ಸುದರ್ಶನ ದೇಸಾಯಿ

Home/Birthday/ಸುದರ್ಶನ ದೇಸಾಯಿ
Loading Events
This event has passed.

೧೪.೦೧.೧೯೪೫ ೩೧.೦೭.೨೦೧೨ ಸಣ್ಣ ಸಣ್ಣ ವಾಕ್ಯಸರಣಿ, ಮೊನಚಾದ ಪದಗಳು, ಲಯಬದ್ಧವಾದ ಮಾತುಗಳು, ಓದುಗರು ಹೀಗೇ ಆಗುತ್ತದೆಂದು ಭಾವಿಸುತ್ತಿದ್ದಂತೆ ಪಡೆದುಕೊಳ್ಳುತ್ತಿದ್ದ  ಅನಿರೀಕ್ಷಿತ ತಿರುವುಗಳಿಂದ ಓದುಗರನ್ನು ಕಾತರದ ಮೇಲೆ ಕೂಡಿಸುತ್ತಿದ್ದು, ಪತ್ತೇದಾರಿ ಕಾದಂಬರಿ ಲೇಖಕರ ಸಮ್ಮೇಳನ, ಪತ್ತೇದಾರಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ ಪತ್ತೇದಾರಿ ಸಾಹಿತ್ಯ ಪ್ರಕಾರಕ್ಕೊಂದು ಘನತೆ, ಗೌರವಗಳನ್ನು ತಂದುಕೊಟ್ಟ ಪತ್ತೇದಾರಿ ಕಾದಂಬರಿಕಾರರಾದ ಸುದರ್ಶನ ದೇಸಾಯಿಯವರು ಹುಟ್ಟಿದ್ದು ಕವಿ ಪುಂಗವರ ನಾಡಾದ ಧಾರವಾಡದಲ್ಲಿ. ತಂದೆ ಕೃಷ್ಣರಾವ ರಾಮರಾವ ದೇಸಾಯಿ, ತಾಯಿ ರಾಧಾಬಾಯಿ. ವಿದ್ಯಾಭ್ಯಾಸ ಧಾರವಾಡದಲ್ಲಿ. ಸರಕಾರಿ ಕನ್ನಡ ಪ್ರಾಥಮಿಕ ಶಾಲೆ, ಮಾಳಮಡ್ಡಿಯ ಕೆ.ಇ.ಬೋರ್ಡ್ ಹೈಸ್ಕೂಲು. ನಂತರ ಬಾಸೆಲ್ ಮಿಷನ್ ಟ್ರೈನಿಂಗ್ ಕಾಲೇಜಿನಿಂದ ಪಡೆದ ಟಿ.ಸಿ.ಎಚ್ ತರಬೇತಿ. ಶಿಕ್ಷಕರ ವೃತ್ತಿಯನ್ನು ಆಯ್ಕೆಮಾಡಿಕೊಂಡು ಧಾರವಾಡದ ಗುಲಗುಂಜಿ ಕೊಪ್ಪದ ಸರಕಾರಿ ಶಾಲೆಯಲ್ಲಿ  ಸುಮಾರು ೩೪ ವರ್ಷಗಳ ದೀರ್ಘಕಾಲ ಶಿಕ್ಷಕರಾಗಿ ದುಡಿದರು. ದ.ರಾ.ಬೇಂದ್ರೆ, ದಿನಕರ ದೇಸಾಯಿ ಮುಂತಾದವರುಗಳಿಂದ ಪ್ರೇರಣೆ ಪಡೆದ ದೇಸಾಯಿಯವರು ೧೯೭೭ ರಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಸಿ ಕೊಂಡಿದ್ದು, ಅದೇ ವರ್ಷ ಪ್ರಜಾಮತ ವಾರಪತ್ರಿಕೆಯು ಏರ‍್ಪಡಿಸಿದ್ದ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಮೂರನೆಯ ಬಹುಮಾನವನ್ನು ತಮ್ಮ ‘ಸಪ್ತ ಪದಿ’ ಕಥೆಗಾಗಿ ಪಡೆದರು.