ಸುಜನಾ

Home/Birthday/ಸುಜನಾ
Loading Events
This event has passed.

೧೩-೪-೧೯೩೦ ಕಾವ್ಯ, ವಿಮರ್ಶೆ, ಅಧ್ಯಯನ ಮುಂತಾದ ಸೃಜನಾತ್ಮಕ ಸಾಹಿತ್ಯ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಸುಜನಾ ನಾಮದ ಎಸ್. ನಾರಾಯಣಶೆಟ್ಟಿಯವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಕೃಷ್ಣರಾಜ ತಾಲ್ಲೂಕಿನ ಹೊಸ ಹೊಳಲು ಗ್ರಾಮದಲ್ಲಿ. ತಂದೆ ಸುಬ್ಬಯ್ಯಶೆಟ್ಟಿ, ತಾಯಿ ಗೌರಮ್ಮ. ಹೊಳೆ ನರಸೀಪುರ, ಬೆಂಗಳೂರು, ಮೈಸೂರುಗಳಲ್ಲಿ ವಿದ್ಯಾಭ್ಯಾಸ. ಕುವೆಂಪು, ಡಿ.ಎಲ್.ಎನ್.ರವರ ಶಿಷ್ಯತ್ವದಿಂದ ಪ್ರಭಾವಿತರಾಗಿ ತಾವೂ ಅಧ್ಯಾಪಕರಾಗಬೇಕೆಂದು ಪಡೆದದ್ದು ಎಂ.ಎ. ಪದವಿ. ಉದ್ಯೋಗ ಪ್ರಾರಂಭಿಸಿದ್ದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ. ಅಧ್ಯಾಪನದ ಜೊತೆಗೆ ರೂಢಿಸಿಕೊಂಡಿದ್ದು ಕಾವ್ಯರಚನೆ ಮತ್ತು ವಿಮರ್ಶೆ. ಗ್ರೀಕ್ ನಾಟಕಗಳ ಬಗ್ಗೆ  ವಿಶೇಷ ಒಲವು. ಇವರ ತರಗತಿಗಳೆಂದರೆ ವಿದ್ಯಾರ್ಥಿಗಳಿಗೆ ರಸದೂಟ. ಭಾಷಣಕ್ಕೆ ನಿಂತರೂ ಅಷ್ಟೆ. ಸಾಹಿತ್ಯದ ಒಳನೋಟಗಳನ್ನು  ಕಣ್ಣ ಮುಂದೆ ಯಥಾವತ್ ಚಿತ್ರಿಸಿಡಬಲ್ಲರು. ಕುವೆಂಪುರವರು ವಿವರಿಸಿದ ದರ್ಶನ ವಿಮರ್ಶೆಯ ವಿಧಾನವನ್ನನುಸರಿಸಿ ಸಾಹಿತ್ಯ ವಿಮರ್ಶೆಯ ಹೊಸವಿಧಾನವನ್ನೇ ರೂಪಿಸಿ ಬೆಳಸಿದ ಕೀರ್ತಿ. ವಿಮರ್ಶಾಕೃತಿಗಳು-‘ಹೃದಯ ಸಂವಾದ’, ‘ಪರಂಪರೆ’, ‘ಪರಂಪರೆ ಮತ್ತು ಕುವೆಂಪು’ ಪ್ರಮುಖ ಕೃತಿಗಳು. ಕಾವ್ಯ ಕೃತಿಗಳನ್ನು ಇವರು ವಿಮರ್ಶಿಸುವ ಧಾಟಿಯೇ ಅಮೋಘ. ‘ಪು.ತಿ.ನ. ಕಾವ್ಯದ ಹೊಳಹುಗಳು’ ಇವರ ವಿಮರ್ಶೆಯ ಮೇಲಿನ ಪಾಂಡಿತ್ಯಕ್ಕೆ ಸಾಕ್ಷಿಯಾದ ಮತ್ತೊಂದು ಕೃತಿ. ಗ್ರೀಕ್ ನಾಟಕ ಏಜಾಕ್ಸ್‌ನ್ನು ಸಮರ್ಥವಾಗಿ ಅನುವಾದಿಸಿ ಕನ್ನಡಕ್ಕೆ ಕೊಟ್ಟಿರುವುದರ ಜೊತೆಗೆ ‘ಭಾರತ ಕಥಾಮಂಜರಿ’, ‘ಬಾಲಕಾಂಡ ವಾಲ್ಮೀಕಿ ರಾಮಾಯಣ’ವನ್ನು ಸಿ.ಪಿ.ಕೆ.ಯೊಡನೆ ಅನುವಾದಿಸಿದ ಮಹತ್ವದ ಕೃತಿ. ಇತ್ತೀಚಿನ ಕೃತಿ ಎಂದರೆ ಮಹಾಭಾರತದ ಯುದ್ಧ ಮುಗಿದ ನಂತರದ ಘಟನೆಗಳ ಮುಕ್ತ ಛಂದಸ್ಸಿನ ಕೃತಿ ‘ಯುಗ ಸಂಧ್ಯಾ’ ಮಹಾಕಾವ್ಯ ಪ್ರಕಟಿತ. ಮೈಸೂರು ಮಹಾರಾಜ ಕಾಲೇಜು, ಯುವರಾಜ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ವಿಶ್ವವಿದ್ಯಾಲಯದ ರಿಜಿಸ್ಟ್ರರಾಗಿ ಸೇವೆ ಸಲ್ಲಿಸಿ ನಿವೃತ್ತರು. ಸಂದ ಗೌರವ ಪ್ರಶಸ್ತಿಗಳೆಂದರೆ-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ‘ಯುಗ ಸಂಧ್ಯಾ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಒಂದೇ ಸೂರಿನಡಿಯಲ್ಲಿ  ಕವನ ಸಂಕಲನಕ್ಕೆ ವರ್ಧಮಾನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜೆ.ಎಚ್. ಪಟೇಲರ ಕಾಲದಲ್ಲಿ ಕೊಡಮಾಡಿದ ದೇವರಾಜ ಬಹದ್ದೂರ್ ಬಹುಮಾನದ ಹಣವನ್ನು ಹೊಸಹೊಳಲು ಶಾಲಾ ಅಭಿವೃದ್ಧಿಗಾಗಿ ದಾನ ಮಾಡಿದ್ದಾರೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಜಯಲಕ್ಷ್ಮಿ. ರಾವ್ – ೧೯೨೫ ಸೂರ‍್ಯನಾರಾಯಣ ಚಡಗ – ೧೯೩೨ ಡಿ.ಆರ್. ಪಾಂಡುರಂಗ – ೧೯೫೦ ನಿರ್ಮಲಾ ವಿವೇಕಾನಂದ ಬೀಳಗಿ – ೧೯೫೦

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top