ್ಶನ (೧೯೮೦) ಮತ್ತು ೬೩ ವರ್ಷ ತುಂಬಿದ ಸಂದರ್ಭದಲ್ಲಿ ಬೆಂಗಳೂರಿನ ಅಭಿನಂದನ ಸಮಿತಿಯಿಂದ ‘ಕಾವ್ಯಾನಂದ’ ಬೃಹತ್‌ ಗ್ರಂಥ ಹಾಗೂ ‘ಸಹೃದಯ ಸಂಚಿಕೆ (೧೯೮೧) – ಹೀಗೆ ಹಲವಾರು ಗ್ರಂಥಗಳು ಅರ್ಪಿತವಾಗಿವೆ. ಕನ್ನಡನಾಡು-ನುಡಿ-ಸಾಹಿತ್ಯಕ್ಕಾಗಿ ದುಡಿದ ಕಾವ್ಯಾನಂದರು ಸಾಹಿತ್ಯಲೋಕದಿಂದ ನಿರ್ಗಮಿಸಿದ್ದು  ೧೯೯೪ ರ ಸೆಪ್ಟಂಬರ್ ೫ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top