ಸಿ.ಎನ್.ಜಯಲಕ್ಷ್ಮೀ ದೇವಿ

Home/Birthday/ಸಿ.ಎನ್.ಜಯಲಕ್ಷ್ಮೀ ದೇವಿ
Loading Events
This event has passed.

೦೮..೧೯೨೬ ೧೪.೧೧.೧೯೯೫ ಲೇಖಕಿ, ಸಮಾಜಸೇವಕಿ, ಉತ್ತಮ ಗೃಹಿಣಿ ಜಯಲಕ್ಷ್ಮೀದೇವಿಯವರು ಹುಟ್ಟಿದ್ದು ಚನ್ನಪಟ್ಟಣದಲ್ಲಿ ೧೯೨೬ರ ಮಾರ್ಚ್ ೮ರಂದು. ತಂದೆ ಸಿ.ಕೆ.ನಾರಾಯಣರಾವ್ (ನಾಟಕ ಕರ್ತೃ ಸಿ.ಕೆ.ವೆಂಕಟರಾಮಯ್ಯನವರ ತಮ್ಮ), ತಾಯಿ ನಂಜಮ್ಮ, ತಂದೆ ಚನ್ನಪಟ್ಟಣದ ಪಟ್ಲು ಗ್ರಾಮದಲ್ಲಿ ವ್ಯವಸಾಯದಲ್ಲಿ ನಿರತರಾಗಿದ್ದುದರಿಂದ ಓದಿಗೆ ಅನುಕೂಲವಿಲ್ಲದೆ ಇವರ ವಿದ್ಯಾಭ್ಯಾಸ ನಡೆದುದು ಮೈಸೂರಿನ ಇನ್ನೊಬ್ಬ ದೊಡ್ಡಪ್ಪನವರಾದ ಕೆ.ಎ.ಪದ್ಮನಾಭಯ್ಯನವರ ಆಶ್ರಯದಲ್ಲಿ. ಇವರು ರೆವಿನ್ಯೂ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮೀಷನರಾಗಿದ್ದು ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ರವರಲ್ಲಿ ಅರಮನೆ, ಎಸ್ಟೇಟ್, ತೋಟಗಳ ಮೊಖ್ತೇಸರರಾಗಿದ್ದರು. ಬಾಲ್ಯವೆಲ್ಲ ದೊಡ್ಡಪ್ಪನ ಮನೆಯಲ್ಲಿ ಕಳೆದದ್ದರಿಂದ ಅರಮನೆಯ ರೀತಿ-ನೀತಿ, ರಾಜಮರ್ಯಾದೆ, ವ್ಯವಹಾರ ಮುಂತಾದವುಗಳನ್ನು ಹತ್ತಿರದಿಂದ ತಿಳಿಯಲು ಅವಕಾಶವಾಯಿತು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ನಂಜುಂಡಯ್ಯನವರೊಡನೆ ಮದುವೆಯಾದ್ದರಿಂದ ವಿದ್ಯಾಭ್ಯಾಸ ನಿಂತು ಹೋಯಿತಾದರೂ, ಗಂಡನ ಪ್ರೋತ್ಸಾಹದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಕಾವ, ಜಾಣ ಪರೀಕ್ಷೆಗಳ ಜೊತೆಗೆ ಎಲ್.ಎಸ್.ಪರೀಕ್ಷೆ ನಂತರ ಎಸ್.ಎಸ್.ಎಲ್.ಸಿ ಪರೀಕಷೆಗೆ ಕುಳಿತು ತೇರ್ಗಡೆಯಾದರು. ತಂದೆಯ ಮನೆಯಲ್ಲಿಯೂ ಒಂದು ರೀತಿಯ ಸಾಹಿತ್ಯದ ವಾತಾವರಣವಿದ್ದಿತು. ತಾಯಿಯು ಕಾದಂಬರಿಕಾರರಾದ ಎಂ.ಎಸ್. ಪುಟ್ಟಣ್ಣನವರ ಸಂಬಂಧಿಯಾಗಿದ್ದರಿಂದ ಇವರಿಗೂ ಸಾಹಿತ್ಯ, ಸಂಗೀತಗಳ ಸಂಸ್ಕಾರವಿದ್ದಿತು. ಮನೆಯಲ್ಲಿ ಯಾವಾಗಲೂ ತಾಯಿ ಹೇಳುತ್ತಿದ್ದ ಕಥೆಗಳನ್ನು ಕೇಳಿ ತಾನೂ ಕಥೆ ಹೇಳುವ ಕಲೆಯನ್ನು ಕರಗತ ಮಾಡಿಕೊಂಡರು. ಮತ್ತೊಂದೆಡೆ ಅರೆಬಿಯನ್ ನೈಟ್ಸ್ ಕಥೆಗಳನ್ನು ತಾತ ಮೊಮ್ಮಗಳಿಗೆ ಹೇಳಿಕೊಡುತ್ತಿದ್ದುದು, ಹೆಂಡತಿಗೆ ಕಥಾಸರಿತ್ಸಾಗರ, ಬೃಹತ್ ಕಥಾಮಂಜರಿಯ ಕಥೆಗಳನ್ನು ಹೇಳುತ್ತಿದ್ದಾಗ ಅವನ್ನೂ ಕೇಳಿಸಿಕೊಳ್ಳುತ್ತಿದ್ದುದು, ಜೊತೆಗೆ ತಂದೆ ಶೇಕ್ಸ್‌ಪಿಯರ್‌ ನಾಟಕಗಳನ್ನು, ಫ್ರೆಂಚ್, ಇಂಗ್ಲಿಷ್ ಕಾದಂಬರಿಕಾರರ ಕಥೆಗಳನ್ನು ಓದಿ ಹೇಳುತ್ತಿದ್ದುದು – ಇವೆಲ್ಲವೂ ಜಯಲಕ್ಷ್ಮೀದೇವಿಯವರಲ್ಲಿ ಸಾಹಿತ್ಯದ ಬಗ್ಗೆ ಒಲವು ಬೆಳೆಯಲು ಸಹಕಾರಿಯಾದವು. ಗಂಡನ ಪ್ರೋತ್ಸಾಹದಿಂದ ಪ್ರೌಢಶಾಲೆಗೆ ಸೇರಿದಾಗ ಹಿಂದಿ ಪಂಡಿತೆಯಾಗಿದ್ದ ಪೊನ್ನಮ್ಮನವರಿಂದ ಹಿಂದಿ ಕಲಿತು ರಾಷ್ಟ್ರಭಾಷಾ, ವಿಶಾರದ ಪರೀಕ್ಷೆಗಳಲ್ಲೂ ಉತ್ತೀರ್ಣರಾದರು. ಕಾಲೇಜಿಗೆ ಸೇರಿದಾಗ ಬಂಕಿಮಚಂದ್ರ, ಗಳಿಗನಾಥರ ಕಾದಂಬರಿಗಳ ಪರಿಚಯದ ಜೊತೆಗೆ ಪಠ್ಯಪುಸ್ತಕವಾಗಿದ್ದ ಮಾಸ್ತಿಯವರ ‘ಚನ್ನಬಸವನಾಯಕ’ ಕಾದಂಬರಿಯನ್ನು ಓದಿದನಂತರ ಇವರಿಗೂ ಕಥೆಗಳನ್ನು ಬರೆಯಬೇಕೆನ್ನಿಸಿತು. ಹೀಗೆ ಬರೆದ ಕಥೆಗಳು ಅಂದಿನ ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. ಸಾಹಿತ್ಯದ ಜೊತೆಗೆ ಇವರಿಗೆ ಪ್ರಿಯವಾಗಿದ್ದ ಇತರ ಕ್ಷೇತ್ರಗಳೆಂದರೆ ಸಂಗೀತ ಹಾಗೂ ಗಮಕ ಕಲೆ. ಪ್ರಖ್ಯಾತ ಸಂಗೀತಜ್ಞರಾಗಿದ್ದ ರಾಳ್ಲಪಲ್ಲಿ ಅನಂತಕೃಷ್ಣಶರ್ಮರ ಬಳಿ ಕೀರ್ತನೆಗಳನ್ನು ಅಭ್ಯಾಸಮಾಡಿದರೆ, ಗಮಕ ಕಲೆಯನ್ನು ಗಮಕ ಕಲಾ ಪ್ರವರ್ತಕರಲ್ಲೊಬ್ಬರಾದ ಕೃಷ್ಣಗಿರಿ ಕೃಷ್ಣರಾಯರಲ್ಲಿ ಹಲವಾರು ವರ್ಷ ಅಭ್ಯಾಸ ನಡೆಸಿದರು. ಇವರು ತೊಡಗಿಸಿಕೊಂಡಿದ್ದ ಮತ್ತೊಂದು ಕ್ಷೇತ್ರವೆಂದರೆ ಸಮಾಜಸೇವೆ, ಪತಿಗೆ ಆಗಾಗ್ಗೆ ವರ್ಗವಾಗುತ್ತಿದ್ದುದರಿಂದ ಹೋದೆಡೆಯಲ್ಲೆಲ್ಲಾ ಶಿಶುವಿಹಾರವನ್ನೋ, ಮಹಿಳಾ ಸಮಾಜವನ್ನೋ ಸ್ಥಾಪಿಸುತ್ತಿದ್ದರು. ಕೆ.ಆರ್‌. ಪೇಟೆಯಲ್ಲಿದ್ದಾಗ ಮಹಿಳೆಯರ ಏಳಿಗೆಗಾಗಿ ಸಂಕ್ಷಿಪ್ತ ಶಿಕ್ಷಣ ತರಗತಿಗಳನ್ನು ನಡೆಸಿ ಅನೇಕ ಮಹಿಳೆಯರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೆರವಾದರು. ಇವರ ಹಲವಾರು ಸಣ್ಣಕಥೆ, ಕಾದಂಬರಿ, ನಾಟಕಗಳಲ್ಲಿ ವೈಚಾರಿಕ ಮನೋಭಾವವನ್ನು ಕಾಣಬಹುದು. ಇವರು ಬರೆದ ಸಣ್ಣಕಥೆಗಳು ‘ಅನಾಮಿಕ ಮತ್ತು ಇತರ ಕಥೆಗಳು’, ‘ಶುಭದೃಷ್ಟಿ’ ಮತ್ತು ‘ನಾರಿಯರ ಹಲವು ಮುಖಗಳು’ ಮುಂತಾದ ಸಂಕಲನಗಳಲ್ಲಿ ಸೇರಿವೆ. ಇವರು ಬರೆದದ್ದು ಮೂರು ಕಾದಂಬರಿಗಳು ‘ಗ್ರಾಮಲೀಲೆ’ ಸಾಮಾಜಿಕ ಕಾದಂಬರಿಯಾದರೆ ‘ಶಪ್ತವಾಪಿ’ (ಪೇಶ್ವೆಯವರ ಹಿನ್ನೆಲೆಯ ಕಥೆ) ಮತ್ತು ‘ಗಂಗರಸರ ದುರ್ವಿನೀತ’ (ಕ್ರಿ.ಶ. ಸು. ೫೨೯-೫೭೯, ಗಂಗರಸರು ಈಗಿನ ಕೋಲಾರ, ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು ಸ್ಥಳಗಳಲ್ಲಿ ರಾಜ್ಯವಾಳಿದ್ದು ೩ರಿಂದ ೧೦ನೆಯ ಶತಮಾನದ ವರೆಗೆ) ಲೇಖಕಿಯರು ಐತಿಹಾಸಿಕ ಕಾದಂಬರಿಗಳನ್ನು ಬರೆಯುವುದು ತೀರಾ ವಿರಳ ಎಂಬ ಕಾಲದಲ್ಲಿ ಹಾಗೂ ಪ್ರಾಚೀನ ರಾಜಮನತನದ ವಿವರಗಳು, ಐತಿಹಾಸಿಕ  ದಾಖಲೆಗಳು ಅಲಭ್ಯವಿರುವ ಸಂದರ್ಭದಲ್ಲಿ ಎರಡು ಬೃಹತ್ ಕಾದಂಬರಿ ರಚಿಸಿದ್ದು ಸಾಮಾನ್ಯ ಸಂಗತಿ ಏನಲ್ಲ. ಮಕ್ಕಳ ಮೂರು ನಾಟಕಗಳು ಮತ್ತು ಸ್ನೇಹ ಸಾಮ್ರಾಜ್ಯ, ಚೋರನಲ್ಲ-ದಂಗೆಕೋರ, ಕೋಳೂರು ಕೊಡಗೂಸು, ಸಮುದ್ರ ಮತ್ತು ಸಾಗರ ಸಂಗಮ, ಆಭಯಾರಣ್ಯದಲ್ಲಿ  ಒಂದು ಅನುಭವ, ಮಹಾಭಾರತದಲ್ಲಿ ಪ್ರಾಣಿಗಳು ಮುಂತಾದ ಮಕ್ಕಳ ಸಾಹಿತ್ಯ ಕೃತಿಗಳು; ರಾಜಾರಾಮ್ ಮೋಹನ ರಾಯ್‌ರವರ ಜೀವನ ಚರಿತ್ರೆ, ಜನಪ್ರಿಯ ಜೈಮಿನಿ ಭಾರತದ ಗದ್ಯಕೃತಿ ಮತ್ತು ಎರಡು ನಾಟಕಗಳು ‘ದಶರಥ’ ಮತ್ತು ‘ದೇವಯಾನಿ’, ಇವೆರಡು