ಅಲ್ಲಿಂದ ಮುಂದೆ ಸುಮಾರು ೬೦ಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ರಚಿಸಿದ್ದು ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಬರೆದ ಕಥೆಗಳಾದ ಅಪರಿಚಿತ, ಕರಿನಾಯಿ, ನೆಲುವಿಗೆ ಹಾರದ ಬೆಕ್ಕು ಹಾಗೂ ನಿರ್ಣಯ ಮುಂತಾದ ಕಥೆಗಳು ರಾಜ್ಯದ ವಿವಿಧ ಪತ್ರಿಕೆಗಳ ಸ್ಪರ್ಧೆಯಲ್ಲಿ ಬಹಮಾನಗಳಿಸಿವೆ. ಸಣ್ಣ ಕಥೆಗಳಂತೆ ಹಲವಾರು ಹಾಸ್ಯ ಲೇಖನಗಳನ್ನೂ ಬರೆದಿದ್ದು ಇವು ಪ್ರಜಾಮತ, ಸುಧಾ, ಸಂಯುಕ್ತ ಕರ್ನಾಟಕ, ಕಸ್ತೂರಿ, ಮಂಗಳ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ರೂಪವತಿ ಭಾರ್ಯ ಶತ್ರು, ದುನಿಯಾ ಗೋಲ ಹೈ, ನಮಸ್ಕಾರ ಅಪಾಯದ ಸಂಕೇತ, ಉಳಿತಾಯ ಪ್ರಯಾಸ ಮುಂತಾದ ಹಾಸ್ಯ ಲೇಖನಗಳು ಅಂದು ಓದುಗರಿಗೆ ರಸದೌತಣ ನೀಡಿದ್ದವು. ಇವರ ಮತ್ತೊಂದು ಪ್ರಕಾರದ ಬರಹವೆಂದರೆ ಪತ್ರಿಕೆಗಳಿಗೆ ಆಗಾಗ್ಗೆ ಬರೆಯುತ್ತಿದ್ದ ರಸವತ್ತಾದ ಅಪರಾಧಿ ವರದಿ ಲೇಖನಗಳು. ಅಂದಿನ ದಿನಗಳಲ್ಲಿ ನಡೆಯುತ್ತಿದ್ದ ಭಯಾನಕ, ರಹಸ್ಯಮಯ, ಮೈನವಿರೇಳಿಸುವ ಘಟನೆಗಳನ್ನು ಸತ್ಯಕ್ಕೆ ಧಕ್ಕೆ ಬರದಂತೆ, ಪೊಲೀಸ್ ಇಲಾಖೆಯ ಅವಕೃಪೆಗೂ ಒಳಗಾಗದಂತೆ ಬರೆಯುವಲ್ಲಿ ಸಿದ್ಧಹಸ್ತರೆನಿಸಿದ್ದು, ಬರೆದ ಲೇಖನಗಳಿಗೆ ತುಂಬಾ ಬೇಡಿಕೆಯಿದ್ದು ಕೆಲವು ಪತ್ರಿಕೆಯ ಸಂಪಾದಕರುಗಳು ಇಂಥ ಲೇಖನಗಳನ್ನು ಬರೆಯಲು ಆಹ್ವಾನಿಸುತ್ತಿದ್ದರು. ಜಗತ್ತಿನಾದ್ಯಂತ ಓದುಗರ ಗಮನ ಸೆಳೆದ ಜೈಲಿನ ಕಥೆಗಳನ್ನು ಆಧರಿಸಿ ‘ಸುಧಾ’ ವಾರಪತ್ರಿಕೆಗೆ ಬರೆದ ‘ಮೃತ್ಯುವಿಗೆ ಮುತ್ತಿಟ್ಟವರು’ ಲೇಖನ ಮಾಲೆಯು ಇವರಿಗೆ ಹೆಸರು ತಂದುಕೊಟ್ಟ ಸಾಹಿತ್ಯ ಪ್ರಕಾರವಾಗಿತ್ತು. ಹೀಗೆ ಹಲವಾರು ಪ್ರಕಾರದಲ್ಲಿ ಸಾಹಿತ್ಯ ರಚನೆಗೆ ತೊಡಗಿದ ದೇಸಾಯಿಯವರಿಗೆ ಪ್ರಖ್ಯಾತರನ್ನಾಗಿಸಿದ ಪ್ರಕಾರವೆಂದರೆ ಪತ್ತೇದಾರಿ ಕಾದಂಬರಿ ಕ್ಷೇತ್ರ.  ೧೯೭೯ರಲ್ಲಿ ಬರೆದ ಮನೋವೈಜ್ಞಾನಿಕ ಕಾದಂಬರಿ ‘ತಿರುವು’ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡನಂತರ ಖ್ಯಾತ ಚಲನಚಿತ್ರ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್‌ರವರು ಇದೇ ಕಾದಂಬರಿಯನ್ನು ಆಧರಿಸಿ ‘ಮಾನಸ ಸರೋವರ’ ಎಂಬ ಹೆಸರಿನಿಂದ ಚಿತ್ರವನ್ನು ನಿರ್ದೇಶಿಸಿದರು. ನಂತರ ಹಲವಾರು ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಬರೆದರೂ ಪತ್ತೇದಾರಿ ಕಾದಂಬರಿಕಾರರೆಂದೇ ಪ್ರಸಿದ್ಧಿಗೆ ಬಂದರು. ಇವರ ಮೊದಲ ಸಾಮಾಜಿಕ ಕಾದಂಬರಿ ‘ಹಾಲಿನ ಕಡಲು ಜೀನಿನ ಒಡಲು’. ನಂತರ ‘ನೀರ ಮೇಲಿನ ಹೆಜ್ಜೆ’, ‘ಸಂಜೆ ಮಲ್ಲಿಗೆ’, ‘ಅಮರದೀಪ, ‘ಸೇವಕ’, ‘ಎಂಟೆದೆ ಬಂಟ’, ‘ಅಗ್ನಿ ಪರ್ವತ’ ಮುಂತಾದ ೨೦ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ‘ತಿರುವು’ ನಂತರ ಬರೆದ ಮನೋವೈಜ್ಞಾನಿಕ ಕಾದಂಬರಿಗಳೆಂದರೆ ‘ವಿಚಿತ್ರ ಅಪರಾಧಿ’, ‘ಅಪಹರಣ’. ನಂತರ ಬರೆದ ಪತ್ತೇದಾರಿ ಕಾದಂಬರಿಗಳು ‘ಕೆರಳಿದ ಸರ್ಪ’, ‘ಚೋರಾಗ್ರ ಸೇನ’, ‘ಹಾವಿನ ಕಣ್ಣು’, ‘ವೈಪರ’, ‘ಐರಾವತ’, ‘ಹೊಲಿದ ತುಟಿಗಳು’, ‘ಕೆಲ್ಲಿ’, ರಿಂಗೊ’, ‘ಬ್ರೌನ್‌ಷುಗರ್’,  ‘ಬಣ್ಣದ ಬೆಕ್ಕು’ ಮುಂತಾದ ೩೦ ಕಾದಂಬರಿಗಳನ್ನು ಬರೆದಿದ್ದಾರೆ. ಇವರು ಬರೆದ ಕಾದಂಬರಿಗಳಲ್ಲಿ ಶರವೇಗದ ಸರದಾರ,  ಕೆರಳಿದ ಸರ್ಪ, ಎಂಟೆದೆಯ ಭಂಟ, ಮೃತ್ಯು ಬಂಧನ ಮುಂತಾದವುಗಳು ಚಲನಚಿತ್ರವಾಗಿ ಜನಪ್ರಿಯತೆಯನ್ನುಗಳಿಸಿದರೆ ಅರುಣರಾಗ, ಮುದುಡಿದ ತಾವರೆ ಅರಳಿತು, ಇಬ್ಬನಿ ಕರಗಿತು ಮುಂತಾದ,ಚಲನಚಿತ್ರಗಳಿಗೆ ಚಿತ್ರಕಥೆ ಸಂಭಾಷಣೆಗಳನ್ನು ಬರೆದಿದ್ದಾರೆ. ಇವರು ಮೊಟ್ಟಮೊದಲು ಬರೆದ ಸಾಮಾಜಿಕ ಕಾದಂಬರಿಯಾದ ‘ಹಾಲಿನ ಕಡಲು ಜೇನಿನ ಒಡಲು’, ಕಾದಂಬರಿಯು ಟಿ.