Loading Events

« All Events

  • This event has passed.

ಸಿ.ಕೆ. ವೆಂಕಟರಾಮಯ್ಯ

December 10, 2023

೧೦-೧೨-೧೮೯೬ ೩-೪-೧೯೭೩ ಕನ್ನಡದ ಹೆಸರಾಂತ ವಿದ್ವಾಂಸರು, ವಾಗ್ಮಿಗಳು ಆದ ವೆಂಕಟರಾಮಯ್ಯನವರು ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ಪೊಟ್ಳು ಎಂಬ ಗ್ರಾಮದಲ್ಲಿ. ತಂದೆ ಕೃಷ್ಣಪ್ಪ, ತಾಯಿ ನಂಜಮ್ಮ. ಪ್ರಾರಂಭಿಕ ಶಿಕ್ಷಣ ಪೊಟ್ಳು, ಚನ್ನಪಟ್ಟಣ ಮತ್ತು ಮಾಗಡಿಗಳಲ್ಲಿ. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿ. ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ. ಶ್ರೀರಂಗಪಟ್ಟಣದಲ್ಲಿ ಕೆಲಕಾಲ ವಕೀಲಿ ವೃತ್ತಿ. ಮೈಸೂರು ಸರಕಾರ ಏರ‍್ಪಡಿಸಿದ್ದ ಭಾಷಾಂತರ ಸ್ಪರ್ಧಾ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ. ಭಾಷಾಂತರಕಾರರಾಗಿ ನೇಮಕ (೧೯೨೪). ದೀರ್ಘಕಾಲ ಅದೇ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ. ನಿವೃತ್ತಿಯ ನಂತರ ಅದೇ ತಾನೇ ಆರಂಭವಾಗಿದ್ದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ಮೊದಲ ನಿರ್ದೇಶಕರಾಗಿ ನೇಮಕ (೧೯೫೧-೫೫) ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ೧೯೩೦-೩೭, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ(೧೯೩೮-೪೦)ಯಾಗಿ ನಿರ್ವಹಿಸಿದ ಇತರ ಜವಾಬ್ದಾರಿಗಳು. ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪಡೆದ ಪಾಂಡಿತ್ಯ. ಎ.ಆರ್. ಕೃಷ್ಣಶಾಸ್ತ್ರಿಗಳ ಪ್ರಭಾವಕ್ಕೆ ಒಳಗಾಗಿ ಇಂಗ್ಲಿಷ್‌ನಿಂದ ಕೆಲವು ಕಾದಂಬರಿಗಳ ಅನುವಾದ. ಮೈಸೂರು ವಿಶ್ವವಿದ್ಯಾಲಯ ಏರ‍್ಪಡಿಸಿದ್ದ ಗ್ರಂಥ ರಚನಾ ಸ್ಪರ್ಧೆಯಲ್ಲಿ ಪಡೆದ ಮೊದಲ ಬಹುಮಾನ. ಹಲವಾರು ಕೃತಿಗಳ ರಚನೆ. ಕಥಾಸಂಗ್ರಹ-ಹಳ್ಳಿಯ ಕಥೆಗಳು, ತುರಾಯಿ, ಜೀವನ ಚರಿತ್ರೆಗಳು-ಬುದ್ಧ, ಪೈಗಂಬರ, ಲಿಂಕನ್, ಹರ್ಷವರ್ಧನ, ಆಳಿದ ಮಹಾಸ್ವಾಮಿಗಳು. ನಾಟಕಗಳು-ಸುಂದರಿ, ನಮ್ಮ ಸಮಾಜ, ಮಂಡೋದರಿ, ನಚಿಕೇತ, ಬ್ರಹ್ಮವಾದಿ, ‘ಭಾಸ’ ಮತ್ತು ಕಾಳಿದಾಸನ ಮೇಲೆ ಬರೆದ ಬೃಹತ್ ವಿಮರ್ಶಾ ಗ್ರಂಥಗಳು. ಅನುವಾದ-ಸಾವಿರದೊಂದು ರಾತ್ರಿ (ದಿ ಥೌಸಂಡ್ ನೈಟ್ಸ್ ಅಂಡ್  ನೈಟ್). ಇವರ ಕನ್ನಡ ಸೇವೆಯನ್ನು ಗಮನಿಸಿ ೧೯೪೭ರಲ್ಲಿ ಹರಪನಹಳ್ಳಿಯಲ್ಲಿ ನಡೆದ ೩೦ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮೈಸೂರು ಮಹಾರಾಜರಿಂದ ೧೯೫೦ರಲ್ಲಿ ರಾಜಸೇವಾಸಕ್ತ ಬಿರುದು, ೧೯೬೨ರಲ್ಲಿ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ, ೧೯೭೮ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಶಾಂತಾದೇವಿ ಮಾಳವಾಡ – ೧೯೨೨ ಎಂ.ಕೆ. ರವೀಂದ್ರನಾಥ್ – ೧೯೩೯ ಮಾರ್ಕಂಡಪುರಂ ಶ್ರೀನಿವಾಸ್ – ೧೯೪೮ ವಾಸಂತಿ ಆದಿಶೇಷ್ – ೧೯೬೧

Details

Date:
December 10, 2023
Event Category: