ಸೀತಾದೇವಿ ಪಡುಕೋಣೆ

Home/Birthday/ಸೀತಾದೇವಿ ಪಡುಕೋಣೆ
Loading Events
This event has passed.

೦೫.೦೬.೧೯೦೩ ೧೧.೧೨.೧೯೬೯ ಹಲವಾರು ಮಂದಿ ಪ್ರಖ್ಯಾತ ಸಾಹಿತಗಳಿಗೆ ಆತಿಥ್ಯತಾಣವೆನಿಸಿ, ಸಾಹಿತ್ಯದ ಸಾಧನೆಗೆ ಧಾರಳವಾಗಿ ಸಹಾಯಕರಾಗಿ ನಿಲ್ಲುತ್ತಿದ್ದ, ಖ್ಯಾತ ಸಾಹಿತಿ ಪಡುಕೋಣೆ ರಮಾನಂದರ ಶ್ರೀಮತಿಯವರಾದ ಪಡುಕೋಣೆ ಸೀತಾದೇವಿಯವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ೧೯೦೩ರ ಜೂನ್ ೫ರಂದು. ತಂದೆ ದೇಶಭಕ್ತ ಮೊಳಹಳ್ಳಿ ಶಿವರಾಯರು, ವಕೀಲ ವೃತ್ತಿಯ ಜೊತೆಗೆ ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ದುಡಿದವರು, ತಾಯಿ ಉಮಾದೇವಿ. ಓದಿದ್ದು ಮಾಧ್ಯಮಿಕ ಶಾಲೆಯವರೆಗೆ. ಆದರೆ ಸಾಹಿತ್ಯಾಭಿರುಚಿ ಮೂಡಿಸಿ, ಇಂಗ್ಲಿಷ್, ಮಾರಾಠಿ, ಹಿಂದಿ ಭಾಷೆಗಳ ಕೃತಿಗಳನ್ನು ಅರ್ಥಮಾಡಿಕೊಳ್ಳುವುದಿಷ್ಟೆ ಅಲ್ಲದೆ ಅವುಗಳನ್ನು ಕನ್ನಡಕ್ಕೆ ಅನುವಾದ ಮಾಡುವಷ್ಟು ಸಾಮರ್ಥ್ಯವನ್ನು ಅವರಿಗೆ ತಂದು ಕೊಟ್ಟವರು ಅವರ ಪತಿ ಪಡುಕೋಣೆ ರಮಾನಂದರಾಯರು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಮದುವೆಯಾದುದರಿಂದ ಮುಂದೆ ಓದು ಸಾಗಲಿಲ್ಲ. ಇಂಟರ್‌ಮಿಡಿಯೇಟ್ ಓದುತ್ತಿದ್ದ ಪಡುಕೋಣೆ ರಮಾನಂದರಾಯರೊಡನೆ ಮದುವೆ. ರಮಾನಂದರಾಯರು ಮದುವೆಯ ನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿ.ಎ., ಎಂ.ಎ., ಎಲ್.