ವಿ.ಧಾರಾವಾಹಿಯಾಗಿ ‘ಅಂಬಿಕಾ’ ಎಂಬ ಹೆಸರಿನಿಂದ ಉದಯ ಟಿವಿಯಲ್ಲಿ ಧಾರಾವಾಹಿಯಾಗಿ ಪ್ರಸಾರಗೊಂಡು ಜನಪ್ರಿಯತೆಗಳಿಸಿತು. ಇವರ ಕಾದಂಬರಿಗಳನ್ನು ಧಾರಾವಾಹಿಯಾಗಿ ಪ್ರಕಟಿಸಿದ ಪತ್ರಿಕೆಗಳೆಂದರೆ ಸುಧಾ, ಪ್ರಜಾಮತ, ಸಂಯುಕ್ತ ಕರ್ನಾಟಕ, ಕಸ್ತೂರಿ, ಮಂಗಳಾ, ತರಂಗ, ವಿಜಯ ಕರ್ನಾಟಕ, ಸಂಜೆವಾಣಿ, ರೂಪಲೇಖಾ, ಅರಗಿಣಿ, ಪ್ರಿಯಾಂಕ, ಕನ್ನಡಪ್ರಭ ಮುಂತಾದವುಗಳು. ನಾಟಕ ರಚನೆಯೇ ಒಂದು ರೀತಿಯ ಕ್ಲಿಷ್ಟಕರ ಪ್ರಕಾರ. ಅದರಲ್ಲೂ ಕುತೂಹಲವನ್ನು ಕಾಯ್ದುಕೊಂಡು (SUSPENSE) ನಾಟಕ ರಚಿಸುವುದು ಇನ್ನೂ ಕಷ್ಟಕರ. ಇಂಥಾದ್ದರಲ್ಲಿಯೂ ತಪ್ಪಿದ ಲೆಕ್ಕ, ಅಪಹರಣ, ನೇಣು, ಕಲಿಯುಗದ ಭೀಮ, ನೂರಕ್ಕೆ ನೂರು, ಮೇಣ್ ಝಣ್, ನಾಬರ್ತೀನಿ, ಪರಿವರ್ತನೆ, ತೋಟದ ಮನೆ ಮುಂತಾದ ರೇಡಿಯೋ ನಾಟಕಗಳನ್ನು ರಚಿಸಿ ಶ್ರೋತ್ರುಗಳನ್ನು ತೃಪ್ತಿಪಡಿಸಿದ್ದರು. ಮತ್ತೆರಡು ರಂಗಭೂಮಿ ನಾಟಕಗಳೆಂದರೆ ಕರಿನಾಯಿ ಮತ್ತು ತೋಟದ ಮನೆ. ಇವರು ಬರೆದ ಸಣ್ಣ ಕಥೆಗಳು ‘ಕೆಂಚವ್ವನ ಮಗಳ ಕೆಂಪು ಲೋಲಕ್ಕ’, ದೀಪದ ಕೆಳಗೆ ಕುಳಿತವ’, ‘ಭೂಮರಾಂಗ್, ‘ನೆಲುವಿಗೆ ಹಾರದ ಬೆಕ್ಕು’ ಮುಂತಾದ ಸಂಕಲನಗಳಲ್ಲಿ ಸೇರಿವೆ. ಮಕ್ಕಳಿಗಾಗಿ ಬರೆದ ಕವನ ಸಂಕಲನಗಳೆಂದರೆ ಜಾಣಮಗು, ಸರಕೆ ಭರಕೆ, ಪುಟ್ಟ ಹಕ್ಕಿ ಮುಂತಾದವುಗಳು. ಸಾಹಿತ್ಯ ಪ್ರಕಾರದಲ್ಲಿ ಪತ್ತೇದಾರಿ ಸಾಹಿತ್ಯಕ್ಕೆ ಮನ್ನಣೆ ಇಲ್ಲವೆಂಬ ಕೊರಗಿನಿಂದ ‘ಕನ್ನಡದಲ್ಲಿ ಪತ್ತೇದಾರಿ ಸಾಹಿತ್ಯ’ ಎಂಬ ಸಂಶೋಧನಾತ್ಮಕ ಗ್ರಂಥವನ್ನು ಬರೆದಿದ್ದು ಇದರಲ್ಲಿ ೧೮೯೨ರಿಂದ ಆರಂಭಿಸಿ ಪತ್ತೇದಾರಿ ಕಾದಂಬರಿಗಳ ಲೇಖಕರ, ಪ್ರಕಾಶಕರ ಸಂಕ್ಷಿಪ್ತ ಪರಿಚಯದ ಗ್ರಂಥದಲ್ಲಿ ೧೦೦ ವರ್ಷಗಳ ಪತ್ತೇದಾರಿ ಇತಿಹಾಸವನ್ನು ದಾಖಲಿಸಿದ್ದಾರೆ. ೧೯೮೫ರಲ್ಲಿ ಪತ್ತೇದಾರಿ ಕಾದಂಬರಿ ಲೇಖಕರ ಪ್ರಥಮ ಸಮ್ಮೇಳನವನ್ನು ಧಾರವಾಡದಲ್ಲಿ ಏರ್ಪಡಿಸಿದಾಗ ಟ.