ಸಿದ್ಧವನಹಳ್ಳಿ ಕೃಷ್ಣಶರ್ಮ

Home/Birthday/ಸಿದ್ಧವನಹಳ್ಳಿ ಕೃಷ್ಣಶರ್ಮ
Loading Events

೦೪..೧೯೦೪ ೧೪.೧೦.೧೯೭೩ ಗಾಂಧಿ ವಿಚಾರವಾದಿ, ಸ್ವಾತಂತ್ರ್ಯ ಹೋರಾಟಗಾರ, ವಾಗ್ಮಿ, ಲೇಖಕ, ಸಹಕಾರಿ ಕ್ಷೇತ್ರದ ಹರಿಕಾರ ಮತ್ತು ಪತ್ರಕರ್ತರಾದ ಕೃಷ್ಣಶರ್ಮರು ಹುಟ್ಟಿದ್ದು ೧೯೦೪ರ ಜುಲೈ ೪ ರಂದು ಚಿತ್ರದುರ್ಗ ತಾಲ್ಲೂಕಿನ ಸಿದ್ಧವನಹಳ್ಳಿಯಲ್ಲಿ. ತಂದೆ ರಂಗಾಚಾರ್, ತಾಯಿ ಶೇಷಮ್ಮ. ತಂದೆಯ ತಾತಂದಿರು ಮೈಸೂರು ಪರಕಾಲ ಮಠದ ಕಾರ್ಯಕರ್ತರಾಗಿದ್ದರೆ ಅವರ ಅಣ್ಣಂದಿರು ಪರಕಾಲಮಠದ ಸ್ವಾಮಿಗಳಾಗಿದ್ದ ಪ್ರಕಾಂಡ ಪಂಡಿತರಾದ ಶ್ರೀ ಶ್ರೀನಿವಾಸ ಬ್ರಹ್ಮತಂತ್ರ ಪರಕಾಲ ಯತೀಂದ್ರರು. ಇವರು ಅಂದಿನ ಮೈಸೂರು ಮಹಾರಾಜರಿಗೆ ರಾಜಗುರುಗಳಾಗಿದ್ದವರು. ಇಂತಹ ವಂಶದಲ್ಲಿ ಹುಟ್ಟಿದ ಕೃಷ್ಣಶರ್ಮರಿಗೂ ಸ್ವಾಭಾವಿಕವಾಗಿ ವಿದ್ವತ್‌, ಸಂಸ್ಕಾರ, ಸುಸಂಸ್ಕೃತ ನಡವಳಿಕೆಗಳು ರಕ್ತಗತವಾಗಿ ಬಂದಿದ್ದವು. ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಹುಟ್ಟಿದ ಹಳ್ಳಿಯಲ್ಲಿಯೆ. ಶಾಲೆಯ ಉಪಾಧ್ಯಾಯರಾಗಿದ್ದ ಸೂರಪ್ಪನವರು ಸಂಜೆವೇಳೆ ಓದುತ್ತಿದ್ದ ಭಾರತವಾಚನದಿಂದ ಆಕರ್ಷಿತರಾದರು. ಮಾಧ್ಯಮಿಕ ಶಾಲೆಗೆ ಸೇರಿದ್ದು ಚಿತ್ರದುರ್ಗದ ಆಂಗ್ಲೋವರ್ನಾಕ್ಯುಲರ್ ಶಾಲೆಗೆ. ಅಲ್ಲಿನ ಕನ್ನಡ ಪಂಡಿತರಾದ ಗರಣಿ ರಂಗಾಚಾರ್ಯರು ವ್ಯಾಕರಣದಲ್ಲಿ ನಿಷ್ಣಾತರಾಗಿದ್ದು ಸಂಸ್ಕೃತ, ಕನ್ನಡ ಎರಡು ಭಾಷೆಗಳಲ್ಲೂ ಪಂಡಿತರಾಗಿದ್ದರು. ಇವರ ಪ್ರೋತ್ಸಾಹದಿಂದ ಕೃಷ್ಣಶರ್ಮರಿಗೆ ಕನ್ನಡದಲ್ಲಿ ಅಭಿರುಚಿ ಬೆಳೆಯತೊಡಗಿತು. ಹೈಸ್ಕೂಲಿಗೆ ಬಂದಾಗ ಹನುಮಂತರಾಯರೆಂಬ ಕನ್ನಡ ಪಂಡಿತರು ಛಂದಸ್ಸನ್ನು ಕಲಿಸಿದರು. ಜೊತೆಗೆ ಚಿಕ್ಕಪ್ಪ ಮನೆಯಲ್ಲಿ ತಂದಿಟ್ಟಿದ್ದ ಶ್ರೀರಾಮ ಪಟ್ಟಾಭಿಷೇಕ, ರಾಮಶ್ವಮೇಧ, ಆನಂದ ರಾಮಾಯಣ ಮುಂತಾದ ಕೃತಿಗಳಲ್ಲದೆ ದೈವಶಿಖಾಮಣಿ ಅಳಸಿಂಗಾಚಾರ್ಯರ ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಗ್ರಂಥಗಳನ್ನೆಲ್ಲ ಓದಿ ಪರಿಚಯ ಮಾಡಿಕೊಂಡರು. ಒಮ್ಮೆ ಹೈಸ್ಕೂಲಿನಲ್ಲಿದ್ದಾಗ ಇನ್‌ಸ್ಪೆಕ್ಷನ್‌ಗಾಗಿ ಬಂದ ಇನ್‌ಸ್ಪೆಕ್ಟರು ತರಗತಿಯಲ್ಲಿ ಪರೀಕ್ಷೆ ನಡೆಸಿ ಇವರಿಗಿದ್ದ ಸಂಸ್ಕೃತ, ಕನ್ನಡದ ಜ್ಞಾನವನ್ನೂ ಕಂಡು ಬಹುಮಾನ ರೂಪವಾಗಿ ಬಿ. ವೆಂಕಟಾಚಾರ್ಯರ ‘ವಂಗವಿಜೇತ, ‘ವಿಷವೃಕ್ಷ’ ಕಾದಂಬರಿಗಳನ್ನು ನೀಡಿದರಂತೆ. ಹೀಗೆ ದೊರೆತ ಕನ್ನಡ ಕಾದಂಬರಿಗಳನ್ನು ಓದುತ್ತಾ ಹೋದಂತೆ ಕನ್ನಡದ ಬಗ್ಗೆ ಹೆಚ್ಚು ಹೆಚ್ಚು ಆಸ್ಥೆ ಬೆಳೆಯತೊಡಗಿತು. ಹೀಗೆ ಓದುತ್ತಾ ಹೋದಂತೆಲ್ಲ ಬರವಣಿಗೆಯನ್ನೂ ಪ್ರಾರಂಭಿಸಿ, ಚಿಕ್ಕಪ್ಪನೊಡನೆ ಸೇರಿ ಹೊರತಂದ ಕೈಬರಹದ ಪತ್ರಿಕೆ ‘ವಾಣಿವಿಲಾಸ’. ಒಂದೆರಡು ಸಂಚಿಕೆಯ ನಂತರ ನಿಂತುಹೋದ್ದರಿಂದ, ಮೈಸೂರಿನ ‘ಮಧುರವಾಣಿ’ ಪತ್ರಿಕೆಗೆ ಕೆಲ ಕತೆಗಳನ್ನೂ ಬರೆದರು. ಕಾಲೇಜಿಗೆ ಸೇರಿದ್ದು ಮೈಸೂರಿನಲ್ಲಿ.  ಮೊದಲ ಬಿ.