ನಾಟಕಗಳು ಹಲವಾರು ಬಾರಿ ರಂಗದ ಮೇಲೆ ಪ್ರಯೋಗಗೊಂಡು ಯಶಸ್ವಿ ನಾಟಕಗಳೆನಿಸಿದ್ದವು. ನಾಟಕ ರಚನೆಯಷ್ಟೇ ನಟಿಯಾಗಿಯೂ ಜಯಲಕ್ಷ್ಮೀದೇವಿಯವರು ಪ್ರಸಿದ್ಧಿ ಪಡೆದಿದ್ದರು. ದಶರಥ ನಾಟಕವು ರಾಮಾಯಣದ ಪ್ರಸಂಗವೊಂದಕ್ಕೆ ಹೊಸತಿರುವುಕೊಟ್ಟು ಬರೆದ ನಾಟಕ. ದಶರಥ ಕೇಕೆಯ ರಾಜಪುತ್ರಿ ಕೈಕೇಯಯನ್ನು ನೋಡಿ ಮೋಹಿತನಾಗುತ್ತಾನೆ. ಕೇಕಯರಾಜ ಕೈಕೇಯಯಿಂದ ಹುಟ್ಟುವ ಮಗುವಿಗೆ ಪಟ್ಟಕಟ್ಟುವಂತೆ ಷರತ್ತು ಒಡ್ಡಿದಾಗ, ರಾಣಿಯರಾದ ಕೌಸಲ್ಯ, ಸುಮಿತ್ರರಿಗೆ ವಯಸ್ಸಾಗಿದೆ, ಇನ್ನು ಮಕ್ಕಳಾಗುವುದಿಲ್ಲ ಎಂದು ಯೋಚಿಸಿದ ದಶರಥ ಷರತ್ತಿಗೆ ಒಪ್ಪಿ ಮದುವೆಯಾಗುತ್ತಾನೆ. ಆದರೆ ಪುತ್ರಕಾಮೇಷ್ಠಿಯಾಗದ ಫಲದಿಂದ ಮೂವರು ರಾಣಿಯರಿಗೂ ಮಕ್ಕಳಾಗುತ್ತವೆ. ಹಿರಿಯರಾಣಿಯ ಮಗನಿಗೆ ಪಟ್ಟಕಟ್ಟಿದರೆ ದಶರಥ ವಚನ ಭ್ರಷ್ಟನಾಗುತ್ತಾನೆ. ಇದನ್ನು ತಪ್ಪಿಸಲು ಭರತನಿಗೆ ರಾಜ್ಯಾಭಿಷೇಕ, ರಾಮನಿಗೆ ಹದಿನಾಲ್ಕು ವರ್ಷ ವನವಾಸ ಹೋಗುವಂತೆ ಕೈಕೇಯಿ ಸೂಚಿಸುವುದು ಶ್ರೀರಾಮಚಂದ್ರ ಮತ್ತು ವಸಿಷ್ಠರಿಗೆ ತಿಳಿದಿತ್ತೆಂಬುದನ್ನು ಪ್ರಸ್ತುತ ಪಡಿಸಿ ಬರೆದ ನಾಟಕ ‘ದಶರಥ’. ಹೀಗೆ ಮೂರು ಕಾದಂಬರಿಗಳು, ಮೂರು ಕಥಾ ಸಂಕಲನ, ಏಳು ಮಕ್ಕಳ ಸಾಹಿತ್ಯ, ಎರಡು ನಾಟಕಗಳು, ಜೀವನಚರಿತ್ರೆ, ಇತರ ಕೃತಿಗಳೂ ಸೇರಿ ರಚಿಸಿದ್ದು ಒಟ್ಟು ಹದಿನೇಳು ಕೃತಿಗಳು. ಹಲವಾರು ಕೃತಿ ರಚಿಸಿದ ಜಯಲಕ್ಷ್ಮೀದೇವಿಯವರು ಮಹಿಳೆಯರ ವಿದ್ಯಾಭ್ಯಾಸಕ್ಕೆ ಯಾವ ಸೌಕರ್ಯವೂ ಇರದಿದ್ದ ಕಾಲದಲ್ಲಿ ಸ್ವಂತ ಪರಿಶ್ರಮದಿಂದ ಓದಿ, ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ದುಡಿದು, ಇತರ ಮಹಿಳೆಯರಿಗೆ ಮಾದರಿಯಾಗಿದ್ದು ಸಾಹಿತ್ಯಲೋಕದಿಂದ ನಿರ್ಗಮಿಸಿದ್ದು ೧೯೯೫ರ ನವಂಬರ್‌ ೧೪ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top