ಕೆ.ರಾಮರಾಯರು ಅಧ್ಯಕ್ಷತೆ ವಹಿಸಿದ್ದರು. ೧೯೮೬ರಲ್ಲಿ ಪತ್ತೇದಾರಿ ಸ್ಮರಣ ಸಂಚಿಕೆ, ೧೯೮೮ರಲ್ಲಿ ನಡೆಸಿದ ಅಪರಾಧ ಶಾಸ್ತ್ರಗೋಷ್ಠಿ, ೧೯೯೦ರಲ್ಲಿ ನಡೆಸಿದ ಪತ್ತೇದಾರಿ ಕಾದಂಬರಿ ಸ್ಪರ್ಧೆ, ೧೯೯೨ರಲ್ಲಿ ಧಾರವಾಡದಲ್ಲಿ ಮತ್ತು ೧೯೯೭ರಲ್ಲಿ ಬೆಂಗಳೂರಿನಲ್ಲಿ ನಡೆಸಿದ ಪತ್ತೇದಾರಿ ಸಾಹಿತ್ಯ ಸಮ್ಮೇಳನಗಳು ಮುಂತಾದವುಗಳ ರೂವಾರಿ. ೧೯೯೧ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೨ರಲ್ಲಿ ಪತ್ತೇದಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೯೩ರಲ್ಲಿ ಮುಂಬೈ ಕರ್ನಾಟಕ ಸಂಘದಿಂದ ಸನ್ಮಾನ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಸುದರ್ಶನ ದೇಸಾಯಿ ಕಾಲನಿ ನಾಮಕರಣ, ೧೯೯೪ರಲ್ಲಿ ಮದರಾಸು ಕರ್ನಾಟಕ ಸಂಘದಿಂದ ಸನ್ಮಾನ, ೧೯೯೭ರಲ್ಲಿ ದ್ವಿತೀಯ ಪತ್ತೇದಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೯೮ರಲ್ಲಿ ದಿಲ್ಲಿ ಕರ್ನಾಟಕ ಸಂಘದಿಂದ ಗೌರವ, ೧೯೯೯ರಲ್ಲಿ ಕೇಂದ್ರ ಸರಕಾರದಿಂದ ಆದರ್ಶ ಶಿಕ್ಷಕ ಪ್ರಶಸ್ತಿ, ೨೦೦೩ರಲ್ಲಿ ಪಾಂಡಿಚೆರಿ ಕರ್ನಾಟಕ ಸಂಘದಿಂದ ಸನ್ಮಾನ, ೨೦೦೫ರಲ್ಲಿ ಸಿದ್ಧಯ್ಯ ಪುರಾಣಿಕ ಸಾಹಿತ್ಯ ಪ್ರಶಸ್ತಿ, ೨೦೦೬ರಲ್ಲಿ ಶಿವಮೊಗ್ಗ ಕರ್ನಾಟಕ ಸಂಘದಿಂದ ಷಷ್ಟ್ಯಬ್ದಿ ಆಚರಣೆ, ೨೦೧೦ರಲ್ಲಿ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ರಂಗ ಕಲಾ ಸನ್ಮಾನ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದ ಸುದರ್ಶನ ದೇಸಾಯಿಯವರು ಪತ್ತೇದಾರಿ ಸಾಹಿತ್ಯ ಕ್ಷೇತ್ರದಿಂದ ನಿರ್ಗಮಿಸಿದ್ದು ೨೦೧೨ರ ಜುಲೈ ೩೧ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top