ಎ. ಓದುತ್ತಿದ್ದಾಗ ಗಾಂಧೀಜಿಯವರ ಕರೆಗೆ ಓಗೊಟ್ಟು ಕಾಲೇಜು ತೊರೆದು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾದರು. ೧೯೨೦-೨೧ ರ ಸುಮಾರಿನಲ್ಲಿ, ಆಯುರ್ವೇದ, ಯೋಗ, ಶಿಕ್ಷಣ ತಜ್ಞರಾಗಿದ್ದ ಪಂಡಿತ ತಾರಾನಾಥರ ಪರಿಚಯವಾಗಿ ‘ಪ್ರೇಮಾಯತನ’ ಆಶ್ರಮದಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದರು. ಸಂನ್ಯಾಸಿಯಾಗಿ ಬಿಡುತ್ತಾನೆ ಎಂದು ಹೆದರಿದ ಮನೆಯವರು ಹಿಂದಕ್ಕೆ ಕರೆತಂದು ೧೯೨೫ ರಲ್ಲಿ ಮದುವೆ ಮಾಡಿದರು. ಮದುವೆಯಾದದ್ದು ಹೈದರಾಬಾದಿನ ಸಬ್‌ಇನ್‌ಸ್ಪೆಕ್ಟರ ಪುತ್ರಿಯಾದ್ದರಿಂದ ಹೈದರಾಬಾದಿಗೆ ಉದ್ಯೋಗಕ್ಕಾಗಿ ತೆರಳಿ ಮೆಥಡಿಸ್ಟ್‌ ಶಾಲೆಯೊಂದರಲ್ಲಿ ಅಧ್ಯಾಪಕರಾಗಿ ಸೇರಿದರು. ಆಗ ಹೈದರಾಬಾದಿನ ಶಾಲೆಗಳಲ್ಲಿ ಕನ್ನಡವನ್ನೂ ಉರ್ದುವಿನಲ್ಲಿ ಬೋಧಿಸುತ್ತಿದ್ದರು. ಇವರು ಕನ್ನಡವನ್ನೂ ಕನ್ನಡದಲ್ಲೆ ಬೋಧಿಸಿದ ಮೊದಲ ಅಧ್ಯಾಪಕರೆನಿಸಿದರು. ಅಧ್ಯಾಪಕರಾಗಿದ್ದರೂ ನಿಜಾಮದ ಆಡಳಿತ ವಿರುದ್ಧ ತೆಲುಗು, ಮರಾಠಿ, ಕನ್ನಡ ಸಂಘಗಳನ್ನೂ ಸ್ಥಾಪಿಸಿ , ಆಯಾಯ ಭಾಷೆಯ ಜನ ಒಂದೆಡೆ ಸೇರುವಂತೆ ಮಾಡುತ್ತಿದ್ದ ರಾಜಕೀಯ ನಾಯಕರಿಗೆ ಒತ್ತಾಸೆಯಾಗಿ ಕನ್ನಡಿಗರನ್ನೂ ಒಗ್ಗೂಡಿಸುವ ಕೆಲಸವನ್ನು ಶರ್ಮರು ಕೈಗೊಂಡರು. ಖಾದಿ ಪ್ರಚಾರ, ಪ್ರಭಾತ್‌ಫೇರಿ, ರಾಷ್ಟ್ರೀಯ ಹಾಡುಗಳನ್ನೂ ಸಾರ್ವಜನಿಕವಾಗಿ ಹಾಡುವುದು, ಸಾಮೂಹಿಕಗಾನ ಇವುಗಳಲ್ಲಿ ತೊಡಗಿಸಿಕೊಂಡಿರುವುದನ್ನೂ ಗಮನಿಸಿದ ನಿಜಾಮ್‌ ಸರಕಾರ ಶರ್ಮರನ್ನೂ ಹೈದರಾಬಾದಿನಿಂದ ಗಡಿಪಾರುಮಾಡಿತು. ಚಿತ್ರದುರ್ಗಕ್ಕೆ ಹಿಂದಿರುಗಿದ ಶರ್ಮರು ಕನ್ನಡ ಕೆಲಸವನ್ನೂ ಮುಂದುವರೆಸಿದರು. ಧಾರವಾಡದಲ್ಲಿ ಬೇಂದ್ರೆ, ಗೋಕಾಕ್‌, ಬೆಟಗೇರಿ ಕೃಷ್ಣಶರ್ಮ ಮುಂತಾದವರು