ಟಿ. ಪದವಿ ಪಡೆದು ಉದ್ಯೋಗಕ್ಕಾಗಿ ಸೇರಿದ್ದು ರಾಜಮಹೇಂದ್ರಿಯ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಉಪನ್ಯಾಸಕರಾಗಿ. ಹೆಂಡತಿ ಸೀತಾದೇವಯರಿಗೆ ಹೊತ್ತು ಕಳೆಯಲು ಪುಸ್ತಕ ಭಂಡಾರದಿಂದ ರಮಾನಂದರಾಯರು ತಂದುಕೊಡುತ್ತಿದ್ದ ಇಂಗ್ಲಿಷ್ ಪುಸ್ತಕಗಳನ್ನೇ ಓದಿ ಅರ್ಥಮಾಡಿಕೊಳ್ಳತೊಡಗಿದರು. ಆ ಸಂದರ್ಭದಲ್ಲಿ ಹುಟ್ಟಿದ ಹೆಣ್ಣುಮಗು ಚಂದ್ರಭಾಗಾದೇವಿ, ಮುಂದೆ ನೃತ್ಯಕಲೆಯಲ್ಲಿ ಪ್ರಸಿದ್ಧರಾದವರು. ನಂತರ ಪ್ರಭಾಶಂಕರ (ಎಂಜನಿಯರ್ ಪದವೀಧರ), ಶಾಂತಿ, ಜಯವಂತಿ ಮತ್ತು ಯಶೋಧರ ಎಂಬ ಮಕ್ಕಳು. ಶಾಂತಿ ಚಿತ್ರಕಲೆಯಲ್ಲಿ, ಜಯವಂತಿ ಹಿಂದೂಸ್ಥಾನಿ ಸಂಗೀತ ಗಾಯಕಿಯಾಗಿ (ಕರ್ನಾಟಕ ಸರಕಾರದ ಸಂತ ಶಿಶುನಾಳ ಶರೀಫ ಪ್ರಶಸ್ತಿ ಪುರಸ್ಕೃತೆ), ಯಶೋಧರ (ಸಂಗೀತ, ನೃತ್ಯ, ಸಾಹಿತ್ಯದಲ್ಲಿ) ಹೀಗೆ ಎಲ್ಲರೂ ಪ್ರತಿಭಾನ್ವಿತರೆ. ರಮಾನಂದರಾಯರಿಗೆ ಮಂಗಳೂರಿಗೆ ವರ್ಗವಾಗಿ ಬಂದಾಗ ಮನೆ ಸಾಹಿತಿಗಳ ಬೀಡಾಗಿತ್ತು. ಜಿ.ಪಿ. ರಾಜರತ್ನಂರವರು ನಾಲ್ಕು ತಿಂಗಳ ಕಾಲ ಇವರ ಮನೆಯಲ್ಲಿಯೇ ಇದ್ದು ರಚಿಸಿದ ಗ್ರಂಥ ‘ಬೌದ್ಧ ಧರ್ಮ’. ಸಿದ್ಧಾರ್ಥ ಹೆಂಡತಿ ಮಕ್ಕಳನ್ನು ತೊರೆದು ಬಂದಂತೆ ನೀವು ಬೌದ್ಧಗ್ರಂಥ ರಚಿಸಲು ಬಿಟ್ಟು ಬಂದಿಲ್ಲವಷ್ಟೆ ಎಂದು ರಾಜರತ್ನಂರವರಿಗೆ ಹೆಂಡತಿ, ಮಕ್ಕಳ ಬಗ್ಗೆ ನಯವಾಗಿ ಎಚ್ಚರಿಸಿದರೆ, ಕೈಲಾಸಂರವರು ಬಂದು ಹದಿನೆಂಟು ದಿನಗಳು ತಂಗಿದ್ದಾಗ ಕೊಠಡಿಯನ್ನು ಸ್ವಚ್ಛಗೊಳಿಸಲೂ ಬಿಡದ, ಯಾವ ಶಿಸ್ತಿಗೂ ಒಳಪಡದ, ಹೊತ್ತಿಗೆ ಸರಿಯಾಗಿ ತಿಂಡಿ, ಕಾಫಿ, ಊಟದ ಪರಿವೆ ಇರದ ಕೈಲಾಸಂರವರು ಹದಿನೆಂಟು ದಿನಗಳ ಆತಿಥ್ಯ ಮುಗಿದಾಗ ‘ಒಂದು ಕುರುಕ್ಷೇತ್ರ ಮಾಡಿ ಗೆದ್ದ ಅನುಭವ’ ಎಂದು ಉದ್ಗರಿಸಿದರಂತೆ. ಹೀಗೆ ಇವರ ಮನೆ ಸಾಹಿತಿಗಳಿಗೆ ಸದಾ ತೆರೆದಿರುತ್ತಿತ್ತು. ಸದಾಕಾಲ ಸಾಹಿತಿಗಳ ಸಂಗದಿಂದ ಲೇಖಕ ರಮಾನಂದರಾಯರ ಪ್ರೋತ್ಸಾಹದಿಂದ ತಾವೂ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಹಿಂದಿ, ಕೊಂಕಣಿ, ಕನ್ನಡದಲ್ಲಿ ಕೃತಿಗಳನ್ನು ರಚಿಸಿದರು. ಇವರು ಬರೆದ ಮೊದಲ ಕೃತಿ ‘ಹೀಗಾಗಬೇಕೆ!’ ೧೯೨೯ರಲ್ಲಿ ಪ್ರಕಟವಾಯಿತು. ವೆಶ್ಯಾ ಸಮಸ್ಯೆಯ ಬಗ್ಗೆ ಬರೆದ ಕಿರು ಕಾದಂಬರಿಯಾಗಿದ್ದು, ಮರಾಠಿಯಲ್ಲಿ ಪ್ರಕಟವಾಗಿದ್ದ ಸದಾಶಿವ ಸುಂಕ್ಥಣಕರರ ‘ಜಾಯಿ-ಜೋಯಿ’ ಎಂಬ ಕಥೆ ಆಧಾರದ ಮೇಲೆ ರಚಿತವಾದ ಕಿರುಕಾದಂಬರಿ. ೧೯೨೯ರಲ್ಲಿ ಪ್ರಕಟವಾದ ಮತ್ತೊಂದು ಚಿಕ್ಕಪ್ರಹಸನವೆಂದರೆ ‘ಕಟುಕ ರೋಹಿಣಿ ಸಂವತ್ಸರದಲ್ಲಿ!’ (A Day will come ಎಂಬ ಚಲನಚಿತ್ರದಿಂದ ಪ್ರೇರಿತರಾಗಿ) ಈ ಕಿರು ಪ್ರಹಸನವನ್ನು ಕಡೆಂಗೋಡ್ಲು ಶಂಕರಭಟ್ಟರು ತಮ್ಮ ಪತ್ರಿಕೆಯಾದ ‘ರಾಷ್ಟ್ರಬಂಧು’ವಿನ ಸಾಹಿತ್ಯ ಸಂಚಿಕೆಯಲ್ಲಿ ಪ್ರಕಟಿಸಿದಾಗ ಹಲವಾರು ಮಂದಿ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಲ್ಲದೆ ಶಿವರಾಮ ಕಾರಂತರು ತಮ್ಮ ವಸಂತ ಪುಷ್ಪಮಾಲೆಯ ಸಾಹಿತ್ಯ ಸಂಚಿಕೆಯಲ್ಲೂ ಪ್ರಕಟಿಸಿದರು. ಈ ಏಕಾಂಕ ನಾಟಕವು ಕೊಂಕಣಿ ಭಾಷೆಗೂ ಅನುವಾದಗೊಂಡು ಮುಂಬಯಿಯ ಆಕಾಶವಾಣಿಯಿಂದಲೂ ಪ್ರಸಾರಗೊಂಡಿತು. ಈ ನಾಟಕದಲ್ಲಿ ಹೆಂಗಸರು ಸೊರಗಡೆ ಕ್ಲಬ್ಬು, ಮೀಟಿಂಗು ಎಂದು ಓಡಾಡುತ್ತಿದ್ದರೆ ಗಂಡಸರು ಹೆಣ್ಣು ಹೃದಯಿಗಳಾಗಿ ಮನೆವಾರ್ತೆ ನೋಡಿಕೊಳ್ಳುವ ವಸ್ತುವಾಗುಳ್ಳ ನಾಟಕ. ಪುರುಷರ ಮತ್ತು ಮಹಿಳೆಯರ ಸ್ವಭಾವ, ವೈಚಿತ್ರ್ಯಗಳನ್ನು ಅದಲು ಬದಲು ಮಾಡಿ ಚಿತ್ರಿಸಿದ ಬಹುಶಃ ಮೊದಲ ಪ್ರಸಂಗವಾಗಿರಬಹುದು. ‘ಮೇರೆ ಗೋಪಾಲ್’ ಮತ್ತು ವಿ. ಸೀತಾರಾಮಯ್ಯನವರ ‘ಸೊಹ್ರಾಬ್-ರುಸ್ತುಂ’ ನಾಟಕವನ್ನು ಹಿಂದಿಗೆ ಅನುವಾದಿಸಿದರು. ಕೊಂಕಣಿ ಭಾಷೆಯಲ್ಲಿ ಹೆಣ್ಣುಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿದ ನಾಟಕ ‘ವಧು ಪರೀಕ್ಷೆ’, ‘ಕುಟ್ಟು ಮಕ್ಕಾರಿ ಫಜೀತಿ’ ಎಂಬ ಇನ್ನೊಂದು ನಾಟಕವನ್ನು ಕೊಂಕಣಿಯಲ್ಲಿ ರಚಿಸಿದ್ದಾರೆ. ಈ ನಾಟಕವನ್ನು ಮದರಾಸಿನಲ್ಲಿ ರಂಗದ ಮೇಲೆ ತಂದಾಗ ‘ಕುಟ್ಟು ಮಣ್ಣ’ ಎಂಬ ಪಾತ್ರಧಾರಿಯಾಗಿಯೂ ರಂಗದ ಮೇಲೆ ಬಂದಿದ್ದರು. ‘ಕದನ-ಕುತೂಹಲ’ ಎಂಬ ನಾಟಕವನ್ನು ‘ಲಡಾಯಿ ಮೂಳ’ ಎಂದು, ಕೈಲಾಸಂರವರ ಹೋಂರೂಲ್ ನಾಟಕವನ್ನು ಅದೇ ಹೆಸರಿನಿಂದ ಕೊಂಕಣಿ ಭಾಷೆಗೆ ಅನುವಾದಿಸಿದ್ದಾರೆ. ಸೀತಾದೇಯವರು ರಚಿಸಿದ ನಾಲ್ಕು ಅಂಗಳ ಮತ್ತೊಂದು ನಾಟಕವೆಂದರೆ ‘ವೇಣುಮಾಮ’. ೧೯೪೯ರಲ್ಲಿ ಪ್ರಕಟವಾಯಿತು. ಇದು ಅಂಟನ್ ಚೆಕಾಫ್‌ರ ಅಂಕಲ್ ವಾನ್ಯಾ (Uncle Vanya) ಎಂಬ ನಾಟಕದ ರೂಪಾಂತರ. ಹೀಗೆ ಹಲವಾರು ನಾಟಕಗಳನ್ನು ರಚಿಸಿದ್ದಲ್ಲದೆ ಪತಿ ರಮಾನಂದ ರಾಯರೊಡನೆ ರಂಗದ ಮೇಲೂ ಅಭಿನಯಿಸಿ ತೀರಾ ಮಡಿವಂತಿಕೆಯ ಕಾಲದಲ್ಲೇ ರಂಗ ಪ್ರವೇಶಮಾಡಿದ ದಿಟ್ಟ ಮಹಿಳೆ. ಈ ನಾಟಕವು ಕೊಂಕಣಿಗೂ ಅನುವಾದಗೊಂಡು ೧೯೬೧ರಲ್ಲಿ ಮುಂಬಯಿಯಲ್ಲಿ ನಡೆದ ನಾಟಕೋತ್ಸವದಲ್ಲಿ ಪ್ರದರ್ಶಿತಗೊಂಡಿತು. ಹೀಗೆ ಪ್ರಗತಿಪರ ದೃಷ್ಟಿಧೋರಣೆಗಳುಳ್ಳ ದಿಟ್ಟ ಹೆಂಗಸಾಗಿ, ಹಲವಾರು ಸ್ವತಂತ್ರ ಕಥೆಗಳನ್ನು, ನಾಟಕಗಳ ರೂಪಾಂತರಗಳನ್ನು ಇಂಗ್ಲಿಷ್ ಮತ್ತು ಮರಾಠಿಯಿಂದ ಕನ್ನಡ ಮತ್ತು ಕೊಂಕಣಿಗೆ ತಂದ ಸೀತಾದೇವಿ ಪಡುಕೋಣೆಯವರ ಕ್ಷಯರೋಗ ಪೀಡಿತರಾಗಿ, ಕಡೆಗೆ ಕ್ಯಾನ್ಸರ್ ರೋಗಕ್ಕೂ ತುತ್ತಾಗಿ ಸಾಹಿತ್ಯಲೋಕದಿಂದ ದೂರವಾದದ್ದು ೧೯೬೯ರ ಡಿಸೆಂಬರ್ ೧೧ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top