ಸಿ.ಆರ್‌.ಸಿಂಹ

Home/Birthday/ಸಿ.ಆರ್‌.ಸಿಂಹ
Loading Events
This event has passed.

೧೬.೦೬.೧೯೪೨ ರಂಗಭೂಮಿ, ಟಿ.ವಿ., ಸಿನಿಮಾ, ಮೂರು ಕ್ಷೇತ್ರಗಳಲ್ಲಿಯೂ ಅತ್ಯುತ್ತಮ ನಟರೆನಿಸಿರುವ ಸಿಂಹರವರು ಹುಟ್ಟಿದ್ದು ಚನ್ನಪಟ್ಟಣ. ತಂದೆ ರಾಮಸ್ವಾಮಿ ಶಾಸ್ತ್ರಿ, ತಾಯಿ ಲಲಿತಮ್ಮ. ಓದಿದ್ದು ಬಿ.ಎಸ್ಸಿ, ಬಿ.ಇ. ಆದರೂ ಸಂದದ್ದು ರಂಗಭೂಮಿಗೆ. ಕೆಲವು ವರ್ಷ ವಾರ್ತಾ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗದಲ್ಲಿ ಉದ್ಯೋಗ. ಚಿಕ್ಕಂದಿನಿಂದಲೂ ರಂಗಭೂಮಿಯ ನಂಟು. ಇವರ ತಾತ ಬರೆದ ವಿಶ್ವವ್ಯವಸ್ಥೆ ನಾಟಕದಲ್ಲಿ ಸಿಂಹ ವಿಷ್ಣುವಾದರೆ, ತಮ್ಮ ಶ್ರೀನಾಥ್‌ ಈಶ್ವರನ ಪಾತ್ರ. ನ್ಯಾಷನಲ್ ಹಿಸ್ಟ್ರಿಯಾನಿಕ್ ಕ್ಲಬ್ ಸದಸ್ಯ. ಬಿ. ಚಂದ್ರಶೇಖರ್‌, ವಿಮಲಾ ರಂಗಾಚಾರ್‌, ನಾಣಿ ಮುಂತಾದವರು ಸ್ಥಾಪಿಸಿದ ಬಿ.ಎಲ್.ಟಿಯ. ಸಕ್ರಿಯ ಪಾತ್ರಧಾರಿ. ದಿ ಜೂ ಸ್ಟೋರಿ, ಸಿರಾನೋಡಿ ಬರ್ಗರ‍್ಯಾಕ್, ಸೂರ್ಯ ಶಿಕಾರಿ, ದಿ ಆಡ್ ಕಪಲ್, ಮ್ಯಾನ್ ಆಫ್ ಡೆಸ್ಟಿನಿ, ತುಘಲಕ್ (ಇಂಗ್ಲಿಷ್) ನಾಟಕಗಳಲ್ಲಿ ಪ್ರಮುಖ ಪಾತ್ರ. ಲೋಕೇಶ್, ಕಪ್ಪಣ್ಣ ಮುಂತಾದವರೊಡನೆ ೧೯೭೨ ರಲ್ಲಿ ನಟರಂಗ ಸ್ಥಾಪನೆ. ಬಿ.ಸಿ.ಯವರ ನಿರ್ದೇಶನದಲ್ಲಿ ತುಘಲಕ್ ನಾಟಕದಲ್ಲಿ ತುಘಲಕ್ ಪಾತ್ರ. ಸಂಕ್ರಾಂತಿ ನಾಟಕದಲ್ಲೂ ಪ್ರಮುಖಪಾತ್ರ. ಕಾಕನಕೋಟೆ ನಿರ್ದೇಶಿಸಿದ ನಾಟಕ (ನಂತರ ಚಲನಚಿತ್ರವಾಯಿತು) ಷೇಕ್ಸ್ ಪಿಯರನ ಒಥೆಲೊ, ಮಿಡ್ ಸಮರ್‌ ನೈಟ್ ಡ್ರೀಮ್ ನಾಟಕವನ್ನು ಯಥಾವತ್ ರಂಗಕ್ಕಿಳಿಸಿದ ಕೀರ್ತಿ. ೧೯೮೩ ರ ವೇದಿಕೆ ರಂಗ ಸಂಸ್ಥೆ ಪ್ರಾರಂಭ. ೨ ವರ್ಷ ’ರಂಗ ಮಾಲಿಕೆ’ ಕಾರ್ಯಕ್ರಮದಡಿ ಪ್ರತಿ ಶನಿವಾರ ನಾಟಕ ಪ್ರದರ್ಶಿಸಿ ರಂಗ ಚಟುವಟಿಕೆಗಳತ್ತ ಜನರನ್ನು ಆಕರ್ಷಿಸಿ ಮಾಡಿದ ದಾಖಲೆ. ಹಲವಾರು ನಾಟಕಗಳ ನಿರ್ದೇಶನ, ಸಂಭಾಷಣೆ ಹೊಣೆ ಹೊತ್ತಿದ್ದರೆ ಕೆಲವದರಲ್ಲಿ ಪ್ರಮುಖ ನಟರು. ಟಿಪಿಕಲ್ ಕೈಲಾಸಂ, ಮೀಸೆ ಬಂದವರು, ಭೈರವಿ, ಕರ್ಣ, ರಸ ಋಷಿ, ಅಗ್ನಿ ಮತ್ತು ಮಳೆ, ಹಾವು ಏಣಿ, ಮದುವೆ ಮದುವೆ, ಮ್ಯಾಕ್‌ಬೆತ್, ಕೋರ್ಟ್‌ಮಾರ್ಷಲ್, ನಿರಾಸೆ, ಕಾಮ್ ಮುಂತಾದುವು. ಕಾರಂತರ ನೆನಪಿಗೆ ಮೃಚ್ಛಕಟಿಕವನ್ನು ಯಕ್ಷಗಾನ, ಬಯಲಾಟ, ಕಂಪನಿ ನಾಟಕ ಮಾದರಿ ಪ್ರದರ್ಶನ. ಸಾಹಿತಿ/ನಾಟಕಕಾರರ ಸಾಹಿತ್ಯ ಜೀವನವನ್ನಾಧರಿಸಿದ ಪ್ರದರ್ಶನಗಳಲ್ಲಿ ಟಿಪಿಕಲ್ ಕೈಲಾಸಂ, ರಸ ಋಷಿ, ಗೊರೂರು ಮುಖ್ಯ ಪಾತ್ರಧಾರಿ, ಟಿಪಿಕಲ್ ಕೈಲಾಸಂ ಅಮೆರಿಕಾದ, ನ್ಯೂಯಾರ್ಕ್‌, ವಾಷಿಂಗ್‌ಟನ್, ಸ್ಯಾನ್‌ಫ್ರಾನ್ಸಿಸ್‌ಕೊ ಕೆನಡಾ ಮುಂತಾದ ೧೫ ದೇಶಗಳು, ಇಂಗ್ಲೆಂಡ್‌ನಲ್ಲೂ ಕಂಡ ಪ್ರದರ್ಶನ. ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಸಂದ ಸಂದರ್ಭದಲ್ಲಿ ಕಾರ್ನಾಡ್ ನಾಟಕಗಳ ಫೆಸ್ಟಿವಲ್. ಹೊಸ ಅಲೆಯ ಚಲನಚಿತ್ರಗಳಾದ ಸಂಸ್ಕಾರ, ಸಂಕಲ್ಪ, ಚಿತೆಗೂ ಚಿಂತೆ, ಅನುರೂಪ, ಬರ, ಮುಂತಾದುವುಗಳಲ್ಲಿ ಅಭಿನಯ. ಕಾಕನಕೋಟೆ, ಶಿಕಾರಿ, ಅಶ್ವಮೇಧ, ಅಂಗೈಯಲ್ಲಿ ಅಪ್ಸರೆ ಮುಂತಾದುವುಗಳ ನಿರ್ದೇಶನ. ಸಂದ ಪ್ರಶಸ್ತಿ ಗೌರವಗಳು – ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕಾಕನ ಕೋಟೆ ಚಲನಚಿತ್ರಕ್ಕೆ ರಾಜ್ಯಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಶಂಕರ ಗೌಡ ರಂಗಭೂಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಖ್ಯವಾದುವುಗಳು.   ಇದೇ ದಿನ ಹುಟ್ಟಿದ ಕಲಾವಿದರು ವೆಂಕಟಸ್ವಾಮಿ ಎಸ್.- ೧೯೩೧ ಚಂದ್ರಶೇಖರ್‌ ಎಂ.ಎಸ್. -೧೯೨೪

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top