ನಡೆಸುತ್ತಿದ್ದ ಗೆಳೆಯರ ಗುಂಪಿನ ಸದಸ್ಯರಾಗಿ ಸಕ್ರಿಯವಾಗಿ ತೊಡಗಿಸಿಕೊಂಡರು. ೧೯೪೧ ರ ಸುಮಾರಿಗೆ ಅಹಮದಾಬಾದಿಗೆ ತೆರಳಿ ಗಾಂಧೀಜಿಯವರ ಆಶ್ರಮದಲ್ಲಿ ಕೆಲಕಾಲವಿದ್ದು, ಗಾಂಧೀಜಿಯವರ ದಿನಚರಿಯ ಬಗ್ಗೆ ‘ವಾರ್ಧಾಯಾತ್ರೆ’, ಮತ್ತು ಪರ್ಣಕುಟಿ ಎಂಬ ಎರಡು ಗ್ರಂಥಗಳನ್ನೂ ರಚಿಸಿದರು . ಇವೆರಡೂ ಗಾಂಧೀಜಿಯವರ ಬಗ್ಗೆ ಬರೆದ ಶ್ರೇಷ್ಠ ಗದ್ಯ ಕೃತಿಗಳಾಗಿವೆ. ೧೯೪೨ ರ ಸುಮಾರಿಗೆ ಬೆಂಗಳೂರಿಗೆ ಹಿಂದಿರುಗಿದ ಶರ್ಮರು ತಿ.ತಾ.ಶರ್ಮರು ನಡೆಸುತ್ತಿದ್ದ ವಿಶ್ವಕರ್ನಾಟಕ ಪತ್ರಿಕೆಯ ಸಹಸಂಪಾದಕತ್ವವನ್ನು ವಹಿಸಿಕೊಂಡರು. ಪತ್ರಿಕೆಯ ಮೂಲಕ ಯುವಜನರಲ್ಲಿ ರಾಷ್ಟ್ರೀಯ ಭಾವನೆಯನ್ನೂ ನಿಸ್ವಾರ್ಥ ಮನೋಭಾವವನ್ನೂ ಪ್ರೇರೇಪಿಸುವುದೇ ಗುರಿಯಾಗಿತ್ತು. ಭೂದಾನ ಹಾಗೂ ಸಹಕಾರ ಚಳವಳಿಯಲ್ಲಿಯೂ ತೊಡಗಿಸಿಕೊಂಡರು. ವಿಶ್ವಕರ್ನಾಟಕ ಸಹಸಂಪಾದಕರಾದಾಗ, ಸಂಪಾದಕರಾದ ತಿ.ತಾ. ಶರ್ಮರ ಲೇಖನ ಯಾವುದು, ಕೃಷ್ಣಶರ್ಮರ ಲೇಖನ ಯಾವುದು ಎಂಬುದನ್ನೂ ಪತ್ತೆ ಹಚ್ಚಲಾಗದ ಏಕರೂಪದ ಬರವಣಿಗೆ. ಇಬ್ಬರದೂ ಒಂದು ರೀತಿಯ ಹರಿತವಾದ ಭಾಷಾಪ್ರಯೋಗ, ಓದುಗರಲ್ಲಿ ಕಿಚ್ಚೆಬ್ಬಿಸುವ ಪದ ಪ್ರಯೋಗ, ರಾಷ್ಟ್ರೀಯ ಭಾವನೆಗಳನ್ನು ಬಡಿದೆಬ್ಬಿಸುವ ದಿಟ್ಟತನದ ಬರವಣಿಗೆ. ಇವುಗಳ ಜೊತೆಗೆ ಇವರು ನಿರ್ವಹಿಸುತ್ತಿದ್ದ ‘ಮಾತಿನ ಮಂಟಪ’, ಚಿಂತನ-ಮಂಥನ ಅಂಕಣಗಳು ಬಹು ಪ್ರಸಿದ್ಧವಾಗಿದ್ದವು. ವಿಶ್ವಕರ್ನಾಟಕ ಪತ್ರಿಕೆಯಲ್ಲದೆ ವಾಹಿನಿ, ಜಯಕರ್ನಾಟಕ, ನವೋದಯ, ಭೂದಾನ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನುಡಿ ಮುಂತಾದ ಪತ್ರಿಕೆಗಳಲ್ಲಿಯೂ ಕಾರ್ಯನಿರ್ವಹಿಸಿದರು. ಹಲವಾರು ಸಂಘ ಸಂಸ್ಥೆಗಳ ಸ್ಥಾಪನೆಗೂ ಕಾರಣರಾದರು. ಗಾಂಧಿಜಯಂತಿಯನ್ನೂ ಆಚರಿಸಿ ಉಳಿದ ಹಣದಲ್ಲಿ ಪುಸ್ತಕಭಂಡಾರವನ್ನೂ ಸ್ಥಾಪಿಸಿದ್ದಲ್ಲದೆ ಗಾಂಧಿಸಾಹಿತ್ಯಸಂಘವನ್ನೂ (ಮಲ್ಲೇಶ್ವರಂ-ಬೆಂಗಳೂರು) ಸ್ಥಾಪಿಸಿದರು . ಇದಲ್ಲದೆ ಸಾರ್ವಜನಿಕರ ಉಪಯೋಗಕ್ಕಾಗಿ ಮಲ್ಲೇಶ್ವರಂ ಶ್ರೀರಾಮ ಕೋ-ಆಪರೇಟಿವ್‌ ಬ್ಯಾಂಕ್‌, ಶ್ರೀ ಆಂಜನೇಯ ಕೋ-ಆಪರೇಟಿವ್‌ ಬ್ಯಾಂಕ್‌, ಬೆಂಗಳೂರು ಎಜುಕೇಷನ್ ‌ಸೊಸೈಟಿ, ಗಣೇಶನಗರ ನಿವೇಶನದಾರರ ಸಂಘ, ವಿದ್ಯೋದಯಸಭಾ (ಮೈಸೂರು), ಶ್ರೀನಿವಾಸ ಮಂದಿರ ಧರ್ಮಸಂಸ್ಥೆ, ಬೆಂಗಳೂರು ನಗರ ಪುಸ್ತಕ ಭಂಡಾರ, ಪ್ರಭಾತ್‌ ಸಾಹಿತ್ಯ, ಮುಂತಾದವುಗಳಲ್ಲದೆ ಹೈದರಾಬಾದಿನಲ್ಲೂ ಕೆಲ ಸಂಘಸಂಸ್ಥೆಗಳನ್ನೂ ಸ್ಥಾಪಿಸಿ ೪೦ ಕ್ಕೂ ಹೆಚ್ಚು ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅನುವಾದ ಇವರ ಆಸಕ್ತಿಯ ಕ್ಷೇತ್ರಗಳಲ್ಲೊಂದಾಗಿದ್ದು ಕೆ.ಎಂ. ಮುನ್ಷಿಯವರ ‘ಕೃಷ್ಣಾವತಾರ’, ನೆಹರುರವರ ‘ಗ್ಲಿಂಪ್ಸ್‌ಸ್ ಆಫ್‌ ವರ್ಲ್ಡ್ ಹಿಸ್ಟರಿ’ ವಿನೋಬಾ ಭಾವೆಯವರ ‘ಗೀತಾ ಪ್ರವಚನ’ ಮುಂತಾದ ಗ್ರಂಥಗಳನ್ನೂ ಅನುವಾದಿಸಿದ್ದಲ್ಲದೆ ಇಂಗ್ಲಿಷ್‌, ಹಿಂದಿ, ತೆಲುಗು ಭಾಷಣಗಳನ್ನೂ ಪರಿಣಾಮಕಾರಿಯಾಗಿ ಕನ್ನಡಕ್ಕೆ ಅನುವಾದ ಮಾಡುತ್ತಿದ್ದುದರಿಂದ ರಾಜಕೀಯ ನಾಯಕರೆಲ್ಲರೂ ತಮ್ಮ ಭಾಷಣದ ತರ್ಜುಮೆಗೆ ಇವರನ್ನೇ ಕರೆಯುತ್ತಿದ್ದರು. ವಿನೋಬಾರವರು ಭೂದಾನ ಯಜ್ಞ ಪ್ರಚಾರ ಯಾತ್ರೆ ಕೈಗೊಂಡಾಗ ಅವರೊಡನಿದ್ದು ಅನುವಾದ ಕಾರ್ಯವನ್ನು ಮಾಡಿದರು. ಗಾಂಧಿಸಾಹಿತ್ಯ, ವಿನೋಬಾ ಸಾಹಿತ್ಯ, ಸರ್ವೋದಯ ಸಾಹಿತ್ಯ, ವ್ಯಕ್ತಿ ಚತ್ರ, ಧಾರ್ಮಿಕ ಮುಂತಾದವುಗಳಿಗೆ ಸಂಬಂಧಿಸಿದಂತೆ ರಚಿಸಿರುವ ಸಾಹಿತ್ಯ ಕೃತಿಗಳ ಒಟ್ಟು ಸಂಖ್ಯೆಯೇ ಸುಮಾರು ೧೪೦ ಕ್ಕೂ ಹೆಚ್ಚು. ಜಗತ್ಕಥಾವಲ್ಲರಿ ಯು ಒಂದು ವಿಶಿಷ್ಟ ಕೃತಿಯಾಗಲು ಒಂದು ಪ್ರಮುಖ ಕಾರಣವೆಂದರೆ ನೆಹರು ರವರ ‘ಗ್ಲಿಂಪ್ಸ್‌ಸ್‌ ಆಫ್‌ ವರ್ಲ್ಡ್ ಹಿಸ್ಟರಿ’ಯನ್ನೂ ತಿ.ತಾ. ಶರ್ಮರೊಡನೆ ಸೇರಿ ಅನುವಾದಿಸಿದ್ದು,  ಆದರೆ ಅದರಲ್ಲಿ ಕೃಷ್ಣಶರ್ಮರ ಭಾಗ ಯಾವುದು, ತಿ.ತಾ. ಶರ್ಮರ ಭಾಗ ಯಾವುದು ಎಂದು ಪತ್ತೆ ಹಚ್ಚಲಾಗದಂತಹ ಅನುವಾದ ಇಬ್ಬರೂ ಹತ್ತು ಹತ್ತು ಪತ್ರಗಳನ್ನೂ ಅನುವಾದಿಸಿದ್ದು ಏಕರುಪದ ಬರವಣಿಗೆಯಿಂದ ಕೂಡಿದ ವಿಶಿಷ್ಟ ಗ್ರಂಥವಾಗಿದೆ. ಇದಲ್ಲದೆ ಇವರ ಇತರ ಅನುವಾದಗಳೆಂದರೆ – ಸಹಕಾರ, ಸರ್ವೋದಯ, ಭೂದಾನದಕತೆ,  ವಿನೋಬಾ, ಭೂದಾನಯಜ್ಞ, ವಿನೋಬಾ ವಿಚಾರ ಲಹರಿ ಮುಂತಾದ ವಿನೋಬಾ ರವರ ಸಾಹಿತ್ಯ ಕೃತಿಗಳು. ಯತಿರಾಜರಾಮಾನುಜ, ದೀಪಮಾಲೆ, ಕುಲದೀಪಕರು, ಕನ್ನಡದ ಕಿಡಿಗಳು, ಸರದಾರ್ ವಲ್ಲಬಾಯ್‌ ಪಟೇಲ್‌, ಜಮನ್‌ಲಾಲಾ‌ಬಜಾಜ್‌, ಸತಿ ಕಸ್ತೂರಿಬಾ, ನೆನಪಿನ ಚಿತ್ರಗಳು ಮುಂತಾದ ವ್ಯಕ್ತಿಚಿತ್ರಗಳು. ಸಹಕಾರ-ಪಂಚಾಯಿತಿ, ಮಾತಿನ ಮಂಟಪ, ನಮ್ಮ ಊರು,ನಮ್ಮ ಭೂಮಿ ಮುಂತಾದ ಇವರ ಕೃತಿಗಳು. ಸಂವಾದಮಾಲೆ, ಪ್ರಸಾರ ದೀಕ್ಷೆ,  ಸಂಕ್ಷಿಪ್ತ ಆತ್ಮಕಥೆ, ಮಂಗಳ ಪ್ರಭಾತ, ರಾಜಕೀಯ ಪತ್ರಗಳು, ಗೀತಾಮಾತೆ ಮೊದಲಾದ ಗಾಂಧಿ ಸಾಹಿತ್ಯ ಕೃತಿಗಳು,. ಸರ್ವೋದಯ ಯಾತ್ರೆ, ಸರ್ವೋದಯ ಒಂದು ದರ್ಶನ, ಸರ್ವೋದಯ ಸಾಂಸ್ಕೃತಿಕ ಆಧಾರ ಮೊದಲಾದ ಸರ್ವೋದಯ ಕೃತಿಗಳು – ಹೀಗೆ ಸುಮಾರು ೧೪೦ ಕ್ಕೂ ಹೆಚ್ಚು ವೈವಿಧ್ಯಮಯ ಕೃತಿಗಳನ್ನೂ ರಚಿಸಿದ್ದರೂ ಬಹುಪಾಲು ಕೃತಿಗಳು ಗಾಂಧಿವಿಚಾರಧಾರೆ, ವಿನೋಬರವರ ವಿಚಾರಧಾರೆಗೆ ಮೀಸಲಾಗಿದ್ದು ಸತ್ಯ, ನಿಷ್ಠೆ, ರಾಷ್ಟ್ರೀಯ ಭಾವನೆಗಳ ಜೊತೆಗೆ ನಿಸ್ವಾರ್ಥಜೀವನದ, ಸೇವಾ ಮನೋಭಾವದ, ಸಹಕಾರದ ತತ್ತ್ವಗಳನ್ನೂ ಮುಂದಿನ ಜನಾಂಗಕ್ಕೆ ತಿಳಿಸಲು ರಚಿಸಿದ ಕೃತಿಗಳಾಗಿವೆ. ಇವರ ಬಹುಮುಖ ಪ್ರತಿಭೆಗೆ ಗೌರವ ಸೂಚಿಸಲು ಅಭಿಮಾನಿಗಳು, ಗೆಳೆಯರು ಅರ್ಪಿಸಿದ ಗೌರವ ಗ್ರಂಥ ಸಿದ್ಧಹಸ್ತ (೧೯೭೩). ಇಂತಹ ವಿಶಿಷ್ಟ ಶೈಲಿಯ ಬರಹಗಾರ, ಮೋಡಿ ಮಾಡುವ ಮಾತಿನ ಚತುರ ನಾಲ್ಕು ವರ್ಷಗಳ ಕಾಲ ಹಾಸಿಗೆ ಹಿಡಿದು ಮಲಗಿದ್ದಲ್ಲದೆ ಮಾತನಾಡಲೂ ಆಗದ ಸ್ಥಿತಿ ತಲುಪಿದ್ದು ಕನ್ನಡಿಗರ ದುರದೃಷ್ಟ.  ಗಾಂಧೀಜಿ, ವಿನೋಬ ರವರ ಸಂದೇಶಗಳನ್ನೂ ಕನ್ನಡ ನಾಡಿಗೆ ಬಿತ್ತಿದ ಶರ್ಮರು ನಿಧನರಾದದ್ದು ೧೯೭೩ ರ ಅಕ್ಟೋಬರ್ ೧೪ ರಂದು. ೨೦೦೪ ರಲ್ಲಿ ಶರ್ಮರ ಜನ್ಮಶತಾಬ್ದಿ ಸಂದರ್ಭದಲ್ಲಿ, ಅವರ ವಿಶಿಷ್ಟರೀತಿಯ ನಾಡು-ನುಡಿ, ದೇಶಸೇವೆಯನ್ನೂ ನೆನಪಿಸುವ, ಪ್ರೊ.  ಮಲ್ಲೇಪುರಂ ಜಿ. ವೆಂಕಟೇಶರವರ ಸಂಪಾದಕತ್ವದಲ್ಲಿ ಸರ್ವೋದಯ ಸಂಪುಟ, ನಾಡು-ನುಡಿ ಸಂಪುಟ, ಮತ್ತು ರಾಮಾವತಾರ ಸಂಪುಟ ಎಂಬ ಬೃಹತ್‌ ಸಂಪುಟಗಳು ಬಿಡುಗಡೆ ಗೊಂಡಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top